ಸಿಹಿಯಾದ, ರುಚಿಯಾಗಿ, ಆರೋಗ್ಯಯುತವಾಗಿ ಇರುವ ಹಣ್ಣುಗಳು ಎಲ್ಲರಿಗೂ ಅಚ್ಚುಮೆಚ್ಚು. ಕೆಲವು ಹಣ್ಣುಗಳಲ್ಲಿ ನಮ್ಮ ದೇಹಕ್ಕೆ ಬೇಕಾಗಿರುವ ವಿಟಮಿನ್, ನಾರಿನಾಂಶ, ಪ್ರೋಟೀನ್, ಕ್ಯಾಲ್ಸಿಯಂಗಳು ಹೇರಳವಾಗಿ ಇರುತ್ತವೆ. ಅಂತಹ ಹಣ್ಣುಗಳ ಸೇವನೆಯಿಂದ ಆರೋಗ್ಯ ಸಮಸ್ಯೆಗಳನ್ನು ದೂರವಿರಿಸಲು ಸಹಾಯವಾಗುತ್ತದೆ. ಯಾವ ಹಣ್ಣುಗಳಲ್ಲಿ ಯಾವ ರೀತಿಯ ಉತ್ತಮ ಪೋಷಕಾಂಶಗಳಿವೆ ಎಂಬುದನ್ನು ತಿಳಿದುಕೊಂಡು ಸೇವಿಸುವುದು ಉತ್ತಮ ವಿಧಾನ. ಪೋಷಕಾಂಶಗಳನ್ನು ಹೊಂದಿರುವ ಹಣ್ಣುಗಳಲ್ಲಿ ಸೀತಾಫಲ ಕೂಡಾ ಒಂದು. ಹಾಗಾದರೆ ಸೀತಾಫಲದಲ್ಲಿ ಇರುವಂತಹ ಪೋಷಕಾಂಶಗಳು ಯಾವುದು? ಈ ಹಣ್ಣನ್ನು ಯಾರೆಲ್ಲ ಸೇವಿಸಬಹುದು ಹಾಗೂ ಯಾರು ಸೇವಿಸಬಾರದು? ಇದರಿಂದ ನಮಗೆ ಸಿಗುವ ಆರೋಗ್ಯಕರ ಲಾಭಗಳು ಏನೂ? ಇದರಿಂದ ಉಂಟಾಗುವ ವ್ಯತಿರಿಕ್ತ ಪರಿಣಾಮಗಳು ಏನು ಇವೆಲ್ಲದರ ಬಗ್ಗೆ ನಾವು ಈ ಲೇಖನದಲ್ಲಿ ಮಾಹಿತಿಯನ್ನು ತಿಳಿದುಕೊಳ್ಳೋಣ.
ಸೀತಾಫಲ ಇದು ನೋಡಲು ವಿಚಿತ್ರವಾಗಿದ್ದರು ರುಚಿಯಾಗಿರುತ್ತದೆ. ತಿನ್ನಲು ಸ್ವಲ್ಪ ಕಷ್ಟವೆನಿಸಬಹುದು ಆದರೆ ಸಿಹಿಯು ಎಲ್ಲರ ಬಾಯಲ್ಲಿ ನೀರು ತರಿಸುತ್ತದೆ. ಇಂತಹ ಸೀತಾಫಲ ದೇಹದ ಹಲವು ಸಮಸ್ಯೆಗಳನ್ನು ನಿವಾರಿಸುವಲ್ಲಿ ಸಹಕಾರಿಯಾಗಿದೆ. ಸೀತಾಫಲದಲ್ಲಿರುವ ವಿಟಾಮಿನ್ ಬಿ6 ಅಂಶವು ಅಸ್ತಮಾ ರೋಗವನ್ನೂ ಕಡಿಮೆಮಾಡುತ್ತದೆ. ಸೀತಾಫಲ ಶ್ವಾಸಕೋಶಗಳ ಆರೋಗ್ಯವನ್ನು ವೃದ್ದಿಸಿ, ಅಸ್ತಮಾ ಸಮಸ್ಯೆಯ ನಿವಾರಣೆಗೆ ಸಹಾಯ ಮಾಡುತ್ತದೆ. ಸೀತಾಫಲದಲ್ಲಿ ಹೇರಳವಾಗಿ ತುಂಬಿರುವ ಬಿ 6 ವಿಟಮಿನ್ ರಕ್ತದಲ್ಲಿನ ಹೆಚ್ಚಾಗಿ ಸಂಗ್ರಹಗೊಂಡ ಹಿಮೊಸಿಸ್ಟೇನ್ ಪ್ರಮಾಣವನ್ನೂ ಕಡಿಮೆಗೊಳಿಸುತ್ತದೆ. ಹಿಮೊಸಿಸ್ಟೇನ್ ಪ್ರಮಾಣ ಹೆಚ್ಚಾದಾಗ ಉಂಟಾಗುವ ಹೃದಯಾಘಾತವನ್ನು ತಪ್ಪಿಸುತ್ತದೆ ಸೀತಾಫಲ. ದೇಹದಲ್ಲಿನ ಜೀರ್ಣಕ್ರಿಯೆ ಉತ್ತಮವಾಗಿ ಕಾರ್ಯ ನಿರ್ವಹಿಸಲು ಸಹಾಯ ಮಾಡುತ್ತದೆ. ಸೀತಾಫಲವನ್ನು ನಿಯಮಿತವಾಗಿ ತಿನ್ನುವುದು ತುಂಬಾ ಒಳ್ಳೆಯದು. ಸೀತಾಫಲದಲ್ಲಿ ಇರುವ ನಿಯಾಸಿನ್ ಹಾಗೂ ನಾರಿನಾಂಶ ರಕ್ತದಲ್ಲಿ ಶೇಖರಣೆಯಾದ ಕೆಟ್ಟ ಕೊಲೆಸ್ಟ್ರಾಲ್ ನ್ನು ಕರಗುವಂತೆ ಮಾಡಿ ರಕ್ತ ಹೀನತೆ ನಿವಾರಣೆ ಮಾಡುವಲ್ಲಿ ಸಹಾಯ ಮಾಡುತ್ತದೆ. ದೇಹದಲ್ಲಿ ರಕ್ತದ ಉತ್ಪಾದನೆಗೆ ಬೇಕಾದ ತಾಮ್ರ, ಕಬ್ಬಿಣಾಂಶ, ಕ್ಯಾಲರಿ ಹೇರಳವಾಗಿದೆ. ನೈಸರ್ಗಿಕ ಆ್ಯಂಟಿ ಆಕ್ಸಿಡೆಂಟ್ ಹಾಗೂ ವಿಟಮಿನ್ ಹೊಂದಿರುವ ಸೀತಾಫಲ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ, ಮೆದುಳಿಗೆ ಆಗುವ ಒತ್ತಡದ ಪ್ರಮಾಣವನ್ನೂ ಸಹ ತಗ್ಗಿಸುತ್ತದೆ. ದೇಹವು ತೀರಾ ತೆಳ್ಳಗೆ ಹಾಗೂ ಅಗತ್ಯಕ್ಕಿಂತ ಕಡಿಮೆ ತೂಕ ಹೊಂದಿರುವರಿಗೆ ಸೀತಾಫಲ ಉತ್ತಮವಾಗಿದೆ. ಸೀತಾಫಲದಲ್ಲಿ ಕ್ಯಾಲೋರಿ ಹೇರಳವಾಗಿರುವುದರಿಂದ ತೂಕ ಹೆಚ್ಚಿಸುಕೊಳ್ಳಲು ಸಹಾಯ ಮಾಡುತ್ತದೆ.
ಸೀತಾಫಲದಲ್ಲಿ ಇರುವ ಪೋಷಕಾಂಶಗಳು ಹೆಚ್ಚಿನ ರಕ್ತದೊತ್ತಡವನ್ನು ತಡೆಯುತ್ತದೆ. ಕಣ್ಣಿನ ಸಮಸ್ಯೆಗೆ ಪರಿಹಾರ ಒದಗಿಸುತ್ತದೆ. ಕೂದಲುಗಳು ಸೊಂಪಾಗಿ ಬೆಳೆಯಲು ಹಾಗೂ ತ್ವಚೆಯ ಕಾಂತಿ ಹೆಚ್ಚಾಗಲು ಸೀತಾಫಲ ಸಹಾಯ ಮಾಡುತ್ತದೆ. ಸೀತಾಫಲ ಸೇವನೆಯಿಂದ ದೇಹದಲ್ಲಿನ ಮೂಳೆಗಳು ಬಲಗೊಳ್ಳುತ್ತವೆ. ಇಷ್ಟೆಲ್ಲಾ ಪೋಷಕಾಂಶಗಳನ್ನು ಹೊಂದಿದ ಸೀತಾಫಲವನ್ನು ಬೆಳಿಗ್ಗೆ ತಿಂಡಿಯ ನಂತರ ಹಾಗೂ ಮಧ್ಯಾನ್ಹದ ಊಟದ ನಂತರ ಸೇವಿಸುವುದು ಉತ್ತಮವಾಗಿದೆ. ಆರು ಗಂಟೆಯ ನಂತರ ಸೀತಾಫಲದ ಸೇವನೆ ದೇಹಕ್ಕೆ ಒಳ್ಳೆಯದಲ್ಲ ಎಂದು ಹೇಳುತ್ತಾರೆ. ಸೀತಾಫಲವನ್ನು ಮಧುಮೇಹ ಇರುವವರು ಸೇವಿಸದೇ ಇರುವುದು ಉತ್ತಮ. ಯಾಕೆಂದರೆ ಸೀತಾಫಲದಲ್ಲಿ ಸಕ್ಕರೆಯ ಅಂಶ ಹೆಚ್ಚಾಗಿರುತ್ತದೆ. ತೂಕ ಇಳಿಸಿಕೊಳ್ಳಬೇಕು ಎಂದಿರುವವರು ಹಾಗೂ ಕಫದ ಭಾದೆಯಿಂದ ಬಳಲುವವರು ಸೀತಾಫಲದಿಂದ ದೂರವಿದ್ದರೆ ಒಳ್ಳೆಯದು. ಸೀತಾಫಲ ಸೇವಿಸಿದ ನಂತರ ನೀರು ಹಾಗೂ ಹಾಲು ಕುಡಿಯಬಾರದು. ನೀರು ಕುಡಿದಲ್ಲಿ ಶೀತ ಹಾಗೂ ಕೆಮ್ಮು ಬರುವ ಸಾಧ್ಯತೆ ಇದೆ. ಸೀತಾಫಲದ ಸೇವನೆಯ ನಂತರ ಹಾಲು ಕುಡಿದರೆ ಜೀರ್ಣಕ್ರಿಯೆಯ ಮೇಲೆ ಇದು ಪರಿಣಾಮವನ್ನು ಬೀರುತ್ತದೆ. ಹಾಗಾಗಿ ಸೀತಾಫಲದ ಸೇವನೆಯ ನಂತರ ನೀರು ಹಾಗೂ ಹಾಲು ಕುಡಿಯದೇ ಇರುವುದು ಉತ್ತಮ. ದಿನದಲ್ಲಿ ಒಂದರಿಂದ ಎರಡು ಸೀತಾಫಲ ಹಣ್ಣಿನ ಸೇವನೆ ಆರೋಗ್ಯಕ್ಕೆ ಉತ್ತಮ. ಹೆಚ್ಚಾಗಿ ಸೇವಿಸಿದಲ್ಲಿ ಹೊಟ್ಟೆ ನೋವು, ಭೇದಿ ಉಂಟಾಗುವ ಸಾಧ್ಯತೆ ಇರುತ್ತದೆ.
ಸೇವಿಸುವ ಯಾವುದೇ ವಸ್ತುಗಳಲ್ಲಾದರೂ ಒಳಿತು ಕೆಡುಕು ಎರಡು ಇರುವುದು ಸಹಜ. ಯಾವುದಕ್ಕೆ ಒಳಿತು, ಯಾವುದಕ್ಕೆ ಕೆಡುಕು ಎಂದು ತಿಳಿದು ಉಪಯೋಗಿಸಿದರೆ ನಮ್ಮ ಆರೋಗ್ಯ ಸೌಖ್ಯವಾಗಿರುತ್ತದೆ. ಅರಿತು ಬಳಸಿ ಆರೋಗ್ಯ ಕಾಪಾಡಿಕೊಳ್ಳೊಣ.