ವರ್ಷಕ್ಕೆ ಒಂದು ಬಾರಿ ಮಾತ್ರ ದರ್ಶನ ನೀಡುವ ಚಿಕ್ಕಮಗಳೂರಿನ ದೇವಿರಮ್ಮನ ದೇವಸ್ಥಾನದ ಬಗ್ಗೆ ಹಾಗೂ ಅಲ್ಲಿಯ ಇತಿಹಾಸದ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ.

ಸಾಮಾನ್ಯವಾಗಿ ಭಕ್ತಾದಿಗಳು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ದೇವರಿಗೆ ನಾನಾ ರೀತಿಯ ಹರಕೆಗಳನ್ನು ಹೇಳಿಕೊಳ್ಳುತ್ತಾರೆ. ಹಣ, ಚಿನ್ನ, ಧಾನ್ಯವನ್ನು ದೇವರಿಗೆ ಸಮರ್ಪಿಸುವುದರ ಮೂಲಕ ತಮ್ಮ ಭಕ್ತಿಯನ್ನು ತೋರಿಸುತ್ತಾರೆ. ಚಿಕ್ಕಮಗಳೂರಿನಿಂದ ಸುಮಾರು 22 ಕಿ.ಮೀ ದೂರವಿರುವ ಮಲ್ಲೇನಹಳ್ಳಿ ಗ್ರಾಮದಲ್ಲಿ ದೇವಿರಮ್ಮನ ದೇವಸ್ಥಾನವಿದೆ ಈ ದೇವಸ್ಥಾನದಿಂದ ಸುಮಾರು 13 ಕಿ.ಮೀ ದೂರದಲ್ಲಿ ದೇವಿರಮ್ಮನ ಬೆಟ್ಟವಿದೆ ಇದು ರಾಜ್ಯದ ಎತ್ತರದ ಶಿಖರವಾದ ಮುಳ್ಳಯ್ಯನಗಿರಿ ಶ್ರೇಣಿಗೆ ಹೊಂದಿಕೊಂಡಂತಿದೆ. ಭಕ್ತಾದಿಗಳು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ದೇಹವನ್ನು ದಂಡಿಸಿಕೊಳ್ಳುತ್ತಾರೆ. 3,000 ಅಡಿ ಎತ್ತರವಿರುವ ಬೆಟ್ಟವನ್ನು ಬರಿಗಾಲಿನಲ್ಲಿ ನಡೆಯುತ್ತಾರೆ. ಕಾಡು ಮೇಡಿನ, ಕಲ್ಲುಮುಳ್ಳಿನ ಹಾದಿಯಲ್ಲಿ ಸಾಗಿ ದೇವಿಯ ದರ್ಶನ ಪಡೆಯುತ್ತಾರೆ.

ಈ ದೇವಿ ದರ್ಶನ ಕೊಡುವುದು ಕೇವಲ ವರ್ಷಕ್ಕೆ ಒಂದು ಬಾರಿ ಅಂದರೆ ನರಕಚತುರ್ದಶಿ ದಿನದಂದು ಬೆಟ್ಟದ ಮೇಲೆ ತನ್ನ ಮೂಲಸ್ಥಾನದಲ್ಲಿ ದರ್ಶನ ನೀಡುತ್ತಾಳೆ. ಆ ದಿನದಂದು ಮಲ್ಲೇನಹಳ್ಳಿಯಲ್ಲಿ ಇರುವ ದೇವಿರಮ್ಮನ ಉತ್ಸವ ಮೂರ್ತಿಯನ್ನು ಬೆಟ್ಟದ ಮೇಲೆ ತಂದು ಇಡಲಾಗಿರುತ್ತದೆ. ಆ ಬೆಟ್ಟವನ್ನು ಬರಿಗಾಲಿನಲ್ಲಿ ಹತ್ತಿ ದೇವಿಯ ದರ್ಶನ ಪಡೆದು ಪುನೀತರಾಗುತ್ತಾರೆ. ಬೆಟ್ಟ ಹತ್ತುವಾಗ ಆಹಾರ ತೆಗೆದುಕೊಳ್ಳುವುದಿಲ್ಲ ಬೆಟ್ಟದಲ್ಲಿ ಸಂಜೆ ಸೌದೆಯನ್ನು ತೆಗೆದುಕೊಂಡು ಹೋಗಿ ದೀಪ ಹಚ್ಚುತ್ತಾರೆ. ದೀಪ ಬೆಳಗಿದ ನಂತರ ಆಹಾರ ಸ್ವೀಕರಿಸುತ್ತಾರೆ. ಹೀಗೆ ಮಾಡಿದರೆ ತಮ್ಮ ಇಷ್ಟಾರ್ಥವನ್ನು ದೇವಿ ಪೂರೈಸುತ್ತಾಳೆ ಎಂಬ ನಂಬಿಕೆಯಿದೆ.

ದೇವಿರಮ್ಮ ತಾಯಿ ಚಾಮುಂಡೇಶ್ವರಿ ತಾಯಿಯ ಅವತಾರವಾಗಿದ್ದು. ಮಹಿಷಾಸುರನನ್ನು ಸಂಹರಿಸಿದ ನಂತರವು ಚಾಮುಂಡೇಶ್ವರಿಯ ಕೋಪ ತಣ್ಣಗಾಗಿರಲಿಲ್ಲ ತನ್ನ ಕೋಪಕ್ಕೆ ಭಕ್ತರು ತುತ್ತಾಗದಿರಲಿ ಎಂದು ಚಂದ್ರ ದ್ರೋಣ ಪರ್ವತದ ತಪ್ಪಲಿಗೆ ಆಗಮಿಸುತ್ತಾಳೆ. ಆಗ ಈ ಪರ್ವತದಲ್ಲಿ 5 ಜನ ಸಿದ್ಧ ಪುರುಷರು ನೆಲೆಸಿರುತ್ತಾರೆ. ಅವರಿಗೆ ದೇವಿಯು ತಾನು ನೆಲೆಸಲು ಸ್ಥಳ ನೀಡುವಂತೆ ಕೇಳುತ್ತಾಳೆ. ಆಗ ಅವರು ತಾವು ಪುರುಷರಾಗಿರುವುದರಿಂದ ತಮ್ಮಿಂದ ಅಣತಿ ದೂರದಲ್ಲಿರುವ ಬೆಟ್ಟದಲ್ಲಿ ನೆಲೆಸುವಂತೆ ಹೇಳುತ್ತಾರೆ. ಅಂತೆಯೇ ಬೆಟ್ಟದಲ್ಲಿ ಹೋಗಿ ಚಾಮುಂಡೇಶ್ವರಿ ದೇವಿ ನೆಲೆಸುತ್ತಾಳೆ ಅಂದಿನಿಂದ ದೇವಿರಮ್ಮ ಎಂದು ಕರೆಸಿಕೊಳ್ಳುತ್ತಾಳೆ. ದೇವಿಯ ದರ್ಶನಕ್ಕಾಗಿ ಕಡಿದಾದ ಬೆಟ್ಟ ಏರಿ ಬರಬೇಕಾಗಿರುವುದರಿಂದ ಭಕ್ತರ ಕಷ್ಟವನ್ನು ನೋಡಲಾಗದೆ ಈಕೆ ಬೆಟ್ಟದ ಕೆಳಗಿರುವ ಗ್ರಾಮದಲ್ಲಿ ಬಂದು ನೆಲೆಸುತ್ತಾಳೆ. ವರ್ಷಕ್ಕೆ ಒಮ್ಮೆ ಮಾತ್ರ ಬೆಟ್ಟದಮೇಲೆ ಭಕ್ತಾದಿಗಳಿಗೆ ದರ್ಶನ ಕೊಡುತ್ತಿದ್ದಾಳೆ.

ದೇವಿಯ ಇನ್ನೊಂದು ಪವಾಡವೆಂದರೆ ನರಕ ಚತುರ್ದಶಿಯ ಮರುದಿನ ಮಲ್ಲೇನಹಳ್ಳಿಯಲ್ಲಿರುವ ದೇವಸ್ಥಾನದ ಬಾಗಿಲಿಗೆ ಹಾಕಿದ ಪರದೆ ತನ್ನಿಂತಾನೇ ತೆರೆದುಕೊಳ್ಳುತ್ತದೆ. ಈ ಪವಾಡ ನೋಡಲು ಬಹಳಷ್ಟು ಸಂಖ್ಯೆಯ ಜನ ನೆರೆದಿರುತ್ತಾರೆ. ಈ ಸಂದರ್ಭದಲ್ಲಿ ಬೆಟ್ಟದಲ್ಲಿ ನೆಲೆಸಿರುವ ದೇವಿಯು ಗಾಳಿಯ ರೂಪದಲ್ಲಿ ಗರ್ಭಗುಡಿಗೆ ಬಂದು ಸೇರುತ್ತಾಳೆ ಎಂಬ ಪ್ರತೀತಿ ಇದೆ ಈ ಸಂದರ್ಭದಲ್ಲಿ ಅರ್ಚಕರು ಅಷ್ಟ ದಿಕ್ಕುಗಳಲ್ಲಿ ವಿಶೇಷ ಪೂಜೆಯನ್ನು ನಡೆಸಿ ದೇವಾಲಯದ ಪ್ರದಕ್ಷಿಣೆ ಬರುತ್ತಾರೆ ಅವರ ಪ್ರದಕ್ಷಿಣೆ ಮುಗಿಯುತ್ತಿದ್ದಂತೆ ಗಂಟೆ ವಾದ್ಯಗೋಷ್ಠಿಗಳು ಮೊಳಗುತ್ತವೆ ನಂತರ ದೇವಾಲಯದ ಬಾಗಿಲಿನ ಪರದೆ ತೆರೆದುಕೊಳ್ಳುತ್ತದೆ. ನಂತರದ 3 ದಿನ ದೇವಿಯ ಉತ್ಸವ ನಡೆಯುತ್ತದೆ. ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಬಳೆಗಳನ್ನು, ಬಟ್ಟೆಗಳನ್ನು, ತುಪ್ಪವನ್ನು ಅರ್ಪಿಸುತ್ತಾರೆ. ಈಕೆ ಹೂ ಪ್ರಸಾದವನ್ನು ಕರುಣಿಸುವುದರ ಮೂಲಕ ಭವಿಷ್ಯವನ್ನು ನುಡಿಯುತ್ತಾಳೆ. ಭಕ್ತಾದಿಗಳು ಯಾವುದೇ ಬೇಡಿಕೆಯನ್ನು ಇಟ್ಟು ಹೂ ಕೇಳಿದಾಗ ದೇವಿಯು ಬಲಗಡೆ ಹೂವನ್ನು ಕರುಣಿಸಿದರೆ ಬೇಡಿಕೆ ಈಡೇರುತ್ತದೆ ಎಡಗಡೆ ಹೂ ಕರುಣಿಸಿದರೆ ಬೇಡಿಕೆ ಈಡೇರುವುದಿಲ್ಲ ಎಂದು ನಂಬಲಾಗಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!