ನಮ್ಮ ಆರೋಗ್ಯ ದೇಹದ ಎಲ್ಲಾ ಭಾಗಗಳ ಆರೋಗ್ಯದ ಮೇಲೆ ಅವಲಂಬಿತವಾಗಿದೆ. ನಾವು ದೇಹದ ಪ್ರಮುಖ ಭಾಗಗಳ ಆರೋಗ್ಯವನ್ನು ಮಾತ್ರ ಕಾಪಾಡಿಕೊಳ್ಳುತ್ತೇವೆ ಇದರೊಂದಿಗೆ ಎಲ್ಲರೂ ಮರೆಯುವ ಒಂದು ಪ್ರಮುಖ ಅಂಗದ ಸ್ವಚ್ಛತೆಯ ಬಗ್ಗೆ ಹಾಗೂ ಸ್ವಚ್ಛತೆಯ ವಿಧಾನ ಇನ್ನಿತರ ವಿಷಯವನ್ನು ಈ ಲೇಖನದಲ್ಲಿ ನೋಡೋಣ.

ನಾವು ಆರೋಗ್ಯವಾಗಿ ಸದೃಢವಾಗಿರಬೇಕಾದರೆ ನಮ್ಮ ದೇಹದ ಎಲ್ಲಾ ಅಂಗಾಂಗಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿರಬೇಕು. ಉತ್ತಮ ಆಹಾರ ಸೇವನೆ, ಜೀವನಶೈಲಿಯನ್ನು ಅನುಸರಿಸಿದಾಗ ಮಾತ್ರ ಮಾನಸಿಕ, ದೈಹಿಕ ಆರೋಗ್ಯದ ಸಮತೋಲನ ಸಾಧ್ಯ. ದೇಹದ ಎಲ್ಲಾ ಭಾಗಗಳು ನಮಗೆ ಮುಖ್ಯ. ಆದ್ದರಿಂದ ಅಂಗಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಸಹ ಬಹಳ ಮುಖ್ಯ. ದೇಹದ ಸ್ವಚ್ಛತೆಗೆ ಕೇವಲ ಸ್ನಾನ ಮಾಡಿದರೆ ಸಾಕಾಗುವುದಿಲ್ಲ. ಕೆಲವು ಅಂಗಗಳ ಶುಚಿತ್ವಕ್ಕೆ ವಿಶೇಷ ಗಮನ ಕೊಡುವ ಅವಶ್ಯಕತೆ ಇದೆ. ಸ್ನಾನ ಮಾಡುವಾಗ ಕೆಲವರು ಸಾಮಾನ್ಯವಾಗಿ ದೇಹದ ಪ್ರಮುಖ ಭಾಗವಾದ ಹೊಕ್ಕಳಿನ ಸ್ವಚ್ಛತೆಯನ್ನು ಮರೆತು ಬಿಡುತ್ತಾರೆ.

ಹೊಕ್ಕಳಿನ ಸ್ವಚ್ಛತೆ ಬಹಳ ಮುಖ್ಯವಾಗಿದೆ. ದೇಹದ ಪ್ರಮುಖ ಭಾಗಗಳಲ್ಲಿ ಒಂದಾಗಿರುವ ಹೊಕ್ಕಳ ಸ್ವಚ್ಛತೆ ಮತ್ತು ಆರೋಗ್ಯವು ಸಹ ವ್ಯಕ್ತಿಯನ್ನು ಆರೋಗ್ಯವಾಗಿರಿಸುತ್ತದೆ. ಹೊಕ್ಕಳು ನಮ್ಮ ದೇಹದ ಸೂಕ್ಷ್ಮ ಭಾಗಗಳಲ್ಲಿ ಒಂದಾಗಿದೆ. ನಾವು ವೈಯಕ್ತಿಕ ನೈರ್ಮಲ್ಯವನ್ನು ಕಾಪಾಡಿ ನಮ್ಮ ದೇಹ ಮತ್ತು ಹೊಕ್ಕಳಿನ ಕಾಳಜಿ ವಹಿಸುವುದು ಬಹಳ ಪ್ರಮುಖ ವಿಷಯವಾಗಿದೆ. ದಿ ಸನ್ ವರದಿ ಪ್ರಕಾರ ದೇಹವನ್ನು ಸ್ವಚ್ಛಗೊಳಿಸುವ ವಿಷಯ ಬಂದಾಗ ಜನರು ದೇಹದ ಪ್ರಮುಖ ಭಾಗವನ್ನು ಸ್ವಚ್ಛಗೊಳಿಸಲು ಮರೆತು ಬಿಡುತ್ತಾರೆ ಮತ್ತು ದೇಹದ ಪ್ರಮುಖ ಭಾಗಗಳಲ್ಲಿ ಹೊಕ್ಕಳು ಒಂದು ಪ್ರಮುಖ ಭಾಗವಾಗಿದೆ.

ಹೊಕ್ಕಳು ಬಹಳ ಚಿಕ್ಕದಾಗಿದ್ದರೂ ಅದನ್ನು ಸ್ವಚ್ಛಗೊಳಿಸುವುದು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ ಎಂದು ಅಮೇರಿಕನ್ ಮಾಧ್ಯಮದ ವ್ಯಕ್ತಿ ರಿಯಾನ್ ಸೀಕ್ರೆಸ್ಟ್ ಅವರು ತಮ್ಮ ರೇಡಿಯೊ ಕಾರ್ಯಕ್ರಮದಲ್ಲಿ ಬಹಿರಂಗಪಡಿಸಿದ್ದಾರೆ. ಹಾಗಾದರೆ  ಹೊಕ್ಕಳನ್ನು ಯಾಕೆ ಸ್ವಚ್ಛಗೊಳಿಸಬೇಕು ಎಂಬ ಪ್ರಶ್ನೆ ಮೂಡುತ್ತದೆ. ನಿಯಮಿತವಾಗಿ ಹೊಕ್ಕಳನ್ನು ಸ್ವಚ್ಛಗೊಳಿಸದೆ ಇದ್ದರೆ ಧೂಳು, ಕೊಳಕು ಮತ್ತು ಸತ್ತ ಚರ್ಮದಿಂದಾಗಿ ಕಲ್ಮಶದ ಪದರಗಳು ರೂಪುಗೊಳ್ಳುತ್ತವೆ.

ನಂತರ ಸ್ವಚ್ಛಗೊಳಿಸಲು ಬಹಳ ಕಷ್ಟವಾಗುತ್ತದೆ. ಹೊಕ್ಕಳನ್ನು ಸ್ವಚ್ಛಗೊಳಿಸದಿರುವುದು ದೇಹದ ಮೇಲೆ ಯಾವುದೆ ಪರಿಣಾಮ ಬೀರುವುದಿಲ್ಲ ಆದರೆ ಅದರಿಂದ ಚರ್ಮ ಒಣಗುವಿಕೆ ಮತ್ತು ಕಿರಿಕಿರಿ ಉಂಟಾಗಬಹುದು. ಅನೇಕ ಸಂದರ್ಭಗಳಲ್ಲಿ ಹೊಕ್ಕಳಿನ ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸದಿದ್ದರೆ ಅದರ ಸುತ್ತಲಿನ ಚರ್ಮದಲ್ಲಿ ಸೋಂಕಿನ ಸಮಸ್ಯೆ ಪ್ರಾರಂಭವಾಗುತ್ತದೆ ಮತ್ತು ಬ್ಯಾಕ್ಟೀರಿಯಾಗಳು ಬೆಳೆಯಲು ಪ್ರಾರಂಭಿಸುತ್ತವೆ. ಅದು ಅನಾರೋಗ್ಯಕ್ಕೆ ಕಾರಣವಾಗಬಹುದು.

ಹೊಕ್ಕಳನ್ನು ಸ್ವಚ್ಛಗೊಳಿಸಲು ನೀರನ್ನು ಬಳಸಬಹುದು ಆದರೆ ಹೊಕ್ಕಳು ಸಾಕಷ್ಟು ಆಳವಾಗಿದ್ದರೆ ಹತ್ತಿಯಿಂದ ಸ್ವಚ್ಛಗೊಳಿಸಿಕೊಳ್ಳಬಹುದು. ಹೊಕ್ಕುಳ ಕೊಳೆಯನ್ನು ಸ್ವಚ್ಛಗೊಳಿಸಲು ಬಿಸಿ ಎಣ್ಣೆಯಿಂದ ಮಸಾಜ್ ಮಾಡಬಹುದು. ಈ ಭಾಗದಲ್ಲಿ ಸಂಗ್ರಹವಾಗಿರುವ ಕೊಳೆಯನ್ನು ಬಿಸಿ ಎಣ್ಣೆಯಿಂದ ಸುಲಭವಾಗಿ ಸ್ವಚ್ಛಗೊಳಿಸಬಹುದು. ತೆಂಗಿನ ಎಣ್ಣೆಯನ್ನು ಬಳಸುವುದು ಉತ್ತಮ. ಹೊಕ್ಕುಳಲ್ಲಿ ಸೋಂಕು ಇದ್ದರೆ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳಬೇಕು ಇದರಿಂದ ಮುಂದೆ ಆಗುವ ದೊಡ್ಡ ಸಮಸ್ಯೆಯಿಂದ ಪಾರಾಗಬಹುದು.

ತೇವಾಂಶವು ಉಳಿದಿರುವ ಸ್ಥಳದಲ್ಲಿ ಬ್ಯಾಕ್ಟೀರಿಯಾಗಳು ತ್ವರಿತವಾಗಿ ಮತ್ತು ಸುಲಭವಾಗಿ ಬೆಳೆಯಲು ಪ್ರಾರಂಭಿಸುತ್ತವೆ. ಹೊಕ್ಕುಳನ್ನು ಸ್ವಚ್ಛಗೊಳಿಸಿದ ನಂತರ ಆ ಸ್ಥಳವನ್ನು ಒಣಗಿಸುವುದು ಅವಶ್ಯಕವಾಗಿದೆ. ತೊಡುವ ಬಟ್ಟೆಯಿಂದ ಹೊಕ್ಕಳು ಭಾಗ ಮರೆಯಾಗುತ್ತದೆ ಇದರಿಂದಾಗಿ ಕೊಳೆ ಸಂಗ್ರಹವಾಗುವುದು ಕಡಿಮೆ ಆದ್ದರಿಂದ ವಾರಕ್ಕೊಮ್ಮೆಯಾದರೂ ಹೊಕ್ಕಳನ್ನು ಸ್ವಚ್ಛಗೊಳಿಸಿ. ಈ ಮಾಹಿತಿ ಆರೋಗ್ಯದ ಮಾಹಿತಿಯಾಗಿದ್ದು, ನೀವು ಈ ವಿಷಯವನ್ನು ಪಾಲಿಸಿ, ಇತರರಿಗೂ ತಿಳಿಸಿ.

Leave a Reply

Your email address will not be published. Required fields are marked *