ಕಲಬುರಗಿಯಲ್ಲಿ 30 ಬಿ. ಎಫ್. ಟಿ. ಹುದ್ದೆಗಳಿಗೆ ಅರ್ಜಿ ಆಹ್ವಾನ. ಕಲಬುರಗಿ ಜಿಲ್ಲಾ ಪಂಚಾಯತಿ ಬಿ. ಎಫ್. ಟಿ ಹುದ್ದೆಗಳ ನೇಮಕಾತಿಗಾಗಿ ಅರ್ಜಿಗಳನ್ನು ಕರೆದಿದೆ. ಒಟ್ಟು 30 ಹುದ್ದೆಗಳಿದ್ದು, ಆಸಕ್ತರು ಮಾರ್ಚ್ 30ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು? ಹೇಗೆ ಅರ್ಜಿ ಸಲ್ಲಿಸಬೇಕು ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಅವಶ್ಯಕತೆಯಿರುವ ತಾಲೂಕುವಾರು ಬಿ. ಎಫ್. ಟಿ. (Bare Foot Technician) ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ದಿಲೀಶ್ ಸಾಸಿ ಈ ಕುರಿತು ಪ್ರಕಟಣೆ ಹೊರಡಿಸಿದ್ದಾರೆ. ಇವರಿಗೆ ಪ್ರತೀ ತಿಂಗಳು 12 ಸಾವಿರ ರೂಪಾಯಿ ವೇತನ ನೀಡಲಾಗುವುದು.
ಅಫಜಲಪುರ 7, ಚಿಂಚೋಳಿ 3, ಚಿತ್ತಾಪುರ 2, ಜೇವರ್ಗಿ 5, ಕಲಬುರಗಿ 2, ಸೇಡಂ 4, ಶಹಾಬಾದ್ 1 ಹಾಗೂ ಯಡ್ರಾಮಿ 6 ಸೇರಿದಂತೆ ಒಟ್ಟು 30 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಅರ್ಜಿಯನ್ನು ಸಲ್ಲಿಸುವವರು ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಸಕ್ರಿಯ ಕೆಲಸಗಾರನಾಗಿರಬೇಕು. ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಸಕ್ರಿಯ ಕೆಲಸಗಾರರು ಎಂದರೆ ಸದರಿ ವ್ಯಕ್ತಿಯ ಹಿಂದಿನ 3 ವರ್ಷಗಳಲ್ಲಿ ಕನಿಷ್ಠ 2 ವರ್ಷಗಳಲ್ಲಿ 25 ದಿನಗಳಿಗೆ ಕಡಿಮೆ ಇಲ್ಲದಷ್ಟು ಯೋಜನೆಯಡಿ ಕೂಲಿಕಾರರನಾಗಿ ಕೆಲಸವನ್ನು ಮಾಡಿರಬೇಕು.
ಇನ್ನೂ ವಿದ್ಯಾರ್ಹತೆ ನೋಡುವುದಾದರೆ , ಅಭ್ಯರ್ಥಿಯು ಕನಿಷ್ಠ 10ನೇ ತರಗತಿ ಉತ್ತೀರ್ಣರಾಗಿರಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 12,000 ರೂಪಾಯಿ ವೇತನ ನೀಡಲಾಗುತ್ತದೆ. ಸ್ಥಳೀಯ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ. ಮಹಿಳೆಯರಿಗೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಸಾಕಷ್ಟು ಪ್ರಾಧಾನ್ಯತೆ ಇದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿ 45 ವರ್ಷದೊಳಗಿರಬೇಕು. ಬಿ. ಎಫ್. ಟಿ. ಗಳನ್ನು ಕುಶಲ ಕಾರ್ಮಿಕರೆಂದು ಪರಿಗಣಿಸಿ ಕರ್ತವ್ಯಕ್ಕೆ ನಿಯೋಜಿಸಿಕೊಳ್ಳಲಾಗುತ್ತದೆ. ಇದು ಖಾಯಂ ಹುದ್ದೆಯಾಗಿರುವುದಿಲ್ಲ.
ಅರ್ಹ ಅಭ್ಯರ್ಥಿಗಳು ಕಲಬುರಗಿ ಜಿಲ್ಲಾ ಪಂಚಾಯಿತಿಯ ನರೇಗಾ ಶಾಖೆಯಿಂದ ನಿಗದಿತ ನಮೂನೆಯ ಅರ್ಜಿ ಪಡೆದು ಭರ್ತಿ ಮಾಡಿ ಅವಶ್ಯಕ ದಾಖಲಾತಿಗಳೊಂದಿಗೆ ಮಾರ್ಚ್ 30 ರೊಳಗಾಗಿ ಪ್ರತಿದಿನ ಬೆಳಗ್ಗೆ 10 ರಿಂದ ಸಂಜೆ 5.30 ಗಂಟೆಯವರಗೆ ಅಂದರೆ ಕೆಲಸದ ಸಮಯದಲ್ಲಿ ಅರ್ಜಿ ಸಲ್ಲಿಸಬೇಕು. ಅಂದರೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಇದೆ ತಿಂಗಳು 30 ಆಗಿರುವುದು.