ನವರಾತ್ರಿಯ ಎರಡನೇ ದಿನದ ಶಕ್ತಿದೇವತೆಯಾದ ಬ್ರಹ್ಮಚಾರಿಣಿ ದೇವಿಯು ಶಿವನನ್ನು ವರಿಸಿ ಬ್ರಹ್ಮಚಾರಿಣಿ ಆಗಿದ್ದು ಹೇಗೆ? ತಿಳಿಯಿರಿ

0 5

ದಧಾನ ಕರಪದ್ಮಾಭ್ಯಾಮಕ್ಷಮಾಲಾಕಮಂಡಲೂ
ದೇವೀ ಪ್ರಸೀದತು ಮಯಿ ಬ್ರಹ್ಮಚಾರಿಣ್ಯನುತ್ತಮಾ
ಜಗಜ್ಜನನಿ ದೇವಿಯ ಎರಡನೆ ಸ್ವರೂಪವಾದ ಬ್ರಹ್ಮಚಾರಿಣೀ ಭಕ್ತರಿಗೆ ಅನಂತಫಲವನ್ನು ಕೊಡುತ್ತಾಳೆ. ಬ್ರಹ್ಮ ಶಬ್ದದ ಅರ್ಥ ತಪಸ್ಸು ಎಂಬುದಾಗಿದೆ. ದೇವಿಯ ಸ್ವರೂಪವು ಪೂರ್ಣ ಜ್ಯೋತಿರ್ಮಯ ಹಾಗೂ ಅತ್ಯಂತ ಭವ್ಯವಾಗಿರುತ್ತದೆ. ದೇವಿಯ ಬಲಗೈಯಲ್ಲಿ ಜಪಮಾಲೆ ಮತ್ತು ಎಡಗೈಯಲ್ಲಿ ಕಮಂಡಲ
ಇರುತ್ತದೆ.

ಹಿಂದಿನ ಜನ್ಮದಲ್ಲಿ ಶಿವನನ್ನು ಪತಿಯಾಗಿ ಪಡೆಯಲು ದೇವಿಯು ಕಠಿಣ ತಪಸ್ಸು ಆಚರಿಸುತ್ತಾ ಬರೀ ಕಂದಫಲವನ್ನು ಮತ್ತು ಗಿಡಮರಗಳ ಒಣಗಿದ ಎಲೆಗಳನ್ನು ತಿನ್ನುತ್ತಾ ಸಾವಿರವರ್ಷ ತಪಸ್ಸಾನ್ನಾಚರಿಸುತ್ತಾಳೆ. ಇದರಿಂದ ಇವಳಿಗೆ ಅಪರ್ಣಾ ಎಂಬ ಹೆಸರು ಕೂಡಾಬಂದಿದೆ. ಕೊನೆಗೆ ಅವಳ ಕಠಿಣ ತಪಸ್ಸಿಗೆ ಮೂರು ಲೋಕಗಳಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿ ಬ್ರಹ್ಮದೇವರು ಪ್ರತ್ಯಕ್ಷರಾಗಿ, ಹೇ ದೇವಿ ಇಂದಿನವರೆಗೂ ಇಂತಹ ಕಠಿಣ ತಪಸ್ಸನ್ನು ಯಾರೂ ಕೈಗೊಂಡಿರಲಿಲ್ಲ, ನಿನ್ನ ಮನೋಕಾಮನೆ ಈಡೇರಲಿ ಶ್ರೀ ಚಂದ್ರಮೌಳಿ ಶಿವನು ನಿನಗೆ ಪತಿಯಾಗಿ ಸಿಗುವನು. ಈಗ ನಿನ್ನ ತಂದೆಯ ಜೊತೆ ಮನೆಗೆ ಹಿಂತಿರುಗು ಎಂದು ಆಶೀರ್ವದಿಸಿ ಕಳುಹಿಸುತ್ತಾರೆ. ಅದರಂತೆ ದೇವಿ ಪರಶಿವನನ್ನು ಪತಿಯಾಗಿ ಪಡೆದಳು. ನಾವು ನವರಾತ್ರಿಯ ದಿನವಾದ ಇಂದು ಈ ಶ್ವೇತಾಂಬರಿ ಬ್ರಹ್ಮಚಾರಿಣೀ ದುರ್ಗೆಯನ್ನು ಪೂಜಿಸಿ, ಆರಾಧಿಸಿ ಅನಂತಫಲವನ್ನು ಪಡೆಯೋಣ. ದೇವಿ ಎಲ್ಲರಿಗೂ ಆಯಸ್ಸು, ಆರೋಗ್ಯ ಕೊಟ್ಟು ಕಾಪಾಡಲಿ.

Leave A Reply

Your email address will not be published.