ನಿಮಗೆಲ್ಲರಿಗೂ ತಿಳಿದಿರುವಂತೆ ನಮ್ಮ ಭಾರತದಲ್ಲಿರುವ ಪ್ರತಿಯೊಂದು ಧಾರ್ಮಿಕ ಕ್ಷೇತ್ರ ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿದೆ ನಾವಿಂದು ನಿಮಗೆ ತಿಳಿಸುತ್ತಿರುವ ಧರ್ಮಿಕ ಸ್ಥಳ ನಮ್ಮ ಭಾರತ ದೇಶದ ಧಾರ್ಮಿಕ ಪರಂಪರೆಯಲ್ಲಿ ವಿಶೇಷ ಸ್ಥಾನಮಾನವನ್ನು ಗಳಿಸಿರುವ ಪರಮ ಪಾವನ ಕ್ಷೇತ್ರ. ದೇವನು ದೇವತೆಗಳಲ್ಲಿ ಪ್ರಥಮ ವಂಧಿತನಾಗಿರುವ ಹಾಗೂ ನಮ್ಮ ಭಾರತ ದೇಶದಲ್ಲಿ ಎಲ್ಲರಿಂದಲೂ ಆರಾಧಿಸಲ್ಪಡುವ ಮಹಾಗಣಪತಿ ಜನ್ಮಪಡೆದ ಸ್ಥಳವಿದು.

ಇಷ್ಟೇ ಅಲ್ಲದೆ ಪಾರ್ವತಿದೇವಿಯು ಶಿವಪರಮಾತ್ಮನನ್ನ ತನ್ನ ಪತಿಯನ್ನಾಗಿ ಪಡೆಯುವ ಉದ್ದೇಶದಿಂದ ಕಠಿಣವಾದ ತಪಸ್ಸನ್ನು ಮಾಡಿದ್ದು ಕೂಡ ಇದೇ ಸ್ಥಳದಲ್ಲಿ. ಹಾಗಾಗಿ ಪ್ರತಿ ವರ್ಷವು ಲಕ್ಷಾಂತರ ಜನರು ಈ ಪಾವನ ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡಿ ಪುನೀತರಾಗುತ್ತಾರೆ ಹಾಗಾದರೆ ಆ ಸ್ಥಳ ಯಾವುದು ಎಂಬುದನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ.

ನಾವಿಂದು ನಿಮಗೆ ಪರಿಚಯಿಸಲು ಹೊರಟ ಪರಮ ಪಾವನ ಪುಣ್ಯ ಕ್ಷೇತ್ರ ಭಾರತದ ದೇವ ಭೂಮಿ ಎಂದು ಕರೆಯಲ್ಪಡುವ ಉತ್ತರಖಾಂಡ ರಾಜ್ಯದ ರುದ್ರ ಪ್ರಯಾಗ ಜಿಲ್ಲೆಯಲ್ಲಿರುವ ಗೌರಿಕುಂಡ ಎಂಬ ಪವಿತ್ರ ಕ್ಷೇತ್ರದ ಬಗ್ಗೆ. ಸಮುದ್ರ ಮಟ್ಟದಿಂದ ಆರು ಸಾವಿರ ಅಡಿಗಳ ಎತ್ತರದಲ್ಲಿ ಮಂದಾಕಿನಿ ನದಿಯ ತೀರದಲ್ಲಿರುವ ಗೌರಿ ಕುಂಡವು ಹೆಸರೇ ಸೂಚಿಸುವಂತೆ ಗೌರಿ ಅಥವಾ ಪಾರ್ವತಿದೇವಿಗೆ ಸಂಬಂಧಿಸಿದ ಕ್ಷೇತ್ರವಾಗಿದೆ. ಪಾರ್ವತಿದೇವಿ ಪೂರ್ವಜನ್ಮದಲ್ಲಿ ಶಿವ ಪರಮಾತ್ಮನ ಮಡದಿ ಸತಿ ಆಗಿರುತ್ತಾರೆ.

ದಕ್ಷಯಜ್ಞದ ಸಂದರ್ಭದಲ್ಲಿ ತಮ್ಮ ತಂದೆ ದಕ್ಷನು ಪರಮೇಶ್ವರನನ್ನು ಅವಮಾನ ಮಾಡಿದ್ದಕ್ಕಾಗಿ ಮನ ನೊಂದ ಸತಿಯು ಯಜ್ಞ ಕುಂಡಕ್ಕೆ ಹಾರಿ ಪ್ರಾಣ ತ್ಯಾಗವನ್ನು ಮಾಡಿರುತ್ತಾರೆ ನಂತರ ಮತ್ತೆ ಹಿಮವಂತ ರಾಜನ ಮಗಳಾಗಿ ಪಾರ್ವತಿದೇವಿಯ ಪುನರ್ಜನ್ಮವನ್ನು ಪಡೆಯುತ್ತಾರೆ. ಪರಶಿವ ಪರಮಾತ್ಮನನ್ನೇ ತನ್ನ ಪತಿ ಯನ್ನಾಗಿ ಪಡೆಯುವ ಉದ್ದೇಶದಿಂದ ಪಾರ್ವತಿದೇವಿಯು ಗೌರಿಕುಂಡದಲ್ಲಿ ಅತಿ ಕಠಿಣ ತಪಸ್ಸನ್ನು ಆಚರಿಸುತ್ತಾರೆ.

ಪಾರ್ವತಿದೇವಿಯ ತಪಸ್ಸಿಗೆ ಮೆಚ್ಚಿದ ಪರಶಿವನು ಗೌರಿ ಕುಂಡಕ್ಕೆ ಸಮೀಪದಲ್ಲಿರುವ ಮತ್ತೊಂದು ಧಾರ್ಮಿಕ ಕ್ಷೇತ್ರವಾದ ಯೋಗಿ ನಾರಾಯಣ ಕ್ಷೇತ್ರದಲ್ಲಿ ವಿವಾಹವಾಗುತ್ತಾರೆ. ಗೌರಿಕುಂಡದಲ್ಲಿ ಪಾರ್ವತಿದೇವಿಯು ಶಿವಪರಮಾತ್ಮನನ್ನು ಒಲಿಸಿಕೊಳ್ಳಲು ತಪಸ್ಸು ಮಾಡಿದ ಸ್ಥಳದಲ್ಲಿ ಗೌರಿ ದೇವಿಯ ದೇವಾಲಯವಿದೆ ಗೌರಿಕುಂಡವು ಕೇದಾರನಾಥಕ್ಕೆ ತೆರಳುವ ಮಾರ್ಗ ಮಧ್ಯದಲ್ಲಿಯೇ ಇರುವುದರಿಂದ ಕೇದಾರನಾಥಕ್ಕೆ ಭೇಟಿ ನೀಡುವ ಭಕ್ತರು ಗೌರಿ ದೇವಾಲಯಕ್ಕೆ ಭೇಟಿ ನೀಡಿ ಗೌರಿ ದೇವಿಗೆ ಪ್ರಾರ್ಥನೆಯನ್ನು ಸಲ್ಲಿಸಿ ಮುಂದೆ ಸಾಗುತ್ತಾರೆ.

ವಿಶೇಷವೇನೆಂದರೆ ಈ ಗೌರಿಕುಂಡ ಸ್ಥಳವು ಗಣಪತಿಯ ಜನ್ಮ ಕಥೆಯೊಂದಿಗೆ ಸಂಬಂಧವನ್ನು ಹೊಂದಿದೆ. ಈ ಗೌರಿಕುಂಡದಲ್ಲಿ ಗೌರಿಕುಂಡ ಎಂದು ಕರೆಯುವ ಬಿಸಿನೀರಿನ ಬುಗ್ಗೆಯ ಸ್ಥಳವಿದೆ.ಈ ನೀರು ಹಿಮಚ್ಛಾದಿತ ಚಳಿಯಲ್ಲಿಯೂ ಕೂಡ ಬೆಚ್ಚಗಿರುತ್ತದೆ ಈ ಗೌರಿ ಕುಂಡವನ್ನು ಪಾರ್ವತಿ ಸರೋವರ ಮತ್ತು ತಪ್ತ ಕುಂಡ ಎಂದು ಕರೆಯುತ್ತಾರೆ. ಇದೇ ಗೌರಿಕುಂಡದಲ್ಲಿ ದೇವಿಯು ಸ್ನಾನ ಮಾಡುವ ಸಮಯದಲ್ಲಿ ತನ್ನ ಮೈಯ ಕೊಳೆಯಿಂದಲೇ ಗಣೇಶನನ್ನು ಸೃಷ್ಟಿಮಾಡಿ ಸ್ನಾನದ ಕೋಣೆಯ ಹೊರಗೆ ಕಾವಲು ಕಾಯಲು ನೇಮಿಸಿರುತ್ತಾರೆ.

ಆ ಸಮಯದಲ್ಲಿ ಅಲ್ಲಿಗೆ ಬಂದ ಪರಮ ಶಿವನನ್ನು ಗಣೇಶನು ತಡೆಯುತ್ತಾನೆ ಇದರಿಂದ ಕೋಪಗೊಂಡ ಪರಮಶಿವ ಗಣೇಶನ ಶಿರವನ್ನು ಛೇದಿಸುತ್ತಾರೆ. ಇದನ್ನು ತಿಳಿದು ಗೌರಿ ದೇವಿಯು ದುಃಖತಪ್ತರಾಗಿ ರೋಧಿಸುತ್ತಿರುವಾಗ ಆಕೆಯನ್ನು ಸಮಾಧಾನ ಪಡಿಸುವುದಕ್ಕಾಗಿ ಈಶ್ವರನು ಒಂದು ಆನೆಯ ತಲೆಯನ್ನು ತಂದು ಗಣೇಶನ ಮುಂಡಕ್ಕೆ ಅದನ್ನು ಇಟ್ಟು ಪ್ರಾಣವಾಯುವನ್ನು ತುಂಬಿಸಿ ಜೀವ ಬರುವಂತೆ ಮಾಡುತ್ತಾರೆ. ಇಲ್ಲಿಂದ ಮುಂದೆ ಗಣೇಶ ದೇವನನ್ನ ಗಜಮುಖ ಗಜಪತಿ ಗಜಾನನ ಎಂಬಿತ್ಯಾದಿ ಹೆಸರುಗಳಿಂದ ಪೂಜೆಯನ್ನು ಸಲ್ಲಿಸಲಾಗುತ್ತದೆ.

ಪಾರ್ವತಿದೇವಿ ಸ್ನಾನ ಮಾಡಿದ ಗೌರಿಕುಂಡದ ನೀರನ್ನು ಅತಿ ಪವಿತ್ರವೆಂದು ಭಾವಿಸಲಾಗುತ್ತದೆ ಗೌರಿ ಕುಂಡಕ್ಕೆ ತೆರಳಿದ ಭಕ್ತಾದಿಗಳು ಗೌರಿಕುಂಡದ ನೀರನ್ನು ತಮ್ಮ ಮನೆಗಳಿಗೆ ತಂದು ಪೂಜಿಸುತ್ತಾರೆ ಅಷ್ಟೇ ಅಲ್ಲದೆ ಈ ಪವಿತ್ರ ಕೊಳದ ನೀರಿನಲ್ಲಿ ದೈವೀಶಕ್ತಿ ಇದೆ ಎನ್ನಲಾಗುತ್ತದೆ. ಅಷ್ಟೇ ಅಲ್ಲದೆ ಚರ್ಮ ರೋಗ ಇದ್ದವರು ಈ ಪವಿತ್ರ ನೀರಿನಲ್ಲಿ ಸ್ನಾನ ಮಾಡಿದರೆ ಎಲ್ಲಾ ಚರ್ಮ ರೋಗಗಳು ನಿವಾರಣೆಯಾಗುತ್ತದೆ. ಗೌರೀಕುಂಡದಿಂದ ಅರ್ಧ ಕಿಲೋಮೀಟರ್ ದೂರದಲ್ಲಿ ಶಿರ್ ಕಟ ಗಣಪತಿ ಎಂದು ಕರೆಯಲ್ಪಡುವ ಗಣಪತಿ ದೇವರ ದೇವಸ್ಥಾನವಿದೆ.

ಸ್ಕಂದ ಪುರಾಣದ ಪ್ರಕಾರ ಈ ದೇವಾಲಯವಿರುವ ಸ್ಥಳದಲ್ಲಿಯೇ ಪರಶಿವನು ಗಣಪತಿಯ ಶಿರಚ್ಛೇದನ ಮಾಡಿದ್ದು ನಂತರ ಗಣಪತಿಗೆ ಆನೆಯ ರುಂಡವನ್ನು ಪ್ರದಾನಿಸಿದರು ಎಂಬ ಮಾಹಿತಿ ಇದೆ. ವಿಶೇಷ ಎಂದರೆ ಈ ಸ್ಥಳದಲ್ಲಿ ಗಣಪತಿಯನ್ನು ಶಿರಚ್ಛೇದನ ಗೊಂಡ ರೂಪದಲ್ಲಿ ಪೂಜಿಸಲಾಗುತ್ತದೆ. ಒಟ್ಟಿನಲ್ಲಿ ಹೇಳುವುದಾದರೆ ಸದಾ ಚಳಿಯಿಂದ ಕೂಡಿರುವ ಈ ಗೌರಿಕುಂಡ ಪ್ರದೇಶಕ್ಕೆ ಹೋಗುವವರು ಪೂರಕ ವ್ಯವಸ್ಥೆಯನ್ನು ಮಾಡಿಕೊಂಡು ಹೋಗುವುದು ಸೂಕ್ತ. ಗೌರಿಕುಂಡ ಹೃಷಿಕೇಶ ದಿಂದ ಎರಡು ನೂರಾಹತ್ತು ಕಿಲೋಮೀಟರ್ ಹಾಗೂ ಗಂಗೋತ್ರಿ ಇಂದ ಮೂರುನೂರಾ ಮೂವತ್ನಾಲ್ಕು ಕಿಲೋಮೀಟರ್ ದೂರದಲ್ಲಿದೆ.

ಸ್ನೇಹಿತರೇ ನೀವು ಕೂಡ ನಮ್ಮ ಭಾರತ ದೇಶದ ದೇವರ ಭೂಮಿ ಎಂದು ಕರೆಯಲ್ಪಡುವ ಉತ್ತರಖಾಂಡಕ್ಕೆ ಏನಾದರೂ ಪ್ರವಾಸವನ್ನು ಕೈಗೊಂಡಲ್ಲಿ ಈ ಗೌರಿಕುಂಡ ಎಂಬ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿ ನಿಮ್ಮ ಜನ್ಮವನ್ನು ಪಾವನ ಮಾಡಿಕೊಳ್ಳಿ. ಆ ಭಗವಂತನ ಕೃಪಾಕಟಾಕ್ಷ ಸದಾ ನಮ್ಮೆಲ್ಲರ ಮೇಲಿರಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತಾ ನಿಮಗೆ ಈ ಸ್ಥಳದ ಪರಿಚಯವನ್ನು ಮಾಡಿದ್ದೇವೆ.

By

Leave a Reply

Your email address will not be published. Required fields are marked *