ಕೊರೋನಾ ಸೋಂಕಿನಿಂದ ಮೃತಪಟ್ಟವರ ಕುಟುಂಬಕ್ಕೆ 1 ಲಕ್ಷ ರೂಪಾಯಿ ಪರಿಹಾರ ಹಣವನ್ನು ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಘೋಷಣೆ ಮಾಡಿದ್ದಾರೆ. ಹಾಗಾದ್ರೆ ಕೊರೋನಾ ಸೋಂಕಿನಿಂದ ಮೃತಪಟ್ಟ ಎಷ್ಟು ಕುಟುಂಬಗಳಿಗೆ ಯಾವ ರೀತಿಯಲ್ಲಿ ಈ ಪರಿಹಾರ ಹಣ ದೊರೆಯುತ್ತದೆ ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಕೋವಿಡ್ನಿಂದ ಹಲವು ಕುಟುಂಬಗಳು ಮನೆಗೆ ಆಧಾರವಾಗಿದ್ದವರನ್ನೇ ಕಳೆದುಕೊಂಡು ನಲುಗಿ ಹೋಗಿವೆ. ಹಲವರ ಬದುಕು ಮೂರಾಬಟ್ಟೆ ಆಗಿದೆ. ಕೇವಲ ಬಡತನ ರೇಖೆಗಿಂತ ಕೆಳಗಿರುವ ಕುಟುಂಬವಷ್ಟೇ ಅಲ್ಲದೆ ಬಡ ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗದ ಕುಟುಂಬಗಳೂ ಮನೆಗೆ ಜೀವನಕ್ಕೆ ಆಧಾರವಾಗಿ ಇದ್ದವರನ್ನು ಕಳೆದುಕೊಂಡು ತುತ್ತು ಅನ್ನಕ್ಕೂ ಪರಿತಪಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೊರೊನಾ ಸೋಂಕನ್ನು ಈಗಾಗಲೇ ರಾಷ್ಟ್ರೀಯ ವಿಪತ್ತು ಎಂದು ಪರಿಗಣಿಸಲಾಗಿದೆ. ಆದ್ದರಿಂದ ವಿಪತ್ತು ಪರಿಹಾರದ ನಿಯಮಗಳಡಿ ಮೃತ ವ್ಯಕ್ತಿಗಳ ಕುಟುಂಬಕ್ಕೆ ಐದು ಲಕ್ಷ ರೂ. ಪರಿಹಾರ ನೀಡಲು ನಿರ್ಧರಿಸಿದ ಸರ್ಕಾರ ಈ ವಿಷಯದ ಕುರಿತಾಗಿ ಸೋಮವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಬಿ ಎಸ್ ಯಡಿಯೂರಪ್ಪ ಅವರು, ಕೋವಿಡ್ ನಿಂದ ಮೃತಪಟ್ಟವರ ಕುಟುಂಬಗಳು ಸಂಕಷ್ಟಕ್ಕೀಡಾಗಿವೆ. ಹೀಗಾಗಿ ಬಿಪಿಎಲ್ ಕುಟುಂಬಗಳಿಗೆ ಒಂದು ಲಕ್ಷ ರೂಪಾಯಿ ಪರಿಹಾರ ನೀಡಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ.
ಕೋವಿಡ್ ನಿಂದ ಕೇವಲ 33 ಸಾವಿರ ಜನರು ಮೃತಪಟ್ಟಿದ್ದಾರೆ ಎಂದು ಸರ್ಕಾರ ಹೇಳುತ್ತದೆ. ಆದರೆ, ಈ ಸಾವಿನ ಸಂಖ್ಯೆ ಐದು ಪಟ್ಟು ಹೆಚ್ಚಿದೆ ಎಂಬ ಬಗ್ಗೆ ರಾಜ್ಯದ ಜನರಲ್ಲಿ ವ್ಯಾಪಕ ಅನುಮಾನ ಮೂಡಿದೆ. ರಾಜ್ಯದ ಹಲವೆಡೆ ಅನೇಕರು ಕೋವಿಡ್ನಿಂದ ಮೃತಪಟ್ಟಿದ್ದರೂ ಕೋವಿಡೇತರ ಸಾವೆಂದು ತೋರಿಸಿರುವ ಬಗ್ಗೆಯೂ ದೂರುಗಳು ಬರುತ್ತಿವೆ. ಈ ಹಿನ್ನೆಲೆ ಡೆತ್ ಆಡಿಟ್ ನಡೆಸುವಂತೆ ಆಗ್ರಹಿಸಲಾಗಿದೆ. ಕೊರೊನಾ ಸೋಂಕಿನಿಂದ ದುಡಿಯುವ ವ್ಯಕ್ತಿಗಳು ಮೃತಪಟ್ಟು ಹಲವಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಕೆಲ ಕುಟುಂಬಗಳು ಬೀದಿಪಾಲಾಗಿವೆ. ಇದನ್ನು ಮನಗಂಡು ಬಿಪಿಎಲ್ ಕುಟುಂಬದಲ್ಲಿ ಕೊರೊನಾದಿಂದ ವಯಸ್ಕರು ಅಥವಾ ದುಡಿಯುವ ವ್ಯಕ್ತಿ ಮೃತಪಟ್ಟಿದ್ದರೆ, ಅಂತಹ ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರ ನೀಡಲು ತೀರ್ಮಾನಿಸಲಾಗಿದೆ.
ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳಲ್ಲಿ ಕೋವಿಡ್ ಸೋಂಕಿನಿಂದ ವಯಸ್ಕರು ಮೃತ ಪಟ್ಟಿದ್ದರೆ ಕುಟುಂಬಕ್ಕೆ ಒಂದು ಲಕ್ಷ ಪರಿಹಾರ ಪರಿಹಾರ ನೀಡಲಾಗುತ್ತದೆ. ಎರಡು ಅಲೆಗಳಲ್ಲಿ ಮೃತಪಟ್ಟವರಿಗೆ ಈ ಪರಿಹಾರ ಸಿಗುತ್ತೆ ಎಂದರು. ರಾಜ್ಯದ ಹಣಕಾಸಿನ ಪರಿಸ್ಥಿತಿ ಇರೋದರಲ್ಲಿ ಉತ್ತಮವಾಗಿದೆ. ಇದಕ್ಕಾಗಿ ಸುಮಾರು 250 ರಿಂದ 300ಕೋಟಿ ರೂಪಾಯಿ ಹಣ ಖರ್ಚಾಗುತ್ತದೆ. ಈಗಾಗಲೇ ಸುಮಾರು 25 ಸಾವಿರ ಬಿಪಿಎಲ್ ಕುಟುಂಬದ ಕೆಲವರು ಮೃತ ಪಟ್ಟಿದ್ದಾರೆ. ಕುಟುಂಬದಲ್ಲಿ ಮೂವರು ಅಥವಾ ಇಬ್ಬರು ಸಾವನ್ನಪ್ಪಿದೂ ಅವರಲ್ಲಿ ಒಬ್ಬರಿಗೆ ಮಾತ್ರ ಒಂದು ಲಕ್ಷ ರೂಪಾಯಿ ಸೌಲಬ್ಯ ದೊರೆಯಲಿದೆ. ಒಂದು ವೇಳೆ ಅಪ್ಪ ಅಮ್ಮ ಇಬ್ಬರೂ ಇಲ್ಲದೇ ಇದ್ದರೆ ಅವರ ಮಕ್ಕಳ ಹೆಸರಿನಲ್ಲಿ ಹಣ ಡೆಪಾಸಿಟ್ ಮಾಡಲಾಗುತ್ತದೆ. ದೇಶದಲ್ಲಿಯೇ ಕರ್ನಾಟಕ ಸರ್ಕಾರ ಈ ರೀತಿಯ ಕೋವಿಡ್-19 ಆರ್ಥಿಕ ಪ್ಯಾಕೇಜ್ ನೀಡುತ್ತಿದೆ ಎಂದರೆ ಸರ್ಕಾರದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದೆ ಎಂದರ್ಥ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.