ಮೊದಲ ಬಾರಿಗೆ ಯೋಧನಾಗಿ ಕಾಣಿಸಿಕೊಂಡ ರವಿಚಂದ್ರನ್! ಯಾವ ಚಿತ್ರಕ್ಕಾಗಿ ಈ ಗೆಟಪ್? ಕೆಲ ದಿನಗಳ ಹಿಂದಷ್ಟೇ ಕ್ರೇಜಿ ಸ್ಟಾರ್‌ ರವಿಚಂದ್ರನ್‌ ನಾಯಕತ್ವದಲ್ಲಿ ಕನ್ನಡಿಗ ಸಿನಿಮಾ ಸೆಟ್ಟೇರಿತ್ತು. ಐತಿಹಾಸಿಕ ಕಥೆಯುಳ್ಳ ಈ ಸಿನಿಮಾದಲ್ಲಿ ರವಿಚಂದ್ರನ್, ಲಿಪಿಕಾರನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಿ.ಎಂ. ಗಿರಿರಾಜ್ ನಿರ್ದೇಶನದ ಈ ಚಿತ್ರದಲ್ಲಿ ರವಿಚಂದ್ರನ್ ಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಈ ಹಿಂದೆಯೇ ಹೇಳಲಾಗಿತ್ತು. ಇದೀಗ ಅದಕ್ಕೆ ಸಾಕ್ಷಿ ಸಿಕ್ಕಿದ್ದು, ಕನ್ನಡಿಗ ಚಿತ್ರದಲ್ಲಿ ಅವರ ಪಾತ್ರದ ಲುಕ್ ರಿವೀಲ್ ಆಗಿದೆ. ಕನ್ನಡಿಗ ಚಿತ್ರದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಪಾತ್ರದ ಬಗ್ಗೆ ಮತ್ತಷ್ಟು ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ನಟ ಕ್ರೇಜಿ ಸ್ಟಾರ್ ರವಿಚಂದ್ರನ್‌ ಅವರು ಸದ್ಯ ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ಎದುರುಗೊಳ್ಳುತ್ತಿದ್ದಾರೆ. ಕುರುಕ್ಷೇತ್ರ ಚಿತ್ರದಲ್ಲಿ ಕೃಷ್ಣನಾಗಿ ಕಾಣಿಸಿಕೊಂಡಿದ್ದ ರವಿಚಂದ್ರನ್ ಅವರು ಈಗ ಯೋಧನಾಗಿ ಐತಿಹಾಸಿಕ ಪಾತ್ರವೊಂದಕ್ಕೆ ಬಣ್ಣಹಚ್ಚುತ್ತಿದ್ದಾರೆ. ಕ್ರೇಜಿ ಸ್ಟಾರ್‌ ರವಿಚಂದ್ರನ್ ಈಚೆಗೆ ಪಾತ್ರಗಳ ಆಯ್ಕೆಯಲ್ಲಿ ಸಿಕ್ಕಾಪಟ್ಟೆ ಚ್ಯೂಸಿ ಆಗಿದ್ದಾರೆ. ಕಳೆದ ವರ್ಷ ಕುರುಕ್ಷೇತ್ರ ಸಿನಿಮಾದಲ್ಲಿ ಪೌರಾಣಿಕ ಪಾತ್ರ ಮಾಡಿದ್ದರು. ಇದೇ ಮೊದಲ ಬಾರಿಗೆ ಈಗ ಕನ್ನಡಿಗ ಚಿತ್ರಕ್ಕಾಗಿ ಐತಿಹಾಸಿಕ ಪಾತ್ರವನ್ನು ಮಾಡಿದ್ದಾರೆ. ಇದೀಗ ಅವರು ಯೋಧನ ಗೆಟಪ್‌ನಲ್ಲಿಯೂ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ವಿಶೇಷವೆಂದರೆ, ಈ ಪಾತ್ರ ಕೂಡ ಕನ್ನಡಿಗ ಚಿತ್ರದಲ್ಲೇ ಇರಲಿದೆಯಂತೆ.

ಸಾಮಂತಭದ್ರನಾದ ರವಿಚಂದ್ರನ್ ರ್ದೇಶಕ ಬಿ.ಎಂ. ಗಿರಿರಾಜ್‌ ನಿರ್ದೇಶನದಲ್ಲಿ ಇದೇ ಮೊದಲ ಬಾರಿಗೆ ರವಿಚಂದ್ರನ್ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಕನ್ನಡದ ಲಿಪಿಕಾರ ಗುಣಭದ್ರನ ಪಾತ್ರವನ್ನು ರವಿಚಂದ್ರನ್ ಮಾಡುತ್ತಿದ್ದಾರೆ. ಇದರ ಜೊತೆಗೆ ಈಗ ಸಾಮಂತಭದ್ರ ಎಂಬ ಯೋಧನ ಪಾತ್ರವೂ ಸೇರಿಕೊಂಡಿದೆ. ಅದು ಗುಣಭದ್ರನ ಪೂರ್ವಜರ ಪಾತ್ರವಂತೆ.

ಈ ಬಗ್ಗೆ ಮಾಹಿತಿ ನೀಡುವ ನಿರ್ಮಾಪಕ ಎನ್‌.ಎಸ್‌. ರಾಜ್‌ಕುಮಾರ್, ರಾಣಿ ಚೆನ್ನಭೈರಾದೇವಿ ಸೇನೆಯ ಯೋಧನಾಗಿ ರವಿಚಂದ್ರನ್‌ ಕಾಣಿಸಿಕೊಳ್ಳುತ್ತಾರೆ. ಈ ತರದ ಪಾತ್ರವನ್ನು ಅವರು ಮಾಡಿರುವುದು ಇದೇ ಮೊದಲು. ಇದು ಗುಣಭದ್ರನ ಪೂರ್ವಜರ ಪಾತ್ರವಾಗಿದೆ ಎಂದು ಹೇಳಿದ್ದಾರೆ.

ಇನ್ನು ಈ ಚಿತ್ರದಲ್ಲಿ ನಟಿ ಭವಾನಿ ಪ್ರಕಾಶ್ ಇಲ್ಲಿ ರಾಣಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ರವಿಚಂದ್ರನ್ ಮತ್ತು ಭವಾನಿ ಪ್ರಕಾಶ್ ನಡುವಿನ ದೃಶ್ಯಗಳನ್ನು ಚಿತ್ರೀಕರಿಸಲಾಗುತ್ತಿದೆ. ಚಿಕ್ಕಮಗಳೂರು, ಸಾಗರ ಸುತ್ತಮುತ್ತ ಸೆಟ್‌ ಹಾಕಿ ಚಿತ್ರೀಕರಣ ಮಾಡಲಾಗುತ್ತಿದೆ. ಯುದ್ಧದ ಸನ್ನಿವೇಶಗಳು ಮಾತ್ರ ಬಾಕಿ ಉಳಿದಿವೆಯಂತೆ. ಚಿ. ಗುರುದತ್, ಮಠದ ಸ್ವಾಮಿಯ ಪಾತ್ರದಲ್ಲಿ ದತ್ತಣ್ಣ, ಮಲ್ಲಿನಾಥನಾಗಿ ಬಾಲಾಜಿ ಮನೋಹರ್, ಹರಿಗೋಪಾಲನ ಪಾತ್ರದಲ್ಲಿ ಅಚ್ಯುತ್ ಕುಮಾರ್ ಕಾಣಿಸಿಕೊಳ್ಳಲಿದ್ದಾರೆ. ಗಿರಿರಾಜ್ ನಿರ್ದೇಶನದ ಜಟ್ಟ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ನಟಿ ಪಾವನಾ ಗೌಡ ಅವರಿಗೆ ಕೂಡಾ ಕನ್ನಡಿಗ ಸಿನಿಮಾದಲ್ಲಿ ಮಹತ್ವದ ಪಾತ್ರ ಸಿಕ್ಕಿದೆ.

ಸ್ವಾತಿ ಚಂದ್ರಶೇಖರ್, ಜೆಮಿ ವಾಲ್ಟರ್ ಮುಂತಾದವರು ಚಿತ್ರದಲ್ಲಿದ್ದಾರೆ. ಅಂದಹಾಗೆ, ಗಿರಿರಾಜ್ ಮತ್ತು ನಿರ್ಮಾಪಕ ರಾಜ್‌ಕುಮಾರ್ ಕಾಂಬಿನೇಷನ್‌ನ ಮೂರನೇ ಸಿನಿಮಾ ಇದಾಗಿದೆ. ಈ ಹಿಂದೆ ಈ ಜೋಡಿ ಜಟ್ಟ ಹಾಗೂ ಮೈತ್ರಿ ಸಿನಿಮಾಗಳನ್ನು ಜೊತೆಯಾಗಿ ಮಾಡಿತ್ತು. ಮೈತ್ರಿ ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್, ಮೋಹನ್‌ಲಾಲ್ ಅವರಂತಹ ಸ್ಟಾರ್ ನಟರು ಬಣ್ಣ ಹಚ್ಚಿದ್ದು ವಿಶೇಷ.

150 ವರ್ಷಕ್ಕೂ ಹಿಂದಿನ ಕಥೆ ‘ಕನ್ನಡಿಗ’ ಚಿತ್ರದಲ್ಲಿದ್ದು, ಹೊಸ್ಮನೆ ಮೂರ್ತಿ ಕಲಾ ನಿರ್ದೇಶನ ಮಾಡುತ್ತಿದ್ದಾರೆ. ನವೆಂಬರ್‌ನಲ್ಲಿ ಮೊದಲ ಹಂತದ ಚಿತ್ರೀಕರಣ ನಡೆಸುವುದು ಚಿತ್ರತಂಡದ ಸದ್ಯದ ಯೋಜನೆ. ಜಿ.ಎಸ್.ವಿ. ಸೀತಾರಾಮ್ ಛಾಯಾಗ್ರಹಣ ಮಾಡುತ್ತಿದ್ದು, ರವಿ ಬಸ್ರೂರ್ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಅರ್ಜುನ್ ಕಿಟ್ಟು ಸಂಕಲನ ಮಾಡುತ್ತಿದ್ದಾರೆ. ಅಂದಹಾಗೆ, ಈ ಚಿತ್ರಕ್ಕೆ ರವಿಚಂದ್ರನ್‌ ಅವರನ್ನು ಆಯ್ಕೆ ಮಾಡಿಕೊಂಡಿದ್ದರ ಬಗ್ಗೆ ಈ ಹಿಂದೆ ನಿರ್ದೇಶಕ ಗಿರಿರಾಜ್ ಹೀಗೆ ಹೇಳಿಕೊಂಡಿದ್ದರು.

ಸಿನಿಮಾದಲ್ಲಿ ಬರುವ ನಾಯಕನ ಪಾತ್ರಕ್ಕೆ ಯಾರನ್ನು ಆಯ್ಕೆ ಮಾಡಿಕೊಳ್ಳುವುದು? ಅಪಾರ ಘನತೆ ಹೊಂದಿರುವ ಈ ಪಾತ್ರಕ್ಕೆ ಅಷ್ಟೇ ಪ್ರಮುಖ ಕಲಾವಿದರೇ ಬೇಕು ಎಂದು ಯೋಚಿಸಿದಾಗ ಮೊದಲು ನೆನಪಾಗಿದ್ದೇ ರವಿಚಂದ್ರನ್ ಅವರು. ಈ ಪಾತ್ರಕ್ಕೆ ಅವರು ಹೇಳಿ ಮಾಡಿಸಿದಂತಹ ವ್ಯಕ್ತಿ. ಪೂರ್ತಿ ಕಥೆ ಕೇಳಿದ ಅವರು ಸಿನಿಮಾದಲ್ಲಿ ನಟಿಸಲು ನನ್ನ ಅಭ್ಯಂತರವಿಲ್ಲ. ಆದರೆ ಇದು ಸಂಪೂರ್ಣ ಬೇರೆಯದ್ದೇ ಪ್ರಾಕಾರದಲ್ಲಿ ಇರೋದರಿಂದ ಮೇಕಿಂಗ್ ಇತ್ಯಾದಿಗಳನ್ನೆಲ್ಲಾ ನೀವೇ ನಿಭಾಯಿಸಿಕೊಳ್ಳಬೇಕು. ನಟಿಸೋದು ಮಾತ್ರ ನನ್ನ ಜವಾಬ್ದಾರಿ ಎಂದು ಹೇಳಿದ್ದರು. ಆ ಮೂಲಕ ಕನ್ನಡಿಗನ ಪಾತ್ರಕ್ಕೆ ರವಿಚಂದ್ರನ್ ಅವರ ಆಗಮನವಾಯಿತು’ ಎಂದು ಅವರು ಹೇಳಿದ್ದರು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!