ಕೋಟೆ ನಾಡು ಎಂದೆ ಪ್ರಸಿದ್ಧಿ ಪಡೆದ ಕೋಟೆನಾಡು ನಮ್ಮ ಚಿತ್ರದುರ್ಗ. ವೀರ ವನಿತೆ ಓಬವ್ವ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಪುಣ್ಯ ಸ್ಥಳ. ಗಂಡುಭೂಮಿ ಎಂದೆ ಹೆಸರು ಪಡೆದಿದೆ ಚಿತ್ರದುರ್ಗ. ಚಿತ್ರದುರ್ಗದಲ್ಲಿ ಇರುವ ಏಳು ಸುತ್ತಿನ ಕಲ್ಲಿನ ಕೋಟೆಯಲ್ಲಿ ಇರುವ ಸಿದ್ಧಿ ವಿನಾಯಕನ ಕೆಲವು ವಿಷಯಗಳು ಹಾಗೂ ಕೋಟೆಯ ಇತಿಹಾಸದ ಬಗ್ಗೆ ನಾವು ತಿಳಿಯೋಣ.
ಚಿತ್ರದುರ್ಗದ ಏಳು ಸುತ್ತಿನ ಕೋಟೆಯಲ್ಲಿ ಒಂದು ಸಿದ್ಧಿ ವಿನಾಯಕನ ವಿಗ್ರಹವಿದೆ. ಸಿದ್ಧಿ ವಿನಾಯಕನ ವಿಗ್ರಹವನ್ನು ದೇವಾಲಯದ ಹಿಂದಿರುವ ಬಂಡೆಯಂತಿರುವ ಕಲ್ಲಿನಿಂದ ತಯಾರಿಸಲಾಗಿದೆ. ಈ ಬಂಡೆಯು ಒಂದು ಆನೆ ಮಲಗಿರುವ ರೀತಿಯಲ್ಲಿ ಕಂಡು ಬರುತ್ತದೆ. ಹಾಗಾಗಿ ಆನೆಬಂಡೆ ಗಣಪತಿ ಎಂದು ಈ ದೇವಾಲಯವನ್ನು ಕರೆಯುತ್ತಾರೆ. ಅಲ್ಲಿಯೇ ಮೇಲೆ ಮೊಲದ ಆಕಾರ ಹೊಂದಿರುವ ಒಂದು ಬಂಡೆ, ಹಾಗೇ ಹಡಗಿನ ಆಕಾರ ಹೊಂದಿದ ಒಂದು ಬಂಡೆ ಇದೆ. ನೀರು ಹರಿಯುವ ಗುರುತು ಇದೆ. ಇದನ್ನು ಜಂಡಾ ಬತೇರಿ ಎನ್ನುತ್ತಾರೆ. ಯುದ್ಧ ಗೆದ್ದಾಗ ಹನುಮ ಹಾಗೂ ಗರುಡ ಧ್ವಜವನ್ನು ಇಲ್ಲಿ ಹಾರಿಸುತ್ತಿದ್ದರು. ಯುದ್ಧ ಪ್ರಾರಂಭವಾಗುವ ಸೂಚನೆ ಕೆಂಪು ಧ್ವಜ ಹಾರಿಸುವುದು. ಹಳದಿ ಬಾವುಟ ಜಾತ್ರೆ ಸಮಯದಲ್ಲಿ ಹಾರಿಸುತ್ತಿದ್ದರು. ಕಾವಲು ಕಾಯುತ್ತಿರುವ ಕಾವಲುಗಾರನಿಗೆ ಒಂದು ಇಟ್ಟಿಗೆ ಗೂಡು ಇದೆ. ಹಾಗೆಯೆ ಒಂದು ಬಂಡೆ ಕಪ್ಪೆಯ ಆಕಾರ ಹಾಗೂ ಒಂದು ಬಂಡೆ ಆಮೆ ಮೇಲೆ ಹತ್ತಿಹೋಗುತ್ತಿರುವ ರೀತಿಯ ಬಂಡೆ ಇದೆ. ಹಿಡಿಂಬ ಪಟ್ಟಣ ಎಂಬ ಹೆಸರು ದ್ವಾಪರ ಯುಗದಲ್ಲಿ ಇತ್ತು. ಚಂದ್ರಾವಳಿ ಎಂದು ಕದಂಬರ ಕಾಲದಲ್ಲಿ ಹೆಸರಿತ್ತು. ಸುಳ್ಳುಗಲ್ಲು ಎಂಬ ಹೆಸರು ಚಾಳುಕ್ಯರ ಕಾಲದಲ್ಲಿ ಇತ್ತು. ಪೆರಮಾಳಪುರ ಹೊಯ್ಸಳರ ಕಾಲದಲ್ಲಿ, ವೆಮ್ಮೆತ್ತುರಾಗಿ ಎಂದು ವಿಜಯನಗರದ ಕಾಲದಲ್ಲಿ, ಚಿತ್ರ ಕಲ್ಲು ದುರ್ಗ ಎಂದು ಪಾಳೆಗಾರರ ಕಾಲದಲ್ಲಿ, ಗಿರಿದುರ್ಗ, ಮೇಲ್ದುರ್ಗ ಎಂದೆಲ್ಲಾ ಹೆಸರು ಇತ್ತು. ನಂತರದಲ್ಲಿ ಚಿತ್ರದುರ್ಗ ಎಂಬ ಹೆಸರು ಚಿತ್ರ ವಿಚಿತ್ರ ಕಲ್ಲುಗಳಿಂದ ಬಂದಿತ್ತು.
ಏಳು ಸುತ್ತಿನ ಕೋಟೆಯ ಏಳನೆಯ ಬಾಗಿಲು ಗ್ರಾಮ ದೇವತೆಯ ಬಾಗಿಲು ಅಥವಾ ಏಕನಾಥೆಶ್ವರಿಯ ಬಾಗಿಲು ಎಂದು ಕರೆಯುತ್ತಾರೆ. ಈ ಬಾಗಿಲಿಗೆ ಏಕನಾಥೆಶ್ವರಿ ಬಾಗಿಲು ಎಂದು ಹೆಸರು ಬರಲು ಕಾರಣ ಅಲ್ಲಿಯೆ ಮೇಲಿರುವ ಏಕನಾಥೆಶ್ವರಿಯ ದೇವಾಲಯ. ಅಲ್ಲಿಯೆ ಪಕ್ಕದಲ್ಲಿ ರಾಜರು ಹಾಗೂ ಸೈನಿಕರಿಗೆ ಬೇಕಾದ ದವಸ ಧಾನ್ಯಗಳನ್ನು ಶೇಖರಣೆ ಮಾಡುವ ಗೋಡಾಣು ಇತ್ತು. ಏಳು ಸುತ್ತಿನ ಕೋಟೆಯ ಗೋಡೆಯ ಯಾವುದೆ ಕಡೆಯಲ್ಲಿ ಮುಂದೆ ನೀರು ಸಿಗುವಂತಿದ್ದರೆ ಎರಡು ಮೀನು ಕೆತ್ತಿದ್ದ ಹಾಗೂ ಕಮಲದ ಚಿತ್ರವಿರುತ್ತದೆ. ನೀರಿನಲ್ಲಿ ಮೀನು ಇರುವುದರಿಂದ ಕುಡಿಯಲು ಸಿಗುವ ನೀರು ಸಿಗುವ ಸೂಚನೆ ಅದು. ಇದೆಲ್ಲವೂ ಹಿಂದಿನ ಕಾಲದ ಸೂಚನೆಗಳು. ಹೀಗೆ ಮೀನುಗಳು ಎರಡು ಇದ್ದರೆ ನೀರು ಸಿಗುತ್ತದೆ ಎಂದು. ಒಂದೆ ಮೀನು ಇದ್ದರೆ ಅದು ಕುಡಿಯುವ ನೀರಿನ ಮೂಲಕ್ಕೆ ತಲುಪುವ ದಾರಿಯ ಸೂಚನೆ. ಏಕನಾಥೆಶ್ವರಿ ದೇವಾಲಯ ವೀರ ಮದಕರಿ ನಾಯಕನ ಕುಲದೇವತೆಯ ದೇವಾಲಯ. ಈ ದೇವಾಲಯ ಗುಹೆಯಂತಿದೆ. ಮತ್ತಿತಿಮ್ಮಣ್ಣ ನಾಯಕ ಮೊದಲ ರಾಜನ ಕಾಲದಲ್ಲಿ, ಹದಿನೈದನೆಯ ಶತಮಾನದಲ್ಲಿ ಕಟ್ಟಿದ ದೇವಾಲಯ ಈ ಏಕನಾಥೆಶ್ವರಿ ದೇವಾಲಯ. ಯಾವುದೇ ಕೆಲಸ ಕಾರ್ಯಗಳು ಮಾಡಬೇಕೆಂದರೆ ಈ ಏಕನಾಥೆಶ್ವರಿಯ ಅಪ್ಪಣೆ ಬೇಕಾಗಿತ್ತು. ಮಂಗಳವಾರ ಹಾಗೂ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಲಾಗುತ್ತಿತ್ತು. ಇದನ್ನು ಬಿಟ್ಟು ದಿನ ನಿತ್ಯ ಪೂಜೆ ತಪ್ಪದೆ ನಡೆಯುತ್ತಿತ್ತು.
ಇವುಗಳು ಚಿತ್ರದುರ್ಗದ ಏಳು ಸುತ್ತಿನ ಕೋಟೆಯ ಕೆಲವು ಐತಿಹಾಸಿಕ ವಿಚಾರಗಳು. ಏಳು ಸುತ್ತಿನ ಕೋಟೆಯು ಹದಿನೈದನೆಯ ಶತಮಾನದಿಂದ ಇಲ್ಲಿಯವರೆಗೆ ಅನೇಕ ರಾಜರ ಆಳ್ವಿಕೆಯಲ್ಲಿ, ಅನೇಕ ಯುದ್ಧ ಸಂದರ್ಭಗಳನ್ನು ದಾಟಿ ಗಟ್ಟಿಯಾಗಿ ನಿಂತಿದೆ.