ಬೇಕರಿ ತಿಂಡಿಗಳು ಈಗ ಎಲ್ಲರಿಗೂ ರುಚಿ ಇದೆ ಅಂತ ತುಂಬಾ ಇಷ್ಟ ಆಗತ್ತೆ. ಆದ್ರೆ ರುಚಿಯ ಜೊತೆಗೆ ನಮ್ಮ ಆರೋಗ್ಯ ಕೂಡಾ ಅಷ್ಟೇ ಮುಖ್ಯ ಅಲ್ವಾ? ರುಚಿಯಾಗಿ ಚೆನ್ನಾಗಿ ಇರತ್ತೆ ಅಂತ ಬೇಕಾದಲ್ಲಿ ಹೇಗೆ ಬೇಕೋ ಹಾಗೆ ತಿಂದ್ರೆ ಆರೋಗ್ಯ ಹಾಳು ಆಗೋದರಲ್ಲಿ ಯಾವುದೇ ಅನುಮಾನ ಇಲ್ಲ. ಹಾಗಾಗಿ ಬೇಕರಿಯಲ್ಲಿ ಮಾಡುವ ಹಾಗೆಯೇ ನಾವೇ ಮನೆಯಲ್ಲಿ ಸುಲಭವಾಗಿ ಆಲೂಗಡ್ಡೆ ಇಂದ ಸಮೋಸ ಹೇಗೆ ಮಾಡೋದು ಅನ್ನೋದನ್ನ ತಿಳಿಸಿ ಕೊಡ್ತೀವಿ.
ಆಲೂಗಡ್ಡೆ ಸಮೋಸ ಮಾಡೋಕೆ ಎನೆಲ್ಲೆ ಸಾಮಗ್ರಿಗಳು ಬೇಕು ಅನ್ನೋದನ್ನ ನೋಡೋಣ.
ಮೈದಾ /ಗೋಧಿ ಹಿಟ್ಟು ಕಾಲು ಕೆಜಿ, ಆಲೂಗಡ್ಡೆ, ಈರುಳ್ಳಿ, ಕೊತ್ತಂಬರಿ ಸೊಪ್ಪು ಕಾಲು ಕಪ್,
ಹಸಿ ಮೆಣಸಿನ ಕಾಯಿ ೧, ಜೀರಿಗೆ ಅರ್ಧ ಸ್ಪೂನ್, ಶುಂಠಿ ಅರ್ಧ ಇಂಚು, ಧನಿಯಾ ಪೌಡರ್ ಅರ್ಧ ಟೀ ಸ್ಪೂನ್, ಚಾಟ್ ಮಸಾಲ ಕಾಲು ಟೀ ಸ್ಪೂನ್, ಅರಿಶಿನ ಕಾಲು ಟೀ ಸ್ಪೂನ್, ಗರಂ ಮಸಾಲ ಅರ್ಧ ಟೀ ಸ್ಪೂನ್, ಕೆಂಪು ಮೆಣಸಿನ ಪುಡಿ ಅರ್ಧ ಟೀ ಸ್ಪೂನ್, ಓಂ ಕಾಳು ಅರ್ಧ ಟೀ ಸ್ಪೂನ್, ಅರ್ಧ ನಿಂಬೆ ಹಣ್ಣು, ಹಸಿರು ಬಟಾಣಿ ಅರ್ಧ ಕಪ್, ತುಪ್ಪ 2 ಸ್ಪೂನ್, ಉಪ್ಪು, ಎಣ್ಣೆ.
ಸಾಮಗ್ರಿಗಳು ಏನೇನು ಬೇಕು ಅನ್ನೋದನ್ನ ತಿಳಿಸಿದ್ದು ಆಯ್ತು. ಈಗ ಹೇಗೆ ಮಾಡೋದು ಅನ್ನೋದನ್ನ ನೋಡೋಣ.
ಸಮೋಸ ಮಾಡುವ ವಿಧಾನ : ಒಂದು ದೊಡ್ಡ ಪಾತ್ರೆಗೆ ಹಿಟ್ಟನ್ನು ಹಾಕಿಕೊಂಡು ಅದಕ್ಕೆ ಎರಡು ಟೀ ಸ್ಪೂನ್ ತುಪ್ಪ, ಓಂ ಕಾಳು, ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಸ್ವಲ್ಪ ಸ್ವಲ್ಪ ನೀರು ಸೇರಿಸಿಕೊಂಡು ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಬೇಕು. ನಂತರ ಹಿಟ್ಟಿಗೆ ಒಂದು ಸ್ಪೂನ್ ಎಣ್ಣೆ ಸವರಿ ೧೫ / ೨೦ ನಿಮಿಷ ನೆನೆಯಲು ಬಿಡಬೇಕು. ಅಷ್ಟರಲ್ಲಿ ಆಲೂಗಡ್ಡೆ ಪಲ್ಯ ಮಾಡಿಕೊಳ್ಳಬೇಕು.
ಒಂದು ಬಾಣಲೆಗೆ ಎರಡೂ ಸ್ಪೂನ್ ಎಣ್ಣೆ ಹಾಕಿಕೊಂಡು ಕಾದ ನಂತರ ಜೀರಿಗೆ, ಚಿಕ್ಕದಾಗಿ ಕಟ್ ಮಾಡಿಕೊಂಡ ಹಸಿಮೆಣಸಿನ ಕಾಯಿ, ಚಿಕ್ಕದಾಗಿ ಕಟ್ ಮಾಡಿದ ಶುಂಠಿ, ಈರುಳ್ಳಿ, ಹಸಿರು ಬಟಾಣಿ (ಆಪ್ಷನಲ್… ಹಸಿ ಬಟಾಣಿ ಇಲ್ಲದೆ ಹೋದರೆ, ಒಣ ಬಟಾಣಿಯನ್ನು ನೆನೆಸಿ ಬೇರೆಯಾಗಿ ಕುಕ್ಕರ್ ನಲ್ಲಿ ಬೇಯಿಸಿಕೊಂಡೂ ಬಳಸಬಹುದು.) ನಂತರ ಬೇಯಿಸಿ ಸ್ಮಾಷ್ ಮಾಡಿಟ್ಟುಕೊಂಡ ಆಲೂಗಡ್ಡೆ ಸೇರಿಸಿ ಒಂದು ನಿಮಿಷ ಫ್ರೈ ಮಾಡಿಕೊಂಡು ರುಚಿಗೆ ತಕ್ಕಷ್ಟು ಉಪ್ಪು, ಧನಿಯಾ ಪೌಡರ್, ಚಾಟ್ ಮಸಾಲ, ಗರಂ ಮಸಾಲ ಪುಡಿ, ಕೆಂಪು ಮೆಣಸಿನ ಪುಡಿ, ಅರಿಶಿನ ಪುಡಿ ಎಲ್ಲವನ್ನೂ ಸೇರಿಸಿ ಮಿಕ್ಸ್ ಮಾಡಿ ಫ್ರೈ ಮಾಡಿಕೊಂಡು, ಸ್ಟೋವ್ ಆಫ್ ಮಾಡಿ ನಂತರ ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಮತ್ತೆ ನಿಂಬೆ ರಸ ಸೇರಿಸಿ ಮಿಕ್ಸ್ ಮಾಡಿಟ್ಟುಕೊಳ್ಳಬೇಕು.
ನಂತರ ಚಪಾತಿಗೆ ತೆಗೆದುಕೊಳ್ಳುವ ಹಾಗೇ ಹಿಟ್ಟನ್ನು ತೆಗೆದುಕೊಂಡು ನಂತರ ಒಣ ಹಿಟ್ಟನ್ನು ಹಾಕಿಕೊಂಡು ರೌಂಡ್ ಆಗಿ ಒರೆದುಕೊಂಡು ನಂತರ ಮಧ್ಯದಲ್ಲಿ ಕಟ್ ಮಾಡಿ ಒಂದನ್ನು ಸೈಡ್ ಅಲ್ಲಿ ಎತ್ತಿಟ್ಟು ಕೊಂಡು ಇನ್ನೊಂದು ಭಾಗಕ್ಕೆ ನೀರನ್ನ ಹಚ್ಚಿಕೊಂಡು ತ್ರಿಕೋನ ಆಕಾರದಲ್ಲಿ ಜೋಡಿಸಿಕೊಂಡು ಅದರಲ್ಲಿ ಈಗಾಗಲೇ ಮಾಡಿಟ್ಟುಕೊಂಡ ಆಲೂಗಡ್ಡೆ ಪಲ್ಯವನ್ನು ತುಂಬಿ ಸೀಲ್ ಮಾಡಿಕೊಂಡು ಎಲ್ಲವನ್ನೂ ಹೀಗೆ ತುಂಬಿಕೊಳ್ಳಬೇಕು. ನಂತರ ಸಮೋಸ ಮುಳುಗುವ ಅಷ್ಟು ಎಣ್ಣೆ ಕಾಯಲು ಇಟ್ಟು ಎಣ್ಣೆ ಕಾದ ನಂತರ ಸಮೋಸವನ್ನ ಹಾಕಿ ಮಧ್ಯಮ ಉರಿಯಲ್ಲಿ ಸ್ವಲ್ಪ ಕರಿಯಬೇಕು. ಬಿಸಿ ಬಿಸಿ ಆದ ಸಮೋಸ ರುಚಿಯಾದ ಹಾಗೂ ಶುಚಿಯಾದ ಸಮೋಸ ರೆಡಿ.