ಹೆಣ್ಣು ಮಕ್ಕಳು ಸೀರೆಯುಟ್ಟು, ಕೈ ತುಂಬಾ ಬಳೆ ಹಾಕಿ, ಹೂವಿನ ಮಾಲೆ ಮುಡಿದು ಎದುರಾದರೆ ಎಷ್ಟೊಂದು ಲಕ್ಷಣವಾಗಿ ಕಾಣಿಸುತ್ತಾರೆ ಎನ್ನುತ್ತೇವೆ. ಚೆನ್ನಾಗಿ ಜಡೆ ಹೆಣೆದು ಹೂವಿನ ಮಾಲೆ ಮುಡಿದರು ಸಾಕು ಹಿರಿಯರು ಮಹಾಲಕ್ಷ್ಮಿಯ ಹಾಗೆ ಇದ್ದಾಳೆ ಎನ್ನುತ್ತಾರೆ. ಹೆಣ್ಣಿನ ಬಾಳಿನಲ್ಲಿ ಅರಿಶಿನ- ಕುಂಕುಮ, ಹೂವು, ಬಳೆ ಬಹು ಮುಖ್ಯ ಪಾತ್ರ ವಹಿಸುತ್ತದೆ. ಕೆಲವರಿಗೆ ಹೂವಿನ ಮಾಲೆ ಅಥವಾ ದಂಡೆ ಕಟ್ಟಲು ಬರುವುದಿಲ್ಲ. ಅಂತವರಿಗೆ ಉಪಯುಕ್ತವಾಗುವಂತಹ ಮಾಹಿತಿ ಹೂವಿನ ದಂಡೆಯನ್ನು ಹೇಗೆ ಸುಲಭವಾಗಿ ಕಟ್ಟಬಹುದು ಎನ್ನುವ ವಿಧಾನವನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.
ಹೂವಿನ ದಂಡೆಯನ್ನು ಕಟ್ಟಲು ಮಲ್ಲಿಗೆ ಹೂವು ಸಿಗದಿರುವ ಕಾರಣದಿಂದ. ನಂಜುಬಟ್ಟಲು ಹೂವನ್ನು ಬಳಸಲಾಗಿದೆ. ದಂಡೆಯನ್ನು ಕಟ್ಟಲು ಯಾವ ಹೂವನ್ನಾದರೂ ಬಳಸಬಹುದು ತೊಂದರೆ ಏನಿಲ್ಲ. ಮೊದಲನೆಯದಾಗಿ ಒಂದು ಮಾಲೆ ಕಟ್ಟಲು ಉಪಯುಕ್ತವಾಗಿರುವ ದಾರವನ್ನು ತೆಗೆದುಕೊಳ್ಳಬೇಕು. ಆ ದಾರ ಗಟ್ಟಿಯಾಗಿರಲಿ ಪದೆ ಪದೆ ತುಂಡಾಗುವ ಹಾಗೆ ಇದ್ದರೆ ದಂಡೆ ಸರಿಯಾಗಿ ಬರುವುದಿಲ್ಲ. ನಮ್ಮ ಎಡಗಡೆಗೆ ಒಂದಿಷ್ಟು ದಾರವನ್ನು ಬಿಟ್ಟು, ಎರಡು ಹೂವಿನ ತೊಟ್ಟನ್ನು ದಾರದ ಮೇಲೆ ಇಟ್ಟು ಗಂಟು ಹಾಕಿಕೊಳ್ಳಬೇಕು. ಹಾಗೆ ಗಂಟು ಹಾಕಿದ ಹೂವನ್ನು ತಿರುಗಿಸಿ ಹಿಡಿದುಕೊಂಡು ಒಂದೊಂದೆ ಹೂವನ್ನು ಇಟ್ಟು ದಾರವನ್ನು ಹೊಸದಾಗಿ ಇಟ್ಟ ಹೂವಿನ ಕೆಳಗಿನಿಂದ ಮೇಲಕ್ಕೆ ಸುತ್ತು ಹಾಕಬೇಕು.
ಎಡಗಡೆಗೆ ಬಿಟ್ಟಿದ್ದ ದಾರವನ್ನು ಎಡಬೆರಳಿನಿಂದ ಗಟ್ಟಿಯಾಗಿ ಹಿಡಿದುಕೊಳ್ಳಬೇಕು. ಹೂವು ಕಟ್ಟುವಾಗ ದಾರವನ್ನೆ ಹಿಡಿದುಕೊಳ್ಳಬೇಕು. ಹೊಸದಾಗಿ ಇಟ್ಟ ಹೂವಿನ ತೊಟ್ಟನ್ನು ಹಿಡಿಯಬೇಕು ಅಂದರೆ ಮಾತ್ರ ಹಿಡಿತಕ್ಕೆ ಸಿಗುತ್ತದೆ. ಎಡಗಡೆಯ ದಾರವನ್ನು ಸಡಿಲವಾಗಿ ಹಿಡಿದರೆ ದಂಡೆ ಸರಿಯಾಗಿ ಬರುವುದಿಲ್ಲ. ಹಾಗಾಗಿ ದಾರವನ್ನು ಗಟ್ಟಿಯಾಗಿ ಹಿಡಿಯಬೇಕು. ಹೊಸದಾಗಿ ಇಟ್ಟ ಹೂವಿನ ತೊಟ್ಟಿನ ಕೆಳಗಿನಿಂದ ಮಾತ್ರ ದಾರ ಬರಬೇಕು. ಬೇರೆ ಯಾವ ಹೂವಿಗೂ ದಾರ ಹಾಕಬಾರದು. ಬಲಗಡೆ ಹಿಡಿದ ದಾರವನ್ನು ಕೈ ಬಿಟ್ಟರು ತೊಂದರೆ ಇಲ್ಲಾ. ಆದರೆ ಎಡಗಡೆ ಹಿಡಿದ ದಾರವನ್ನು ಬಿಡಬಾರದು. ಹೊಸದಾಗಿ ಕಲಿಯುವಾಗ ಕೈ ನೋವು ಬಂದಂತೆ ಅನ್ನಿಸಬಹುದು, ಆದರೆ ಕಲಿತ ಮೇಲೆ ಹಾಗೆ ಅನಿಸುವುದಿಲ್ಲ. ಕಲಿಯುವವರೆಗೂ ಬ್ರಹ್ಮ ವಿದ್ಯೆ, ಕಲಿತ ಮೇಲೆ ಕೊತಿ ವಿದ್ಯೆ ಎನ್ನುಂತೆ ಇದು ಕೂಡ.