ನಾವು ಸುಲಭವಾಗಿಯೇ ಮನೆಯಲ್ಲಿ ಪ್ಯಾಕೆಟ್ ಹಾಲಿನಿಂದ ಬೆಣ್ಣೆ ಹಾಗೂ ತುಪ್ಪವನ್ನು ಹೇಗೆ ತಯಾರಿಸಿಕೊಳ್ಳುವುದು ಎನ್ನುವುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಸಾಮಾನ್ಯವಾಗಿ ಒಂದು ಮನೆಗೆ ಒಂದು ಲೀಟರ್ ಹಾಲು ಬೇಕೇಬೇಕು. ಹೀಗಿದ್ದಾಗ ನಾವು ಒಂದು ಲೀಟರ್ ಹಾಲಿನಿಂದ ಒಂದು ತಿಂಗಳಿಗೆ ಒಂದು ಕೆಜಿ ಅಷ್ಟು ತುಪ್ಪವನ್ನು ಕೂಡ ತಯಾರಿಸಿಕೊಳ್ಳಬಹುದು. ಈಗಿನ ಕಾಲದಲ್ಲಿ ಒಂದು ಕೆಜಿ ತುಪ್ಪದ ಬೆಲೆ ಐದುನೂರರಿಂದ ಆರುನೂರು ರೂಪಾಯಿ ವರೆಗೆ ಇರುತ್ತದೆ. ಹಾಗಾಗಿ ನಾವು ಪ್ರತಿದಿನ ಒಂದು ಲೀಟರ್ ಹಾಲನ್ನು ತೆಗೆದುಕೊಂಡು ಅದರಲ್ಲಿ ತುಪ್ಪವನ್ನು ಕೂಡ ಮಾಡಿಕೊಳ್ಳುವುದರಿಂದ ತುಪ್ಪಕ್ಕಾಗಿ ಐದುನೂರು , ಆರುನೂರು ರೂಪಾಯಿ ಹಣವನ್ನು ವ್ಯರ್ಥ ಮಾಡುವುದು ತಪ್ಪುತ್ತದೆ. ಪ್ಯಾಕೆಟ್ ಹಾಲಿನಿಂದ ಮನೆಯಲ್ಲಿ ತುಪ್ಪ ಅನ್ನು ಹೇಗೆ ಮಾಡುವುದು ಅಂತ ನೋಡೋಣ.
ಒಂದು ಲೀಟರ್ ಹಾಲನ್ನು ಒಂದು ಪಾತ್ರೆಗೆ ಹಾಕಿಕೊಂಡು ಮಧ್ಯಮ ಉರಿಯಲ್ಲಿಟ್ಟು ಬಿಸಿ ಮಾಡಿ ಕೊಳ್ಳಬೇಕು. ನಂತರ ಇದು ಸ್ವಲ್ಪ ಕುದಿ ಬಂದ ನಂತರ ಸಣ್ಣ ಉರಿಯಲ್ಲಿ ಐದು ನಿಮಿಷಗಳ ಕಾಲ ಕುದಿಸಿಕೊಳ್ಳಬೇಕು. ಪೂರ್ತಿಯಾಗಿ ಕುದಿಸಿಕೊಂಡು ನಂತರ ಸ್ಟವ್ ಆಫ್ ಮಾಡಿ ತಣ್ಣಗಾಗುವ ವರೆಗೆ ಹಾಲನ್ನು ಮಧ್ಯ ಮಧ್ಯದಲ್ಲಿ ತೆಗೆಯದೆ ಹಾಗೆಯೇ ಒಂದು ಮುಚ್ಚಳ ಮುಚ್ಚಿ ಇಡಬೇಕು. ನಂತರ ಇದನ್ನು ಎರಡು ಗಂಟೆಗಳ ಕಾಲ ಫ್ರಿಡ್ಜ್ ನಲ್ಲಿಡಬೇಕು. ಎರಡು ಗಂಟೆ ನಂತರ ಫ್ರಿಡ್ಜ್ ನಿಂದ ಹೊರತೆಗೆದು ಗಟ್ಟಿಯಾಗಿ ಇರುವಂತಹ ಕೆನೆಯನ್ನು ತೆಗೆದು ಒಂದು ಸ್ಟೀಲ್ ಪಾತ್ರೆ ಅಥವಾ ಡಬ್ಬದಲ್ಲಿ ತೆಗೆದಿಟ್ಟುಕೊಳ್ಳಬೇಕು. ಇದೇ ರೀತಿ ಪ್ರತಿದಿನ ಮಾಡಿ ಕೆನೆಯನ್ನು ತೆಗೆದು ಡಬ್ಬದಲ್ಲಿ ಹಾಕಿ ಮುಚ್ಚಳ ಮುಚ್ಚಿ ಫ್ರಿಡ್ಜ್ ನಲ್ಲಿ ಇಟ್ಟುಕೊಂಡು ನಂತರ ಕೆನೆ ಹಾಕುವ ಡಬ್ಬ ತುಂಬಿದ ಮೇಲೆ ಅದಕ್ಕೆ ಒಂದು ಚಮಚ ಮೊಸರು ಹಾಕಿ ಇಡೀ ರಾತ್ರಿ ಹೊರಗೆ ಇಡಬೇಕು.
ನಂತರ ಇದನ್ನು ಮಿಕ್ಸಿ ಗ್ರೈಂಡರ್ ಗೆ ಹಾಕಿಕೊಂಡು ಬೆಣ್ಣೆ ಮಾಡಿಕೊಳ್ಳಬೇಕು. ಬೆಣ್ಣೆ ಮಾಡುವಾಗ ಮಿಕ್ಸಿ ಜಾರಿಗೆ ಸ್ವಲ್ಪ ಸ್ವಲ್ಪವೇ ನೀರನ್ನು ಹಾಕಿಕೊಂಡು ಹತ್ತು ಹತ್ತು ಸೆಕೆಂಡ್ ಗಳ ಕಾಲ ಗ್ರೈಂಡ್ ಮಾಡಿಕೊಳ್ಳಬೇಕು. ಬೆಣ್ಣೆ ಬಂದ ನಂತರ ಅದನ್ನು ಬೇರೆ ಒಂದು ನೀರಿನ ಪಾತ್ರೆಗೆ ಎಲ್ಲವನ್ನೂ ಹಾಕಿಕೊಂಡು ಚೆನ್ನಾಗಿ ತೊಳೆದುಕೊಂಡು ಇಡಬೇಕು. ನಂತರ ತುಪ್ಪ ಮಾಡಲು ಒಂದು ದಪ್ಪ ತಳದ ಪಾತ್ರೆಯನ್ನು ಸ್ಟೋವ್ ಮೇಲೆ ಇಟ್ಟುಕೊಂಡು ಅದಕ್ಕೆ ತೊಳೆದ ಬೆಣ್ಣೆಯನ್ನು ಹಾಕಿಕೊಂಡು ಕಾಯಿಸಿಕೊಳ್ಳಬೆಕು. ಬೆಣ್ಣೆ ಕರಗಿ ಲಿಕ್ವಿಡ್ ಆಗುತ್ತದೆ ಈ ಹಂತದಲ್ಲಿ ಸ್ಪೂನ್ ಸಹಾಯದಿಂದ ಅದನ್ನು ಬಿಡದೇ ಕೈ ಆಡಿಸುತ್ತಾ ಇರಬೇಕು. ನಂತರ ಬೆಣ್ಣೆ ಕಾದು ಗೋಲ್ಡನ್ ಬಣ್ಣಕ್ಕೆ ಬಂದಾಗ ಒಂದೆರಡು ತುಳಸಿ ಎಲೆಗಳನ್ನು ಹಾಕಬೇಕು. ತುಳಸಿ ಎಲೆಗಳನ್ನು ಹಾಕುವುದರಿಂದ ತುಪ್ಪ ಎಷ್ಟೇ ದಿನ ಇಟ್ಟರೂ ಕೂಡಾ ಕೆಟ್ಟ ವಾಸನೆ ಬರುವುದಿಲ್ಲ. ಇನ್ನು ತುಪ್ಪ ಕಾಯಿಸುವಾಗ ಬೆಣ್ಣೆಯಲ್ಲಿ ಇರುವಂತಹ ಬಿಳಿಯ ಭಾಗಗಳು ನೊರೆಯಾಗಿ ಮೇಲೆ ಕಟ್ಟಿಕೊಂಡು ಇರುತ್ತವೆ ಅವೆಲ್ಲವೂ ಸಾಧಾರಣ ಬ್ರೌನ್ ಬಣ್ಣಕ್ಕೆ ಬರುವವರೆಗೂ ಕಾಯಿಸಿಕೊಳ್ಳಬೇಕೂ. ನಂತರ ಸ್ಟೋವ್ ಆಫ್ ಮಾಡಿ ಸ್ವಲ್ಪ ತಣ್ಣಗಾಗಲು ಬಿಟ್ಟು ನಂತರ ತುಪ್ಪವನ್ನು ಸೋಸಿಕೊಂಡು ಪೂರ್ತಿಯಾಗಿ ತಣ್ಣಗಾದ ಮೇಲೆ ಬೇರೆ ಯಾವುದಾದರೂ ಪ್ಲಾಸ್ಟಿಕ್, ಸ್ಟೀಲ್ ಡಬ್ಬಕ್ಕೆ ಹಾಕಿಕೊಳ್ಳಬಹುದು.