ಕರ್ನಾಟಕ ಅಂತರ್ಜಲ ಪ್ರಾಧಿಕಾರವು ನೂತನ ಕೊಳವೆಬಾವಿಗಳನ್ನು ಕೊರೆಯುವುದನ್ನು ನಿರ್ಬಂಧಿಸಿದ್ದು ಇದಕ್ಕೆ ಸಂಬಂಧಿಸಿದಂತೆ ಅಧಿಸೂಚನೆಯನ್ನು ಹೊರಡಿಸಿದೆ. ಅನುಮತಿಯಿಲ್ಲದೆ ಕೊಳವೆಬಾವಿಗಳನ್ನು ಕೊರೆದರೆ ಶಿಕ್ಷೆ ಅನುಭವಿಸಬೇಕಾಗುತ್ತದೆ. ಕರ್ನಾಟಕದ 15 ಜಿಲ್ಲೆಗಳ 45 ತಾಲೂಕುಗಳಲ್ಲಿ ಹೊಸ ಕೊಳವೆಬಾವಿಗಳನ್ನು ಕೊರೆಯುವುದನ್ನು ನಿರ್ಬಂಧಿಸಿ ಅಧಿಸೂಚನೆಯನ್ನು ಹೊರಡಿಸಲಾಗಿದೆ ಹಾಗೂ ಈ ಜಿಲ್ಲೆಗಳ ವ್ಯಾಪ್ತಿಗೆ ಕೋಲಾರ ಜಿಲ್ಲೆಯನ್ನು ಸಹ ಒಳಪಡಿಸಲಾಗಿದೆ. ಇದರ ಕುರಿತಾದ ಹೆಚ್ಚಿನ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಅಂತರ್ಜಲವನ್ನು ಅತಿಯಾಗಿ ಬಳಸುತ್ತಿರುವ 45 ತಾಲೂಕುಗಳನ್ನು ಗುರುತಿಸಿದ ಕರ್ನಾಟಕ ಅಂತರ್ಜಲ ಅಭಿವೃದ್ದಿ, ನಿರ್ವಹಣೆ ಮತ್ತು ನಿಯಂತ್ರಣ ಅಧಿನಿಯಮ 2011 ಮತ್ತು ನಿಯಮಾವಳಿ 2012ರ ಅನ್ವಯ ಈ ಆದೇಶವನ್ನು ಹೊರಡಿಸಲಾಗಿದೆ. ಈ ಅಧಿಸೂಚನೆಯ ವ್ಯಾಪ್ತಿಗೆ ಕೋಲಾರ ಜಿಲ್ಲೆಯ ಕೋಲಾರ, ಬಂಗಾರಪೇಟೆ, ಮಾಲೂರು, ಮುಳಬಾಗಿಲು, ಶ್ರೀನಿವಾಸಪುರ ಮತ್ತು ಕೆಜಿಎಫ್ ತಾಲೂಕುಗಳು ಒಳಪಡುತ್ತವೆ. ಈ ತಾಲೂಕುಗಳಲ್ಲಿ ಸರ್ಕಾರದ ಅನುಮತಿ ಇಲ್ಲದೆಯೆ ಹೊಸ ಕೊಳವೆ ಬಾವಿಗಳನ್ನು ಕೊರೆಯುವಂತಿಲ್ಲ. ಅಧಿಸೂಚನೆ ವ್ಯಾಪ್ತಿಯಲ್ಲಿ ಬರುವಂತಹ ತಾಲೂಕುಗಳ ವ್ಯಾಪ್ತಿಯಲ್ಲಿ ಬಾವಿ ಅಥವಾ ಕೊಳವೆಬಾವಿಗಳನ್ನು ಕೊರೆಯಲು ಜಿಲ್ಲಾ ಮಟ್ಟದ ಸಮಿತಿಯಿಂದ ಕಡ್ಡಾಯವಾಗಿ ಅನುಮತಿಯನ್ನು ಪಡೆದಿರಲೆಬೇಕು. ಹಾಗೆಯೇ ಬಳಕೆದಾರರು ಕಡ್ಡಾಯವಾಗಿ ಜಿಲ್ಲಾ ಅಂತರ್ಜಲ ಪ್ರಾಧಿಕಾರದಲ್ಲಿ ಕೊಳವೆ ಬಾವಿಗಳನ್ನು ನೋಂದಾಯಿಸುವುದು ಅವಶ್ಯಕವಾಗಿರುತ್ತದೆ. ಅನುಮತಿ ಪತ್ರ ಹೊಂದಿರದ ಯಾವ ಒಬ್ಬ ವ್ಯಕ್ತಿಯು ಕೊಳವೆಬಾವಿಯನ್ನು ಕೊರೆಯಲು ಹಣಕಾಸಿನ ಸಹಾಯ, ವಿದ್ಯುತ್‍ಶಕ್ತಿ ಸಂಪರ್ಕ ಮುಂತಾದ ಸೌಲಭ್ಯಗಳನ್ನು ಪಡೆದುಕೊಳ್ಳಲು ಅರ್ಹರಾಗಿರುವುದಿಲ್ಲ.
ಕರ್ನಾಟಕ ಅಂತರ್ಜಲ ಪ್ರಾಧಿಕಾರದ ಅನುಮತಿ ಪಡೆಯದೆ ಯಾವುದೇ ವ್ಯಕ್ತಿ ಅಥವಾ ಯಾವುದೇ ಕೊರೆಯುವ ರಿಂಗ್ ಯಂತ್ರದ ಮಾಲೀಕರು ಅಥವಾ ಏಜೆನ್ಸಿಯವರು ಪ್ರಾಧಿಕಾರದಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳದೆ ಕೊಳವೆಬಾವಿಗಳನ್ನು ತೋಡುವ ಅಥವಾ ಕೊರೆಯುವ ಕೆಲಸವನ್ನು ಕೈಗೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಅಧಿಸೂಚನೆ ವ್ಯಾಪ್ತಿಗೆ ಬರುವ ಪ್ರದೇಶಗಳಲ್ಲಿ ಕೈಗಾರಿಕೆ, ವಾಣಿಜ್ಯ, ಮನೋರಂಜನೆ ಮತ್ತು ಇತರೆ (Infrastructure and mining) ಉದ್ದೇಶಕ್ಕಾಗಿ ಕೊಳವೆಬಾವಿ ಕೊರೆಯಲು ಅಂತರ್ಜಲ ಪ್ರಾಧಿಕಾರದಿಂದ ಅನುಮತಿ ಪಡೆಯಬೇಕು. ನಂತರ ಕೊಳವೆಬಾವಿಗಳನ್ನು ಜಿಲ್ಲಾ ಅಂತರ್ಜಲ ಪ್ರಾಧಿಕಾರದಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಸಬೇಕು. ಕೊಳವೆ ಬಾವಿ ಕೊರೆದ ಬಳಿಕ ಅಂತರ್ಜಲ ಬಳಸಲು ನಿರಾಕ್ಷೇಪಣಾ ಪತ್ರವನ್ನುಕಡ್ಡಾಯವಾಗಿ ಅಂತರ್ಜಲ ಪ್ರಾಧಿಕಾರದಿಂದ ಪಡೆಯಬೇಕಾಗಿರುತ್ತದೆ. ಜನರಿಗೆ ಯಾವುದೇ ರೀತಿಯ ಗೊಂದಲಗಳಿದ್ದರೆ ಹಿರಿಯ ಭೂವಿಜ್ಞಾನಿ, ಜಿಲ್ಲಾ ಅಂತರ್ಜಲ ಕಛೇರಿ ಅವರನ್ನು ಸಂಪರ್ಕಿಸಬಹುದಾಗಿದೆ.