ವಿದ್ಯಾರ್ಥಿ ಜೀವನ ಎಂದಮೇಲೆ ಪಾಸು, ಫೇಲ್ ಸಹಜ ಹೆಚ್ಚಿನ ವಿದ್ಯಾರ್ಥಿಗಳು ಫೇಲಾದ ತಕ್ಷಣ ತಮ್ಮ ಜೀವನವೇ ಇಲ್ಲಿಗೆ ಮುಗಿಯಿತು ಎಂದು ಭರವಸೆಯನ್ನು ಕಳೆದುಕೊಳ್ಳುತ್ತಾರೆ ಆದರೆ ರಮೇಶ್ ಎಂಬುವವರು ಪಿಯುಸಿಯಲ್ಲಿ ಫೇಲ್ ಆಗಿ ಅದನ್ನೆ ಚಾಲೆಂಜ್ ಆಗಿ ತೆಗೆದುಕೊಂಡು ಸಾಧನೆ ಮಾಡಿದ ಕಥೆಯನ್ನು ಈ ಲೇಖನದ ಮೂಲಕ ತಿಳಿಯೋಣ.
ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಉಪ್ಪಾರಹಳ್ಳಿ ಎಂಬ ಊರಿನ ಬಡಕುಟುಂಬದಲ್ಲಿ ಜನಿಸಿದ ರಮೇಶ್ ಎಂಬ ಯುವಕ 10 ವರ್ಷಗಳ ಹಿಂದೆ ತಾವು ಪಿಯುಸಿ ಓದುತ್ತಿರುವಾಗ ಇಂಗ್ಲೀಷ್ ವಿಷಯದಲ್ಲಿ ಫೇಲ್ ಆಗಿದ್ದರು. ಆಗ ದಾರಿಕಾಣದ ರಮೇಶ್ ಅವರು ಮಾಲೂರು ಸೇರಿದಂತೆ ಹಲವು ಕಡೆ ಕೂಲಿ ಕೆಲಸ ಮಾಡುತ್ತಿದ್ದರು ಆದರೆ ಅವರಿಗೆ ತಾವು ಪಿಯುಸಿಯಲ್ಲಿ ಇಂಗ್ಲೀಷ್ ವಿಷಯದಲ್ಲಿ ಫೇಲ್ ಆಗಿದ್ದು ಮರೆಯಲು ಆಗದೆ ತಾವು ಎಲ್ಲಿ ಸೋತಿದ್ದೇನೆ ಅದರಿಂದಲೇ ಮೇಲೆ ಬರಬೇಕು ಎಂದು ನಿರ್ಧರಿಸಿದರು. ಇಂಗ್ಲೀಷ್ ಕಲಿಯಲೇಬೇಕು ಎಂದು ಪಣತೊಟ್ಟ ರಮೇಶ್ ಅವರಿಗೆ ಟ್ಯೂಷನ್ ಗೆ ಹಣಕೊಡಲು ಕಷ್ಟವಾಯಿತು ತನ್ನ ಅಕ್ಕನ ಚಿನ್ನದ ಉಂಗುರವನ್ನು ಮಾರಿ ಟ್ಯೂಷನ್ ಗೆ ಸೇರಿಕೊಂಡರು. ನಂತರ ಪಿಯುಸಿ ಪಾಸ್ ಮಾಡಿಕೊಂಡು ಬೆಂಗಳೂರಿಗೆ ಪದವಿ ಕಾಲೇಜಿಗೆ ಸೇರಿದರು. ಬೆಂಗಳೂರಿನಲ್ಲಿ ತನಗೆ ಸಿಕ್ಕ ಪ್ರಾಧ್ಯಾಪಕರು, ಗೆಳೆಯರ ಸಹಾಯದೊಂದಿಗೆ ಇಂಗ್ಲೀಷ್ ಕಲಿಯಲು ಪ್ರಾರಂಭಿಸಿದರು. ಅವರ ಕಠಿಣ ಪರಿಶ್ರಮದ ಫಲವಾಗಿ ಇಂದು ಇಂಗ್ಲೀಷ್ ಪಂಡಿತರಾಗಿದ್ದಾರೆ ಅವರು ಮಲೇಷ್ಯಾ, ಸಿಂಗಪುರ ಮುಂತಾದ ದೇಶಗಳಲ್ಲಿ ಟೂರ್ ಗೈಡ್ ಆಗಿ ಕೆಲಸ ಮಾಡಿದ್ದಾರೆ. ಹಲವಾರು ಕಾಲೇಜುಗಳಿಗೆ ಇಂಗ್ಲೀಷ್ ರಿಸೋರ್ಸ್ ಪರ್ಸನ್ ಆಗಿ ಹೋಗುತ್ತಾರೆ. ಅಷ್ಟೆ ಅಲ್ಲದೆ ಗೂಗಲ್ ನಲ್ಲಿ ಹುಡುಕಿದರೂ ಸಿಗದೇ ಇರುವ ಇಂಗ್ಲಿಷ್ ನ 5,000 ಸೂತ್ರಗಳನ್ನು ಬರೆದು ಹಲವು ವಿಶ್ವ ದಾಖಲೆಗಳನ್ನು ಮಾಡಿದ್ದಾರೆ.
ಇಂಗ್ಲೀಷ್ ಬಗ್ಗೆ ಏನೂ ಗೊತ್ತಿರದೆ ಪ್ರಾರಂಭಿಕ ಹಂತದಲ್ಲಿ ಪ್ರಾರಂಭಿಸಿ ಇಂದು ಈ ಮಟ್ಟಕ್ಕೆ ಬೆಳೆದಿದ್ದೇನೆ, ಪಿಯುಸಿಯಲ್ಲಿ ಇಂಗ್ಲೀಷ್ ನಲ್ಲಿ ಫೇಲಾಗಿರುವುದು ಯಶಸ್ಸಿನ ಮೊದಲ ಹೆಜ್ಜೆ ಎಂದು ಅವರು ಹೇಳಿಕೊಂಡಿದ್ದಾರೆ. ತಮ್ಮ ಇಂಗ್ಲೀಷ್ ಪಾಂಡಿತ್ಯಕ್ಕೆ ಅಮೆರಿಕದ ಬುಕ್ ಆಫ್ ರೆಕಾರ್ಡ್ಸ್, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, ಎಕ್ಸ್ ಕ್ಲೂಸಿವ್ ವರ್ಲ್ಡ್ ರೆಕಾರ್ಡ್ಸ್, ಬ್ರಾವೋ ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್, ಹೈ ರೇಂಜ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್, ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್, ಫೆಂಟಾಸ್ಟಿಕ್ ಅಚೀವ್ಮೆಂಟ್ ಅವಾರ್ಡ್ ಹೀಗೆ 4 ಅಂತರಾಷ್ಟ್ರೀಯ ಮಟ್ಟದ, 8 ರಾಷ್ಟ್ರೀಯ ಮಟ್ಟದ ದಾಖಲೆಯನ್ನು ಮಾಡಿದ್ದಾರೆ. ಇಷ್ಟೆ ಅಲ್ಲದೇ ರಮೇಶ್ ಅವರು ಸೌತ್ ಆಫ್ರಿಕಾ, ಇಂಗ್ಲೆಂಡ್, ಮಲೇಷ್ಯಾ, ಸಿಂಗಪೂರ್, ಜಪಾನ್ ಸೇರಿದಂತೆ 14 ದೇಶಗಳ ಶೈಲಿಯಲ್ಲಿ ಇಂಗ್ಲೀಷ್ ಮಾತನಾಡುತ್ತಾರೆ. ರಮೇಶ್ ಅವರ ತಂದೆ ಆನಂದಪ್ಪ ಅವರು ರಮೇಶ್ ಅವರ ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಮೇಶ್ ಅವರು ಒಂದು ಇಂಗ್ಲೀಷ್ ಅಕಾಡೆಮಿಯನ್ನು ಪ್ರಾರಂಭಿಸುವ ಮೂಲಕ ಸರ್ಕಾರಿ ಶಾಲಾ ಶಿಕ್ಷಕರು, ಪ್ರಾಧ್ಯಾಪಕರು, ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ವಿದ್ಯಾರ್ಥಿಗಳು, ಜನಪ್ರತಿನಿಧಿಗಳಿಗೆ ಸುಲಭವಾಗಿ ಇಂಗ್ಲೀಷ್ ಹೇಳಿಕೊಡುವ ಮೂಲಕ ಇಂಗ್ಲೀಷ್ ಕಲಿಸುವುದನ್ನು ತಮ್ಮ ವೃತ್ತಿಯಾಗಿ ಮಾಡಿಕೊಂಡಿದ್ದಾರೆ. ಇವರ ಬಳಿ ಇಂಗ್ಲೀಷ್ ಕಲಿತಿರುವ ಅದೆಷ್ಟೋ ಜನ ತಮ್ಮ ಜೀವನವನ್ನು ಉತ್ತಮವಾಗಿ ರೂಪಿಸಿಕೊಂಡಿದ್ದಾರೆ. ಮನಸ್ಸಿದ್ದರೆ ಮಾರ್ಗ ಜೀವನದಲ್ಲಿ ಹಠ ಇದ್ದರೆ ಏನನ್ನಾದರೂ ಸಾಧಿಸಬಹುದು. ಸಾಧಿಸಲು ಬಡತನ, ಜಾತಿ ಯಾವುದು ಅಡ್ಡ ಬರುವುದಿಲ್ಲ ಎಂಬುದನ್ನು ಹಳ್ಳಿ ಹುಡುಗ ರಮೇಶ್ ಅವರು ಸಾಧಿಸಿ ತೋರಿಸಿದ್ದಾರೆ. ಪಿಯುಸಿಯಲ್ಲಿ ಫೇಲಾದ ಅದೆಷ್ಟು ವಿದ್ಯಾರ್ಥಿಗಳು ಜೀವನವೇ ಮುಗಿಯಿತೆಂದು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಆದರೆ ಮನಸ್ಸಿದ್ದರೆ ಗೂಗಲ್ ಗೂ ಸಹ ಹೇಳಿಕೊಡಬಹುದು ಎಂಬುದನ್ನು ತೋರಿಸಿಕೊಟ್ಟ ರಮೇಶ್ ಅವರ ಸಾಧನೆ ಪ್ರಶಂಸನೀಯ.