ಯಾವುದೇ ಅಡುಗೆ ಮನೆಗೆ ಪ್ರವೇಶಿಸಿದರೂ ಅಲ್ಲಿ ನಿಮಗೆ ಕಡಲೆ ಹಿಟ್ಟು ಕಂಡುಬರುವುದು. ಕಡಲೆ ಹಿಟ್ಟನ್ನು ಬಳಸಿಕೊಂಡು ಹಲವಾರು ರೀತಿಯ ಖಾದ್ಯ ತಯಾರಿಸಿಕೊಳ್ಳಬಹುದು. ಕಡಲೆ ಹಿಟ್ಟು ಅಡುಗೆಗೆ ಮಾತ್ರವಲ್ಲದೆ, ಸೌಂದರ್ಯ ಕಾಪಾಡುವಲ್ಲಿಯೂ ಪ್ರಮುಖ ಪಾತ್ರ ವಹಿಸುವುದು. ಕಡಲೆ ಹಿಟ್ಟಿನಲ್ಲಿ ಇರುವಂತಹ ಕೆಲವೊಂದು ಗುಣಗಳಿಂದಾಗಿ ಇದನ್ನು ಹಿಂದಿನಿಂದಲೂ ಸೌಂದರ್ಯ ವರ್ಧಕವಾಗಿ ಬಳಸಿಕೊಳ್ಳಲಾಗುತ್ತಿತ್ತು. ಸಾಬೂನು ಬರುವುದಕ್ಕೂ ಮೊದಲು ಹೆಚ್ಚಿನವರು ಕಡಲೆ ಹಿಟ್ಟನ್ನು ಸಾಬೂನಿನ ರೂಪದಲ್ಲಿ ಬಳಕೆ ಮಾಡಿಕೊಳ್ಳುತ್ತಿದ್ದರು. ಇಂದಿನ ದಿನಗಳಲ್ಲಿ ಕೆಲವೊಂದು ಸಾಬೂನು ಹಾಗೂ ಕ್ರೀಮ್ ಗಳಲ್ಲಿ ಕಡಲೆ ಹಿಟ್ಟು ಬಳಕೆ ಮಾಡುವುದನ್ನು ನಾವು ನೋಡಿದ್ದೇವೆ. ಮಾರುಕಟ್ಟೆಯಲ್ಲಿ ಸಿಗುವಂತಹ ಸೌಂದರ್ಯವರ್ಧಕಗಳನ್ನು ಬಳಸಿಕೊಳ್ಳುವ ಬದಲು ಕಡಲೆಹಿಟ್ಟನ್ನು ಬಳಸಿದರೆ ಅದರಿಂದ ಹಲವಾರು ರೀತಿಯ ಸೌಂದರ್ಯ ಲಾಭಗಳು ನಮಗೆ ಸಿಗುವುದು. ಕಡಲೆ ಹಿಟ್ಟಿನಿಂದ ದೊರೆಯುವ ಸೌಂದರ್ಯ ಲಾಭಗಳು ಯಾವುದು ಎಂದು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಕಡಲೆ ಹಿಟ್ಟನ್ನು ನಾವು ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಇದು ನಮ್ಮ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ಚರ್ಮ ಸುಕ್ಕುಗಟ್ಟದಂತೆ ತಡೆದು , ಯಾವುದೇ ರೀತಿಯ ಚರ್ಮದ ಕಾಯಿಲೆ ಬರದಂತೆ ತಡೆಯುತ್ತದೆ. ಇತೀಚಿನ ದಿನಗಳಲ್ಲಿ ಅತಿಯಾದ ಚರ್ಮ ರೋಗ ಬರಲು ಮುಖ್ಯ ಕಾರಣ ಎಂದರೆ ಅತಿಯಾದ ಸೋಪ್, ಶಾಂಪೂ ಹಾಗೂ ದಿಯಿದ್ರೆಂಟ್ ಗಳ ಬಳಕೆ ಎನ್ನಬಹುದು. ಇವುಗಳಲ್ಲಿ ಹೆಚ್ಚಾಗಿ ರಾಸಾಯನಿಕಗಳು ಇರುವುದರಿಂದ ಇವುಗಳ ಬಳಕೆಯನ್ನು ಕಡಿಮೆ ಮಾಡುವುದು ಒಳ್ಳೆಯದು. ನಾವು ಬರೀ ತಿನ್ನುವ ಪದಾರ್ಥಗಳು , ಉಸಿರಾಡುವ ಗಾಳಿಯ ಬಗ್ಗೆ ಮಾತ್ರ ಎಚ್ಚರಿಕೆ ವಹಿಸದೆ ನಾವು ನಮ್ಮ ಚರ್ಮಕ್ಕೆ ಹಚ್ಚುವ ರಾಸಾಯನಿಕ ವಸ್ತುಗಳ ಬಗ್ಗೆಯೂ ಸಹ ಗಮನ ನೀಡಬೇಕು. ರಾಸಾಯನಿಕ ಮಿಶ್ರಿತ ಸೋಪು , ಶಾಂಪೂ ಬಳಕೆ ಮಾಡುವ ಬದಲು ಕಡಲೆ ಹಿಟ್ಟು ನಮ್ಮ ಚರ್ಮಕ್ಕೆ ಬಹಳ ಉತ್ತಮ.
ಕಡಲೆ ಹಿಟ್ಟನ್ನು ನಮ್ಮ ಚರ್ಮಕ್ಕೆ ಹೇಗೆ ಬಳಕೆ ಮಾಡಬಹುದು ಎಂದು ನೋಡುವುದಾದರೆ , ಸ್ನಾನಕ್ಕೆ ಸೋಪಿನ ಬದಲು ಕಡಲೆ ಹಿಟ್ಟನ್ನು ನುಣ್ಣಗೆ ಪುಡಿ ಮಾಡಿಕೊಂಡು ಸ್ವಲ್ಪ ಕಡಲೆ ಹಿಟ್ಟನ್ನು ತೆಗೆದುಕೊಂಡು ಅದಕ್ಕೆ ನೀರು ಹಾಕಿ ಪೇಸ್ಟ್ ರೀತಿ ಮಾಡಿಕೊಂಡು , ನಮ್ಮನಮ್ಮ ದೇಹಕ್ಕೆ ಹಚ್ಚಿಕೊಂಡು ಚರ್ಮದ ರೋಮಗಳು ಇರುವ ವಿರುದ್ಧ ದಿಕ್ಕಿನಲ್ಲಿ ನಯವಾಗಿ ತಿಕ್ಕಬೇಕು. ಈ ರೀತಿಯಾಗಿ ಸ್ನಾನಕ್ಕೆ ಕಡಲೆ ಹಿಟ್ಟನ್ನು ಬಳಸಬಹುದು. ಇದನ್ನು ಮಕ್ಕಳಿಗೂ ಸಹ ಬಳಕೆ ಮಾಡಬಹುದು ಯಾವುದೇ ಅಡ್ಡ ಪರಿಣಾಮ ಇರುವುದಿಲ್ಲ. ಈಗಷ್ಟೇ ಜನಿಸಿದ ಮಗುವಿನಿಂದ ಹಿಡಿದು ವಯಸ್ಕರು ಎಲ್ಲರೂ ಬಳಸಬಹುದು.
ವೈವಿಧ್ಯಮಯ ಗುಣಗಳನ್ನು ಹೊಂದಿರುವಂತಹ ಕಡಲೆಹಿಟ್ಟನ್ನು ಬೇರೆ ಸಾಮಗ್ರಿಗಳ ಜತೆಗೆ ಮಿಶ್ರಣ ಮಾಡಿಕೊಂಡು ಬಳಸಿದರೆ ಆಗ ಅದರಿಂದ ಹಲವಾರು ಲಾಭಗಳು ತ್ವಚೆಗೆ ಸಿಗುವುದು. ಕಡಲೆಹಿಟ್ಟನ್ನು ಬಳಸಿಕೊಂಡು ಅದರಿಂದ ಮಾಸ್ಕ್ ಅನ್ನು ತಯಾರಿಸುವುದು ಮಾತ್ರವಲ್ಲದೆ ಹಲವಾರು ರೀತಿಯ ಚರ್ಮದ ಸಮಸ್ಯೆಗಳಿಗೆ ಇದರಿಂದ ನೆರವಾಗುವುದು. ಇದು ಮಾರುಕಟ್ಟೆಯಲ್ಲಿ ತುಂಬಾ ಸುಲಭವಾಗಿ ಸಿಗುವ ಕಾರಣದಿಂದ ಇದನ್ನು ತ್ವಚೆಯ ಆರೈಕೆಯಲ್ಲಿ ಬಳಸಿಕೊಂಡು ಅದರ ಲಾಭ ಪಡೆಯಬಹುದು.