ಸಿಲ್ಲಿ ಲಲ್ಲಿ ಈ ಧಾರಾವಾಹಿಯ ಬಗ್ಗೆ ಯಾರಿಗೆ ಗೊತ್ತಿಲ್ಲ. ಒಂದು ಸಮಯದಲ್ಲಿ ಮನೆಯಲ್ಲಿ ಎಲ್ಲರೂ ಕುಳಿತುಕೊಂಡು ಈ ಧಾರಾವಾಹಿಯನ್ನು ನೋಡಿ ನಕ್ಕಿದ್ದು ಇದೆ. ಇದು ಸುಂದರವಾದ ಹಾಸ್ಯದ ಧಾರಾವಾಹಿ ಆಗಿತ್ತು. ಅದರಲ್ಲಿ ಕಂಪೌಂಡರ್ ಪಾತ್ರ ವಹಿಸಿದ್ದ ಗೋವಿಂದ ಎಲ್ಲರಿಗೂ ಗೊತ್ತಿರಲೇಬೇಕು.
ಸಂಗಪ್ಪ ಉಪಾಸೆ ಅಂದರೆ ಗೋವಿಂದ ಅವರು ಬಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಅಂಜುಟಗಿಯಲ್ಲಿ ಜನಿಸಿದರು. ಇವರ ತಂದೆ ಮತ್ತು ತಾಯಿ ಶಾಲೆಗೆ ಹೋಗದ ಅನಕ್ಷರಸ್ಥರು. ಆದರೆ ಮಗ ಹಾಗಾಗಬಾರದೆಂಬ ಆಶಯವನ್ನು ಅವರು ಇಟ್ಟುಕೊಂಡಿದ್ದರು. ಬಡತನ ಇವರ ಜೀವನದಲ್ಲಿ ಬಹಳ ಆಟವಾಡಿಬಿಟ್ಟಿತು. ಆದರೆ ಅವರಿಗೆ ಅಕ್ಷರಗಳ ಜೊತೆ ಆಟ ಆಡಬೇಕೆಂಬ ಕನಸು ಇತ್ತು. ಕಲಿಯಲೇಬೇಕೆಂಬ ಉತ್ಸಾಹ ಅವರಲ್ಲಿತ್ತು. ಅದಕ್ಕಾಗಿ 10km ದೂರ ನಡೆದು ಶಾಲೆಗೆ ಹೋಗುತ್ತಿದ್ದರು. ಹೊಟ್ಟೆಪಾಡಿಗಾಗಿ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದರು.
ಪಾತ್ರೆ ತೊಳೆಯುವುದು, ಕಸ ಗುಡಿಸುವುದು ಎಲ್ಲಾ ಮಾಡಿದರೂ ಸಹ ಓದಬೇಕೆಂಬ ಹಸಿವು ಯಾವತ್ತಿಗೂ ಕಡಿಮೆ ಆಗಿರಲಿಲ್ಲ. ಬರಗಾಲ ಬಂತು ಎಂದು ಬೇರೆಕಡೆ ಹೋಗಬೇಕಾಯಿತು. ಇರುವುದಕ್ಕೆ ಮನೆ ಇರದೆ ಫುಟ್ಬಾತ್ ನಲ್ಲಿ ವಾಸ ಮಾಡಿದರು. ಎಷ್ಟೋ ಕಷ್ಟಪಟ್ಟು ಚಿಕ್ಕಪ್ಪ ಪ್ರಭು ಉಪಾಸೆ ಅವರ ಸಹಾಯದಿಂದ ಧಾರವಾಡದಲ್ಲಿ ಪ್ರೌಢಶಾಲೆಗೆ ಸೇರಿಕೊಳ್ಳುತ್ತಾರೆ. ಅಲ್ಲೂ ಕೂಡ ಲಾಟರಿ ಟಿಕೆಟ್ ಗಳನ್ನು ಮಾರಿ 150ರೂಪಾಯಿ ಹಾಸ್ಟೇಲ್ ಫೀ ಕಟ್ಟುತ್ತಿದ್ದರು. ಬಿಡುವಿನ ವೇಳೆಯಲ್ಲಿ ಕವಿತೆಗಳನ್ನು ಬರೆಯುತ್ತಿದ್ದರು. ಇದೇ ಸಮಯದಲ್ಲಿ ಮನುಷ್ಯ ಜಾತಿ ಜಾತಿ ಎನ್ನುವ ಕಲ್ಪನೆಯನ್ನು ಬಿಡಬೇಕು ಎಂಬ ಕವಿತೆ ಕೂಡ ಬರೆದಿದ್ದರು. ಈ ಕವಿತೆಯನ್ನು ಓದಿ ಹಾಸ್ಟೇಲ್ ನವರು ಹೊರ ಹಾಕಿದರು.
ಆದರೂ ಬೇಸರ ಮಾಡಿಕೊಳ್ಳಲಿಲ್ಲ. ಏಕೆಂದರೆ ಒಂದಲ್ಲ ಒಂದು ದಿನ ದೊಡ್ಡ ಆಫೀಸರ್ ಆಗುತ್ತೀನಿ ಎನ್ನುವ ಛಲ ಅವರಲ್ಲಿತ್ತು. ಹೇಗೋ ಬೇರೆಯವರ ಸಹಾಯದಿಂದ ಬೇರೆಯವರ ಜಾಗದಲ್ಲಿ ಇದ್ದುಕೊಂಡು ಕಷ್ಟಪಟ್ಟು ಓದಿ ಬಿ. ಎ. ಪಾಸ್ ಮಾಡಿಕೊಂಡರು. ಇದರ ಜೊತೆಗೆ ಕಲಾವಿದನೊಬ್ಬ ಸ್ರಷ್ಟಿಯಾಗುತ್ತಿದ್ದ. ನಟನೆಯನ್ನು ಮಾಡಬೇಕೆಂಬ ಹಂಬಲ ಕೂಡ ಚಿಗುರೊಡೆಯುತ್ತಿತ್ತು. ಎಲ್ಲಾದರೂ ಅವಕಾಶ ಸಿಗಬಹುದಾ ಎಂದು ಬೆಂಗಳೂರಿಗೆ ಬರುತ್ತಾರೆ. ಹೇಗೋ ಬ್ರಹ್ಮ ವಿದ್ಯಾಲಯದ ಆಶ್ರಯವನ್ನು ಪಡೆದುಕೊಳ್ಳುತ್ತಾರೆ. ಅಲ್ಲಿ ಇಲ್ಲಿ ಓಡಾಡುತ್ತಾ ಎಂ.ಎ. ಪದವಿಯನ್ನು ಮುಗಿಸಿ ಜೊತೆಗೆ ಕೆ. ಎ. ಎಸ್. ಪರೀಕ್ಷೆ ಬರೆದರು.
ನಂತರ ಸಿಲ್ಲಿ ಲಲ್ಲಿಯಲ್ಲಿ ಕಂಪೌಂಡರ್ ಆಗಿ ನಟಿಸುವ ಅವಕಾಶ ಸಿಗುತ್ತದೆ. ಮೊದಲು ತಿಂಗಳಿಗೆ ಒಂದು ಬಾರಿ ನಟಿಸುವ ಅವಕಾಶ ಸಿಕ್ಕಿತ್ತು. ನಂತರ ಅವರ ನಟನೆಯ ‘ಅರ್ಥವಾಯಿತು ಬಿಡಿ’ ಎನ್ನುವ ಮಾತು ಎಷ್ಟು ಪ್ರಸಿದ್ಧಿ ಆಯಿತು ಎಂದರೆ ತಿಂಗಳಿನ ಎಲ್ಲಾ ದಿನ ಇವರಿಗೆ ನಟಿಸುವ ಅವಕಾಶ ಇವರಿಗೆ ದೊರೆಯಿತು. ಇದರ ಜೊತೆಗೆ ಬಂಪರ್ ಆಫರ್ ಕೂಡ ಕಾದಿತ್ತು. ಅದೇ ಕೆ.ಎ.ಎಸ್. ಫಲಿತಾಂಶ. ಕೆ.ಎ.ಎಸ್ ನ್ನು ಇವರು ಪಾಸಾಗಿದ್ದರು. ನಂತರ ಬೆಂಗಳೂರು ಮಹಾನಗರ ಪಾಲಿಕೆಯ ಅಸ್ಸಿಸ್ಟೆಂಟ್ ಕಂಟ್ರೋಲರ್ ಹುದ್ದೆಗೆ ಪೋಸ್ಟಿಂಗ್ ಕೂಡ ಆದರು. ಬದುಕು ಇಷ್ಟೊಂದು ಎತ್ತರಕ್ಕೆ ಕೊಂಡೊಯ್ಯುವ ಮೊದಲು ಅವರಿಗೆ ಕ್ಷಣ ಕ್ಷಣಕ್ಕೂ ಹೆದರಿಸಿದೆ. ಕಷ್ಟ ಕೊಟ್ಟಿದೆ,ಅವಮಾನ ಮಾಡಿದೆ,ಆದರೆ ಇವತ್ತು ಎಲ್ಲರಿಗೂ ಮಾದರಿಯಾಗಿದ್ದಾರೆ.