ಊಟ ಇದು ದಿನನಿತ್ಯದ ಮನುಷ್ಯನ ಅವಶ್ಯಕತೆಗಳಲ್ಲಿ ಒಂದು. ಇದನ್ನು ಮಾಡಲು ಒಂದು ಸರಿಯಾದ ಕ್ರಮವಿದೆ. ಹಾಗೆಯೇ ಊಟದಲ್ಲಿ ಒಂದು ಕ್ರಮವಾದ ಆಹಾರ ಪದ್ಧತಿ ಇರಬೇಕು. ಹಾಗೆಯೇ ದಿನಕ್ಕೆ ಎಷ್ಟು ಬಾರಿ ಊಟ ಮಾಡಿದರೆ ಒಳ್ಳೆಯದು? ಎನ್ನುವುದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಆಯುರ್ವೇದವು ದಿನಕ್ಕೆ ಎರಡು ಹೊತ್ತು ಊಟ ಮಾಡಬೇಕು ಎಂದು ಹೇಳಿದೆ. ಮೂರು ಹೊತ್ತು ಊಟ ಮಾಡಬಾರದು. ಸೂರ್ಯನಿಗೂ ಹಾಗೂ ನಮ್ಮ ಜಠರಕ್ಕೂ ಒಂದು ಅವಿನಾಭಾವ ಸಂಬಂಧವಿದೆ. ಬೆಳಿಗ್ಗೆ ಜಠರದ ವ್ಯವಸ್ಥೆ ಮಂದವಾಗಿರುತ್ತದೆ. ಹಾಗಾಗಿ ಸೂರ್ಯ ಉದಯಿಸಿದ ನಂತರ ಆಹಾರ ಸೇವನೆ ಮಾಡಬೇಕು. ಬೆಳಿಗ್ಗೆ ಹೊತ್ತು ಊಟ ಮಾಡುವವರು ಬಹಳ ಕಡಿಮೆ. ಬೆಳಿಗ್ಗೆ ಊಟ ಮಾಡಿದರೆ ಯಾವುದೇ ರೀತಿಯ ತೊಂದರೆಯಿಲ್ಲ. ಆದರೆ ದಿನಕ್ಕೆ ಮೂರು ಬಾರಿ ಊಟ ಮಾಡಬಾರದು. ಆಗ ಆಹಾರ ದೇಹದಲ್ಲಿ ಜೀರ್ಣವಾಗುವುದಿಲ್ಲ. ಮೂರುತಾಸಿಗಿಂತ ಹೆಚ್ಚಿನ ಸಮಯ ಜೀರ್ಣವಾಗದಿದ್ದರೆ ಆಹಾರ ಕೊಳೆತುಹೋಗುತ್ತದೆ.
ಹಾಗೆಯೇ ಸೂರ್ಯ ಮುಳುಗುವ ಮೊದಲು ಆಹಾರವನ್ನು ಸೇವಿಸಬೇಕು. ಅಂದರೆ ಸುಮಾರು 6 ರಿಂದ 7 ಗಂಟೆಯ ಒಳಗೆ ಆಹಾರ ಸೇವಿಸಬೇಕು. ಅದನ್ನು ತುಂಬಾ ಜಾಸ್ತಿ ಸೇವಿಸಬಾರದು. ಲಘುವಾಗಿ ಸೇವಿಸಬೇಕು. ಎಲ್ಲರಿಗೂ ಸಂಜೆ ಆಹಾರವನ್ನು ಸೇವಿಸುವ ಅಭ್ಯಾಸ ಇರುವುದಿಲ್ಲ. ಮಧ್ಯಾಹ್ನ ಊಟ ಮಾಡಿದರೆ ನೇರವಾಗಿ ರಾತ್ರಿಯೇ ಊಟ ಮಾಡುತ್ತಾರೆ. ಈಗಲೂ ಕೆಲವು ಆದಿವಾಸಿ ಜನಾಂಗಗಳಲ್ಲಿ ಒಂದು ರೂಢಿಯಿದೆ. ಅದೇನೆಂದರೆ ಬೆಳಿಗ್ಗೆ ಎದ್ದ ತಕ್ಷಣ ಹೊಟ್ಟೆ ತುಂಬಾ ಮುದ್ದೆ, ಅನ್ನ ಮತ್ತು ಸಾರು ಊಟ ಮಾಡುವುದು. ಹಾಗೆಯೇ ಮಧ್ಯಾಹ್ನ ಎಳೆನೀರು ಅಥವಾ ಮಜ್ಜಿಗೆಯನ್ನು ಕುಡಿಯುವುದು. ಸಂಜೆ ಕೆಲಸ ಮುಗಿಸಿ ಬಂದು ಹೊಟ್ಟೆ ತುಂಬಾ ಊಟ ಮಾಡಿ ರಾತ್ರಿ ಹಾಗೆಯೇ ಮಲಗುವುದು.
ಹೆಚ್ಚಾಗಿ ಊಟದಲ್ಲಿ ಎಣ್ಣೆಯ ಪದಾರ್ಥಗಳನ್ನು ಸೇವನೆ ಮಾಡಬಾರದು. ದಿನನಿತ್ಯ ಎಣ್ಣೆಯ ಪದಾರ್ಥದ ಸೇವನೆ ಒಳ್ಳೆಯದಲ್ಲ. ಊಟದಲ್ಲಿ ಚಪಾತಿ, ಅನ್ನ, ಉಪ್ಪು, ಉಪ್ಪಿನಕಾಯಿ, ಪಲ್ಯ ಇವುಗಳು ಇರಬೇಕು. ಊಟದ ಕೊನೆಯಲ್ಲಿ ಮಜ್ಜಿಗೆಯನ್ನು ಸೇವನೆ ಮಾಡಬೇಕು. ಇಲ್ಲವಾದಲ್ಲಿ ಅನ್ನಕ್ಕೆ ಮಜ್ಜಿಗೆಯನ್ನು ಹಾಕಿ ಕಲಸಿಕೊಳ್ಳಬೇಕು. ಹಾಗೆಯೇ ಊಟವಾದ ಅರ್ಧ ಗಂಟೆಯವರೆಗೆ ನೀರು ಕುಡಿಯಬಾರದು. ಹಾಗಾಗಿ ಕೊನೆಯದಾಗಿ ಹೇಳುವುದೇನೆಂದರೆ ನಮ್ಮ ಆರೋಗ್ಯ ನಾವು ಸೇವಿಸುವ ಆಹಾರ ಪದಾರ್ಥಗಳಲ್ಲಿ ಇರುತ್ತದೆ.