ಪ್ರತಿದಿನ ಸಂಜೆ ಸಮಯದಲ್ಲಿ ಜೊತೆ ಏನಾದರೂ ಒಂದು ರೀತಿಯ ಸ್ನಾಕ್ಸ್ ಇರಲೇಬೇಕು. ಆದರೆ ಪ್ರತಿದಿನ ಏನು ಮಾಡೋದು? ಹೊರಗಡೆ ತಿಂಡಿಯನ್ನು ತಿಂದು ತಿಂದು ಬೇಜಾರಾಗಿರತ್ತೆ. ಹಾಗಾಗಿ ಸುಲಭವಾಗಿ ಹಾಗೂ ರುಚಿಕರವಾಗಿ ಬೆಂಡೆಕಾಯಿ ಕುರ್ಕುರಿ ಹೇಗೆ ಮಾಡೋದು ಅನ್ನೋದನ್ನ ಈ ಲೇಖನದ ಮೂಲಕ ತಿಳಿಸಿ ಕೊಡುತ್ತಿದ್ದೇವೆ. ಈ ಬೆಂಡೆಕಾಯಿ ಕುರ್ಕುರಿ ಮಕ್ಕಳಿಗಂತೂ ತುಂಬಾನೇ ಇಷ್ಟ ಆಗಬಹುದು. ಒಮ್ಮೆ ಮಾಡಿಕೊಟ್ಟರೆ ಮತ್ತೆ ಮತ್ತೆ ಬೇಕು ಅಂತ ಕೇಳುವಂತಹ ರುಚಿ ಇದರಲ್ಲಿ ಇರುತ್ತದೆ. ಬೆಂಡೆಕಾಯಿ ಕುರ್ಕುರಿ ಹೇಗೆ ಮಾಡುವುದು ಇದಕ್ಕೆ ಬೇಕಾಗುವ ಸಾಮಗ್ರಿಗಳು ಏನು ಅನ್ನೋದನ್ನು ನೋಡೋಣ.
ಬೆಂಡೆಕಾಯಿ ಕುರ್ಕುರಿ ಮಾಡಲು ಬೇಕಾಗಿರುವ ಸಾಮಗ್ರಿಗಳು :– ಬೆಂಡೆಕಾಯಿ, ಕಡಲೆಹಿಟ್ಟು 1 ಕಪ್, ಅಕ್ಕಿಹಿಟ್ಟು 1 ಟೇಬಲ್ ಸ್ಪೂನ್, ಆಮ್ಚುರ್ ಪೌಡರ್ ಅರ್ಧ ಟೇಬಲ್ ಸ್ಪೂನ್, ಅಚ್ಚಕಾರದ ಪುಡಿ 1 ಟೇಬಲ್ ಸ್ಪೂನ್, ಅರ್ಧ ಟೀ ಸ್ಪೂನ್ ಅರಿಶಿನ, ಅರ್ಧ ಟೀ ಸ್ಪೂನ್ ಜೀರಿಗೆ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಎಣ್ಣೆ.
ಬೆಂಡೆಕಾಯಿ ಕುರ್ಕುರೆ ಇದನ್ನು ಮಾಡೋದು ಹೇಗೆ ಅಂತ ನೋಡೋಣ. ಮೊದಲು ಬೆಂಡೆಕಾಯಿಯನ್ನು ಚೆನ್ನಾಗಿ ತೊಳೆದು ಒಂದು ಕಾಟನ್ ಬಟ್ಟೆಯಲ್ಲಿ ಒರೆಸಿ ನೀರಿನ ಅಂಶ ಆರಿದ ನಂತರ ಬೆಂಡೆಕಾಯಿಯಲ್ಲಿ ಇರುವಂತಹ ಬೀಜವನ್ನು ತೆಗೆದುಕೊಂಡು ಮಧ್ಯದಲ್ಲಿ ಉದ್ದಕೆ ಸಣ್ಣದಾಗಿ ಕಟ್ ಮಾಡಿಕೊಳ್ಳಬೇಕು. ನಂತರ ಇದನ್ನು ಒಂದು ಬೌಲ್ ನಲ್ಲಿ ತೆಗೆದುಕೊಂಡು ಇದಕ್ಕೆ , ಆಮ್ಚುರ್ ಪೌಡರ್ (ಆಮ್ಚುರ್ ಪೌಡರ್ ಇಲ್ಲವಾದರೆ ಅದರ ಬದಲು ಚಾಟ್ ಮಸಾಲವನ್ನು ಕೂಡ ಸೇರಿಸಿಕೊಳ್ಳಬಹುದು) ಅಚ್ಚಕಾರದ ಪುಡಿ , ಅರಿಶಿನ , ಜೀರಿಗೆ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ನಂತರ ಅಕ್ಕಿ ಹಿಟ್ಟನ್ನು ಹಾಕಿ ಮತ್ತೊಮ್ಮೆ ಚೆನ್ನಾಗಿ ಕಲಿಸಿಕೊಳ್ಳಬೇಕು. ನಂತರ ಕಡಲೆ ಹಿಟ್ಟನ್ನು ತೆಗೆದುಕೊಂಡು ಅರ್ಧ ಭಾಗದಷ್ಟು ಮಾತ್ರ ಹಾಕಿ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಚೆನ್ನಾಗಿ ನೀರು ಸೇರಿಸದೆ ಹಾಗೇ ಮಿಕ್ಸ್ ಮಾಡಿ ನಂತರ ಸ್ವಲ್ಪ ಸ್ವಲ್ಪವೇ ನೀರನ್ನು ಹಾಕಿಕೊಂಡು ಕಲಿಸಿಕೊಳ್ಳಬೇಕು. ನಂತರ ಮೇಲಿಂದ ಉಳಿದ ಕಡಲೆ ಹಿಟ್ಟನ್ನು ಸೇರಿಸಿ ಚೆನ್ನಾಗಿ ಕಲಸಿಕೊಂಡು, ಎಣ್ಣೆ ಕಾಯಲು ಇಟ್ಟುಕೊಂಡು , ಎಣ್ಣೆ ಕಾದ ನಂತರ ಕಾದ ಎಣ್ಣೆಯಲ್ಲಿ ಮಿಕ್ಸ್ ಮಾಡಿಕೊಂಡ ಬೆಂಡೆಕಾಯಿಯನ್ನು ಹಾಕಿ ಕರಿಯಬೇಕು. 2 – 3 ನಿಮಿಷಗಳ ನಂತರ ಬೆಂಡೆಕಾಯಿ ಸರಿಯಾಗಿ ಬೆಂದು ಗರಿಗರಿಯಾಗಿ ಬರುವುದು. ಈ ರೀತಿಯಾಗಿ ಸುಲಭವಾಗಿ ಹಾಗೂ ರುಚಿಕರವಾಗಿ ಬೆಂಡೆಕಾಯಿ ಕುರ್ಕುರೆ ಯನ್ನು ತಯಾರಿಸಿ ಕೊಂಡು ಸಂಜೆ ಸಮಯದಲ್ಲಿ ಟೀ ಕಾಫಿ ಜೊತೆ ಸವಿಯಬಹುದು.