ಗ್ರಾಮ ಪಂಚಾಯಿತಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತದೆ ಈ ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸಲು ಹಣ ಬೇಕಾಗುತ್ತದೆ. ಗ್ರಾಮ ಪಂಚಾಯತಿಗೆ ಹಣ ಎಲ್ಲಿಂದ ಬರುತ್ತದೆ ಹೇಗೆ ಬರುತ್ತದೆ ಎಷ್ಟು ಬರುತ್ತದೆ ಯಾವ ರೀತಿ ಬರುತ್ತದೆ ಗ್ರಾಮ ಪಂಚಾಯತಿಯ ಮುಖ್ಯವಾದ ಆದಾಯದ ಮೂಲ ಯಾವುದು ಹಾಗೂ ಗ್ರಾಮ ಪಂಚಾಯತಿಯ ಪ್ರಮುಖ ಖರ್ಚುಗಳು ಯಾವುವು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.
ಪ್ರತಿಯೊಬ್ಬ ನಾಗರಿಕನಿಗೂ ಗ್ರಾಮಪಂಚಾಯಿತಿಗೆ ಎಲ್ಲಿಂದ ಹಣ ಬರುತ್ತದೆ ಎಂಬ ಪ್ರಶ್ನೆ ಮೂಡಿರುತ್ತದೆ. ಗ್ರಾಮ ಪಂಚಾಯಿತಿಗೆ ನಾಲ್ಕು ಮೂಲಗಳಿಂದ ಆದಾಯ ಬರುತ್ತದೆ. ಕೇಂದ್ರ ಹಣಕಾಸು ಆಯೋಗದ ಅನುದಾನ, ರಾಜ್ಯದ ಶಾಸನಬದ್ಧ ಅನುದಾನ, ಗ್ರಾಮ ಪಂಚಾಯತಿಯ ಸ್ವಂತ ಆದಾಯ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರಾಯೋಜಿತ ಯೋಜನೆಗಳ ಅನುದಾನ ಇವುಗಳ ಆಧಾರದ ಮೇಲೆ ಗ್ರಾಮ ಪಂಚಾಯಿತಿ ಕಾರ್ಯನಿರ್ವಹಿಸುತ್ತದೆ. ಮೊದಲನೆಯದಾಗಿ ಕೇಂದ್ರ ಹಣಕಾಸು ಆಯೋಗದ ಅನುದಾನದಲ್ಲಿ 15ನೇ ಹಣಕಾಸು ಆಯೋಗದ ಶಿಫಾರಸ್ಸಿನ ಮೇರೆಗೆ ಜನಸಂಖ್ಯೆ ಆಧಾರದ ಮೇಲೆ ಪ್ರತಿಯೊಂದು ಗ್ರಾಮ ಪಂಚಾಯಿತಿಗೆ ವಾರ್ಷಿಕವಾಗಿ 30-40 ಲಕ್ಷ ರೂಪಾಯಿ ಅನುದಾನ ಬರುತ್ತದೆ. ಬರುವ ಅನುದಾನದಲ್ಲಿ 25%ರಷ್ಟು ನೀರು ನೈರ್ಮಲ್ಯ ಚಟುವಟಿಕೆಗಳಿಗೆ ಹಾಗೂ 25% ರಷ್ಟು ಕುಡಿಯುವ ನೀರು ಚಟುವಟಿಕೆಗಳಿಗೆ ಖರ್ಚು ಮಾಡಬಹುದು. ಇನ್ನು 50% ಅನುದಾನವನ್ನು ಅಭಿವೃದ್ಧಿ ಚಟುವಟಿಕೆಗಳಿಗೆ ಬಳಸಬೇಕು.
ಎರಡನೇ ಮೂಲವಾದ ರಾಜ್ಯ ಸರ್ಕಾರದ ಶಾಸನಬದ್ಧ ಅನುದಾನದಲ್ಲಿ ರಾಜ್ಯ ಹಣಕಾಸು ಆಯೋಗದ ಶಿಫಾರಸ್ಸಿನ ಮೇರೆಗೆ ಪ್ರತಿಯೊಂದು ಗ್ರಾಮ ಪಂಚಾಯತಿಗೆ ವಾರ್ಷಿಕ 10 ಲಕ್ಷ ರೂಪಾಯಿ ಅನುದಾನ ನೀಡುತ್ತದೆ. ಈ ಅನುದಾನದಲ್ಲಿ 40% ಅನುದಾನವನ್ನು ಗ್ರಾಮ ಪಂಚಾಯಿತಿಯಲ್ಲಿ ಕೆಲಸ ಮಾಡುವ ನೌಕರರಿಗೆ ಮಾಸಿಕ ಸಂಬಳಕ್ಕಾಗಿ ನೀಡಬೇಕು. 60% ರಷ್ಟು ಅನುದಾನವನ್ನು ವಿದ್ಯುಚ್ಛಕ್ತಿ ಬಿಲ್ ಪಾವತಿಸಲು ಬಳಸಬಹುದು. ಮೂರನೇಯದಾಗಿ ಗ್ರಾಮ ಪಂಚಾಯಿತಿಯ ಸ್ವಂತ ಆದಾಯ ಎಂದರೆ ಗ್ರಾಮ ಪಂಚಾಯಿತಿಯ ಆಸ್ತಿಯ ಮೇಲೆ ತೆರಿಗೆ ವಿಧಿಸುವ ಅಧಿಕಾರವಿರುತ್ತದೆ, ತೆರಿಗೆಯಿಂದ ಸಂಗ್ರಹವಾದ ಹಣವು ಪ್ರಮುಖ ಆದಾಯವಾಗಿದೆ ಅಲ್ಲದೆ ಗ್ರಾಮ ಪಂಚಾಯಿತಿ ತನ್ನ ಸ್ವಂತ ಮಳಿಗೆಗಳು, ಸಮುದಾಯ ಭವನ, ಕಟ್ಟಡಗಳ ಬಾಡಿಗೆ ಹಣ, ಟೆಲಿಫೋನ್ ಟವರ್ ಬಾಡಿಗೆ, ಜಾಹೀರಾತು ಫಲಕಗಳ ಮೇಲಿನ ತೆರಿಗೆ ಇವುಗಳು ಪ್ರಮುಖ ಗ್ರಾಮ ಪಂಚಾಯತಿಯ ಸ್ವಂತ ಆದಾಯದ ಮೂಲವಾಗಿದೆ.
ನಾಲ್ಕನೇಯ ಮೂಲವೆಂದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗ್ರಾಮೀಣ ಮಟ್ಟದಲ್ಲಿ ವಸತಿ ಯೋಜನೆ, ಸ್ವಚ್ಛ ಭಾರತ ಅಭಿಯಾನ, ಉದ್ಯೋಗ ಖಾತರಿ ಯೋಜನೆ ಹೀಗೆ ಅನೇಕ ಗ್ರಾಮೀಣ ಅಭಿವೃದ್ಧಿ ಯೋಜನೆಗಳಿಗೆ ಹಣವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಗ್ರಾಮ ಪಂಚಾಯಿತಿಗೆ ನೀಡುತ್ತದೆ. ಈ ಎಲ್ಲಾ ಮೂಲಗಳಿಂದ ಗ್ರಾಮ ಪಂಚಾಯಿತಿಗೆ ಪ್ರತಿ 5 ವರ್ಷಕ್ಕೆ 5-7 ಕೋಟಿವರೆಗೂ ಅನುದಾನ ಸಿಗುತ್ತದೆ. ಈ ಅನುದಾನ ಸರಿಯಾಗಿ ಗ್ರಾಮಪಂಚಾಯಿತಿಯ ಅಭಿವೃದ್ಧಿ ಕೆಲಸಗಳಿಗೆ ಖರ್ಚಾಗಬೇಕು.