ಮನುಷ್ಯನ ಆರೋಗ್ಯದ ವಿಚಾರದಲ್ಲಿ ಅಲೋವೆರಾ ಬಹಳಷ್ಟು ಬೇಡಿಕೆಯಲ್ಲಿದೆ. ಇದನ್ನು ಹಳ್ಳಿಯ ಕಡೆ ಲೋಳೆಸರ ಎಂದು ಕರೆಯಲಾಗುತ್ತದೆ. ಅನೇಕ ರೋಗಗಳನ್ನು ಹೋಗಳಾಡಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ಲೋಳೆಸರ ಎಲೆಯಿಂದ ಮನುಷ್ಯನಿಗೆ ಬಹಳ ಉಪಯೋಗ ಇದೆ. ಅವುಗಳನ್ನು ನಾವು ಇಲ್ಲಿ ತಿಳಿಯೋಣ.
ಲೋಳೆಸರ ಎಲೆಯಲ್ಲಿ ಸಿಗುವ ಅಂಟನ್ನು ದೇಹದ ಯಾವುದೇ ಭಾಗಗಳಿಗೆ ಸುಟ್ಟು ಗಾಯವಾದಾಗ ತಕ್ಷಣವೇ ಹಚ್ಚಿದಲ್ಲಿ ಗಾಯದ ಯಾವುದೇ ಉರಿ, ನೋವು ಸ್ವಲ್ಪ ಹೊತ್ತಿನಲ್ಲಿ ಮಾಯವಾಗುತ್ತವೆ. ಇದನ್ನು ಹಚ್ಚುವುದರಿಂದ ಚರ್ಮವನ್ನು ಕಾಂತಿಯುತವಾಗಿ ಇಡುವುದರ ಜೊತೆಗೆ ಚರ್ಮಕ್ಕೆ ರಕ್ಷಣೆ ನೀಡುತ್ತದೆ. ಇನ್ನು ಪುರುಷರು ಶೇವ್ ಮಾಡಿಕೊಳ್ಳುವಾಗ ಗಾಯ ಆದಾಗ ಹಚ್ಚುವುದರಿಂದ ನೋವು, ಗಾಯ, ರಕ್ತ ಎಲ್ಲವೂ ಕಡಿಮೆ ಆಗುತ್ತದೆ. ಚಳಿಗಾಲದಲ್ಲಿ ಚರ್ಮ ಒಡೆಯುವುದು ಸಾಮಾನ್ಯ. ಈ ವೇಳೆ ಲೋಳೆರಸವನ್ನು ಜೇನುತುಪ್ಪದೊಂದಿಗೆ ಸೇರಿಸಿ ಮುಖಕ್ಕೆ ಹಚ್ಚಿ 15ನಿಮಿಷಗಳ ನಂತರ ತೊಳೆದರೆ ಮುಖ ಕಾಂತಿಯುತವಾಗುತ್ತದೆ.
ಆಸಿಡಿಟಿ ಇರುವವರು ಲೋಳೆಸರದ ದ್ರವವನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುತ್ತಾ ಬಂದರೆ ನಿಧಾನವಾಗಿ ಕಡಿಮೆಯಾಗುತ್ತದೆ. ಲೋಳೆಸರದ ಜೆಲ್ ನ್ನು ತಲೆಗೆ ಹಚ್ಚಿಕೊಂಡು ಅರ್ಧ ಗಂಟೆಯ ಬಳಿಕ ತಲೆಸ್ನಾನ ಮಾಡಿದರೆ ಕೂದಲು ಸೊಂಪಾಗಿ ಬೆಳೆಯುತ್ತದೆ. ತಲೆಯ ಹೊಟ್ಟು ಕೂಡ ದೂರವಾಗುತ್ತದೆ. ಇನ್ನು ಲೋಳೆಸರದ ತಿರುಳನ್ನು ಸೇವನೆ ಮಾಡುವುದರಿಂದ ಮೂಲವ್ಯಾಧಿ, ಜಠರದ ಹುಣ್ಣು ಕೂಡ ದೂರವಾಗುತ್ತವೆ. ಇದನ್ನು ಅಲ್ಪಪ್ರಮಾಣದಲ್ಲಿ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
ಮುಖದ ಮೇಲೆ ಕಾಣುವ ನೆರಿಗೆ, ಕಪ್ಪುಕಲೆ, ಮೊಡವೆ ತೊಲಗಿಸಲು ಒಂದು ತಿಂಗಳ ಕಾಲ ಲೋಳೆಸರವನ್ನು ಹಚ್ಚಿ ಗಂಟೆಗಳ ಕಾಲ ಬಿಟ್ಟರೆ ಸುಕ್ಕುಗಟ್ಟುವಿಕೆ ಮಾಯವಾಗಿ ಮುಖದಲ್ಲಿ ಹೊಸ ಕಾಂತಿ ಬರುತ್ತದೆ. ಒಣಚರ್ಮ ಹೊಂದಿದವರು ಇದನ್ನು ಬಳಸಿದರೆ ಬಹಳ ಉತ್ತಮ. ಅದಲ್ಲದೇ ಮುಖಕ್ಕೆ ಮೇಕಪ್ ಮಾಡುವ ಮೊದಲು ಲೋಳೆರಸ ಹಚ್ಚಿ ಮುಖ ತೊಳೆದು ಆಮೇಲೆ ಮೇಕಪ್ ಮಾಡಿಕೊಂಡರೆ ಮುಖದಲ್ಲಿ ಕಾಂತಿ ಹೆಚ್ಚುತ್ತದೆ. ಇಷ್ಟೊಂದು ಪ್ರಯೋಜನ ಇರುವ ಅಲೋವೆರಾ ಅನ್ನು ನೀವು ಉಪಯೋಗಿಸಿ.