ಬಹಳಷ್ಟು ರೈತರಿಗೆ ತಮ್ಮ ಜಮೀನಿನಲ್ಲಿ ಯಾವ ಬೆಳೆಯನ್ನು ಬೆಳೆದರೆ ಹೆಚ್ಚು ಲಾಭ ಗಳಿಸಬಹುದು ಎಂಬುದರ ಬಗ್ಗೆ ಸರಿಯಾದ ಮಾಹಿತಿ ತಿಳಿದಿರುವುದಿಲ್ಲ. ಜಮೀನಿನಲ್ಲಿ ತರಕಾರಿ ಬೆಳೆಯುವುದರಿಂದ ಸಾಕಷ್ಟು ಲಾಭ ಗಳಿಸಬಹುದು. ತರಕಾರಿಗಳಲ್ಲಿ ಹೀರೆಕಾಯಿ ಬೆಳೆಯಿಂದ ಹೆಚ್ಚಿನ ಲಾಭ ಗಳಿಸಬಹುದು. ಹಾಗಾದರೆ ಹೀರೆಕಾಯಿ ಬೆಳೆಯನ್ನು ಬೆಳೆಯುವುದರಿಂದ ಎಷ್ಟು ಲಾಭ ಗಳಿಸಬಹುದು ಹಾಗೂ ಅದರ ಬೆಳೆಯುವ ವಿಧಾನವನ್ನು ಈ ಲೇಖನದಲ್ಲಿ ನೋಡೋಣ.

ಪಾವಗಡ ತಾಲೂಕಿನ ಒಂದು ಗ್ರಾಮದಲ್ಲಿ ಕೃಷ್ಣಪ್ಪ ಎಂಬುವವರು ತಮ್ಮ ಜಮೀನಿನಲ್ಲಿ 9 ವರ್ಷದಿಂದ ಹೀರೆಕಾಯಿ ಬೆಳೆದಿದ್ದಾರೆ. ಇವರು ತಮ್ಮ 1 ಎಕರೆ ಜಮೀನಿನಲ್ಲಿ ಹೀರೆಕಾಯಿ ಬೆಳೆಯುತ್ತಿದ್ದಾರೆ. ಹೀರೆಕಾಯಿ ಆರೋಗ್ಯಕ್ಕೆ ಒಳ್ಳೆಯ ತರಕಾರಿಯಾಗಿದೆ. ಮೊದಲು ಹೀರೆಕಾಯಿ ಬೀಜವನ್ನು ತಂದು ಹಾಕಿದ್ದಾರೆ, ಒಂದು ಪಾಕೆಟ್ ಬೀಜಕ್ಕೆ 650 ರೂಪಾಯಿ ಇದೆ. ನಂತರ ಅದು ಬಳ್ಳಿಯಾಗುತ್ತದೆ. ಅದಕ್ಕೆ ಸರಿಯಾಗಿ ಗೊಬ್ಬರ ಹಾಕಿದರೆ 4 ತಿಂಗಳಿಗೆ ಕಟಾವು ಬರುತ್ತದೆ. ಒಂದು ಎಕರೆಗೆ 1-2 ಲಕ್ಷ ರೂಪಾಯಿ ಆದಾಯ ಬರುತ್ತದೆ, ಹೆಚ್ಚಿನ ರೇಟು ಇದ್ದಾಗ 3-4 ಲಕ್ಷ ರೂಪಾಯಿ ಆದಾಯ ಗಳಿಸಬಹುದು. ಕೃಷ್ಣಪ್ಪ ಅವರು ತಮ್ಮ ಉಳಿದ ಜಮೀನಿನಲ್ಲಿ ಅರ್ಧ ಎಕರೆ ಬದನೆ ಮತ್ತು 1 ಎಕರೆ ಟೊಮೆಟೊ ಬೆಳೆದಿದ್ದಾರೆ ಆದರೆ ಬದನೆ ಮತ್ತು ಟೊಮೆಟೊ ಗಿಡಗಳಿಂದ ಲಾಭ ಆಗುವುದಿಲ್ಲ. ಹೀರೆಕಾಯಿಯಿಂದ ಲಾಭ ಗಳಿಸಬಹುದು ಎಂದು ಕೃಷ್ಣಪ್ಪ ಅವರು ಹೇಳಿದರು.

ಹೀರೆಕಾಯಿ ಬಳ್ಳಿಗಳಿಗೆ ಬೂದಿ ರೋಗ ಎಂಬ ರೋಗ ಬರುತ್ತದೆ. ಇದಕ್ಕೆ ಸರಿಯಾದ ಸಮಯಕ್ಕೆ ಔಷಧಿ ಸಿಂಪಡಿಸಬೇಕು. ನೀರನ್ನು ಆಗಾಗ ಹಾಕುತ್ತಿರಬೇಕು. ಬಳ್ಳಿ ಸ್ವಲ್ಪ ಉದ್ದ ಬಂದ ಕೂಡಲೆ ಮಣ್ಣಿನಿಂದ ಎತ್ತರವಾಗಿ ಬೆಳೆಸಬೇಕು. ಬಳ್ಳಿಯನ್ನು ಸಾಲುಗಳಲ್ಲಿ ನೋಡಬಹುದು. ಕೃಷ್ಣಪ್ಪ ಅವರ ಜಮೀನಿನಲ್ಲಿ 20 ಸಾಲುಗಳಿವೆ. ಬಳ್ಳಿಯ ಸಾಲುಗಳಲ್ಲಿ 5 ಅಡಿಗೆ ಮಧ್ಯ ಒಂದು ಮರದ ಕಟ್ಟಿಗೆಯನ್ನು ಹಾಕಬೇಕು ಇದರಿಂದ ಕಾಯಿ ಬೆಂಡು ಬರುವುದಿಲ್ಲ ಮತ್ತು ಬಾಗುವುದಿಲ್ಲ. ಹೀರೆಕಾಯಿ ಬಳ್ಳಿಯನ್ನು ಬೆಳೆಯಲು ಹೆಚ್ಚಿನ ಖರ್ಚು ಇರುವುದಿಲ್ಲ ಮತ್ತು ಹೀರೆಕಾಯಿ ಬಳ್ಳಿಯನ್ನು ಬೆಳೆಸಲು ಹೆಚ್ಚಿನ ಕಾರ್ಮಿಕರ ಅವಶ್ಯಕತೆ ಇರುವುದಿಲ್ಲ. ಈ ಮಾಹಿತಿಯನ್ನು ತಪ್ಪದೆ ಎಲ್ಲಾ ರೈತರಿಗೂ ತಿಳಿಸಿ, ಹೀರೆಕಾಯಿ ಬೆಳೆಯನ್ನು ಬೆಳೆಯುವ ಮೂಲಕ ಹೆಚ್ಚಿನ ಆದಾಯ ಗಳಿಸಿ.

Leave a Reply

Your email address will not be published. Required fields are marked *