ಸಾಮಾನ್ಯವಾಗಿ ಪ್ರತಿಯೊಬ್ಬರು ಆಸ್ತಿಯನ್ನು ಹೊಂದಿರುತ್ತಾರೆ ಜಮೀನು ನೋಂದಣಿ ಪ್ರಕ್ರಿಯೆ ಮೂಲಕ ಜಮೀನು ರಿಜಿಸ್ಟರ್ ಆಗುತ್ತದೆ. ನೋಂದಣಿ ಪ್ರಕ್ರಿಯೆ ಹೇಗಿರುತ್ತದೆ, ಜಮೀನು ನೋಂದಣಿ ಮಾಡಲು ಯಾವೆಲ್ಲಾ ದಾಖಲಾತಿಗಳು ಬೇಕಾಗುತ್ತದೆ ಎಂಬ ಮಾಹಿತಿಯನ್ನು ಸಂಪೂರ್ಣವಾಗಿ ಈ ಲೇಖನದಲ್ಲಿ ನೋಡೋಣ.
ಜಮೀನು ನೋಂದಣಿ ಮಾಡಲು ಕೆಲವು ದಾಖಲಾತಿಗಳು ಬೇಕಾಗುತ್ತದೆ. ಜಮೀನು ಕೊಂಡವರ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಹಾಗೂ ಜಮೀನು ಮಾರಿದವರ ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಬೇಕಾಗುತ್ತದೆ. ಜಮೀನನ್ನು ಮಾರಿದವರು ಕೊಂಡು ಕೊಂಡವರಿಗೆ ಕೆಲವು ದಾಖಲೆಗಳನ್ನು ಕೊಡಬೇಕಾಗುತ್ತದೆ. ಜಮೀನಿನ ಫಾರಂ ಟೆನ್, ಡೊಂಚ್ ನಕಾಶೆ, ಪಹಣಿ, ಆಕಾರ ಬಂದ್, ಜಮೀನಿನ ಮೇಲೆ ಬೆಳೆ ಸಾಲವಿದ್ದರೆ ಸಾಲ ಮುಕ್ತವಾಗಿರುವ ಬ್ಯಾಂಕ್ ನಿಂದ ಕೊಟ್ಟಿರುವ ನೊ ಡ್ಯೂ ಸರ್ಟಿಫಿಕೇಟ್ ಬೇಕಾಗುತ್ತದೆ.
ಈ ದಾಖಲೆಗಳನ್ನು ತಾಲೂಕಿನಲ್ಲಿರುವ ಲ್ಯಾಂಡ್ ರಿಜಿಸ್ಟ್ರೇಷನ್ ಮಾಡಿಸುವ ವಕೀಲರು ಅಥವಾ ನೋಂದಣಿ ಮಾಡುವಲ್ಲಿ ಪರಿಣಿತರಾಗಿ ಇರುವವರ ಹತ್ತಿರ ಇನ್ನೊಮ್ಮೆ ಈ ದಾಖಲೆಗಳನ್ನು ಪರಿಶೀಲನೆ ಮಾಡಿಕೊಳ್ಳಬೇಕು. ನಮ್ಮ ರಾಜ್ಯದಲ್ಲಿ ಕರ್ನಾಟಕ ಸ್ಟ್ಯಾಂಪ್ ಕಾಯ್ದೆಯ ಪ್ರಕಾರ ಜಮೀನಿನ ನೋಂದಣಿಯಾಗುತ್ತದೆ.
ಜಮೀನಿನ ನೊಂದಣಿ ಆಗಬೇಕಾದರೆ ಕ್ರಯ ಪತ್ರವನ್ನು ರೆಡಿ ಮಾಡಿಸಬೇಕು ಕ್ರಯಪತ್ರದಲ್ಲಿ ಜಮೀನಿನ ವಿಸ್ತೀರ್ಣ, ಜಮೀನು ಮಾರಿದವರ ಹೆಸರು, ಕೊಂಡುಕೊಂಡವರ ಹೆಸರು, ವಿಳಾಸ ಜಮೀನಿನ ಮೌಲ್ಯ ಮುಂತಾದವಿಷಯಗಳು ಕ್ರಯ ಪತ್ರದಲ್ಲಿ ಒಳಗೊಂಡಿರುತ್ತದೆ. ನಂತರ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಆಸ್ತಿಯ ಮೌಲ್ಯಕ್ಕೆ ಅನುಗುಣವಾಗಿ ಅಂದರೆ ಸ್ಥಳೀಯವಾಗಿ ಸರ್ಕಾರ ನಿಗದಿ ಮಾಡಿರುವ ಆಸ್ತಿ ಮೌಲ್ಯಕ್ಕೆ ಅನುಸಾರವಾಗಿ ಸರ್ಕಾರಕ್ಕೆ ಹಣವನ್ನು ಕಟ್ಟಬೇಕು. ಹಣ ಕಟ್ಟಿದ ಚಲನ್ ಅನ್ನು ದಾಖಲೆಯೊಂದಿಗೆ ಲಗತ್ತಿಸಬೇಕು.
ಆಸ್ತಿ ಕೊಂಡ ವ್ಯಾಪ್ತಿಯೊಳಗೆ ಬರುವ ಉಪ ನೋಂದಣಾಧಿಕಾರಿ ಕಚೇರಿಯ ಮ್ಯಾನೇಜರ್ ದಾಖಲೆಗಳನ್ನು ತೆಗೆದುಕೊಂಡು ಪರಿಶೀಲನೆ ಮಾಡಿ ಸಹಿ ಹಾಕುತ್ತಾರೆ. ಜಮೀನು ನೋಂದಣಿ ಮಾಡಬೇಕಾದರೆ ಜಮೀನನ್ನು ಮಾರಿದವರ ಕಡೆಯಿಂದ ಇಬ್ಬರು ಸಾಕ್ಷಿದಾರರ ಸಹಿ ಹಾಗೂ ಜಮೀನನ್ನು ಕೊಂಡುಕೊಂಡವರ ಕಡೆಯಿಂದ ಇಬ್ಬರು ಸಾಕ್ಷಿದಾರರ ಸಹಿ ಬೇಕಾಗುತ್ತದೆ. ಜಮೀನು ಮಾರಿದವರ ಮತ್ತು ಕೊಂಡುಕೊಂಡವರ ಭಾವಚಿತ್ರದ ಮೇಲೆ ಕ್ರಯ ಪತ್ರದಲ್ಲಿ ಸಹಿ ಮಾಡಬೇಕಾಗುತ್ತದೆ.
ನಂತರ ನೋಂದಣಾಧಿಕಾರಿ ನೋಂದಣಿ ಮಾಡುತ್ತಾರೆ. ನಂತರ ರಿಜಿಸ್ಟ್ರೇಷನ್ ಸಂಖ್ಯೆಯನ್ನು ಕಂಪ್ಯೂಟರ್ ನಲ್ಲಿ ಹಾಕಲಾಗುತ್ತದೆ. ದಾಖಲೆ ಪತ್ರಗಳನ್ನು ಸ್ಕ್ಯಾನಿಂಗ್ ಮಾಡಿ ನೋಂದಣಿ ಕಚೇರಿಯ ಸಿಡಿಗೆ ಸೇರಿಸಲಾಗುತ್ತದೆ. ಸಿಡಿಗೆ ದಾಖಲಾದ ನಂತರ ಸಹಜವಾಗಿ ಜಮೀನಿನ ಖರೀದಿದಾರನ ಹಕ್ಕುದಾರಿಕೆಗೆ ಒಳಪಡುತ್ತದೆ. ಜಮೀನಿನ ನೋಂದಣಿ ಪ್ರಕ್ರಿಯೆ ಮುಗಿದ ನಂತರ 15ರಿಂದ 20 ದಿವಸಗಳ ಒಳಗೆ ಆಸ್ತಿಗೆ ಸಂಬಂಧಿಸಿದಂತೆ ತಕರಾರು ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
ಒಂದು ವೇಳೆ ಯಾವುದೆ ತಕರಾರು ಅರ್ಜಿ ಬರದೆ ಇದ್ದಲ್ಲಿ ವಿಲೇಜ್ ಅಕೌಂಟೆಂಟ್ 20 ದಿವಸಗಳ ನಂತರ ಜಮೀನು ಕೊಂಡುಕೊಂಡವರಿಂದ ಹಾಗೂ ಮಾರಿದವರಿಂದ ಜೆ ಫಾರ್ಮ್ ಮೇಲೆ ಸಹಿ ಪಡೆದುಕೊಳ್ಳುತ್ತಾರೆ. ಜಮೀನು ನೋಂದಣಿ ಆಗಿ 45 ದಿವಸಗಳ ನಂತರ ಖರೀದಿದಾರನ ಹೆಸರಿನಲ್ಲಿ ಪಹಣಿಪತ್ರ ಸಿದ್ಧವಾಗುತ್ತದೆ. ಜಮೀನಿಗೆ ಸಂಬಂಧಿಸಿದ ಮಾಹಿತಿಗಳನ್ನು ಎಲ್ಲರೂ ತಿಳಿದುಕೊಳ್ಳುವುದು ಅವಶ್ಯವಾಗಿದ್ದು ತಪ್ಪದೆ ಈ ಮಾಹಿತಿಯನ್ನು ಎಲ್ಲರಿಗೂ ತಿಳಿಸಿ.