ಅಣ್ಣಾಮಲೈ ಬಳಿಕ ರಾಜ್ಯದ ಮತ್ತೊಬ್ಬ ಐಪಿಎಸ್ ಅಧಿಕಾರಿ ರವಿ ಡಿ ಚನ್ನಣ್ಣನವರ್ ಶೀಘ್ರದಲ್ಲಿ ಬಿಜೆಪಿ ಸೇರುವ ತಯಾರಿಯಲ್ಲಿದ್ದಾರಾ? ಎಂಬ ಪ್ರಶ್ನೆ ಎದ್ದಿದೆ. ಉನ್ನತ ಹುದ್ದೆಯ ಕನಸು ಕಂಡು ಹಗಲಿರುಳು ಓದಿ ದಕ್ಕಿಸಿಕೊಂಡ ಐಎಎಸ್, ಐಪಿಎಸ್ ನಂತಹ ಉನ್ನತ ಸ್ಥಾನಗಳನ್ನು ತೊರೆದು ರಾಜಕೀಯಕ್ಕೆ ಎಂಟ್ರಿ ಕೊಡುವ ಅಧಿಕಾರಿಗಳ ಸಂಖ್ಯೆ ಹೆಚ್ಚಾಗುತ್ತಿದೆ.
2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಇಂತಹದೊಂದು ಟ್ರೆಂಡ್ ಶುರುವಾಗಿದ್ದು ಯುವ ಅಧಿಕಾರಿಗಳು ರಾಜಕೀಯದತ್ತ ಮುಖ ಮಾಡಿದ್ದು ಈಗ ಚನ್ನಣ್ಣನವರ್ ಬಿಜೆಪಿ ಸೇರುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಬಳ್ಳಾರಿ MP ಸ್ಥಾನಕ್ಕೆ ಬಿಜೆಪಿಯಿಂದ ಸ್ಪರ್ಧಿಸುವ ಸಾಧ್ಯತೆ ಇದ್ದು ರವಿ ಚನ್ನಣ್ಣನವರ್ ಅವರು ದೆಹಲಿಯಲ್ಲಿ ಬಿಎಲ್ ಸಂತೋಷ್ ಭೇಟಿಯಾಗಿದ್ದಾರೆ.
ರಾಜ್ಯದಲ್ಲಿ ಸೂಪರ್ ಕಾಪ್ ಎಂದೇ ಫೇಮಸ್ ಆಗಿರುವ ರವಿ ಡಿ ಚನ್ನಣ್ಣನವರ್‍ರನ್ನ ಬಿಜೆಪಿ ಸೆಳೆಯಲು ಮುಂದಾಗಿದೆಯಂತೆ. ಈ ಬಗ್ಗೆ ಪ್ರಾಥಮಿಕ ಮಾತುಕತೆಗಳು ನಡೆಯುತ್ತಿದ್ದು ರವಿ ಡಿ ಚನ್ನಣ್ಣನವರ್ ಪೂರಕವಾಗಿ ಸ್ಪಂದಿಸಿದ್ದಾರೆ ಎಂದು ಬಿಜೆಪಿ ಮೂಲಗಳು ಹೇಳುತ್ತಿವೆ. ಐಪಿಎಸ್ ಅಧಿಕಾರಿ ರವಿ ಡಿ ಚನ್ನಣ್ಣನವರ್ ರಾಜಕೀಯ ಸೇರುತ್ತಾರೆ ಅನ್ನೋ ವದಂತಿ ಮತ್ತಷ್ಟು ದಟ್ಟವಾಗಿದೆ.
ಅದಕ್ಕೆ ಕಾರಣ ಇತ್ತೀಚೆಗೆ ಅವರು ಬಿಜೆಪಿ ವರಿಷ್ಠರನ್ನ ಭೇಟಿಯಾಗಿರೋದು! ಈ ಮೂಲಕ ಕರ್ನಾಟಕದ ಸಿಂಗಂ ಬಿಜೆಪಿಯತ್ತ ಮುಖ ಮಾಡುತ್ತಿದ್ದಾರಾ ಅನ್ನೋ ಅನುಮಾನ ಶುರುವಾಗಿದೆ. ರವಿ ಡಿ ಚನ್ನಣ್ಣನವರ್ ಅವರು ಕಳೆದ ಮಂಗಳವಾರ ಬಿಜೆಪಿ ರಾಷ್ಟ್ರೀಯ ಪ್ರಧಾನ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರನ್ನ ಭೇಟಿಯಾಗಿದ್ದಾರೆ. ದೆಹಲಿಯ ಅಶೋಕ ರಸ್ತೆಯಲ್ಲಿರುವ ಬಿ.ಎಲ್ ಸಂತೋಷ್ರ ನಿವಾಸದಲ್ಲಿ ಭೇಟಿಯಾಗಿ ಪಕ್ಷ ಸೇರುವ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಇನ್ನು, ಸಂತೋಷ್ ಭೇಟಿಗಾಗಿ ಚನ್ನಣ್ಣನವರ್ ಕಾದು ಕೂತಿದ್ದರು. ಇದೇ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸಿಟಿ ರವಿ ಕೂಡ ಆಗಮಿಸಿದ್ದರು. ನಂತರ ಸಿಟಿ ರವಿಯವರೇ ಚನ್ನಣ್ಣನವರ್ ಅವರನ್ನ ಸಂತೋಷ್ಗೆ ಭೇಟಿ ಮಾಡಿಸಿದ್ದಾರೆ ಎಂದು ತಿಳಿದು ಬಂದಿದೆ. ರಾಜ್ಯದ ಮಟ್ಟಿಗೆ ರವಿ ಡಿ ಚನ್ನಣ್ಣನವರ್ ಪ್ರಖ್ಯಾತಿ ಪಡೆದಿದ್ದು ಸಿಂಗಂ ಎಂದು ಕರೆಸಿಕೊಳ್ಳುತ್ತಿದ್ದಾರೆ.
ಗದಗ ಮೂಲದ ಈ ಐಪಿಎಸ್ ಅಧಿಕಾರಿಯನ್ನು ರಾಜ್ಯದ ದೊಡ್ಡ ಪ್ರಮಾಣದ ಯುವ ಸಮುದಾಯದ ಸ್ಫೂರ್ತಿಯಾಗಿಸಿಕೊಂಡಿದ್ದು ಮುಂದಿನ ಚುನಾವಣೆಗೆ ಇವರನ್ನು ಚುನಾವಣಾ ಅಖಾಡಕ್ಕೆ ಇಳಿಸುವ ಲೆಕ್ಕಚಾರದಲ್ಲಿ ಬಿಜೆಪಿ ಇದೆ ಎನ್ನಲಾಗುತ್ತಿದೆ. ಅಣ್ಣಾಮಲೈ ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷರಾದ ಬಳಿಕ ರವಿ ಚನ್ನಣ್ಣನವರ್ ಕೂಡಾ ರಾಜಕೀಯಕ್ಕೆ ಸೇರಲು ಉತ್ಸುಕರಾಗಿದ್ದು ಮುಂದಿನ ದಿನಗಳಲ್ಲಿ ಅಣ್ಣಾಮಲೈ ದಾರಿ ಹಿಡಿಯಬಹುದು ಎಂದು ಹೇಳಲಾಗುತ್ತಿದೆ
ಮೂಲಗಳ ಪ್ರಕಾರ ರವಿ ಚನ್ನಣ್ಣನವರ್ ಮತ್ತು ಬಿಎಲ್ ಸಂತೋಷ್ ಮಧ್ಯೆ ಬಳ್ಳಾರಿ ಲೋಕಸಭೆ ಕ್ಷೇತ್ರದ ಬಗ್ಗೆ ಚರ್ಚೆ ನಡೆದಿದೆ. ಬಳ್ಳಾರಿ ಲೋಕಸಭೆ ಕ್ಷೇತ್ರದಿಂದ ಟಿಕೆಟ್ ಪಡೆದು ಸ್ಪರ್ಧಿಸುವ ಬಗ್ಗೆ ಇಬ್ಬರು ಗಣ್ಯರು ಚರ್ಚೆ ನಡೆಸಿದ್ದಾರೆ ಅಂತಾ ಹೇಳಲಾಗಿದೆ. ಇನ್ನು ಚನ್ನಣ್ಣನವರ್ ಬಿಜೆಪಿ ಹೈಕಮಾಂಡ್ ಭೇಟಿ ಮಾಡಿರುವ ಸಂದರ್ಭದಲ್ಲಿ ಸಿಎಂ ಬೊಮ್ಮಾಯಿ ಕೂಡ ದೆಹಲಿಯಲ್ಲೇ ಇದ್ದರು. ರವಿ ಡಿ.ಚನ್ನಣ್ಣನವರ್ ಇತ್ತೀಚೆಗೆ ವಿವಿಧ ಮಠಾಧೀಶರುಗಳನ್ನ ಭೇಟಿಯಾಗಿ ಆಶೀರ್ವಾದ ಕೂಡ ಪಡೆದುಕೊಂಡಿದ್ದಾರೆ.
ಇದೀಗ ಬಿಜೆಪಿ ಹೈಕಮಾಂಡ್ ನಾಯಕರನ್ನ ಭೇಟಿಯಾಗಿರೋದು ಮತ್ತಷ್ಟು ಮಹತ್ವ ಪಡೆದುಕೊಂಡಿದೆ. ಮೂಲಗಳ ಪ್ರಕಾರ ರವಿ ಡಿ ಚೆನ್ನಣ್ಣನವರ್ ಬಿಜೆಪಿ ಸೇರಿದ್ದೆ ಆದಲ್ಲಿ ಮುಂದಿನ ವಿಧಾನಸಭೆ ಅಥವಾ ಲೋಕಸಭೆಗೆ ಸ್ಪರ್ಧಿಸುವುದು ಖಚಿತ ಎಂದು ತಿಳಿದುಬಂದಿದೆ. ರವಿ ಚೆನ್ನಣ್ಣವರ್ ಅವರನ್ನು ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಲು ಬಿಎಲ್ ಸಂತೋಷ್ ಉತ್ಸುಕರಾಗಿದ್ದಾರೆ ಎನ್ನಲಾಗಿದೆ. ಆದರೆ ಇನ್ನು ಕೂಡ ಸೇರ್ಪಡೆಯ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.