ಪುಳಿಯೋಗರೆ ಗೊಜ್ಜನ್ನು ಮನೆಯಲ್ಲಿ ಮಾಡುವವರು ಬಹಳ ಕಡಿಮೆ. ಹಣ ಕೊಟ್ಟು ಅಂಗಡಿಯಿಂದ ತರುವವರೇ ಜಾಸ್ತಿ. ಹಣ ಕೊಟ್ಟು ತರುವ ಬದಲು ಮನೆಯಲ್ಲಿ ಇರುವ ಪದಾರ್ಥಗಳನ್ನು ಬಳಸಿ ಅಯ್ಯಂಗಾರ್ ಪುಳಿಯೋಗರೆ ಪುಡಿಯನ್ನು ಮಾಡುವ ವಿಧಾನದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಮೊದಲು ದಪ್ಪ ನಿಂಬೆಹಣ್ಣಿನ ಗಾತ್ರದಷ್ಟು ಹುಳಸೇಹಣ್ಣು ತೆಗೆದುಕೊಳ್ಳಬೇಕು. ಇದನ್ನು ಸುಮಾರು ಎರಡು ಗಂಟೆಯ ಕಾಲ ನೆನೆಸಿಡಬೇಕು. ಇಲ್ಲವಾದಲ್ಲಿ ಅರ್ಧ ಗಂಟೆ ಬಿಸಿನೀರಿನಲ್ಲಿ ನೆನೆಸಿದರೆ ಸಾಕು. ಅದನ್ನು ಚೆನ್ನಾಗಿ ಕಿವುಚಿ ಜರಡಿಯಲ್ಲಿ ಶೋಧಿಸಿ ಹುಣಸೇರಸವನ್ನು ತೆಗೆದುಕೊಳ್ಳಬೇಕು. ನಂತರ ಪುಳಿಯೋಗರೆಗೆ ಮಸಾಲೆಯನ್ನು ಹುರಿದುಕೊಳ್ಳಬೇಕು. ಮೊದಲು 3ಚಮಚ ದನಿಯಾವನ್ನು ಹಾಕಬೇಕು. ನಂತರ ಎರಡು ಚಮಚ ಕಡಲೇಬೇಳೆಯನ್ನು ಹಾಕಬೇಕು. ಅದಕ್ಕೆ ಎರಡು ಚಮಚ ಉದ್ದಿನಬೇಳೆ ಹಾಕಬೇಕು. ಅದಕ್ಕೆ ಒಂದು ಚಮಚ ಜೀರಿಗೆ ಹಾಕಬೇಕು. ಅದಕ್ಕೆ 10 ರಿಂದ 15 ಕಾಳುಮೆಣಸು ಹಾಕಬೇಕು.
ಅವೆಲ್ಲವನ್ನೂ ಹೊಂಬಣ್ಣ ಬರುವವರೆಗೆ ಚೆನ್ನಾಗಿ ಹುರಿದುಕೊಳ್ಳಬೇಕು. ನಂತರ ದೊಡ್ಡ ಚಮಚದಲ್ಲಿ ಎರಡು ಚಮಚ ಬಿಳಿಎಳ್ಳನ್ನು ಹಾಕಬೇಕು. ಉಳಿದ ಮಸಾಲೆ ಜೊತೆ ಹುರಿದರೆ ಬೇಗ ಕೆಂಪಾಗುತ್ತದೆ. ಬೇಕಾದಲ್ಲಿ ಕಪ್ಪು ಎಳ್ಳು ಹಾಕಬಹುದು. ನಂತರ 6 ರಿಂದ 7 ಬ್ಯಾಡಗಿ ಮೆಣಸಿನಕಾಯಿ ಹಾಕಿ ಹುರಿದುಕೊಳ್ಳಬೇಕು. ಈಗ ಹುರಿದ ಎಲ್ಲಾ ಸಾಮಗ್ರಿಗಳನ್ನು ಮಿಕ್ಸಿಯಲ್ಲಿ ರುಬ್ಬಿ ಪುಡಿಮಾಡಿಕೊಳ್ಳಬೇಕು. ನಂತರ ಹುಣಸೇಹುಳಿಯನ್ನು ಕುಡಿಸಿಕೊಳ್ಳಬೇಕು. ಅದಕ್ಕೆ ಎರಡರಿಂದ ಮೂರು ಚಮಚ ಆಗುವಷ್ಟು ಬೆಲ್ಲ ಹಾಕಬೇಕು. ಬೆಲ್ಲಾ ಚೆನ್ನಾಗಿ ಕರಗಬೇಕು.
ಬೆಲ್ಲ ಚೆನ್ನಾಗಿ ಕರಗಿದ ನಂತರ ಬೀಸಿದ ಮಸಾಲೆಯನ್ನು ಹಾಕಬೇಕು. ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಬೇಕು. ಇದನ್ನು ಚೆನ್ನಾಗಿ ಕುದಿಸಬೇಕು. ನಂತರ ಅದನ್ನು ತೆಗೆದು ಇನ್ನೊಂದು ಪಾತ್ರೆಯಲ್ಲಿ ಒಗ್ಗರಣೆಗೆ 3 ರಿಂದ 4 ಚಮಚ ಎಣ್ಣೆ ಹಾಕಿ ಕಾದ ನಂತರ ಸಾಸಿವೆಕಾಳು, ಜೀರಿಗೆ, ಸ್ವಲ್ಪ ಕಡಲೆಬೀಜ ಹಾಕಬೇಕು. ನಂತರ 3 ರಿಂದ 4 ಮೆಣಸು ಹಾಕಿ ಚೂರು ಇಂಗು ಹಾಕಬೇಕು. ಅದಕ್ಕೆ ಕರಿಬೇವು ಸೇರಿಸಿ ಪುಳಿಯೋಗರೆ ಮಿಶ್ರಣಕ್ಕೆ ಹಾಕಬೇಕು.