ಅಭಿಮನ್ಯು ಮಹಾಭಾರತದಲ್ಲಿ ಅರ್ಜುನ ಮತ್ತು ಸುಭದ್ರೆಯರ ಮಗ. ಮಹಾಭಾರತ ಯುದ್ಧದಲ್ಲಿ ದ್ರೋಣಾಚಾರ್ಯರು ರಚಿಸಿದ ಆ ಚಕ್ರವ್ಯೂಹವನ್ನು ಭೇದಿಸಿ ಹೊರಗೆ ಬರುವುದು ಗೊತ್ತಿರದಿದ್ದರೂ ಒಳಗೆ ನುಗ್ಗಿ ಅನೇಕ ವೀರಾಧಿ-ವೀರರನ್ನು ಕೊಂದು ದ್ರೋಣ, ಕರ್ಣ, ದುರ್ಯೋಧನ, ದುಃಶಾಸನ ಮುಂತಾದ ಅತಿರಥ-ಮಹಾರಥರಿಗೆ ಸಮನಾಗಿ ಹೋರಾಡಿ ನಂತರ ವಂಚನೆಗೊಳಗಾಗಿ ಚಕ್ರವ್ಯೂಹದಿಂದ ಹೊರಬರಲಾಗದೆ ವೀರಮರಣವನ್ನು ಹೊಂದಿದನು.

ಮಹಾಭಾರತದಲ್ಲಿ ಒಂದೊಂದು ಪಾತ್ರವೂ ಒಂದೊಂದು ನೈಪುಣ್ಯವನ್ನು ಬಿಂಬಿಸುತ್ತದೆ. ವಿವೇಚನೆಗೆ ಧರ್ಮರಾಯನಾದರೆ, ಬಿಲ್ವಿದ್ಯೆಗೆ ಅರ್ಜುನ, ಬಲಪರಾಕ್ರಮಕ್ಕೆ ಭೀಮನಾದರೆ ಪ್ರತಿಜ್ಞೆಗೆ ಭೀಷ್ಮ ಪಿತಾಮಹರನ್ನು ಉದಾಹರಿಸಲಾಗುತ್ತದೆ. ಕಪಟತನಕ್ಕೆ ಶಕುನಿಯಾದರೆ ಶೌರ್ಯಕ್ಕೆ ಅಭಿಮನ್ಯು ಹೆಸರುವಾಸಿಯಾಗಿದ್ದಾರೆ. ಅದರಲ್ಲೂ ಯುಗ ಯುಗಗಳ ವರೆಗೂ ಚಿರಸ್ಥಾಯಿಯಾಗಿರುವ ಯೋಧ ಎಂದರೆ ಅದು ಮಹಾಭಾರತದ ಅಭಿಮನ್ಯು. ಕಾರಣ ಏನು ಅಂದ್ರೆ ಅಭಿಮನ್ಯುವಿನ ಶೌರ್ಯ ಹಾಗೂ ಪರಾಕ್ರಮವಾಗಿದೆ. ಅಭಿಮನ್ಯು ಸಾಯುವ ಗಳಿಗೆಯಲ್ಲಿ ಮಹಾರಥಿ ಕರ್ಣ ಹೇಳಿದ್ದು ಕೂಡ ಇದೇ ಮಾತಾಗಿತ್ತು ಈ ಜಗತ್ತಲ್ಲಿ ವೀರಯೋಧ ಎಂದು ಯಾರಾದರು ಇದ್ದಲ್ಲಿ ಅದು ನೀನು ಮಾತ್ರವೇ ಆಗಿರಲು ಸಾಧ್ಯ ನಾನು ಅಲ್ಲ ಹಾಗೂ ಅರ್ಜುನನೂ ಅಲ್ಲ ಎಂದು ಕರ್ಣ ಹೇಳಿದ್ದ.

ಅಭಿಮನ್ಯು ಅರ್ಜುನ ಮತ್ತು ಸುಭದ್ರೆಯರ ಮಗ. ಶ್ರೀಕೃಷ್ಣನ ಸೋದರಳಿಯ. ವಿರಾಟರಾಜನ ಮಗಳಾದ ಉತ್ತರೆಯನ್ನು ಮದುವೆಯಾದ. ಗರ್ಭದಲ್ಲಿರುವಾಗಲೇ, ಶ್ರೀಕೃಷ್ಣ ತನ್ನ ತಂಗಿ ಸುಭದ್ರೆಗೆ ಯುದ್ಧದಲ್ಲಿನ ಅಭೇದ್ಯವ್ಯೂಹಗಳ ಭೇದನೆಯನ್ನು ಕಥೆಯಾಗಿ ಹೇಳುವಾಗ ಕೇಳಿ ತಿಳಿದಿದ್ದ. ಧನುರ್ವಿದ್ಯಾಪಾರಂಗತನಾದ ಅಭಿಮನ್ಯುವಿನ ವೀರನೈಪುಣ್ಯ ಸ್ಪಷ್ಠವಾಗಿ ತೋರುವುದು ಪದ್ಮವ್ಯೂಹವೆಂಬ ಸೈನ್ಯರಚನೆಯನ್ನು ಭೇದಿಸುವಲ್ಲಿ, ಭಾರತಯುದ್ಧದಲ್ಲಿ ದ್ರೋಣಾಚಾರ್ಯರು ರಚಿಸಿದ ಪದ್ಮವ್ಯೂಹವನ್ನು ಭೇದಿಸುವಲ್ಲಿ. ಭಾರತ ಯುದ್ಧದಲ್ಲಿ ದ್ರೋಣಾಚಾರ್ಯರು ರಚಿಸಿದ ಪದ್ಮವ್ಯೂಹವನ್ನು ಭೇದಿಸುವ ರಹಸ್ಯ ತಂತ್ರ ಕೃಷ್ಣ, ಅರ್ಜುನ, ಪ್ರದ್ಯುಮ್ನ ಮತ್ತು ಅಭಿಮನ್ಯುವಿಗಲ್ಲದೆ ಮತ್ಯಾರಿಗೂ ಗೊತ್ತಿರಲಿಲ್ಲ.

ಪಾಂಡವರನ್ನ ಒಂದು ದಿನ ಕಟ್ಟಿ ಹಾಕುವ ಸಲುವಾಗಿ ಹಾಗೂ ದ್ರೌಪದಿಯ ಅಪಹರಣದ ಸಮಯದಲ್ಲಿ ತನಗಾದ ಅವಮಾನಕ್ಕೆ ಪ್ರತೀಕಾರ ತೀರಿಸಿಕೊಳ್ಳುವ ಸಲುವಾಗಿ ಭಗವಂತ ಶಿವನ ತಪಸ್ಸು ಮಾಡಿದ್ದ ಜಯದ್ರಥನು ಒಂದು ದಿನದ ಮಟ್ಟಿಗೆ ಅರ್ಜುನನ್ನ ಬಿಟ್ಟು ಉಳಿದು ಪಾಂಡವರನ್ನ ಸೋಲಿಸುವ ಶಕ್ತಿಯನ್ನ ವರವಾಗಿ ಪಡೆದಿರುತ್ತಾನೆ. ಹಾಗಾಗಿ ಜಯದ್ರಥನನ್ನ ಚಕ್ರವ್ಯೂಹದ ಮುಂಭಾಗದಲ್ಲಿ ರಕ್ಷಣೆಗಾಗಿ ನಿಲ್ಲಿಸಿರುತ್ತಾರೆ. ಇನ್ನು ಚಕ್ರವ್ಯೂಹ ಭೇದಿಸದಿದ್ದರೆ ಪಾಂಡವರ ಅಪಾರ ಸೈನ್ಯ ಒಂದೇ ದಿನ ನಾಶವಾಗಿಬಿಡುತಿತ್ತು. ಹಾಗಾಗಿ ಪರಿಸ್ಥಿತಿಯನ್ನ ಮನಗಂಡ ಅಭಿಮನ್ಯು ನನಗೆ ಚಕ್ರವ್ಯೂಹ ಭೇದಿಸಲು ತನ್ನ ದೊಡ್ಡಪ್ಪ ಯುಧಿಷ್ಠಿರನಲ್ಲಿ ಅನುಮತಿ ಪಡೆದು ಹಸಿದ ಹೆಬ್ಬುಲಿಯಂತೆ ಘರ್ಜಿಸುತ್ತಾ ಚಕ್ರವ್ಯೂಹದ ಒಳನುಗ್ಗುತ್ತಾನೆ.

ಅಭಿಮನ್ಯುವಿನ ರಕ್ಷಣೆಯ ಸಲುವಾಗಿ ಯುಧಿಷ್ಠಿರ, ಭೀಮ, ನಕುಲ, ಸಹದೇವ ಹಿಂದೆಯೇ ಹೋಗುತ್ತಾರೆ. ಆದರೆ ಮೊದಲೇ ಪ್ಲಾನ್ ಮಾಡಿದಂತೆ ಅಭಿಮನ್ಯುವನ್ನ ಒಳಹೋಗಲು ಬಿಟ್ಟು ತನ್ನೆದುರಿಗೆ ಬಂದ ಪಾಂಡವರನ್ನ ಜಯದ್ರಥ ತಡೆಯುತ್ತಾನೆ. ಮಹಾಪರಾಕ್ರಮಿ ಭೀಮ ಸೇರಿದಂತೆ ನಾಲ್ಕು ಜನ ಪಾಂಡವರು ಎಷ್ಟೇ ಪ್ರಯತ್ನ ಪಟ್ಟರೂ ಜಯದ್ರಥನನ್ನ ಸೋಲಿಸಿ ಅಭಿಮನ್ಯುವಿನ ರಕ್ಷಣೆಗಾಗಿ ಒಳಹೋಗಲು ಆಗುವುದಿಲ್ಲ. ಜಯದ್ರಥ ಮಹಾದೇವನಿಂದ ಪಡೆದಿದ್ದ ವರವೇ ಇದಕ್ಕೆ ಕಾರಣವಾಗಿರುತ್ತದೆ. ಇನ್ನು ಚಕ್ರವ್ಯೂಹ ಭೇದಿಸುತ್ತಾ ಒಳಹೋದ ಅಭಿಮನ್ಯುವಿನ ಮೇಲೆ ದ್ರೋಣ, ಕೃಪಾ, ಕರ್ಣ ಸೇರಿದಂತೆ ಮಹಾರಥಿಗಳೆಲ್ಲಾ ಒಂದೇ ಬಾರಿಗೆ ಆ ವೀರ ಬಾಲಕನ ಮೇಲೆ ಮುಗಿಬೀಳುತ್ತಾರೆ.

ರಣಾಂಗಣದಲ್ಲಿ ಏಕೈಕ ವೀರನಾಗಿ ಅಬ್ಬರಿಸಿದ ಅಭಿಮನ್ಯು, ದುರ್ಯೋಧನನ ಮಗ ಲಕ್ಷ್ಮಣ ಸೇರಿದಂತೆ ಬೃಹದ್ಬಲನೆಂಬ ರಾಜ ಸೇರಿ ಅನೇಕರ ಸಂಹಾರ ಮಾಡುತ್ತಾನೆ. ದುರ್ಯೋಧನನನ್ನು ರಕ್ಷಿಸಲು ಬಂದ ದ್ರೋಣ, ಕೃಪಾ, ಕರ್ಣ, ಅಶ್ವತ್ಥಾಮ, ಶಲ್ಯ, ಶಕುನಿಯಂತಹ ವೀರಾಧಿವೀರರನ್ನ ತನ್ನ ಚಾಪವಿದ್ಯಾಬಲದಿಂದ ಮೂರ್ಛೆ ಹೋಗುವಂತೆ ಮಾಡುತ್ತಾನೆ. ಇನ್ನು ಅಭಿಮನ್ಯುವನ್ನ ತಡೆಯಲು ಅಸಾಧ್ಯ ಎನಿಸಿದಾಗ ಸೇನಾಧಿಪತಿಯಾಗಿದ್ದ ದ್ರೋಣಾಚಾರ್ಯರ ಆಜ್ಞೆಯ ಮೇರೆಗೆ ಹಿಂದೆಯಿಂದ ಬಂದ ಕರ್ಣ ಅಭಿಮನ್ಯುವಿನ ಸಾರಥಿಗೆ ಪರಲೋಕದ ದಾರಿ ತೋರಿಸಿ ಬಿಲ್ಲನ್ನ ಕತ್ತರಿಸುತ್ತಾನೆ. ಮುಂದಿನಿಂದ ದ್ರೋಣರು ಅಭಿಮನ್ಯುವಿನ ರಥ ಹಾಗೂ ಕುದುರೆಗಳನ್ನ ತುಂಡರಿಸುತ್ತಾರೆ. ಆದರೂ ಧೃತಿಗೆಡದ ಅಭಿಮನ್ಯು ತನ್ನ ರಥದ ಚಕ್ರದಿಂದ ಯುದ್ಧ ಮಾಡುತ್ತಾನೆ. ಕೊನೆಗೆ ಕೌರವರು ಮಾಡಿದ ಅಧರ್ಮದ ಯುದ್ಧ ಹಾಗೂ ಮೋಸದಿಂದಾಗಿ ವೀರ ಅಭಿಮನ್ಯು ವೀರಸ್ವರ್ಗವನ್ನ ಪಡೆಯುತ್ತಾನೆ.

ಮಹಾಭಾರತದಲ್ಲಿ ಧರ್ಮದ ರಕ್ಷಣೆಗಾಗಿ ಹೇಗೆ ಭಗವಾನ್ ವಿಷ್ಣು ಶ್ರೀಕೃಷ್ಣನ ಅವತಾರ ದಲ್ಲಿ ಭೂಮಿಗೆ ಬಂದಿದ್ದ ಅದೇ ರೀತಿಯಲ್ಲಿ ಇನ್ನು ಹಲವಾರು ದೇವತೆಗಳು ಬೇರೆ ಬೇರೆ ಅವತಾರದಲ್ಲಿ ಬಂದಿದ್ದರು. ಒಂದೊಂದು ಮನುಷ್ಯ ರೂಪದಲ್ಲಿ ಒಬ್ಬೊಬ್ಬ ದೇವತೆಗಳು ಅವತಾರವೆತ್ತಿದ್ದರು. ಆದರೆ ಮಹಾಭಾರತದ ಧರ್ಮ ಸ್ಥಾಪನೆಗೆ ಎಲ್ಲರೂ ಒಕ್ಕೊರಲಿನಿಂದ ಒಪ್ಪಿಗೆ ನೀಡಿದಾಗ ಚಂದ್ರದೇವ ಒಂದು ಶರತ್ತನ್ನು ಹಾಕುತ್ತಾನೆ.

ಅದೇನೆಂದರೆ ತನ್ನ ಮಗನಾದ ಅಭಿಮನ್ಯುವನ್ನು ಬಿಟ್ಟಿರಲು ತುಂಬಾ ಕಷ್ಟ ಆದ್ದರಿಂದ ಭೂಮಿಯ ಮೇಲೆ ಬರೀ ಹದಿನಾರು ವರ್ಷ ಮಾತ್ರ ಜೀವನ ನಡೆಸಬೇಕು. ಇದಕ್ಕಿಂತ ಜಾಸ್ತಿ ಸಮಯ ನಿನನ್ನು ಬಿಟ್ಟಿರಲು ನನಗೆ ಆಗುವುದಿಲ್ಲ ಎಂದು.ಆಗ ಭಗವಾನ್ ವಿಷ್ಣು ಚಂದ್ರನ ಮಾತಿಗೆ ಒಪ್ಪಿಕೊಂಡು ಅಭಿಮನ್ಯುವಿನ ಅವತಾರದಲ್ಲಿ ಚಂದ್ರದೇವನ ಮಗನಿಗೆ ಕೇವಲ ಹದಿನಾರು ವರ್ಷ ಮಾತ್ರ ಆಯಸ್ಸು ನೀಡುತ್ತಾನೆ. ಸಾಕ್ಷಾತ್ ಭಗವಂತನೇ ಆಗಿದ್ದ ಶ್ರೀಕೃಷ್ಣ ತಾನು ಚಂದ್ರ ದೇವನಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕಾಗಿತ್ತು. ಹಾಗಾಗಿ ಅಭಿಮನ್ಯವಿನ ಸಾವಿನ ವಿಷಯ ತನಗೆ ಮೊದಲೇ ತಿಳಿದಿದ್ದರೂ ಕೂಡ ಶ್ರೀಕೃಷ್ಣ ಮಧ್ಯ ಪ್ರವೇಶಿಸಲಿಲ್ಲ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!