ನಾವಿಂದು ನಿಮಗೆ ಮೈಸೂರಿನಿಂದ ಐವತ್ತು ಕಿಲೋಮೀಟರ್ ದೂರದಲ್ಲಿರುವ ಕಲ್ಲಹಳ್ಳಿ ಎಂಬ ಗ್ರಾಮದಲ್ಲಿರುವ ಭೂವರಾಹನಾಥ ಸ್ವಾಮಿ ದೇವಾಲಯದ ಬಗ್ಗೆ ತಿಳಿಸಿಕೊಡುತ್ತೇವೆ. ಭೂವರಾಹನಾಥ ಸ್ವಾಮಿ ದೇವಾಲಯವು ವಿಷ್ಣುವಿನ ಮೂರನೇ ಅವತಾರವಾದ ವರಾಹ ಸ್ವಾಮಿಯ ದೇವಾಲಯವಾಗಿದೆ. ಈ ಭೂವರಾಹನಾಥಸ್ವಾಮಿ ದೇವಾಲಯವು ಸ್ಥಳೀಯವಾಗಿ ಅತ್ಯಂತ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಈ ದೇವರಿಗೆ ನಿಗೂಢ ಶಕ್ತಿ ಇದೆ ಎಂದು ಸ್ಥಳೀಯ ಜನರು ನಂಬುತ್ತಾರೆ ಈ ದೇವಸ್ಥಾನದ ರಚನೆ ಬಹಳ ಸರಳವಾಗಿದೆ ಈ ದೇವಸ್ಥಾನವನ್ನು ದೊಡ್ಡ ದೊಡ್ಡ ಬೂದುಬಣ್ಣದ ಕಲ್ಲುಗಳಿಂದ ನಿರ್ಮಿಸಿದ್ದಾರೆ.

ಈ ದೇವಾಲಯದಲ್ಲಿ ಒಟ್ಟು ಎರಡು ಘಟಕಗಳಿವೆ ಒಂದು ದೇವಾಲಯದ ಗರ್ಭಗುಡಿ ಮತ್ತು ಮುಂಭಾಗದ ಸಭಾಂಗಣ. ಪ್ರವೇಶ ದ್ವಾರದಲ್ಲಿ ಎರಡು ದೊಡ್ಡ ಮರದ ಬಾಗಿಲುಗಳಿವೆ ಹಾಗೆ ಗರ್ಭಗುಡಿಯಲ್ಲಿ ದೊಡ್ಡ ವರಾಹನಾಥ ಸ್ವಾಮಿಯ ವಿಗ್ರಹವನ್ನು ಪ್ರತಿಷ್ಟಾಪಿಸಿದ್ದಾರೆ. ಗರ್ಭಗುಡಿಯಲ್ಲಿ ಹದಿನಾಲ್ಕು ಅಡಿ ಎತ್ತರದ ಏಕಶಿಲಾ ಭೂವರಾಹನಾಥ ಸ್ವಾಮಿಯ ವಿಗ್ರಹವನ್ನು ಪ್ರತಿಷ್ಠಾಪಿಸಿದ್ದಾರೆ. ಇದು ಇಡೀ ದೇಶದಲ್ಲಿ ಬಹಳ ಅಪರೂಪವಾದ ವಿಗ್ರಹವಾಗಿದೆ.

ಈ ವಿಗ್ರಹವನ್ನು ಬೂದು ಕಲ್ಲಿನಿಂದ ಕೆತ್ತಲಾಗಿದೆ ಈ ಬ್ರಹದಾಕಾರದ ವಿಗ್ರಹದ ಎಡತೊಡೆಯ ಮೇಲೆ ಭೂದೇವಿಯು ಕುಳಿತಿದ್ದಾಳೆ. ಭೂದೇವಿಯ ವಿಗ್ರಹವು 3.5 ಅಡಿ ಎತ್ತರವಿದೆ ಭಗವಾನ್ ಹನುಮನ ಮೂರ್ತಿಯನ್ನು ಕೂಡ ಪ್ರಮುಖವಾಗಿ ವಿಗ್ರಹದ ಅಡಿಯಲ್ಲಿ ಕೆತ್ತಲಾಗಿದೆ. ದೇವರ ಮೇಲ್ಭಾಗದ ಕೈಯಲ್ಲಿ ಶಂಖ ಮತ್ತೊಂದು ಕೈಯಲ್ಲಿ ಸುದರ್ಶನ ಚಕ್ರವನ್ನು ಕೆತ್ತಿದ್ದಾರೆ ವಿಗ್ರಹದ ಕೆಳ ಭಾಗದ ಎಡಗೈ ಭೂದೇವಿಯನ್ನು ಆವರಿಸಿಕೊಂಡಿದೆ ಕೆಳಭಾಗದ ಬಲಗೈಯನ್ನು ಅಭಿಯಾನ ಮುದ್ರೆಯಲ್ಲಿ ಕಿತ್ತಿದ್ದಾರೆ.

ಪ್ರಸ್ತುತ ಇರುವ ದೇವಸ್ಥಾನವು ಸುಮಾರು ಎರಡು ಸಾವಿರದ ಐದುನೂರು ವರ್ಷಕ್ಕಿಂತ ಹೆಚ್ಚು ಹಳೆಯದು ಎಂಬ ನಂಬಿಕೆ ಇದೆ. ಈ ದೇವಸ್ಥಾನದಲ್ಲಿ ಗೌತಮ ಋಷಿ ತಪಸ್ಸು ಮಾಡಿದ್ದಾರೆ ಎಂಬ ಮಾತು ಕೂಡ ಇದೆ. ಈ ದೇವಾಲಯವನ್ನು ಹೊಯ್ಸಳರ ಅರಸ ಮೂರನೇ ವೀರಬಲ್ಲಾಳ ನಿರ್ಮಿಸಿದ್ದಾನೆ ಎಂಬ ದಂತಕಥೆಯಿದೆ.

ಇತ್ತೀಚಿಗೆ ಜನರ ನಂಬಿಕೆಯ ಪ್ರಕಾರ ಇಲ್ಲಿಗೆ ಬಂದು ದೇವಸ್ಥಾನದ ಬಲಭಾಗದಲ್ಲಿ ಇರುವ ಮಣ್ಣನ್ನು ಪೂಜೆ ಮಾಡಿಸಿ ಇಲ್ಲಿಂದ ಇಟ್ಟಿಗೆಯನ್ನು ತೆಗೆದುಕೊಂಡು ಹೋಗಿ ಮನೆ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಿದರೆ ನಿರ್ಮಾಣ ಕಾರ್ಯವು ಯಾವುದೇ ತೊಂದರೆ ಇಲ್ಲದೆ ಆಗುತ್ತದೆ ಎಂಬ ನಂಬಿಕೆ ಜನರಲ್ಲಿ ಮನೆ ಮಾಡಿದೆ. ಜೊತೆಗೆ ಯಾವುದೇ ತರಹದ ಭೂವ್ಯಾಜ್ಯ ಇದ್ದಲ್ಲಿ ಇಲ್ಲಿಗೆ ಬಂದು ಭೂವರಹನಾಥ ಸ್ವಾಮಿಯ ಬಳಿ ಬೇಡಿಕೊಂಡರೆ ಸಮಸ್ಯೆ ಪರಿಹಾರ ಆಗುತ್ತದೆ ಎಂಬ ನಂಬಿಕೆ ಎಲ್ಲರ ಮನಸ್ಸಿನಲ್ಲಿದೆ ಇದರಿಂದ ರಾಜ್ಯದ ಮೂಲೆಮೂಲೆಗಳಿಂದ ಪ್ರತಿನಿತ್ಯ ಜನರು ಇಲ್ಲಿಗೆ ಬರುತ್ತಾರೆ.

ಈ ದೇವಸ್ಥಾನದ ಕುರಿತಾಗಿ ಅಲ್ಲಿನ ಅರ್ಚಕರು ಏನು ಹೇಳುತ್ತಾರೆ ಎಂಬುದನ್ನು ನೋಡುವುದಾದರೆ ಈ ದೇವಸ್ಥಾನವು ತುಂಬಾ ಹಳೆಯದಾಗಿದ್ದು ಭೂದೇವಿಯನ್ನು ರಕ್ಷಣೆ ಮಾಡುವುದಕ್ಕಾಗಿ ವಿಷ್ಣು ವರಾಹ ಅವತಾರವನ್ನು ಎತ್ತಿ ಭೂದೇವಿಯನ್ನು ಪಾತಾಳದಿಂದ ಎತ್ತಿ ರಕ್ಷಣೆ ಮಾಡಿದ್ದಾನೆ ಹಾಗಾಗಿ ಇಲ್ಲಿ ಭೂ ದೇವಿಗೆ ಮಹತ್ವ ಇರುವುದರಿಂದ ಇಲ್ಲಿನ ಮಣ್ಣನ್ನು ತೆಗೆದುಕೊಂಡು ಹೋಗಿ ಪೂಜೆ ಮಾಡಿಸುವುದರಿಂದ ಎಲ್ಲರಿಗೂ ಒಳ್ಳೆಯದಾಗುತ್ತದೆ ಎಂದು ಹೇಳುತ್ತಾರೆ ಜೊತೆಗೆ ಭಕ್ತರು ಏನೇ ಬೇಡಿಕೊಂಡರು ಅದನ್ನು ಭಗವಂತ ಈಡೇರಿಸುತ್ತಾನೆ ಎಂದು ಹೇಳುತ್ತಾರೆ. ಇಲ್ಲಿ ಪಕ್ಕದಲ್ಲಿ ಹರಿಯುವ ಹೇಮಾವತಿ ನದಿಯ ನೀರು ದೇವಾಲಯದ ಗೋಡೆಗೆ ಬಂದು ತಾಗುತ್ತದೆ.

ಹಾಗಾಗಿ ಏಪ್ರಿಲ್-ಮೇ ತಿಂಗಳಿನಲ್ಲಿ ನೀರು ಕಡಿಮೆಯಾದ ನಂತರ ವಾರ್ಷಿಕೋತ್ಸವವನ್ನು ಮಾಡುತ್ತಾರೆ ಪ್ರತಿವರ್ಷ ವರಾಹ ಜಯಂತಿಯನ್ನು ಕೂಡ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ದೇವಾಲಯದ ನಿರ್ಮಾಣ ಕಾರ್ಯ ಜಾರಿಯಲ್ಲಿದ್ದು ದೇವಾಲಯವನ್ನು ಬೃಹದಾಕಾರದಲ್ಲಿ ಬಹಳ ಸುಂದರವಾಗಿ ನಿರ್ಮಿಸುತ್ತಿದ್ದಾರೆ. ಮುಖ್ಯ ದೇವಾಲಯದ ಬಲಭಾಗದಲ್ಲಿ ಲಕ್ಷ್ಮಿವೆಂಕಟೇಶ್ವರಸ್ವಾಮಿ ದೇವಾಲಯವನ್ನು ನಿರ್ಮಿಸಿದ್ದಾರೆ ಅಲ್ಲಿಯೂ ಪ್ರತಿನಿತ್ಯ ಪೂಜೆ ನಡೆಯುತ್ತದೆ.

ದೇವಸ್ಥಾನದ ಸಮೀಪದಲ್ಲಿಯೇ ದಾಸೋಹ ಭವನವನ್ನು ನಿರ್ಮಿಸಿದ್ದಾರೆ. ಪ್ರತಿದಿನ ದೇವಾಲಯಕ್ಕೆ ಬರುವ ಸಾವಿರಾರು ಜನ ಭಕ್ತರಿಗೆ ಆಡಳಿತ ಮಂಡಳಿಯಿಂದ ಅನ್ನದಾಸೋಹ ಕಾರ್ಯಕ್ರಮವನ್ನು ನಡೆಸಲಾಗುತ್ತದೆ. ಪಕ್ಕದಲ್ಲಿರುವ ಹೇಮಾವತಿ ನದಿಯ ದಡದಲ್ಲಿ ಅದರ ವೀಕ್ಷಣೆಗಾಗಿ ಕಲ್ಲಿನ ಮಂಟಪವನ್ನು ನಿರ್ಮಿಸಲಾಗಿದೆ ಸಾಮಾನ್ಯವಾಗಿ ಮಳೆಗಾಲದಲ್ಲಿ ಹೇಮಾವತಿ ನದಿಯ ಒಳ ಹರಿವು ಹೆಚ್ಚಾಗಿರುತ್ತದೆ

ಆಗ ಅಲ್ಲಿ ಈಜುವುದಕ್ಕೆ ಅವಕಾಶ ಇರುವುದಿಲ್ಲ ನೀವು ತೆಪ್ಪದಲ್ಲಿ ವಿಹರಿಸಬಹುದು. ಈ ರೀತಿಯಾಗಿ ಪ್ರಕೃತಿಯ ಮಡಿಲಿನಲ್ಲಿರುವ ಈ ದೇವಾಲಯವು ನೋಡುವುದಕ್ಕೆ ಬಹಳ ಸುಂದರವಾಗಿದ್ದು ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ದೇವಾಲಯವಾಗಿದ್ದು ನೀವು ಕೂಡ ಒಮ್ಮೆ ಇಲ್ಲಿಗೆ ಭೇಟಿ ನೀಡಿ ನಿಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಿ.

By

Leave a Reply

Your email address will not be published. Required fields are marked *