ಜೇನು ಕೃಷಿಯಲ್ಲಿ ವರ್ಷಕ್ಕೆ ಲಕ್ಷಗಳಿಂದ ಹಿಡಿದು ಕೋಟಿ ರೂ ವರೆಗೆ ಗಳಿಸಿರುವ ಸಾಕಷ್ಟು ಮಂದಿ ನಮ್ಮ ನಡುವೆ ಇದ್ದಾರೆ, ಜೇನು ಸಾಕಾಣಿಕೆಯನ್ನು ಮುಖ್ಯ ಉದ್ದಿಮೆಯನ್ನಾಗಿ ಮಾಡಿಕೊಂಡಿರುವ ಮಂದಿ ವರ್ಷಕ್ಕೆ ಒಂದು ಕೋಟಿಯಿಂದ ಎರಡು ಕೋಟಿ ರೂ ವರೆಗೆ ಗಳಿಸಿರುವ ಪ್ರಾತ್ಯಕ್ಷ ನಿದರ್ಶನಗಳಿವೆ, ಇನ್ನು ಜೇನು ಸಾಗಾಣಿಕೆಯನ್ನು ಕೃಷಿ ಜತೆಗೆ ಮುಖ್ಯ ಉಪ ಕಸುಬನ್ನಾಗಿ ಮಾಡಿಕೊಂಡಿರುವ ಕೆಲ ಮಂದಿ ವರ್ಷಕ್ಕೆ 20 ರಿಂದ 30 ಲಕ್ಷ ರೂ ಗಳಿಸುತ್ತಿದ್ದಾರೆ. ಸಣ್ಣ ಮಟ್ಟದಲ್ಲಿ ಅಂದರೆ ಐದರಿಂದ ಹತ್ತು ಜೇನು ಪೆಟ್ಟಿಗೆ ಇಟ್ಟುಕೊಂಡಿರುವ ಮಂದಿ ಹೆಚ್ಚು ಪರಿಶ್ರಮ ಇಲ್ಲದೆ ತಿಂಗಳಿಗೆ ಐದಾರು ಸಾವಿರ ರೂ ಗಳಿಸುತ್ತಿದ್ದಾರೆ.
ಇದಕ್ಕೆಲ್ಲಾ ಸಾಕಷ್ಟು ಬಂಡವಾಳ ಬೇಕಲ್ಲ ಅಂತ ನೀವೇನಾದ್ರೂ ಅಂದು ಕೊಂಡರೆ ಅದು ತಪ್ಪು ಕಲ್ಪನೆ. ಜೇನು ಸಾಕಾಣಿಕೆಯ ವಿಶೇಷತೆಯೇ ಅಂತದ್ದು ಇದರಲ್ಲಿ ಇತರ ಕಸುಬುಗಳಲ್ಲಿ ಇರುವಂತೆ ಹೆಚ್ಚು ನಿರ್ವಹಣೆ ಖರ್ಚು ಇರುವುದಿಲ್ಲ, ಯಾಕೆಂದರೆ ಜೇನು ಪ್ರಕೃತಿ ಮಾತೆಯಿಂದ ಪೋಷಿಸಲ್ಪಡುತ್ತದೆ. ಇದಕ್ಕೆ ಯಾವುದೇ ರೀತಿಯ ಪಕ್ವಾವಾದ ಸ್ಥಳದ ಅಗತ್ಯವಿಲ್ಲಾ. ಹೂದೋಟ ಅಥವಾ ಜೇನಿಗೆ ಮಕರಂದವನ್ನು ಸವಿಯಲು ಪೂರಕವಾದ ಸ್ಥಳವಾದರೆ ಸಾಕು.
ಜೇನುತುಪ್ಪದ ಮಾರಾಟದ ಜತೆಗೆ ಉಪ ಉತ್ಪನ್ನಗಳ ತಯಾರಿಕೆಯಿಂದ ಜೇನು ಕೃಷಿಯಲ್ಲಿ ಲಾಭ ಗಳಿಸಲು ಸಾಧ್ಯವಿದೆ. ಜೇನು ಸಾಕುವ ಜೇನು ಪೆಟ್ಟಿಗೆ, ಹುಳು ಮಾರಟ, ಪರಾಗ, ಮೇಣ, ನ್ಯಾಚುರಲ್ ವ್ಯಾಸಲಿನ್ ಮಾರಾಟದಿಂದ ಹಣಗಳಿಸುವ ಅವಕಾಶವಿದೆ. ಹನಿ ಜಾಮ್, ಗಾರ್ಲಿಕ್ ಹನಿ,ಅಕೇಶಿಯಾ ಹನಿ, ರಾಯಲ್ ಜೆಲ್ಲಿ ಹನಿ, ಜಿಂಜರ್ ಹನಿ ಸೇರಿ ಹಲವು ಮಾದರಿಯ ಜೇನು ತುಪ್ಪ ಉತ್ಪಾದಿಸಬಹುದು.
ಜೇನು ಸಾಕಾಣಿಕೆಗೆ ಸರ್ಕಾರದಿಂದಲೂ ಬಹಳಷ್ಟು ಸವಲತ್ತುಗಳು ಇವೆ. ಜೇನು ಸಾಕಣೆ ಮಾಡುವ ಸಣ್ಣ ರೈತರಿಗೆ ತೋಟಗಾರಿಕೆ ಇಲಾಖೆ ಶೇ 75 ಸಬ್ಸಿಡಿ ನೀಡುತ್ತಿದೆ, ಎಸ್ಸಿ ಎಸ್ಟಿ ಸಮುದಾಯದವರಿಗೆ ಶೇ 90 ಸಹಾಯಧನದ ಸೌಲಭ್ಯವು ಇದೆ. ಜೇನು ಸಾಕಾಣಿಕೆ ಪ್ರೋತ್ಸಾಹ ನೀಡಲು ಈ ಬಾರಿ ತೋಟಗಾರಿಕೆ ಇಲಾಖೆ ಕೋಟಿ ರೂ ಅನುದಾನ ಮೀಸಲಿಟ್ಟದೆ. ಜೇನು ತುಪ್ಪ ಸಂಸ್ಕರಣೆ ಘಟಕ ನಿರ್ಮಾಣಕ್ಕೂ ನೆರವು ಕಲ್ಪಿಸಲಾಗಿದೆ.
ಜೇನು ತುಪ್ಪ ತನ್ನ ಸ್ವಾದಿಷ್ಟವಾದ ರುಚಿಯಿಂದ ಮಾತ್ರವಲ್ಲದೆ, ಔಷಧಿಯ ಗುಣಗಳಿಂದಲೂ ಬಹಳ ಜನಪ್ರಿಯವಾಗಿದೆ. ತೂಕ ನಿರ್ವಹಣೆ, ರೋಗ ನಿರೋಧಕ ಶಕ್ತಿ ಹೆಚ್ಚಳ, ಚರ್ಮದ ತೇವಾಂಶ ನಿರ್ವಹಣೆ, ಸ್ಮರಣಾ ಶಕ್ತಿ ಹೆಚ್ಚಳ, ಶೀತ, ಸೈನಸ್ ಮತ್ತು ಕೆಮ್ಮಿಗೆ ರಾಮಬಾಣ, ತಲೆ ಹೊಟ್ಟಿನ ಸಮಸ್ಯೆ ನಿವಾರಣೆ ಜತೆಗೆ ನಿದ್ರಾ ಹೀನತೆಗೂ ಮದ್ದು ಜೇನುತುಪ್ಪ.