ಕಲ್ಲಿಗೆ ಮೌಲ್ಯ ಅನ್ನುವುದು ಇಲ್ಲ. ಆದರೆ ಅದು ಶಿಲೆಯಾದಾಗ ಎಲ್ಲರೂ ಅದಕ್ಕೆ ಪೂಜೆ ಮಾಡುತ್ತಾರೆ. ನಮ್ಮ ಜೀವನ ಕೂಡ ಹಾಗೆ. ನಮ್ಮ ಜೀವನ ಸಫಲವಾಗುವವರೆಗೂ ಯಾರೂ ಕಾಳಜಿ ಮಾಡುವುದಿಲ್ಲ. ಏಕೆಂದರೆ ಇಲ್ಲಿ ಗೆಲ್ಲುವ ಕುದುರೆಗೆ ಮಾತ್ರ ಬೆಲೆ ಇರುತ್ತದೆ. ಮನುಷ್ಯ ತನ್ನ ಕರ್ಮದಿಂದ ಗುರುತಿಸಿಕೊಳ್ಳಬೇಕೇ ಹೊರತು ತನ್ನ ಜನ್ಮದಿಂದಲ್ಲ. ನಾವು ಇಲ್ಲಿ ಕ್ರಿಕೆಟ್ ಲೋಕದ ಸಿಡಿಲು ಕ್ರಿಸ್ ಗೇಲ್ ನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಸಣ್ಣ ಗುಡಿಸಿಲಿನಲ್ಲಿ ಹುಟ್ಟಿದ ಕ್ರಿಸ್ ಗೇಲ್ ಕ್ರಿಕೆಟ್ ಸ್ಟಾರ್ ಆಗಿದ್ದು ಒಂದು ರೋಚಕ ಅಧ್ಯಾಯ ಎಂದು ಹೇಳಬಹುದು. ಇವನ ಕಥೆ ಕೇಳಿದರೆ ಮೈಯಲ್ಲಿ ಕರೆಂಟ್ ಪಾಸಾಗುತ್ತದೆ. 1979 ಸೆಪ್ಟೆಂಬರ್ 21ರಂದು ಜಮೈಖಾದ ಒಂದು ಸಣ್ಣ ಹಳ್ಳಿಯಲ್ಲಿ ಇವರು ಜನಿಸಿದರು. ಇವರ ತಂದೆತಾಯಿಗೆ ಒಟ್ಟು ಆರು ಮಂದಿ ಮಕ್ಕಳು. ಇವರು ಐದನೆಯವರು. ಕಡುಬಡತನ ಇದ್ದುದರಿಂದ 6 ಮಕ್ಕಳನ್ನು ಸಾಕಲು ಬಹಳ ಕಷ್ಟವಾಗುತ್ತಿತ್ತು. ಗೇಲ್ ಗೆ ಶಾಲೆಯ ಫೀಸ್ ಕಟ್ಟಲು ಸಹ ದುಡ್ಡಿರಲಿಲ್ಲ. ಇದಕ್ಕಾಗಿ ಇವರು ಕಸದ ಗುಂಡಿಯಲ್ಲಿ ಸಿಗುತ್ತಿದ್ದ ಬಾಟಲಿಯನ್ನು ಹೆಕ್ಕಿ ಮಾರಾಟ ಮಾಡಿದರೂ ಶಾಲೆಯ ಫೀಸ್ ಗೆ ಹಣ ಸಾಕಾಗುತ್ತಿರಲಿಲ್ಲ. ಆದರೂ 10ನೇ ತರಗತಿಗೆ ಓದನ್ನು ಬಿಡುವ ಪರಿಸ್ಥಿತಿ ಬಂತು.

ಒಂದು ಹೊತ್ತಿನ ಊಟಕ್ಕೂ ಗತಿ ಇರಲಿಲ್ಲ. ಅದೆಷ್ಟೋ ಬಾರಿ ಹಸಿವು ಇವರನ್ನು ಕದಿಯುವಂತೆ ಮಾಡಿತ್ತು. ಆಗ ಗೇಲ್ ಗೆ ತಾನೇನಾದರೂ ಸಾಧನೆ ಮಾಡಬೇಕು ಎಂಬ ಹಸಿವು ಹೆಚ್ಚಾಗಿದ್ದು. ಇವರಿಗೆ ಕ್ರಿಕೆಟ್ ಎಂದರೆ ಪಂಚಪ್ರಾಣ. ಸಮಯ ಸಿಕ್ಕಾಗಲೆಲ್ಲ ಕ್ರಿಕೆಟ್ ಆಡುತ್ತಿದ್ದರು. ವಿಶೇಷ ಅಂದರೆ ಇವರಿಗೆ ರನ್ ಹೊಡೆದು ಓಡುವುದು ಇಷ್ಟವಿರಲಿಲ್ಲ. ಹಾಗಾಗಿ ಅತೀ ಹೆಚ್ಚು ಸಿಕ್ಸರ್ ಹೊಡೆಯಲು ಪ್ರಯತ್ನ ಮಾಡುತ್ತಿದ್ದರು. ಆ ಪ್ರಯತ್ನವೇ ಇಂದು ಅವರನ್ನು ‘ಸಿಕ್ಸರ್ ಕಿಂಗ್’ ಪಟ್ಟದಲ್ಲಿ ಕೂರಿಸಿದೆ. ಇವರ ಆಟ ನೋಡಿದ ಲೂಕಸ್ ಕ್ಲಬ್ ಇವರನ್ನು ಕ್ಲಬ್ ಗೆ ಸೇರಿಸಿಕೊಳ್ಳುತ್ತದೆ. ಇದು ಇವರ ಜೀವನದ ಟರ್ನಿಂಗ್ ಪಾಯಿಂಟ್.

ಅಲ್ಲಿಂದ ಇವರು ಹಿಂದೆ ನೋಡುವುದೇ ಇಲ್ಲ. 19ವರ್ಷದ ವಯಸ್ಸಿನಿಂದ ಇವರಿಗೆ ಆಡಲು ಅವಕಾಶ ಸಿಗುತ್ತದೆ. ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡು ಉತ್ತಮ ರೀತಿಯಲ್ಲಿ ಪ್ರದರ್ಶನ ನೀಡುತ್ತಾರೆ. ಇವರ ಈ ಪ್ರದರ್ಶನ ಅವರನ್ನು ಇಂಟರ್ ನ್ಯಾಷನಲ್ ಟೀಮ್ ಗೆ ಆಡುವಂತೆ ಮಾಡುತ್ತದೆ. 1998 ನವೆಂಬರ್ 11ರಂದು ಇವರು ಮೊದಲ ದಿನದ ಏಕದಿನ ಪಂದ್ಯವನ್ನು ಭಾರತದ ವಿರುದ್ಧ ಆಡುತ್ತಾರೆ. ಇದಾಗಿ 11 ತಿಂಗಳ ನಂತರ ಟೆಸ್ಟ್ ಗೂ ಸಹ ಪಾದಾರ್ಪಣೆ ಮಾಡುತ್ತಾರೆ. ಆದರೆ ಅವರ ಅದೃಷ್ಟ ಚೆನ್ನಾಗಿ ಇರುವುದಿಲ್ಲ. ಸೋಲುಗಳು ಸಾಲು ಸಾಲಾಗಿ ಬರುತ್ತವೆ. ಆದರೆ 2002ರಲ್ಲಿ ಸತತ ಮೂರು ಸಂಚೂರಿ ಹೊಡೆದು ಬಿಸಾಕುತ್ತಾರೆ. ಅಂದು ಅವರ ಬಿರುಗಾಳಿಯ ಆರ್ಭಟ ಶುರುವಾಗಿದ್ದು. 2005ರಲ್ಲಿ ಮೈದಾನದಲ್ಲಿ ಇವರಿಗೆ ಉಸಿರಾಡಲು ಕಷ್ಟವಾಗುತ್ತದೆ. ಆದರೆ ಹೃದಯದಲ್ಲಿ ಹೋಲ್ ಇರುವುದು ತಿಳಿಯುತ್ತದೆ. ನಂತರ ಆರೋಗ್ಯವನ್ನು ಹೊಂದಿ ಮತ್ತೆ ಆಟಕ್ಕೆ ಬರುತ್ತಾರೆ.

2006ರ ಚಾಂಪಿಯನ್ ಟ್ರೋಫಿಯಲ್ಲಿ ಗೇಲ್ ಶ್ರೇಷ್ಠ ಸರಣಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುತ್ತಾರೆ. ಟಿ-20 ಕ್ರಿಕೆಟ್ ನಲ್ಲಿ ಮೊದಲ ಸಂಚೂರಿ ಹೊಡೆದ ದಾಖಲೆ ಇವರ ಹೆಸರಲ್ಲಿ ಇದೆ. ಮುಂದೆ ದಾಖಲೆಗಳ ಮೇಲೆ ದಾಖಲೆ ನಿರ್ಮಿಸುತ್ತಾರೆ. ಚೆಂಡಿಗೆ ಮೈದಾನದಲ್ಲಿನ ದಶ ದಿಕ್ಕುಗಳನ್ನು ಪರಿಚಯ ಮಾಡಿಕೊಡುತ್ತಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 515 ಸಿಕ್ಸರ್ ಬಾರಿಸಿದ್ದಾರೆ. ಒಂದೇ ಓವರ್ ನಲ್ಲಿ 6 ಫೋರ್ ಹೊಡೆದ ದಾಖಲೆ ಕೂಡ ಇವರದೇ. ಗೇಲ್ ನಟಾಶಾ ಎಂಬುವವರನ್ನು ವಿವಾಹವಾಗಿ ಈಗ ಒಂದು ಮುದ್ದಾದ ಮಗು ಇದೆ. ಕಡುಬಡತನದಲ್ಲಿ ಹುಟ್ಟಿದ ಇವರು ಈಗ ಕೋಟಿ ಕೋಟಿ ಗಳಿಸಿದ್ದಾರೆ. ಯಾವುದೇ ಬ್ರಾಂಡ್ ಪ್ರೊಮೋಟ್ ಮಾಡಬೇಕಾದರೆ ಇವರು 3ಕೋಟಿ ಚಾರ್ಜ್ ಮಾಡುತ್ತಾರೆ. ಯಾರು ಎಲ್ಲಿ ಹುಟ್ಟಿದ್ದಾರೆ ಎನ್ನುವುದು ಮುಖ್ಯವಲ್ಲ. ಸಾಧನೆ ಮಾಡುವುದು ಮುಖ್ಯ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!