ಒಂದಷ್ಟು ಬಣ್ಣದ ಹೂವುಗಳು, ಒಂದಷ್ಟು ಹಣ್ಣುಗಳು ಹಾಗೂ ಇನ್ನೂ ಒಂದಷ್ಟು ಸರಳ ಸುಲಭ ತಯಾರಿಗಳ ಜೊತೆಗೆ ಹಬ್ಬವನ್ನು ಆಚರಿಸುವುದು ಬದುಕಿಗೆ ಸಂತಸ ತರುತ್ತವೆ. ಅಷ್ಟೇ ಅಲ್ಲದೆ ಉಪವಾಸ ಮತ್ತು ಊಟದ ಮಹತ್ವವನ್ನು ಸಾರುವ ನಮ್ಮ ಹಬ್ಬಗಳು ಜನರಲ್ಲಿ ಶಿಸ್ತು ಹಾಗೂ ಸಂಭ್ರಮವನ್ನು ತುಂಬುವ ಕೆಲಸವನ್ನು ಪ್ರತೀ ವರ್ಷವೂ ಮಾಡುತ್ತಲೇ ಇರುತ್ತವೆ. ಈ ವರ್ಷ ಗೌರಿ ಹಬ್ಬ ಶುಕ್ರವಾರದಂದು ಬಂದಿದೆ. ಗೌರಿ ಹಬ್ಬವನ್ನು ಹೆಣ್ಣುಮಕ್ಕಳ ಹಬ್ಬ ಎಂದೇ ಕರೆಯಲಾಗುತ್ತದೆ. ಹೆಣ್ಣು ಮಕ್ಕಳು ಈ ಗೌರಿ ಹಬ್ಬವನ್ನು ಮಾಡಿದರೆ ಗೌರಿ ಮಾತೇ ಸಕಲ ಸೌಭಾಗ್ಯ ನೀಡುತ್ತಾಳೆ ಎನ್ನುವ ನಂಬಿಕೆ ಇದೆ.

ಕೈಲಾಸವಾಸಿ ಪರಮೇಶ್ವರನ ಪತ್ನಿ ಗೌರಿ ವರ್ಷಕ್ಕೆ ಒಮ್ಮೆ ತನ್ನ ತವರಾದ ಭೂಮಿಗೆ ಬಂದು ಬಾಗೀನ ಪಡೆದು ಎಲ್ಲರನ್ನೂ ಹರಸಿ, ತನ್ನ ಪುತ್ರನ ಜೊತೆ ಕೈಲಾಸಕ್ಕೆ ಮರಳುತ್ತಾಳೆ ಎನ್ನುವ ಕಥೆ ಇದೆ. ಗೌರಿ ಹಬ್ಬದ ದಿನ ಹೆಣ್ಣು ಮಕ್ಕಳು ಸ್ನಾನ ಮಾಡಿ ಮಾಡಿ ಉಟ್ಟು ದೇವರ ಕೋಣೆ ಅಥವಾ ಸ್ವರ್ಣ ಗೌರಿ ಇಡುವ ಜಾಗವನ್ನು ಶುಚಿ ಮಾಡಿ ರಂಗೋಲಿ ಹಾಗಿ ಅಲಂಕರಿಸಬೇಕು. ಒಂದು ಮಣೆ ಇಟ್ಟು ಅದರ ಮೇಲೆ ಹೊಸದಾದ ರವಿಕೆ ಬಟ್ಟೆ ಇಟ್ಟು, ಅದರ ಮೇಲೆ ಅರಿಷನಕ್ಕೆ ಹಾಲು ಹಾಕಿ ಕಲಸಿ ಅದನ್ನು ಗೋಪುರದ ರೀತಿ ಮಾಡಿ ಇಡಬೇಕು. ಕನ್ನಡಿ, ಕಲಶ ಇಡಬೇಕು. ಮೂರು ರವಿಕೆ ಬಟ್ಟೆಯನ್ನು ತ್ರಿಕೋನಾಕಾರದಲ್ಲಿ ಮಡಚಿ ಇಡಬೇಕು.

ಇನ್ನು ಗೌರಿಗೆ ಬಾಗೀನ ಹೇಗೆ ತಯಾರಿಸುವುದು ಅಂತ ನೋಡುವುದಾದರೆ. ಬಿದಿರಿನ ಮೊರವನ್ನು ತಂದು ಸ್ವಚ್ಛಗೊಳಿಸಿ ಅದಕ್ಕೆ ಅರಿಶಿನ ಕುಂಕುಮ ಹಚ್ಚಿ, ಅದರ ಮೇಲೆ ಬಾಳೆಎಲೆ ಇಟ್ಟು ಬಾಳೆ ಎಲೆಯ ಮೇಲೆ ತೆಂಗಿನಕಾಯಿ ಧಾನ್ಯಗಳು, ಹೂವು ಹಣ್ಣು, ಹಸಿರು ಗಾಜಿನ ಬಳೆಗಳು, ವೀಳ್ಯದೆಲೆ, ಅಡಿಕೆ, ಕರಿಮಣಿ ಹೀಗೆ ಬಾಗೀನದ ಸಾಮಾನುಗಳನ್ನು ಜೋಡಿಸಿ ಮತ್ತೊಂದು ಮರದಿಂದ ಅದನ್ನು ಮುಚ್ಚಬೇಕು. ಗೌರಿಯ ಮೂರ್ತಿಯನ್ನು ಮಾವಿನ ತೋರಣ ಹಾಗೂ ವಿವಿಧ ಬಗೆಯ ಹೂವುಗಳಿಂದ ಅಲಂಕರಿಸಬೇಕು. ನಂತರ ಮುತ್ತೈದೆಯರು ಪೂಜೆ ಮಾಡಿ ತಮ್ಮ ಮಣಿಕಟ್ಟುಗಳಿಗೆ 16 ಗಂಟುಗಳು ಇರುವ ಗೌರಿ ದಾರವನ್ನು ಕಟ್ಟಿಕೊಳ್ಳುತ್ತಾರೆ. ಹೀಗೆ ಪೂಜೆ ಮಾಡಿ ಗೌರಿ ದಾರವನ್ನು ಕಟ್ಟಿಕೊಂಡ ಮಹಿಳೆಯರಿಗೆ ಮಗುವನ್ನು ಬಯಸುವವರಿಗೆ ಮಕ್ಕಳು ಆಗುವುದು ಎಂಬ ನಂಬಿಕೆ ಇದೆ. ಹಾಗೇ ವಿವಾಹಿತ ಮಹಿಳೆಯರಿಗೆ ಸೌಭಾಗ್ಯ ಉಂಟಾಗುವುದು ಎಂದೂ ನಂಬಿಕೆ ಇದೆ. ಸ್ವರ್ಣ ಗೌರಿಯನ್ನು ಮನೆಯಲ್ಲಿ ಪೂಜಿಸುವವರು ಗೌರಿಯ ಮಗ ಗಣೇಶ ಬಂದಾಗಲೂ ಕೂಡಾ ಪೂಜಿಸಿ, ಗಣೇಶನ ಜೊತೆಗೆ ಗೌರಿಯನ್ನು ಸಹ ಕಳುಹಿಸಿ ಕೊಡುವುದು ಪ್ರತೀತಿ.

By

Leave a Reply

Your email address will not be published. Required fields are marked *