ಚಿತ್ರದುರ್ಗ ಜಿಲ್ಲೆಯ ಮೇದೆಹಳ್ಳಿ ಗ್ರಾಮದ ಗಿರಿರಾಜ್ ಅವರು ತಮ್ಮ ಅರ್ಧ ಎಕರೆ ಜಾಗದಲ್ಲಿ ಐದುನೂರು ಕರಿಬೇವಿನ ಗಿಡಗಳನ್ನು ಬೆಳೆಸಿದ್ದಾರೆ ಅದರಲ್ಲಿಯೇ ಹೆಸರನ್ನು ಮಾಡಿದ್ದಾರೆ. ಅಲ್ಲಿ ಕೇವಲ ಐದು ನೂರು ಗಿಡಗಳ ಉತ್ಪನ್ನದಿಂದ ಅವರ ಕುಟುಂಬ ಇಂದು ನೆಮ್ಮದಿಯ ಜೀವನವನ್ನು ಕೊಂಡುಕೊಂಡಿದೆ. ನಮ್ಮಲ್ಲಿ ಇಂದು ಸಾವಿರಾರು ಎಕರೆ ಜಮೀನಿದ್ದರೂ ಅನೇಕ ರೈತರು ಸಾಲ ದಲ್ಲಿದ್ದಾರೆ ಕೃಷಿ ಮಾಡುವುದಕ್ಕೂ ಅನೇಕ ತೊಂದರೆಗಳಿವೆ ಆದರೆ ಇವರು ಕೇವಲ ಐದುನೂರು ಕರಿಬೇವಿನ ಗಿಡಗಳ ಬೇಸಾಯದಿಂದ ಬದುಕನ್ನು ಕಟ್ಟಿಕೊಂಡಿದ್ದಾರೆ. ಅವರು ಈ ಕರಿಬೇವಿನ ಬೇಸಾಯದಿಂದ ಯಾವ ರೀತಿಯಾಗಿ ಅನುಕೂಲವನ್ನು ಪಡೆದುಕೊಂಡಿದ್ದಾರೆ ಎಂಬುದರ ಕುರಿತಾದ ಮಾಹಿತಿಯನ್ನು ನಾವಿಂದು ತಿಳಿದುಕೊಳ್ಳೋಣ.
ಇವರು ಮೂಲತಹ ಕೃಷಿ ಹಿನ್ನೆಲೆಯ ಕುಟುಂಬದಿಂದ ಬಂದವರು ತಮ್ಮ ಅರ್ಧ ಎಕರೆ ಜಮೀನಿನಲ್ಲಿ ಕರಿಬೇವಿನ ಜೊತೆಗೆ ಅಡಿಕೆ ಮಾವು ನೆಲ್ಲಿಕಾಯಿ ಪೇರಳೆ ಗಿಡಗಳನ್ನು ಬೆಳೆದಿದ್ದಾರೆ. ಇವರು ವೈಜ್ಞಾನಿಕವಾಗಿ ಕರಿಬೇವನ್ನು ಬೆಳೆಯುವುದಕ್ಕೆ ಪ್ರಾರಂಭಿಸಲಿಲ್ಲ ಇರುವಂತಹ ಜಾಗದಲ್ಲಿ ಒಂದಿಷ್ಟು ಗಿಡಗಳನ್ನು ನೆಡುತ್ತಾರೆ.
ಅದು ಒಳ್ಳೆಯ ರೀತಿಯಲ್ಲಿ ಬೆಳೆದ ನಂತರ ಮತ್ತೆ ಒಂದಿಷ್ಟು ಗಿಡಗಳನ್ನು ತಂದು ನೆಡುತ್ತಾರೆ. ಒಂದು ವರ್ಷದ ನಂತರ ಕರಿಬೇವು ಕಟಾವಿಗೆ ಬರುತ್ತದೆ. ಇವರು ಬೇರೆ ಬೇರೆ ಕಸುಬುಗಳನ್ನು ಮಾಡಿದರು ಕೂಡ ಮನೆಗೆ ಅದರ ಹಣವನ್ನು ಹಾಕುವುದಿಲ್ಲ ಕೇವಲ ಕರಿಬೇವಿನಿಂದ ಬರುವಂತಹ ಆದಾಯದಿಂದ ಮನೆಯ ಖರ್ಚನ್ನು ನೋಡಿಕೊಳ್ಳುತ್ತಾರೆ.
ಇವರು ಒಂದು ವರ್ಷಕ್ಕೆ ನಾಲ್ಕು ಸಾರಿ ಕರಿಬೇವನ್ನು ಕಟಾವು ಮಾಡುತ್ತಾರೆ. ಇವರು ಕಳೆದ ಒಂಬತ್ತು ವರ್ಷಗಳಿಂದ ಕರಿಬೇವನ್ನು ಬೆಳೆಯುತ್ತಿದ್ದು ಇವುಗಳಿಗೆ ಸಾವಯವ ಗೊಬ್ಬರವನ್ನು ನೀಡುತ್ತಿದ್ದಾರೆ. ವರ್ಷಕ್ಕೆ ಒಂದು ಬಾರಿ ಇವುಗಳ ಬುಡಕ್ಕೆ ಮಣ್ಣು ಮತ್ತು ಕುರಿ ಗೊಬ್ಬರವನ್ನು ಹಾಕುತ್ತಾರೆ. ಪ್ರತಿದಿನ ಮೂರು ಗಿಡಗಳಂತೆ ಕಟಾವನ್ನು ಮಾಡುತ್ತಾರೆ ಕಟಾವು ಮಾಡುವಾಗ ಯಾವುದೇ ಹಳೆಯ ಎಲೆಗಳನ್ನು ಬಿಡಬಾರದು ಎಂದು ಹೇಳುತ್ತಾರೆ. ಚಿಗುರು ಹೊಸದು ಬರುವ ರೀತಿಯಲ್ಲಿ ಕಟಾವು ಮಾಡಬೇಕು. ಕಟಾವು ಮಾಡುವ ಸಮಯದಲ್ಲಿಯೂ ಕೂಡ ವೈಜ್ಞಾನಿಕವಾಗಿ ಕತ್ತರಿ ಸಹಾಯದಿಂದ ಕತ್ತರಿಸಬೇಕು ಅದರ ಹೊರತಾಗಿ ಕೈಯಿಂದ ಮುರಿಯುವುದು ಕತ್ತಿಯಿಂದ ಕಡೆಯುವುದು ಮಾಡಬಾರದು.
ಒಂದು ಬಾರಿ ಕಟಾವು ಮಾಡುವಾಗ ಸಂಪೂರ್ಣವಾಗಿ ಎಲೆಗಳನ್ನು ತೆಗೆಯುವುದರಿಂದ ಯಾವುದೇ ರೋಗಗಳು ಬರುವ ಸಾಧ್ಯತೆ ಇರುವುದಿಲ್ಲ. ಕರಿಬೇವನ್ನು ಬೆಳೆಯುವುದಕ್ಕೆ ನೀರಿನ ಕರ್ಚು ಹೆಚ್ಚು ಬರುವುದಿಲ್ಲ ಮಿತವ್ಯಯ ಸಾಕಾಗುತ್ತದೆ. ಬೇಸಿಗೆಯಲ್ಲಿ ವಾರಕ್ಕೆ ಒಂದು ಬಾರಿ ನೀರು ಕೊಟ್ಟರು ಸಾಕಾಗುತ್ತದೆ.
ಇದನ್ನು ಬೆಳೆಯುವುದಕ್ಕೆ ಅಷ್ಟು ಕಷ್ಟ ಅನಿಸುವುದಿಲ್ಲ ಕರಿಬೇವನ್ನು ಬೆಳೆಯುವುದರಿಂದ ತಿಂಗಳಿಗೆ ಎಲ್ಲಾ ಖರ್ಚು ಕಳೆದು ಇಪ್ಪತ್ತು ಸಾವಿರ ಆದಾಯವನ್ನು ಗಳಿಸುತ್ತಾರೆ. ಕರಿಬೇವಿನ ಕೃಷಿ ವಿಭಿನ್ನವಾಗಿದ್ದು ಇವರ ಜೀವನಕ್ಕೆ ಒಂದು ದಾರಿಯನ್ನು ತೋರಿಸಿಕೊಟ್ಟಿದೆ. ಇದೇ ರೀತಿಯಾಗಿ ನಮ್ಮ ರಾಜ್ಯದಲ್ಲಿ ಇನ್ನೂ ಬೇರೆ ಬೇರೆ ರೀತಿಯ ವಿಭಿನ್ನ ಕೃಷಿಯನ್ನು ಅಳವಡಿಸಿಕೊಳ್ಳುವ ಮೂಲಕ ರೈತರು ಯಶಸ್ಸನ್ನು ಸಾಧಿಸಬಹುದಾಗಿದೆ.