ಅಡುಗೆ ಮಾಡುವ ಸಮಯದಲ್ಲಿ ತರಕಾರಿಗಳ ಹಾಗೂ ಹಣ್ಣುಗಳ ಸಿಪ್ಪೆ, ಸೊಪ್ಪುಗಳು ಇವುಗಳೆಲ್ಲವೂ ಹಸಿ ಕಸವೆಂದು ಪರಿಗಣಿಸಲಾಗುತ್ತದೆ. ಈ ಹಸಿ ಕಸಗಳನ್ನು ಎಸೆಯದೆ ಗೊಬ್ಬರವಾಗಿ ಪರಿವರ್ತಿಸಿ ಬಳಸಬಹುದು. ಈ ರೀತಿಯಲ್ಲಿ ಹಸಿ ಗೊಬ್ಬರವನ್ನು ತಯಾರುಮಾಡುವ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ. ಯಾವುದೇ ತರಕಾರಿಯ ಸಿಪ್ಪೆ, ಯಾವುದೇ ಹಣ್ಣಿನ ಸಿಪ್ಪೆ, ಸೊಪ್ಪುಗಳು ಜೊತೆಗೆ ದೇವರಿಗೆ ಏರಿಸಿ ತೆಗೆದ ಹೂವುಗಳು ಇವೆಲ್ಲವನ್ನು ಗೊಬ್ಬರ ಮಾಡಲು ಬಳಸಬಹುದು. ಈ ಹಸಿ ಕಸದಲ್ಲಿ ಗಿಡಗಳಿಗೆ ಬೇಕಾದ ನೈಟ್ರೋಜನ್, ಪೊಟ್ಯಾಸಿಯಮ್, ಪಾಸ್ಪೈಸ್ ಇವುಗಳೆಲ್ಲವೂ ಗಿಡಗಳಿಗೆ ಸಿಗುತ್ತದೆ. ಹಸಿ ಕಸಗಳು ಕಡಿಮೆ ಇದ್ದಲ್ಲಿ ಸಣ್ಣ ಪ್ಲಾಸ್ಟಿಕ್ ಡಬ್ಬಿಯಲ್ಲಿ ಹಾಕಿಕೊಳ್ಳಬಹುದು. ಹೆಚ್ಚಿದ್ದಲ್ಲಿ ದೊಡ್ಡ ಡಬ್ಬವನ್ನು ಬಳಸಬಹುದು. ಯಾವುದೆ ಗಾತ್ರದ ಡಬ್ಬವಾದರೂ ಅದರ ಕೆಳ ಭಾಗದಲ್ಲಿ ಹಾಗೂ ಸುತ್ತಲೂ ಸಣ್ಣ ಸಣ್ಣ ಗಾತ್ರದ ರಂಧ್ರ ಮಾಡಬೇಕು.
ಗೊಬ್ಬರ ಮಾಡಲು ಮುಖ್ಯವಾಗಿ ಗ್ರೀನ್ಸ್ ಹಾಗೂ ಬ್ರೌನ್ಸ್ ಗಳನ್ನು ಸರಿಯಾದ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು. ಗ್ರೀನ್ಸ್ ಎಂದರೆ ಅಡುಗೆ ಮನೆಯ ಹಸಿ ಕಸಗಳು. ಬ್ರೌನ್ಸ್ ಎಂದರೆ ಶೇಂಗಾದ ಸಿಪ್ಪೆ, ತೆಂಗಿನ ನಾರು, ಕೋಕೋ ಫಿಟ್ ಗಳು, ಮರದ ಪೌಡರ್. ಬ್ರೌನ್ಸ್ ಗಳಲ್ಲಿ ಕಾರ್ಬನ್ ಅಂಶ ಹೆಚ್ಚಿರುತ್ತದೆ. ಈಗ ಡಬ್ಬದಲ್ಲಿ ಯಾವಾಗಲೂ ಮೊದಲು ಬ್ರೌನ್ಸ್ ಗಳನ್ನು ಹಾಕಬೇಕು. ಮೊದಲ ಹಂತ ಬ್ರೌನ್ಸ್ ಹಾಕಿದರೆ ಎರಡನೆ ಹಂತ ಗ್ರೀನ್ಸ್ ಹಾಕಬೇಕು. ಗ್ರೀನ್ಸ್ ಅನ್ನು ಸಣ್ಣದಾಗಿ ತುಂಡರಿಸಿಕೊಂಡರೆ ಒಳ್ಳೆಯದು. ಹಸಿ ಕಸಗಳನ್ನು ಬೇಗ ಗೊಬ್ಬರವಾಗಿ ಪರಿವರ್ತಿಸಲು ಬೇಕಾದ ಸೂಕ್ಷ್ಮ ಜೀವಿಗಳು ಬೇಗ ಉತ್ಪಾದನೆಯಾಗಲು ಹುಳಿ ಮೊಸರು, ಹಸುವಿನ ಸಗಣಿಯನ್ನು ನೀರಲ್ಲಿ ಕಲಸಿ, ಗೋಮೂತ್ರಗಳನ್ನು
ಬಳಸಬಹುದು. ಹೀಗೆ ಹಂತ ಹಂತವಾಗಿ ಗ್ರೀನ್ಸ್ ಹಾಗೂ ಬ್ರೌನ್ಸ್ ಗಳನ್ನು ಹಾಕಿಕೊಳ್ಳಬಹುದು. ಜೊತೆಗೆ ನ್ಯೂಸ್ ಪೇಪರ್ ಸಹ ಹಾಕಿಕೊಳ್ಳಬಹುದು. ಡಬ್ಬ ತುಂಬುವ ವರೆಗೂ ಇದನ್ನು ಮುಂದುವರೆಸಬಹುದು. ಎರಡು ದಿನಗಳಿಗೊಮ್ಮೆ ಹಾಕಿರುವ ಗ್ರೀನ್ಸ್ ಹಾಗೂ ಬ್ರೌನ್ಸ್ ಗಳನ್ನು ಕಲಸಬೇಕು.
ಎಲ್ಲ ಕಸವನ್ನು ಹಂತ ಹಂತವಾಗಿ ಡಬ್ಬದಲ್ಲಿ ತುಂಬಿಯಾದ ಮೇಲೆ ಮೇಲುಗಡೆಗೆ ಹಾಕಿರುವ ಕಸ ಕಾಣದಂತೆ ದಪ್ಪವಾಗಿ ಮಣ್ಣನ್ನು ಹಾಕಿಕೊಳ್ಳಬೇಕು. ನಂತರ ಒಂದು ಮುಚ್ಚಳದ ಮೇಲೆ ಹಸಿ ಕಸವನ್ನು ಹಾಕಿದ ಡಬ್ಬಿಯನ್ನು ಸರಿಯಾಗಿ ಇಡಬೇಕು. ಯಾಕೆ ಹೀಗೆ ಮಾಡುವುದೆಂದರೆ ಹಸಿ ಗೊಬ್ಬರ ಆಗುವ ಸಮಯದಲ್ಲಿ ಕೊಳೆತ ನೀರು ಹರಿದು ಮುಚ್ಚಳದಲ್ಲಿ ಶೇಖರಣೆ ಆಗುತ್ತದೆ. ಈ ಕೊಳೆತ ನೀರು ಸಹ ಗಿಡಗಳಿಗೆ ತುಂಬಾ ಒಳ್ಳೆಯದು. ಗಿಡಗಳಿಗೆ ನೀರು ಹಾಕುವ ಸಂದರ್ಭದಲ್ಲಿ ಈ ನೀರನ್ನು ಅದರ ಜೊತೆಗೆ ಬೆರೆಸಿ ಹಾಕಬಹುದು. ಇದು ಗಿಡಗಳಿಗೆ ತುಂಬಾ ಒಳ್ಳೆಯದು. ಗೊಬ್ಬರ ಮಾಡುವಾಗ ಚಹಾ, ಕಾಫಿ ಮಾಡಿದ ಪುಡಿಗಳನ್ನು ಹಾಕಬಹುದು. ಆದರೆ ಬೇಯಿಸಿದ ಅನ್ನ ಹಾಗೂ ತರಕಾರಿಗಳನ್ನು ಬಳಸಬೇಡಿ. ಎರಡು ದಿನದ ಮೇಲೆ ಹಾಕಿರುವ ಗೊಬ್ಬರ ನೀರು ನೀರಾಗಿದ್ದರೆ ಬ್ರೌನ್ಸ್ ಗಳನ್ನು ಹಾಕಿ. ಒಂದು ವೇಳೆ ಒಣಗಿದೆ ಅನಿಸಿದರೆ ಸ್ವಲ್ಪ ನೀರನ್ನು ಹಾಕಿಕೊಳ್ಳಬಹುದು. ಚಳಿಗಾಲದಲ್ಲಿ ಗೊಬ್ಬರವಾಗಲು ಕನಿಷ್ಠ ಮೂರು ತಿಂಗಳಾದರೂ ಬೇಕು. ಅದೇ ಬೇಸಿಗೆಯಲ್ಲಿ 45 ದಿನಗಳಲ್ಲಿ ತಯಾರಾಗುತ್ತದೆ. ಇನ್ನೇನು ಗೊಬ್ಬರ ಅಸಗುತ್ತದೆ ಎನ್ನುವ ಸಮಯದಲ್ಲಿಯೆ ಗಿಡಗಳನ್ನು ಹಾಕಬಹುದು. ಕಸದ ತೊಟ್ಟಿಗೆ ಕಸವನ್ನು ಹಾಕದೆ ಮನೆಯಲ್ಲಿಯೇ ಗೊಬ್ಬರವಾಗಿ ಪರಿವರ್ತಿಸಿ ಬಳಸಿದರೆ ಉತ್ತಮ.