ಬೇಸಿಗೆಯಲ್ಲಿ ಗರ್ಭಿಣಿಯರ ಆರೈಕೆ ಹೀಗಿರಲಿ

0 0

ಗರ್ಭಾವಸ್ಥೆಯ ಸಂದರ್ಭದಲ್ಲಿ ಎಷ್ಟು ಜೋಪಾನವಾಗಿದ್ದರೂ ಕಡಿಮೆಯೇ. ಏಕೆಂದರೆ ತಮ್ಮ ದೇಹದಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಆದರೂ ಅದು ನೇರವಾಗಿ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.ಬೇಸಿಗೆ ಎಂದ ತಕ್ಷಣ ನೆನಪಾಗುವುದು ಅತಿ ಹೆಚ್ಚು ತಾಪಮಾನ ಹೊಂದಿರುವ ಬಿರು ಬಿಸಿಲು. ಸಾಮಾನ್ಯ ಜನರಿಗೆ ಮನೆ ಬಿಟ್ಟು ಹೊರ ಬರಲಾರದಂತಹ ಪರಿಸ್ಥಿತಿ. ಇನ್ನು ಗರ್ಭಿಣಿಯರ ಪಾಡು ಹೇಳತೀರದು. ಗರ್ಭಿಣಿಯರಿಗೆ ಆರೋಗ್ಯ ಕಾಳಜಿಯ ಜೊತೆಗೆ ತಮ್ಮ ದೇಹದ ತಾಪಮಾನ ಸರಿಯಾಗಿ ಕಾಯ್ದುಕೊಳ್ಳುವುದೂ ಕೂಡ ಮುಖ್ಯ ಎನಿಸುತ್ತದೆ. ಗರ್ಭಾವಸ್ಥೆಯ ಸಂದರ್ಭದಲ್ಲಿ ಎಷ್ಟು ಜೋಪಾನವಾಗಿದ್ದರೂ ಕಡಿಮೆಯೇ. ಏಕೆಂದರೆ ತಮ್ಮ ದೇಹದಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಆದರೂ ಅದು ನೇರವಾಗಿ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ಬೇಸಿಗೆ ಸಮಯದಲ್ಲಿ ಗರ್ಭಿಣಿಯರು ಮಾಡಬೇಕಾದ ಮೊಟ್ಟ ಮೊದಲ ಕೆಲಸ ಎಂದರೆ ತಮ್ಮ ದೇಹದ ನೀರಿನ ಅಂಶದ ಬಗ್ಗೆ ಗಮನ ವಹಿಸುವುದು. ಗರ್ಭಾವಸ್ಥೆಯ ಈ ಸಮಯದಲ್ಲಿ ನಿಮ್ಮ ಹಾಗೂ ನಿಮ್ಮ ಮಗುವಿನ ಆಹಾರ ಪದ್ಧತಿಯ ಮೇಲೆ ಕೂಡ ಗಮನ ಇಡಬೇಕಾದಂತಹ ಜವಾಬ್ದಾರಿ ನಿಮ್ಮ ಮೇಲಿದೆ. ಹಾಗಾಗಿ ವೈದ್ಯರ ಸಲಹೆ ಮೇರೆಗೆ ನಿಮ್ಮ ಹಾಗೂ ನಿಮ್ಮ ಮಗುವಿನ ಆರೋಗ್ಯಕ್ಕೆ ಪೂರಕವಾದ ದ್ರವಾಹಾರಗಳನ್ನೇ ಸೇವಿಸಿ. ಬೇಸಿಗೆ ಸಮಯದಲ್ಲಿ ಗರ್ಭಿಣಿಯರು ಹೆಚ್ಚಾಗಿ ದ್ರವಾಹಾರಗಳನ್ನು ಸೇವಿಸುವುದರಿಂದ, ಅವರ ದೇಹ ತಂಪಾಗಿರುವುದು ಜೊತೆಗೆ ಮೂರನೇ ತ್ರೈಮಾಸಿಕದಲ್ಲಿ ಸಾಮಾನ್ಯವಾಗಿ ಎದುರಾಗುವ ಕೈಕಾಲುಗಳ ಊತ ಸಹ ಕಡಿಮೆಯಾಗುತ್ತದೆ. ಅದೂ ಅಲ್ಲದೆ ಸುಲಭವಾಗಿ ಸಿಗುವ ಮತ್ತು ಖರ್ಚಿಲ್ಲದೆ ಎಲ್ಲರಿಗೂ ದೊರಕುವ ಮತ್ತೆ ಎಲ್ಲರ ಜೀವಕ್ಕೂ ಅಮೂಲ್ಯವಾದ ದ್ರವಾಹಾರ ಎಂದರೆ ಅದು ನೀರು. ಹಾಗಾಗಿ ಈ ಸಮಯದಲ್ಲಿ ಹೆಚ್ಚಿನ ನೀರಿನ ಸೇವನೆ ಅತಿ ಮುಖ್ಯ. ಕೆಫೀನ್ ಅಂಶವಿರುವ ದ್ರವಾಹಾರವನ್ನು ಈ ಸಮಯದಲ್ಲಿ ಆದಷ್ಟು ತಡೆಯಿರಿ. ಏಕೆಂದರೆ ಕೆಫಿನ್ ಅಂಶ ಇರುವ ಆಹಾರ ದೇಹದಿಂದ ಅತಿ ಹೆಚ್ಚಾಗಿ ನೀರಿನ ಅಂಶವನ್ನು ಹೀರಿಕೊಳ್ಳುತ್ತದೆ.
ಗರ್ಭಾವಸ್ಥೆಯ ಸಮಯದಲ್ಲಿ ತುಂಬಾ ಬಿಗಿಯಾದ ವಸ್ತ್ರಗಳನ್ನು ತೊಡುವುದರಿಂದ ದೇಹದ ಚರ್ಮದ ಮೇಲೆ ಬೆವರಿನ ತೇವಾಂಶ ಹೆಚ್ಚಾಗಿ ದೇಹಕ್ಕೆ ಇನ್ನಷ್ಟು ಬಿಸಿ ವಾತಾವರಣ ನಿರ್ಮಾಣವಾಗುತ್ತದೆ. ಜೊತೆಗೆ ಈ ಸಮಯದಲ್ಲಿ ಹಾರ್ಮೋನುಗಳ ವ್ಯತ್ಯಾಸದಿಂದ ಗರ್ಭಿಣಿಯರಿಗೆ ಬಹಳಷ್ಟು ಬೆವರಿನ ಅಂಶ ದೇಹದಿಂದ ಹೊರಬರುತ್ತದೆ.

ಗರ್ಭದೊಳಗೆ ಮಗುವಿರುವ ಕಾರಣ ಪ್ರತಿ ತಿಂಗಳು ನಿಮ್ಮ ದೇಹ ಹೆಚ್ಚು ದಪ್ಪವಾಗುತ್ತ ಹೋಗುತ್ತದೆ. ಆದ್ದರಿಂದ ಈ ಸಮಯದಲ್ಲಿ ನಿಮ್ಮ ದೇಹಕ್ಕೆ ಸರಿಹೊಂದುವಂತಹ ಹತ್ತಿ ಬಟ್ಟೆಗಳನ್ನು ಹೆಚ್ಚಾಗಿ ಬಳಸಿ. ಗಾಳಿಯ ಸಂವಹನ ಇರುವ ತೆಳ್ಳಗಿನ ಬಟ್ಟೆಗಳನ್ನು ಹೆಚ್ಚಾಗಿ ಹಾಕಿಕೊಳ್ಳಿ. ಚಪ್ಪಲಿಗಳನ್ನು ಹಾಕಿಕೊಳ್ಳುವುದು ಮರೆಯಬೇಡಿ.ನಿಮ್ಮ ದಿನ ನಿತ್ಯದ ಪದ್ಧತಿಯಲ್ಲಿ ಅಲ್ಲಿ ಇಲ್ಲಿ ಹೋಗುವ ರೂಢಿ ನಿಮಗಿರುತ್ತದೆ. ಹೊರಡುವ ಸಮಯದಲ್ಲಿ ನಿಮಗೆ ಬೇಕಾದ ಅಗತ್ಯವಿರುವ ಹಲವಾರು ವಸ್ತುಗಳನ್ನು ಬ್ಯಾಗಿನಲ್ಲಿ ಇಟ್ಟುಕೊಂಡು ವಸ್ತುಗಳು ತುಂಬಿರುವ ಬ್ಯಾಗನ್ನು ನೇತುಹಾಕಿಕೊಂಡು ಪ್ರಯಾಣ ಬೆಳೆಸುವ ಹವ್ಯಾಸ ನಿಮಗಿರುತ್ತದೆ. ಆದರೆ ಮೂರನೇ ತ್ರೈಮಾಸಿಕದ ಗರ್ಭಾವಸ್ಥೆಯಲ್ಲಿ ಈ ಹವ್ಯಾಸವನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳಿ. ಅಂದರೆ ನಿಮಗೆ ಬೇಕಾದ ವಸ್ತುಗಳನ್ನು ಬ್ಯಾಗಿನಲ್ಲಿ ಇಟ್ಟು ಅದನ್ನು ಕಾರಿನಲ್ಲಿ ಅಥವಾ ನಿಮ್ಮ ಕಚೇರಿಯಲ್ಲಿ ಬಿಟ್ಟು ನೀವು ಸಾಮಾನ್ಯರಾಗಿ ನಡೆಯುವುದು ಉತ್ತಮ. ಇದರಿಂದ ನಿಮ್ಮ ದೇಹದ ಮೇಲೆ ಭಾರ ಕಡಿಮೆಯಾಗಿ ನಿಮ್ಮ ಹಾಗೂ ನಿಮ್ಮ ಮಗುವಿನ ಆರೋಗ್ಯಕ್ಕೆ ಉತ್ತಮ ಎನಿಸುತ್ತದೆ.ವಿಶೇಷವಾಗಿ ಬೇಸಿಗೆ ದಿನಗಳಲ್ಲಿ ಗರ್ಭಿಣಿಯರು ಹೆಚ್ಚಾಗಿ ವಿಶ್ರಾಂತಿ ತೆಗೆದುಕೊಳ್ಳಬೇಕು. ಇದರಿಂದ ನಿಮ್ಮ ಮಗುವಿನ ಆರೋಗ್ಯಕ್ಕೂ ಬಹಳಷ್ಟು ಪ್ರಯೋಜನಕಾರಿ ವಾತಾವರಣ ನಿರ್ಮಾಣವಾಗುವುದು. ಜೊತೆಗೆ ನಿಮ್ಮ ಮಾನಸಿಕ ಆತಂಕ, ಉದ್ವೇಗ ಎಲ್ಲವೂ ನಿಯಂತ್ರಣಕ್ಕೆ ಬರುವುದರಿಂದ ನಿಮ್ಮ ಆರೋಗ್ಯದಲ್ಲಿ ಏರಿಳಿತಗಳಾಗಲೀ ಅಥವಾ ರಕ್ತದ ಒತ್ತಡ, ಮಧುಮೇಹ ನಿಯಂತ್ರಣಕ್ಕೆ ಬಾರದ ಸಂದರ್ಭಗಳು ಎದುರಾಗುವುದಿಲ್ಲ. ಒಂದು ವೇಳೆ ಎದುರಾದರೂ ಬಹಳಷ್ಟು ಪರಿಣಾಮಕಾರಿಯಾಗಿ ಇವುಗಳನ್ನು ನಿರ್ವಹಿಸುವಂತಹ ಛಲ ನಿಮ್ಮಲ್ಲಿ ಇರುತ್ತದೆ. ವಿಶ್ರಾಂತಿ ಎಂದರೆ ತಕ್ಷಣ ಮಲಗಿರಬೇಕು ಎಂದಲ್ಲ. ಕುಳಿತುಕೊಂಡು ಆರಾಮವಾಗಿ ಟಿವಿಯಲ್ಲಿ ಬರುವ ಮನಸ್ಸಿಗೆ ಹಿತವೆನಿಸುವ ಕಾರ್ಯ ಕ್ರಮಗಳನ್ನು ನೋಡುವುದು ಕೂಡ ಆಗಿರಬಹುದು. ಆದರೆ ಕುಳಿತುಕೊಳ್ಳುವ ಸಮಯದಲ್ಲಿ ದಿಂಬಿನ ಮೇಲೆ ಕಾಲುಗಳನ್ನು ಇಟ್ಟು ಕುಳಿತುಕೊಳ್ಳಿ. ಇದರಿಂದ ನಿಮ್ಮ ಬೆನ್ನು ನೋವು ಕಡಿಮೆಯಾಗಿ ಕಾಲುಗಳು ಊದಿಕೊಳ್ಳುವುದು ತಪ್ಪುತ್ತದೆ.

Leave A Reply

Your email address will not be published.