ಮೈ ತುಂಬಾ ಬಿಳಿ ಹೂವುಗಳನ್ನು ಹೊದ್ದು ನಿಂತಂತಿರೋ ಈ ಗಿಡವನ್ನು ಎಲ್ಲರೂ ನೋಡಿರುತ್ತೀರಿ. ಮನೆಯ ಹಿತ್ತಲುಗಳಲ್ಲಿ, ಪಾರ್ಕ್ ಗಳಲ್ಲಿ ಸಮೃದ್ಧವಾಗಿ ಬೆಳೆಯುವ ಈ ಗಿಡದ ಪ್ರತೀ ಕೊಂಬೆಯಲ್ಲು ಗೊಂಚಲು ಹೂವುಗಳು ಅರಳಿರುತ್ತವೆ. ಏಳೆಂಟು ಎಸಲುಗಳ ಚಕ್ರಾಕಾರದ ಹೂವು ಅಂತೂ ತುಂಬಾ ಸುವಾಸನೆ ಬೀರುತ್ತದೆ. ಸಾಮಾನ್ಯವಾಗಿ ಎಲ್ಲ ಪುಷ್ಪಗಳು ಸೂರ್ಯೋದಯ ಕಾಲದಲ್ಲಿ ಅರಳುತ್ತವೆ. ಆದರೆ ಇದೊಂದು ಹೂವು ಮಾತ್ರ ಸಂಜೆ ಸೂರ್ಯ ಮುಳುಗುವ ಹೊತ್ತಲ್ಲಿ ಅರಳಿ ನಳನಳಿಸುತ್ತದೆ. ಸಂಜೆಯ ತಣ್ಣನೆಯ ಗಾಳಿಯಲ್ಲಿ ಇದರ ಸುಗಂಧ ಸೇರಿಬಿಟ್ಟರಂತು ಅಲ್ಲೊಂದು ಆಹ್ಲಾದಕರ ವಾತಾವರಣ ನಿರ್ಮಾಣ ಆಗತ್ತೆ. ಮುಂಜಾನೆ ಸೂರ್ಯ ಹುಟ್ಟುವ ಹೊತ್ತಿಗೆ ಮನೆಯ ಅಂಗಳದಲ್ಲಿ ಎಲ್ಲಾ ಹರಡಿಕೊಳ್ಳುವ ಈ ಶ್ವೇತಾಂಬರಿ ಹೂವು ರಂಗವಲ್ಲಿಗೆ ಇನ್ನಷ್ಟು ಅಂದವನ್ನ ತುಂಬತ್ತೆ. ಅದೇ ಪಾರಿಜಾತ ಹೂವು. ಇದನ್ನ ದೇವ ಪುಷ್ಪ ಎಂದೂ ಕರೆಯುತ್ತಾರೆ. ನಮ್ಮಲ್ಲಿ ಒಂದು ಪದ್ಧತಿ ಇದೆ. ಗಿಡದಿಂದ ಕೆಳಗೆ ಬಿದ್ದ ಹೂವನ್ನು ದೇವರ ಪೂಜೆಗೆ ಬಲಸಲ್ಲ. ಆದರೆ ಈ ಪಾರಿಜಾತ ಹೂವನ್ನ ಪೂಜೆಗೆ ಅಷ್ಟೇ ಅಲ್ಲ ಆಯುರ್ವೇದದ ಔಷಧ ಆಗಿಯೂ ಬಳಸುತ್ತಾರೆ. ತುಂಬೆ, ದತ್ತುರದಂತಹ ಔಷಧ ಸಸ್ಯಗಳ ಪೈಕಿ ಈ ಪಾರಿಜಾತಕ್ಕೆ ಮೊದಲ ಸ್ಥಾನ. ಯಾಕಂದರೆ ಸುಗಂಧದ ಜೊತೆಗೆ ಅದ್ಭುತ ಔಷಧೀಯ ಗುಣಗಳು ಈ ಪಾರಿಜಾತದಲ್ಲಿದೆ. ಈ ಲೇಖನದಲ್ಲಿ ಪಾರಿಜಾತ ಯಾವೆಲ್ಲ ಔಷಧೀಯ ಗುಣಗಳನ್ನು ಹೊಂದಿದೆ ಆಯುರ್ವೇದದಲ್ಲಿ ಇದರ ಮಹತ್ವ ಏನು ಅನ್ನೋದರ ಬಗ್ಗೆ ನೋಡೋಣ.

ಆದರೆ ಪಾರಿಜಾತದ ಬಗ್ಗೆ ಪುರಾಣಗಳಲ್ಲಿ ಇರುವ ಕಥೆಯನ್ನ ನೋಡೋಣ. ಸಮುದ್ರ ಮಂಥನದ ಕಾಲದಲ್ಲಿ ಕ್ಷೀರ ಸಾಗರದಲ್ಲಿ ಹುಟ್ಟಿ ಬಂದ ೫ ವೃಕ್ಷಗಳ ಪೈಕಿ ಈ ಪಾರಿಜಾತವೂ ಒಂದು. ಕಲ್ಪ ವೃಕ್ಷ ಹಾಗೂ ಕಾಮಧೇನುವನ್ನು ಋಷಿಗಳಿಗೆ ಕೊಟ್ಟ ಇಂದ್ರ, ಇಂದ್ರಾಣಿಗಾಗಿ ಪಾರಿಜಾತ ವೃಕ್ಷವನ್ನು ತನ್ನ ನಂದನವನಕ್ಕೆ ಕೊಂಡೊಯ್ದನಂತೆ. ನಂತರ ಶ್ರೀ ಕೃಷ್ಣ ಸತುಭಾಮೆಗಾಗಿ ಪಾರಿಜಾತ ವೃಕ್ಷವನ್ನು ಭೂಲೋಕಕ್ಕೆ ತಂದನಂತೆ. ಇಷ್ಟೇ ಅಲ್ಲದೇ ಪಾರಿಜಾತದ ಬಗ್ಗೆ ಇನ್ನೊಂದು ಪೌರಾಣಿಕ ಕಥೆಯೂ ಇದೆ. ಆ ಕಥೆಯ ಪ್ರಕಾರ, ಹಿಂದೆ ಪಾರಿಜಾತ ಅನ್ನೋ ಹೆಸರಿನ ರಾಜಕುಮಾರಿ ಇದ್ದಳಂತೆ ಆಕೆ ಇಡೀ ಜಗತ್ತಿಗೆ ಬೆಳಕು ನೀಡುವ ಸೂರ್ಯನನ್ನು ಪ್ರೀತಿಸಿದಳಂತೆ ಆದ್ರೆ ಅದ್ಯಾಕೋ ಸೂರ್ಯ ಕೆಲವೇ ದಿನಗಳಲ್ಲಿ ಇವಳನ್ನ ತ್ಯಜಿಸಿಬಿಟ್ಟನಂತೆ. ಇದೆ ಕೊರಗಿನಲ್ಲಿ ರಾಜಕುಮಾರಿ ಪಾರಿಜಾತ ಆತ್ಮಹತ್ಯೆ ಮಾಡಿಕೊಂಡಲಂತೆ. ನಂತರ ಅವಳ ದೇಹದ ಬೂದಿಯಿಂದ ಹುಟ್ಟಿಬಂದ ಗಿಡಕ್ಕೆ ಪಾರಿಜಾತ ಎಂಬ ಹೆಸರು ಬಂತು ಅಂತ ಆ ಪೌರಾಣಿಕ ಕಥೆ ಹೇಳುತ್ತದೆ.

ಇಷ್ಟೆಲ್ಲಾ ಪೌರಾಣಿಕ ಕಥೆ ಹೊಂದಿರುವ ಪಾರಿಜಾತ ವೃಕ್ಷ ರೋಗಿಗಳ ಪಾಲಿಗೆ ಕಲ್ಪವೃಕ್ಷ ಎನ್ನಬಹುದು. ನೋಡೋಕೆ ಸುಜುಮಲ್ಲಿಗೆಯಂತೆ ಕಾಣುವ ಈ ಹೂವು ಇದು ಏನೆಲ್ಲಾ ಔಷಧೀಯ ಗುಣಗಳನ್ನು ಹೊಂದಿದೆ ಅನ್ನೋದನ್ನ ನೋಡೋಣ. ಸಸ್ಯ ಶಾಸ್ತ್ರಜ್ಞರು ಈ ಹೂವನ್ನು ನೈಟ್ ಜಾಸ್ಮಿನ್ ಎಂದೇ ಕರೆಯುತ್ತಾರೆ. ಸಂಸ್ಕೃತದಲ್ಲಿ ಶಫಾಲಿಕ, ಬೆಂಗಳಿಯಲ್ಲಿ ಹರ್ಸಿಂಗಾರ್, ತಮಿಳಿನಲ್ಲಿ ಮಂಜು ಹೂವು ಎಂದು ಹೀಗೆ ಕರೆಯಲ್ಪಡುವ ಪಾರಿಜಾತ ಅರ್ಥರಯಾಟಿಸ್ಸ್ ಗೆ ದಿವ್ಯ ಔಷಧ. ಕುಂತರೂ ನಿಂತರೂ ಕೀಲು ನೋವು ಎಷ್ಟು ನರಕ ಯಾತನೆ ಅನ್ನೋದು ಅನುಭವಿಸಿದವರಿಗೆ ಗೊತ್ತು. ಇಂತಹ ಕೀಲುನೋವು ಇರುವ ಅರ್ಥರಯಾಟಿಸ್ ಗೆ ಪಾರಿಜಾತದ ಎಲೆಗಳಿಂದ ತಯಾರಿಸಿದ ಕಷಾಯ ಉತ್ತಮ ನೋವು ನಿವಾರಕ. ಈ ಕಷಾಯ ಹಲವು ಕಾಯಿಗಳಿಗೆ ದಿವ್ಯೌಷಧ ಆಗಿ ಕೆಲಸ ಮಾಡುತ್ತೆ.

ಪ್ರತೀ ದಿನ ಮುಂಜಾನೆ ಪಾರಿಜಾತದ ಎಲೆಗಳಿಂದ ತಯಾರಿಸಿದ ಕಷಾಯವನ್ನ ನಿಯಮಿತವಾಗಿ ಕುಡಿಯುವುದರಿಂದ ಅರ್ಥಾರಾಯಟಿಸ್ ನಿಯಂತ್ರಣಕ್ಕೆ ಬರತ್ತೆ. ಮಲಬದ್ಧತೆ ನಿವಾರಣೆಗೆ ಸಹ ಈ ಕಷಾಯ ಪ್ರಯೋಜನ ಆಗಿದೆ. ಇದರ ಜೊತೆಗೆ ಕೆಮ್ಮು ಹಾಗೂ ಜಂತು ಹುಳು ಸಮಸ್ಯೆಗೂ ಕೂಡ ಉತ್ತಮ ಪರಿಹಾರ ಪಾರಿಜಾತ ಎಲೆಯ ಕಷಾಯ. ಎಲೆಯಂತೆ ಇದರ ಬೀಜವನ್ನು ಸಹ ಔಷಧಯಾಗಿ ಬಳಸಲಾಗುತ್ತದೆ. ವಿಶೇಷವಾಗಿ ಇದರ ಬೀಜದಿಂದ ಮಾಡಿದ ಪುಡಿಯನ್ನು ಜಾಯಂಡೀಸ್ ಕಾಯಿಲೆಗೆ ಔಷಧಿ ಆಗಿ ಬಳಸಲಾಗುತ್ತದೆ.

ಪಾರಿಜಾತ ಬೀಜದಿಂದ ಪೌಡರ್ ಹೇಗೆ ತಯಾರಿಸುವುದು ಅನ್ನೋದರ ಬಗ್ಗೆ ಸುಶ್ರುತ ಸಂಹಿತೆಯಲ್ಲಿ ಉಲ್ಲೇಖಿಸಲಾಗಿದೆ. ಇನ್ನೂ ಹೆಣ್ಣು ಮಕ್ಕಳು ಪಾರಿಜಾತದ ಎಳೆಯನ್ನ ಮುಖದ ಸೌಂದರ್ಯ ವರ್ಧಕ ಆಗಿಯೂ ಬಳಸುತ್ತಾರೆ. ಪಾರಿಜಾತ ಎಲೆಗಳನ್ನು ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ ಒಂದು ಗಂಟೆ ನಂತರ ಮುಖ ತೊಳೆದರೆ ಮುಖ ಕಾಂತಿಯುತವಾಗಿ ಹೊಳೆಯುತ್ತೆ . ವಿಶೇಷ ಅಂದರೆ ಪಾರಿಜಾತ ಹೂವಿಗೆ ನಮ್ಮ ತಲೆನೋವನ್ನು ಹೋಗಲಾಡಿಸುವ ಗುಣವೂ ಇದೆ. ಅಷ್ಟೇ ಅಲ್ಲ ಇದರ ಪರಿಮಳ ಭರಿತ ಹೂವನ್ನು ಸುಗಂಧ ದ್ರವ್ಯಗಳ ತಯಾರಿಕೆಯಲ್ಲಿ ಕೂಡ ಯಥೇಚ್ಛವಾಗಿ ಬಳಸಲಾಗುತ್ತದೆ. ಇವಿಷ್ಟು ಪಾರಿಜಾತ ಗಿಡಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ.

Leave a Reply

Your email address will not be published. Required fields are marked *