ನಿಸರ್ಗ ಅಕ್ಷಯ ಪಾತ್ರೆಯಿದ್ದಂತೆ ಅಲ್ಲಿ ಅನೇಕ ಔಷಧೀಯ ಗುಣವನ್ನು ಹೊಂದಿರುವ ಗಿಡಗಳು ಸಿಗುತ್ತದೆ, ಅದೆಂದು ಬರಿದಾಗುವುದಿಲ್ಲ. ನಿಸರ್ಗದಲ್ಲಿರುವ ಒಂದೊಂದು ಗಿಡವು ತನ್ನದೇ ಆದ ಮಹತ್ವವನ್ನು ಹೊಂದಿರುತ್ತದೆ. ಪ್ರಾಮುಖ್ಯತೆ ಪಡೆದ ಗಿಡಗಳಲ್ಲಿ ಪ್ರಮುಖ ಗಿಡವಾದ ಅಶ್ವಗಂಧ ಗಿಡದ ಹಿನ್ನಲೆ ಹಾಗೂ ಅದರ ಆರೋಗ್ಯಕರ ಪ್ರಯೋಜನಗಳನ್ನು ಈ ಲೇಖನದಲ್ಲಿ ನೋಡೋಣ.
ಆಯುರ್ವೇದದಲ್ಲಿ ಅಶ್ವಗಂಧಕ್ಕೆ ತನ್ನದೇ ಆದ ಪ್ರಮುಖ ಸ್ಥಾನವಿದೆ. ಈ ಸಸ್ಯದ ಬೇರಿನಿಂದ ಕುದುರೆ ಮೂತ್ರದ ವಾಸನೆ ಬರುವುದರಿಂದ ಇದರ ಬೇರುಗಳನ್ನು ಸ್ವಚ್ಛಗೊಳಿಸಿ, ಸಂಸ್ಕರಿಸಿ, ಪುಡಿಮಾಡಿ ಸೇವಿಸುವುದರಿಂದ ಅಶ್ವದಂತ ಶಕ್ತಿ ಮತ್ತು ಉತ್ಸಾಹ ಬರುತ್ತದೆ ಆದ್ದರಿಂದ ಈ ಗಿಡಕ್ಕೆ ಅಶ್ವಗಂಧ ಎಂಬ ಹೆಸರು ಬಂದಿದೆ. ಅಶ್ವಗಂಧ ಗಿಡಕ್ಕೆ ಇಂಗ್ಲಿಷ್ ನಲ್ಲಿ ವಿಂಟರ್ ಚೆರ್ರಿ ಎಂತಲೂ, ಸಂಸ್ಕೃತದಲ್ಲಿ ವಾಜಿಗಂಧ, ಹಯಗಂಧ, ವಾರಹ ಕರ್ಣಿ ಹೀಗೆ ಬೇರೆ ಬೇರೆ ಭಾಷೆಯಲ್ಲಿ ಬೇರೆ ಬೇರೆ ಹೆಸರಿನಿಂದ ಕರೆಯುವ ಅಶ್ವಗಂಧಕ್ಕೆ ಕನ್ನಡದಲ್ಲಿ ಹಿರೇಮದ್ದಿನ ಗಿಡ ಎಂದು ಕರೆಯುತ್ತಾರೆ. ಅಶ್ವಗಂಧ ಲೈಂ’ಗಿಕ ದೌರ್ಬಲ್ಯವನ್ನು ನಿವಾರಿಸುವ ಅದ್ಭುತ ಶಕ್ತಿಯನ್ನು ಹೊಂದಿದೆ ಅಲ್ಲದೆ ಹಾವು, ಚೇಳು ಕಚ್ಚಿದಾಗ ಅಶ್ವಗಂಧ ಸಸ್ಯದ ಬೇರುಗಳನ್ನು ಔಷಧಿಯಾಗಿ ಬಳಸುತ್ತಾರೆ. ಅಶ್ವಗಂಧ ಹಳ್ಳಿಗಳಲ್ಲಿ ರಸ್ತೆಗಳಲ್ಲಿ, ತಿಪ್ಪೆಗಳ ಪಕ್ಕದಲ್ಲಿ ಬೆಳೆದಿರುತ್ತದೆ. ಈ ಗಿಡವನ್ನು ಕಡಿಯದೆ ಹಾಗೆ ಬಿಟ್ಟರೆ ಪೊದೆಯಾಗಿ ನಿರ್ಮಾಣವಾಗುತ್ತದೆ.
ಆಯುರ್ವೇದದಲ್ಲಿ ಅಶ್ವಗಂಧ ಗಿಡದ ಬೇರು, ಕಾಂಡ, ಎಲೆ, ಹೂವು, ಹಣ್ಣುಗಳನ್ನು ಬಳಸುತ್ತಾರೆ. ಅಶ್ವಗಂಧ ಆಫ್ರಿಕಾ, ಮೆಡಿಟರೇನಿಯನ್ ಪ್ರದೇಶ, ಭಾರತದಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತದೆ. ಭಾರತದ ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ, ಪಂಜಾಬ್, ಮಹಾರಾಷ್ಟ್ರ, ಕರ್ನಾಟಕದ ಹಲವು ಕಡೆಗಳಲ್ಲಿ ಈ ಸಸ್ಯವನ್ನು ಕಾಣಬಹುದು. ಸೋಲನೆಸಿ ಕುಟುಂಬಕ್ಕೆ ಸೇರಿದ ಅಶ್ವಗಂಧ ಗಿಡದ ವೈಜ್ಞಾನಿಕ ಹೆಸರು ವೈಧೇನಿಯಾ ಸೊಮ್ನಿಫೆರಾ. ಸುಮಾರು ಒಂದರಿಂದ ನಾಲ್ಕು ಅಡಿ ಎತ್ತರ ಬೆಳೆಯುವ ಈ ಸಸ್ಯದ ಎಲೆಗಳು ನೋಡಲು ಎಕ್ಕದ ಗಿಡದ ಎಲೆಗಳಂತೆ ಕಾಣಿಸುತ್ತದೆ ಆದರೂ ಎಕ್ಕದ ಗಿಡದ ಎಲೆಗಳಿಗಿಂತ ಸ್ವಲ್ಪ ಚಿಕ್ಕದಾಗಿರುತ್ತದೆ. ಹಳದಿ ಬಣ್ಣದ ಹೊದಿಕೆಯ ಗೊಂಚಲುಗಳ ಒಳಗೆ ಕೆಂಪು ಬಣ್ಣದ ಹಣ್ಣುಗಳಿರುತ್ತವೆ. ಅಶ್ವಗಂಧ ಗಿಡಗಳು ಪುರಾತನಕಾಲದಿಂದಲೂ ಔಷಧಿಯಾಗಿ ಬಳಕೆಯಲ್ಲಿದೆ. ಸರ್ವ ರೋಗಕ್ಕೆ ಹಿರೇಮದ್ದು ಎಂಬ ನಾಣ್ಣುಡಿ ಇದೆ, ಇದು ಸತ್ಯವೂ ಹೌದು. ಅಶ್ವಗಂಧ ರಕ್ತಶುದ್ಧಿ ಮಾಡುವುದು ಮಾತ್ರವಲ್ಲದೆ ರಕ್ತ ವೃದ್ಧಿ ಮಾಡಿ ದೇಹಕ್ಕೆ ಕಾಂತಿ ಮತ್ತು ಶಕ್ತಿಯನ್ನು ಕೊಡುತ್ತದೆ. ಆಯಾಸವನ್ನು ನಿವಾರಿಸುವ ಸಾಮರ್ಥ್ಯವನ್ನು ಹೊಂದಿರುವ ಅಶ್ವಗಂಧ ವೃದ್ಧಾಪ್ಯ ದೌರ್ಬಲ್ಯವನ್ನು ಹೋಗಲಾಡಿಸಿ ಶಕ್ತಿ, ಸ್ಪೂರ್ತಿ, ಯೌವನವನ್ನು ದೊರಕಿಸುತ್ತದೆ.
ಅಶ್ವಗಂಧದ ಬೇರನ್ನು ನೇರವಾಗಿ ಸೇವಿಸುವಂತಿಲ್ಲ ಮೂರು ಗ್ರಾಂನಷ್ಟು ಅಶ್ವಗಂಧವನ್ನು ಹಾಲಿನಲ್ಲಿ ಕುದಿಸಿ ಶುದ್ದಿ ಮಾಡಿ ನಂತರ ನೆರಳಿನಲ್ಲಿ ಒಣಗಿಸಿ ಚೂರ್ಣ ಮಾಡಿಕೊಂಡು ಆನಂತರ ಸೇವಿಸಬೇಕು. ಅಶ್ವಗಂಧ ಗಿಡದ ಬೇರು ಬಿಳಿ ಹಾಗೂ ನಸು ಹಳದಿಯ ಬಣ್ಣದಿಂದ ಕೂಡಿರುತ್ತದೆ. ಎಲ್ಲಾ ರೀತಿಯ ರೋಗಕ್ಕೆ ಅಶ್ವಗಂಧ ಗಿಡವನ್ನು ಔಷಧಿಯಾಗಿ ಬಳಸುತ್ತಾರೆ. ಉತ್ತಮ ದೃಷ್ಟಿಗಾಗಿ, ಸ್ತ್ರೀಯರ ಮುಟ್ಟಿನ ದೋಷ ನಿವಾರಣೆಗೆ, ಗರ್ಭಧಾರಣೆಗೆ ಸಂಬಂಧಿಸಿದ ಸಮಸ್ಯೆಗಳಿಗಾಗಿ ಇನ್ನು ಹತ್ತು ಹಲವಾರು ಸಮಸ್ಯೆಗಳಿಗೆ ಅಶ್ವಗಂಧ ಉತ್ತಮ ಪರಿಹಾರವನ್ನು ಕೊಡುವ ಮದ್ದಾಗಿದೆ. ನಿಸರ್ಗದಲ್ಲಿ ಸಿಗುವ ಎಲ್ಲಾ ರೀತಿಯ ಗಿಡಮೂಲಿಕೆಗಳು ತಮ್ಮದೇ ಆದ ಅನೇಕ ಔಷಧೀಯ ಗುಣವನ್ನು ಹೊಂದಿರುತ್ತದೆ ಅದರಲ್ಲಿ ಅಶ್ವಗಂಧ ಗಿಡವು ಕೂಡ ಒಂದು ಪ್ರಮುಖ ಔಷಧೀಯ ಗುಣ ಹೊಂದಿರುವ ಗಿಡವಾಗಿದೆ. ಹಳ್ಳಿಗಳಲ್ಲಿ ಅಶ್ವಗಂಧ ಗಿಡವನ್ನು ನೋಡಿದರೆ ಅದನ್ನು ಕತ್ತರಿಸಬೇಡಿ ಬೆಳೆಸಿ.