ಬೇಲದ ಹಣ್ಣು ಇದು ಬಾಂಗ್ಲಾದೇಶ, ಭಾರತ, ಪಾಕಿಸ್ತಾನ, ಶ್ರೀಲಂಕಾ, ಮತ್ತು ಇಂಡೋಚೈನಾಗೆ ಸ್ಥಳೀಯವಾಗಿದೆ. ಇದು ಒರಟು, ಮುಳ್ಳಿರುವ ತೊಗಟೆ ಹೊಂದಿದ್ದು ೯ ಮೀಟರ್ ಎತ್ತರಕ್ಕೆ ಬೆಳೆಯುವ ಒಂದು ದೊಡ್ಡ ಮರ ಇದಾಗಿದ್ದು , ಈ ಸಸ್ಯ ಅದರ ಔಷಧೀಯ ಗುಣಗಳಿಗೆ ಖ್ಯಾತವಾಗಿದೆ. ಈ ಹಣ್ಣು ಹುಳಿ ಅಥವಾ ಸಿಹಿಯಾಗಿರಬಹುದು. ಅದು ಒಡೆದು ತೆರೆಯಲು ಕಷ್ಟವಾಗಿರುವ ಬಹಳ ಗಟ್ಟಿ ತೊಗಟೆ ಹೊಂದಿದ್ದು, ಅಂಟಂಟಾಗಿರುವ ಕಂದು ತಿರುಳು ಮತ್ತು ಸಣ್ಣ ಬಿಳಿ ಬೀಜಗಳನ್ನು ಹೊಂದಿರುತ್ತದೆ. ಹಣ್ಣು ನೋಡಲು ಬಿಲ್ವದ ಹಣ್ಣನ್ನು ಹೋಲುತ್ತದೆ. ಹಲವಾರು ಔಷಧೀಯ ಗುಣಗಳನ್ನು ಹೊಂದಿರುವ ಬೇಲದ ಹಣ್ಣಿನ ಆರೋಗ್ಯಕರ ಲಾಭಗಳ ಬಗ್ಗೆ ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಭಾರತ ಮೂಲದ ಈ ಹಣ್ಣಿಗೆ ಇರುವ ಕನ್ನಡದ ಹೆಸರುಗಳು ಬೇಲ, ಬ್ಯಾಲ, ಮಳೂರ, ಮನ್ಮಥ-ಪುಷ್ಪಫಲ ಎಂದು ಕರೆಯುತ್ತಾರೆ. ಸಂಸ್ಕ್ರತದಲ್ಲಿ ದಾದಿಫಲ, ದಂತಫಲ, ಗಂಧಫಲ, ಗೋಪಕರ್ಣ, ಗ್ರಾಹಿ, ಗ್ರಂಥಿಫಲ, ಕಪಿಪ್ರಿಯ, ಕರಂಜಫಲಕ, ಮನ್ಮಥ ಎಂಬ ಹೆಸರುಗಳು ಇವೆ. ಪ್ರಾಚೀನ್ಯ ಕಾಲದ ಈ ಹಣ್ಣಿನ ವೈದ್ಯಕೀಯ ಉಪಯೋಗಳ ಬಗ್ಗೆ ನಮ್ಮ ಪ್ರಾಚೀನ ಸಂಸ್ಕ್ರತ ವೈದ್ಯಗ್ರಂಥಗಳಾದ ಚರಕ ಮತ್ತು ಸುಶ್ರುತ ಸಂಹಿತಗಳಲ್ಲಿ ಕೂಡಾ ವಿವರಿಸಲಾಗಿದೆ. ಈ ಹಣ್ಣಿನಿಂದ ನಮ್ಮ ದೇಹಕ್ಕೆ ಏನೆಲ್ಲಾ ಲಾಭಗಳು ಇವೆ ಎಂದು ನೋಡುವುದಾದರೆ , ಬೇಲದ ಹಣ್ಣಿನಲ್ಲಿ ನಾರಿನ ಅಂಶ ಹೆಚ್ಚಾಗಿ ಇರುವುದರಿಂದ ಇದು ಅಜೀರ್ಣ , ಅಲ್ಸರ್ ಮತ್ತು ಮೂಲವ್ಯಾಧಿ ಅಂತಹ ಸಮಸ್ಯೆಗಳನ್ನು ನಿಯಂತ್ರಣ ಮಾಡುತ್ತದೆ. ಇನ್ನು ಬೇಲದ ಹಣ್ಣಿನ ರಸವನ್ನು ಕುಡಿಯುವುದರಿಂದ ಬಾಯಿಯ ದುರ್ವಾಸನೆ ಹಾಗೂ ಹಳ್ಳಿಗೆ ಸಂಬಂಧಿಸಿದ ಯಾವುದೇ ರೀತಿಯ ಸಮಸ್ಯೆ ಇದ್ದರೂ ಸಹ ನಿವಾರಣೆ ಆಗುವುದು.
ಇನ್ನು ಬೇಲದ ಹಣ್ಣಿನ ಬೇರು ಮತ್ತು ಇದರ ತಿರುಳು ಮಲಬದ್ಧತೆಯ ನಿವಾರಣೆಗೆ ಸಹಾಯಕಾರಿ ಆಗುವುದು ಹಾಗೂ ಉರಿಮುತ್ರವನ್ನು ಸಹ ನಿವಾರಣೆ ಮಾಡುತ್ತದೆ. ಬೇಲದ ಹಣ್ಣಿನ ತಿರುಳಿಗೆ ಸ್ವಲ್ಪ ಏಲಕ್ಕಿ ಹಾಗೂ ಜೀರಿಗೆಯನ್ನು ಕುಟ್ಟಿ ಪುಡಿ ಮಾಡಿ ಹಾಕಿ ಮಿಶ್ರಣ ಮಾಡಿ ಸೇವಿಸುವುದರಿಂದ ಮುತ್ರ ಕಟ್ಟುವ ಸಮಸ್ಯೆ ಕೂಡಾ ಕಡಿಮೆ ಆಗುತ್ತದೆ. ಜ್ವರ , ಗಂಟಲು ನೋವಿನ ಸಮಸ್ಯೆ ಇದ್ದರೆ ಬೇಲದ ಹಣ್ಣಿನ ಸಿಪ್ಪೆಯಿಂದ ಮಾಡಿದ ಕಷಾಯವನ್ನು ಕುಡಿಯಬೇಕು. ಇದರಲ್ಲಿ ಸಕ್ಕರೆಯ ಅಂಶ ಕಡಿಮೆ ಇರುವುದರಿಂದ ಸಕ್ಕರೆ ಕಾಯಿಲೆಗೆ ಇದು ರಾಮಬಾಣ ಎನ್ನಬಹುದು. ಹೃದಯದ ನಾಳಗಳಲ್ಲಿ ಇರುವ ಕೊಬ್ಬನ್ನು ಕರಗಿಸಲು ಸಹ ಇದು ಅತ್ಯಂತ ಪ್ರಯೋಜನಕಾರಿ ಆದ ಹಣ್ಣು. ಹೃದಯಾಘಾತ ಆಗುವಂತಹ ಅಪಾಯಗಳನ್ನು ಸಹ ಕಡಿಮೆ ಮಾಡುತ್ತದೆ. ಕಿಡ್ನಿಯಲ್ಲಿ ಇರುವ ಕಲ್ಲನ್ನು ಕರಗಿಸಲು ಮತ್ತು ಕಿಡ್ನಿಯ ಬಲವರ್ಧನೆಗೆ ಕೂಡಾ ಸಹಾಯಕಾರಿ. ಕಫ ಇರುವವರು ಬೇಲದ ಹಣ್ಣಿನ ತಿರುಳಿಗೆ ಬೆಲ್ಲವನ್ನು ಸೇರಿಸಿ ತಿನ್ನುವುದರಿಂದ ಕಫ ಕಡಿಮೆ ಆಗುವುದು.
ಒಟ್ಟಿನಲ್ಲಿ ಬಲ್ಲವನೇ ಬಲ್ಲ ಬೇಲದ ಹಣ್ಣಿನ ಮಹಿಮೆ ಎನ್ನುವಂತೆ ಬೇಲದ ಹಣ್ಣಿನಲ್ಲಿ ಇಷ್ಟೊಂದು ಆರೋಗ್ಯಕರ ಅಂಶಗಳು ಇರಬೇಕಾದರೆ ಸಾಧ್ಯವಾದಷ್ಟು ಅದರ ಪ್ರಯೋಜನವನ್ನು ಪಡೆದುಕೊಳ್ಳಿ.