ಶದ್ದೆ, ಆಸಕ್ತಿ, ಗುರಿ ಅದನ್ನು ತಲುಪುವ ಛಲ ಇದ್ದರೆ ಸಾಕು ಏನನ್ನು ಬೇಕಾದರೂ ಸಾಧಿಸಬಹುದು ಅದಕ್ಕೆ ವಯಸ್ಸು ಕೂಡ ಅಡ್ಡಿಯಾಗುವುದಿಲ್ಲ. ಅದಕ್ಕೆ ಒಂದು ನಿದರ್ಶನ ಇಲ್ಲಿದೆ ನೋಡಿ. 25ನೇ ವಯಸ್ಸಿಗೆ ನ್ಯಾಯಾಧೀಶರ ಸ್ಥಾನಕ್ಕೆ ಏರಿದ ಬಂಟ್ವಾಳದ ಅನಿಲ್ ಜಾನ್ ಸಿಕ್ವೆರಾ ಬಂಟ್ವಾಳ. ಬಂಟ್ವಾಳ ಮೂಲದ 25ರ ಹರೆಯದ ಈ ಯುವಕ ಅನಿಲ್ ಜಾನ್ ಸಿಕ್ವೆರಾ.
2023ರ ಸಾಲಿನ ಕರ್ನಾಟಕ ಸಿವಿಲ್ ನ್ಯಾಯಾಧೀಶ ಪರೀಕ್ಷೆಯನ್ನು ಬರೆದು ಉತ್ತಿರ್ಣರಾದ ಇವರು, ಆ ಮೂಲಕ ರಾಜ್ಯದಲ್ಲಿ ನ್ಯಾಯಾಧೀಶರ ಹುದ್ದೆಗೆ ಏರುವ ತುಂಬ ಕಿರಿಯ ವ್ಯಕ್ತಿ ಎನ್ನುವ ಹಿರಿಮೆ ಮತ್ತು ಗರಿಮೆ ಗಳಿಸಿದ್ದಾರೆ. ಬಂಟ್ವಾಳ ತಾಲೂಕಿನ ಬೊರಿಮಾರು ಮೂಲದ ಅನಿಲ್ ಜಾನ್ ಸಿಕ್ವೆರಾ, ಮಂಗಳೂರಿನ ಎಸ್ಡಿಎಂ ಲಾ ಕಾಲೇಜಿನಲ್ಲಿ ಬಿಬಿಎ ಮತ್ತು ಎಲ್ಎಲ್ಬಿ ಪೂರ್ಣಗೊಳಿಸಿದ್ದಾರೆ.
ಕಾಲೇಜು ದಿನಗಳಲ್ಲಿಯೇ ಹೆಚ್ಚಿನ ಪ್ರತಿಭಾವಂತ ವಿದ್ಯಾರ್ಥಿಯಾಗಿ ಇದ್ದ ಇವರು ಬಂಟ್ವಾಳದ ಬೊರಿಮಾರಿನ ಸೈಂಟ್ ಜೋಸೆಫ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಮಾಣಿ ಕರ್ನಾಟಕ ಹೈಸ್ಕೂಲ್ನಲ್ಲಿ ಪ್ರೌಢ ಶಿಕ್ಷಣ, ಪುತ್ತೂರು ಸೈಂಟ್ ಫಿಲೋಮಿನಾ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಪಡೆದಿದ್ದಾರೆ.
ವಕೀಲನ ಪದವಿ ಪಡೆದ ಬಳಿಕ ಇವರು ಮಂಗಳೂರಿನಲ್ಲಿ ಬಾರ್ ಅಸೋಸಿಯೇಶನ್ ಸದಸ್ಯರಾಗಿ ಪ್ರಾಕ್ಟಿಸ್ ಪ್ರಾರಂಭ ಮಾಡಿದರು. ಮಂಗಳೂರಿನ ವಕೀಲರಾದ ದೀಪಕ್ ಡಿಸೋಜ ಮತ್ತು ನವೀನ್ ಪಾಯಸ್ ಅವರ ಜೊತೆ ವೃತ್ತಿ ಮುಂದುವರಿಸುತ್ತಿದ್ದರು.
ಅನಿಲ್ ಜಾನ್ ಸಿಕ್ವೆರಾ ಕರ್ನಾಟಕ ಸಿವಿಲ್ ಜಡ್ಜ್ ಪರೀಕ್ಷೆಯನ್ನು ಅವರ ಎರಡನೇ ಪ್ರಯತ್ನದಲ್ಲಿ ಗೆದ್ದು ಸಾಧನೆ ಮಾಡಿದ್ದಾರೆ. ಕಾಲೇಜು ದಿನಗಳಲ್ಲಿಯೇ ನಾಯಕತ್ವ ಬೆಳೆಸಿಕೊಂಡಿದ್ದ ಅನಿಲ್ ಸಿಕ್ವೆರಾ 2022ರಲ್ಲಿ ಮಂಗಳೂರು ಕ್ರೈಸ್ತ ಧರ್ಮ ಪ್ರಾಂತ್ಯದ ಇಂಡಿಯನ್ ಕೆಥೋಲಿಕ್ ಯೂತ್ ಮೂಮೆಂಟ್ ಸಂಘಟನೆ ಅಧ್ಯಕ್ಷ ಕೂಡ ಆಗಿದ್ದರು.
ಪ್ರಿಲಿಮಿನರಿ ಅಂತ, ಮೈನ್ಸ್ ಪರೀಕ್ಷೆ ಮತ್ತು ನೇರ ಸಂದರ್ಶನದಲ್ಲಿ ಉತ್ತಿರ್ಣರಾಗುವ ಮೂಲಕ ಇತರರಿಗೆ ಸ್ಫೂರ್ತಿ ಮತ್ತು ಮಾದರಿಯಾಗಿದ್ದಾರೆ.