ಗೌತಮ ಬುದ್ಧನ ತತ್ವಸಿದ್ಧಾಂತಗಳು ಸತ್ಯದ ಆಧಾರವಾಗಿವೆ. ಇವನು ಮಾನವತ್ವದ ಸಂಕೇತವಾಗಿದ್ದಾನೆ. ಬುದ್ಧನು ತನ್ನ ಪರಿಶ್ರಮ ಮತ್ತು ತಪಸ್ಸಿನಿಂದ ಜ್ಞಾನೋದಯವನ್ನು ಪಡೆದಿದ್ದಾನೆ. ಮನಸ್ಸನ್ನು ಕೇಂದ್ರಬಿಂದುವಾಗಿರಿಸಿಕೊಂಡು ಮನಸ್ಸೇ ಎಲ್ಲದಕ್ಕೂ ಕಾರಣ ಎಂದು ಬುದ್ಧ ಹೇಳಿದ್ದಾನೆ. ಭಯಪಟ್ಟು ಬಂದ ವ್ಯಕ್ತಿಗೆ ಬುದ್ಧ ನೀಡಿದ ಸಂದೇಶದ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಜನರನ್ನು ಗೆಲ್ಲುವುದು ವೀರತನವಲ್ಲ ಮನಸ್ಸನ್ನು ಗೆಲ್ಲುವುದು ವೀರತನ ಎಂದು ಸಾರಿದ ಗೌತಮ ಬುದ್ಧನ ಸಂದೇಶಗಳು ಮಾನವನ ಬದುಕಿಗೆ ದಾರಿ ದೀಪವಾಗಿದೆ. ಒಮ್ಮೆ ಒಬ್ಬ ಗ್ರಾಮಸ್ಥನು ಬಂದು ಬುದ್ಧನ ಹತ್ತಿರ ” ಭಗವಾನ್ ನನಗೆ ಏನನ್ನು ನೋಡಿದರೂ ಯಾರನ್ನು ನೋಡಿದರೂ ಭಯವಾಗುತ್ತದೆ. ನನ್ನ ಗತಜೀವನದಲ್ಲಿ ಕಂಡ ಕಹಿ ನೆನಪುಗಳು ನನ್ನನ್ನು ಯಾವಾಗಲೂ ಕಾಡುತ್ತವೆ. ಅವುಗಳನ್ನು ಎಷ್ಟೇ ಮರೆಯಲು ಹೊರಟರೂ ಪದೇ ಪದೇ ನೆನಪಾಗುತ್ತದೆ. ಭವಿಷ್ಯತ್ ನ್ನು ನೆನಪಿಸಿಕೊಂಡರೆ ಶೂನ್ಯವಾಗಿ ಬದುಕು ಕಾಣುತ್ತದೆ. ನನ್ನ ಬದುಕಿಗೆ ದಾರಿ ತೋರಿ” ಎಂದು ಹೇಳಿ ಬುದ್ಧನ ಪಾದಕ್ಕೆ ಎರಗಿದನು.
ಆಗ ಬುದ್ಧನು ಅಯ್ಯಾ ಏಳು ಭಯ ಪಡಬೇಡ. ಭಯ ಎನ್ನುವುದು ಸ್ವಲ್ಪವಾದರೂ ಮಾನವರಲ್ಲಿ ಸಹಜವಾಗಿ ಇರುತ್ತದೆ. ಆ ಭಯವು ಮಿತಿ ಮೀರಿದಾಗ ಹೆಚ್ಚಿನ ಅನರ್ಥ ಉಂಟಾಗುತ್ತದೆ. ಈ ಭಯವು ಮನುಷ್ಯನಲ್ಲೇ ಹುಟ್ಟಿ ವಿಷವಾಗಿ ಬೆಳೆದು ಅವನನ್ನೇ ಸಂಪೂರ್ಣವಾಗಿ ನಾಶ ಮಾಡುತ್ತದೆ. ಜೀವನದ ರುಚಿ ತಿಳಿಯದಂತೆ ಮಾಡುತ್ತದೆ. ಕೆಲವರಿಗೆ ಭಯವನ್ನು ಹೇಗೆ ದೂರ ಮಾಡಬೇಕು ಎಂದು ತಿಳಿಯದೇ ಭ್ರಮೆ ಎಂಬ ಆಹಾರವನ್ನು ಇಟ್ಟು ಪೋಷಿಸುತ್ತಿದ್ದಾರೆ. ಭಯಕ್ಕೆ ಕಾರಣ ಹಿಂದೆ ನಡೆದ ಘಟನೆಗಳು ಮತ್ತು ನಾಳೆಯ ಭ್ರಮೆ. ನಿನ್ನೆ ಕಳೆದಿದೆ. ನಾಳೆ ಬರಲಿದೆ. ಆದರೆ ಇಂದಿನ ದಿನ ಮಾತ್ರ ನಮ್ಮ ಕೈಯಲ್ಲಿದೆ. ಇಂದಿನ ವರ್ತಮಾನವನ್ನು ಹೇಗೆ ಬಳಸುತ್ತಿದ್ದೇವೆ ಎನ್ನುವುದರ ಮೇಲೆ ನಾಳೆ ಅವಲಂಬಿತವಾಗಿದೆ.
ನಾಳೆಯ ಕಲ್ಪನೆಯನ್ನು ಮಾಡಿಕೊಂಡು ಜೀವನವನ್ನು ನರಕವಾಗಿಸಿಕೊಳ್ಳಬಾರದು. ದ್ವೇ ಷಿಸುವ ವ್ಯಕ್ತಿಗಳೂ ಕೂಡ ಬದುಕಲು ಭೂಮಿಗೆ ಬಂದಿದ್ದಾರೆ. ಅವರನ್ನು ನೋಡಿ ಭಯಪಡುವ ಅಗತ್ಯವಿಲ್ಲ. ಜ್ಞಾನವನ್ನು ಹೆಚ್ಚಿಸಿಕೊಂಡು ಭಯವನ್ನು ಬಿಟ್ಟರೆ ಸಮಸ್ಯೆಯೇ ಕಾಣುವುದಿಲ್ಲ. ಸೂರ್ಯನು ಪ್ರತಿದಿನವೂ ಹೊಸದಾಗಿ ಉದಯಿಸುತ್ತಾನೆ. ಹೊಸದಾಗಿಯೇ ಇರುತ್ತಾನೆ. ಆದರೆ ನಾವು ಮಾತ್ರ ಕಳೆದುಹೋದ ನಿನ್ನೆಯ ನೆನಪುಗಳನ್ನು ನೆನೆಸಿಕೊಂಡು ಭಯದಲ್ಲಿ ಇರುತ್ತೇವೆ. ಭಯದ ಆಲೋಚನೆಗಳು ಮತ್ತು ಹಳೆಯ ಜ್ಞಾಪಕಗಳನ್ನು ನಿಲ್ಲಿಸಬೇಕು. ಧೈರ್ಯವಾಗಿರು ಭ’ಯಪಡಬೇಡ” ಎಂದು ಹೇಳಿದನು. ಇದರಿಂದ ಪ್ರಸನ್ನನಾದ ಗ್ರಾಮಸ್ಥನು ಮುಗುಳ್ನಗೆ ಬೀರಿ ತನ್ನ ನೂತನ ಜೀವನವನ್ನು ಆರಂಭಿಸಿದನು.