ಗ್ರಾಮ ಪಂಚಾಯತ್ ಸದಸ್ಯರು ಗ್ರಾಮ ಪಂಚಾಯತ್ ಅಭಿವೃದ್ಧಿ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಗ್ರಾಮ ಪಂಚಾಯತಿ ಸದಸ್ಯರು ಕೆಲವು ಕಾರ್ಯಗಳನ್ನು ಕಾರ್ಯರೂಪಕ್ಕೆ ತರಬೇಕಾಗುತ್ತದೆ. ಹಾಗಾದರೆ ಸದಸ್ಯರ ಜವಾಬ್ದಾರಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಗ್ರಾಮ ಪಂಚಾಯತಿಯ ಸದಸ್ಯರಿಗೆ ಕೆಲವು ಕರ್ತವ್ಯಗಳಿರುತ್ತವೆ. ಗ್ರಾಮ ಪಂಚಾಯತಿಯ ಅಡಿಯಲ್ಲಿ ಬರುವ ಪ್ರತಿಯೊಂದು ಹಳ್ಳಿಯು ಅಭಿವೃದ್ಧಿಯಾಗಲು ಹಾಗೂ ಸರ್ಕಾರದ ಯೋಜನೆಗಳು ಯಶಸ್ವಿಯಾಗಿ ಕಾರ್ಯರೂಪಕ್ಕೆ ಬರಲು ಗ್ರಾಮ ಪಂಚಾಯತಿಯ ಸದಸ್ಯರ ಪಾತ್ರ ಪ್ರಮುಖವಾಗಿದೆ. ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕ ಜಾರಿಗೆ ಬಂದಿದ್ದು ಕರ್ನಾಟಕದಲ್ಲಿ.
ಗ್ರಾಮ ಪಂಚಾಯತಿ ಸದಸ್ಯರು ನೇಮಕವಾಗಿರುವ ತಮ್ಮ ವಾರ್ಡ್ ಗಳ ಜನನ ಮತ್ತು ಮರಣ ನೋಂದಣಿ ಮಾಡುವುದು ಹಾಗೂ ಅದಕ್ಕೆ ಸಂಬಂಧಪಟ್ಟವರಿಗೆ ವರದಿ ಮಾಡುವುದು. ಸದಸ್ಯರು ತಮ್ಮ ವಾರ್ಡ್ ನಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆಯನ್ನು ಒದಗಿಸಬೇಕು.
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕ ರಸ್ತೆ, ಸಾರ್ವಜನಿಕ ಆಸ್ತಿಯನ್ನು ಯಾರಾದರೂ ಒತ್ತುವರಿ ಮಾಡಿಕೊಂಡಿದ್ದರೆ ಅದನ್ನು ತೆಗೆದು ಹಾಕಬೇಕು. ವಾರ್ಡ್ ಗಳಲ್ಲಿ ವಿದ್ಯುತ್ ದೀಪ ವ್ಯವಸ್ಥೆಯನ್ನು ಒದಗಿಸುವುದು. ಸದಸ್ಯರು ತಮ್ಮ ವ್ಯಾಪ್ತಿಗೆ ಬರುವ ವಾರ್ಡ್ ನ ಸ್ವಚ್ಛತೆಯನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸಬೇಕು.
ನಿರುಪಯುಕ್ತ ವಸ್ತುಗಳನ್ನು ರಾಶಿ ಹಾಕಲು ಜನರು ವಾಸವಿರುವ ಪ್ರದೇಶದಿಂದ ದೂರದ ಜಾಗದಲ್ಲಿ ತಿಪ್ಪೆ ಗುಂಡಿಗಳನ್ನು ನಿರ್ಮಿಸುವುದು. ಸರ್ಕಾರಿ ಪ್ರಾಥಮಿಕ ಶಾಲೆಯ ದಾಖಲಾತಿಯನ್ನು ಪರಿಶೀಲಿಸುವುದು ಹಾಗೂ ಹಳ್ಳಿಯ ಶಾಲೆಯನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವುದು. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಲ್ಲಿರುವ ಮಕ್ಕಳಿಗೆ ಸಾರ್ವತ್ರಿಕ ರೋಗ ನಿರೋಧಕ ಚುಚ್ಚಮದ್ದನ್ನು ಕೊಡಿಸಬೇಕು. ಕೂಲಿಕಾರ್ಮಿಕರಿಗೆ ಉದ್ಯೋಗ ಖಾತ್ರಿ ಜಾಬ್ ಕಾರ್ಡ್ ಸಿಗುವಂತೆ ಮಾಡಿ 100ದಿನಗಳ ಕೆಲಸ ಸಿಗುವಂತೆ ನೋಡಿಕೊಳ್ಳುವುದು.
ಕಾಲ ಕಾಲಕ್ಕೆ ಸರ್ಕಾರದಿಂದ ಗ್ರಾಮೀಣ ಅಭಿವೃದ್ಧಿಗಾಗಿ ಇರುವ ಯೋಜನೆಗಳನ್ನು ತಮ್ಮ ಗ್ರಾಮಗಳಲ್ಲಿ ಕಾರ್ಯರೂಪಕ್ಕೆ ತರುವುದು. ತಮ್ಮ ವಾರ್ಡ್ ಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಒದಗಿಸುವುದು. ಗ್ರಾಮ ಪಂಚಾಯತಿ ಸದಸ್ಯರು ಸಮಾಜಕ್ಕೆ ಅನುಕೂಲವಾಗುವಂತೆ ಕೆಲವು ನೈತಿಕ ಜವಾಬ್ದಾರಿಗಳನ್ನು ಪೂರೈಸಬೇಕು.
ತಮ್ಮ ವಾರ್ಡ್ ನಲ್ಲಿ ಮರಣ ಹೊಂದಿದರೆ ಅವರ ಅಂತ್ಯಕ್ರಿಯೆಗೆ ಸಹಕರಿಸುವುದು. ಅಂಗವಿಕಲರ ಮತ್ತು ವಿಕಲಚೇತನರಿಗೆ ಸಹಾಯಧನ ಒದಗಿಸುವ ಪ್ರಯತ್ನ ಮಾಡುವುದು. ಬಡವರಿಗೆ ಸರ್ಕಾರದಿಂದ ಸಿಗುವ ಮನೆ ಮಂಜೂರು ಮಾಡಲು ಪ್ರಯತ್ನ ಮಾಡಬೇಕು. ವಾರ್ಡ್ ನಲ್ಲಿ ವಿವಾದಗಳು ನಡೆದರೆ ರಾಜಿ ಪಂಚಾಯತಿ ಮಾಡಿಸಬೇಕು. ಗ್ರಾಮ ಪಂಚಾಯತಿ ಸದಸ್ಯರು ಸೇವೆಯ ಅಡಿಯಲ್ಲಿ ಬರುವುದರಿಂದ ವೇತನ ಇರುವುದಿಲ್ಲ ಆದರೆ ಸರ್ಕಾರ ಪ್ರತಿತಿಂಗಳು ಗೌರವ ರೂಪವಾಗಿ 1,000ರೂಪಾಯಿ ಕೊಡಲಾಗುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.