ನಮಗೆಲ್ಲ ತಿಳಿದಿರುವ ಹಾಗೆ ನಮ್ಮ ದೇಹದ ಶೇಕಡ 75 ಭಾಗ ನೀರು ತುಂಬಿದೆ. ಹಾಗಾಗಿ ದೇಹದ ನೀರಿನ ಅಂಶ ಸಮತೋಲನದಲ್ಲಿರಲು ದಿನನಿತ್ಯ ಎರಡು ಲಿಟರ್ ಗಿಂತ ಹೆಚ್ಚು ನೀರು ಕುಡಿಯಬೇಕು ಎನ್ನುತ್ತಾರೆ. ಹಾಗಾದರೆ ದೇಹಕ್ಕೆ ಎಷ್ಟು ಲೀಟರ್ ನೀರಿನ ಅಗತ್ಯವಿದೆ? ನೀರು ಕುಡಿಯುವುದರಿಂದ ನಮ್ಮದೇಹಕ್ಕೆ ಯಾವ ಯಾವ ರೀತಿಯ ಪ್ರಯೋಜನಗಳು ಸಿಗುತ್ತದೆ? ಎಂಬುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ದೇಹದಲ್ಲಿ ಇರುವ ನೀರು ಬೆವರಿನ ಮೂಲಕ, ಉಸಿರಿನ ಮೂಲಕ ಹಾಗೂ ಮೂತ್ರದ ರೂಪದಲ್ಲಿ ಹೊರ ಹೋಗುತ್ತಿರುತ್ತದೆ. ಹಾಗಾಗಿ ಆಗಾಗ ನೀರು ಕುಡಿಯುತ್ತಿರಬೇಕು ಎಂದು ಹೇಳುತ್ತಾರೆ. ಒಂದು ವೇಳೆ ದೇಹಕ್ಕೆ ಅಗತ್ಯವಾದ ನೀರು ದೊರಕದೆ ಇದ್ದಲ್ಲಿ ಬಾಯಿ ಒಣಗುವಿಕೆ, ಹಳದಿ ಮೂತ್ರ, ತಲೆ ನೋವು, ಹೃದಯ ಬಡಿತವು ಏರುಪೇರಾಗುವ ಸಮಸ್ಯೆಗಳು ಕಂಡುಬರಬಹುದು. ದಿನವೂ ಎಷ್ಟು ನೀರು ಕುಡಿಯ ಬೇಕೆಂಬ ಪ್ರಮಾಣವು ಒಬ್ಬರಿಂದ ಒಬ್ಬರಿಗೆ ಬೇರೆ ಬೇರೆ ರೀತಿಯಾಗಿರುತ್ತದೆ.
ಸುತ್ತಲಿನ ಪ್ರದೇಶ ಉಷ್ಣದಿಂದ ಕೂಡಿರುವುದಾ ಅಥವಾ ತಂಪು ವಾತಾವರಣ ಇರುವುದಾ ಎನ್ನುವುದು ಹಾಗೂ ದಿನನಿತ್ಯದ ಕೆಲಸಗಳು ಹೇಗಿರುತ್ತದೆ ಎನ್ನುವುದು ನೀರಿನ ಸೇವನೆಯ ಗಣನೆಗೆ ಬರುತ್ತದೆ. ಗರ್ಭಿಣಿಯರಿಗೆ ಹಾಗೂ ಚಿಕಿತ್ಸೆ ಪಡೆಯುತ್ತಿದ್ದರೆ ಇಂಥವರಿಗೆ ನೀರಿನ ಸೇವನೆಯ ಪ್ರಮಾಣವು ಬೇರೆ ರೀತಿಯಲ್ಲಿ ಇರುತ್ತದೆ. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮೆಡಿಸಿನ್ ಸಂಸ್ಥೆಯ ಪ್ರಕಾರ 2.69 ಲೀಟರ್ ಅಷ್ಟು ನೀರನ್ನು ಮಹಿಳೆಯರು ದಿನಕ್ಕೆ ಕುಡಿಯಬೇಕು. ಅಥ್ಲೀಟ್ ಆಗಿದ್ದಲ್ಲಿ ಹೆಚ್ಚಾಗಿ ನೀರನ್ನು ಸೇವಿಸುವ ಅವಶ್ಯಕತೆ ಇರುತ್ತದೆ. ಬಾಯಾರಿಕೆಯ ಆಧಾರದ ಮೇಲೆ ಕೂಡ ನೀರಿನ ಸೇವನೆಯ ಪ್ರಮಾಣವನ್ನು ನಿರ್ಧರಿಸಬಹುದು.
ದೇಹಕ್ಕೆ ಬೇಕಾದಷ್ಟು ನೀರಿನ ಸೇವನೆ ಮಾಡುವುದು ಉತ್ತಮ. ದೇಹದ ಅಗತ್ಯಕ್ಕಿಂತಲೂ ಹೆಚ್ಚಿನ ನೀರು ಪ್ರಾಣಕ್ಕೆ ಅಪಾಯ ಉಂಟು ಮಾಡಬಹುದಂತೆ. ಸೇವಿಸುವ ನೀರು ಸ್ವಚ್ಛವಾಗಿ, ಹಿತವಾಗಿ ಹಾಗೂ ದಿನಕ್ಕೆ ದೇಹದ ಅವಶ್ಯಕತೆಗೆ ತಕ್ಕಂತೆ ಮಿತವಾಗಿರಲಿ.