ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯನ್ನು ಬರದ ನಾಡು ಎನ್ನುವ ಹೆಸರಿನಿಂದ ಕರೆಯುತ್ತಾರೆ. ಯಾಕೆಂದರೆ ಚಿತ್ರದುರ್ಗ ಬಯಲುಸೀಮೆ. ಮಳೆಗಾಲದಲ್ಲಿ ಮಾತ್ರವೇ ನೀರು ತುಂಬಿರುತ್ತದೆ ಉಳಿದಂತೆ ನೀರಿನ ಕೊರತೆ ಜನರನ್ನು ಕಾಡುತ್ತದೆ. ಇಂತಹ ಬರದ ನಾಡಿನಲ್ಲಿ ಜೋಗಿಮಟ್ಟಿ ಕಾಡಿನಲ್ಲಿ ಇರುವ ಅಪರೂಪದ ಫಾಲ್ಸ್ ಹಿಮವತ್ ಕೇದಾರ ಫಾಲ್ಸ್ ಬಗ್ಗೆ ನಾವು ತಿಳಿಯೋಣ.
ಬರದನಾಡಿನಲ್ಲಿ ಹಿಮವತ್ ಕೇದಾರ ಫಾಲ್ಸ್ ಧುಮ್ಮಿಕ್ಕುತ್ತಿದೆ. ಅರೆ ಇದು ಹೇಗೆ ಎಂದು ಅಂದುಕೊಂಡರೆ, ಅತಿಯಾದ ಮಳೆಯ ಕಾರಣ ಬರದ ನಾಡು ಕೂಡ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ಎಷ್ಟೋ ದಿನಗಳ ನಂತರ ಬರದನಾಡಿನಲ್ಲಿ ಶಿರೋಮಣಿ ಗಂಗೆಯೆ ದುಮ್ಮಿಕ್ಕಿ ಹರಿಯುತ್ತಿರುವ ಭಾವನೆ ಮೂಡುತ್ತಿದೆ ಫಾಲ್ಸ್ ನ ಮೇಲಿಂದ ಬೀಳುವ ನೀರನ್ನು ಕಂಡಾಗ. ಚಿತ್ರದುರ್ಗದಿಂದ ಜೋಗಿಮಟ್ಟಿಗೆ ಹೋಗುವ ದಾರಿಯಲ್ಲಿ ಎಂಟು ಕಿಲೊ ಮೀಟರ್ ಸಾಗಿದರೆ ಒಂದು ಇಳಿಜಾರು ದಾರಿ ಸಿಗುತ್ತದೆ. ಅಲ್ಲಿಂದ ಅರ್ಧ ಕಿಲೊ ಮೀಟರ್ ಹತ್ತಿರದಲ್ಲಿ ಪ್ರಕೃತಿಯ ಮಧ್ಯೆ ತನ್ನ ಸೌಂದರ್ಯ ಹರಡಿ ನಿಂತಿದೆ ಹಿಮವತ್ ಕೇದಾರ ಫಾಲ್ಸ್. ಬಸವನ ಬಾಯಿಯ ಆಕಾರದ ಬಂಡೆಯಿಂದ ನೀರು ಹರಿದು ಬರುವುದರಿಂದ ಹಿಮವತ್ ಕೇದಾರ ಫಾಲ್ಸ್ ಗೆ ಬಸವನ ಬಾಯಿ ಎಂಬ ಹೆಸರು ಇದೆ.
ಜೋಗಿಮಟ್ಟಿ ಅರಣ್ಯ ಪ್ರದೇಶದ ಸುಂದರ ನೋಟದ ಜೊತೆಗೆ ಫಾಲ್ಸ್ ಕೂಡಾ ಸಿಗುತ್ತದೆ. ನೀರು ಎಲ್ಲಿಂದ ಹರಿದು ಬರುತ್ತಿದೆ ಎಂದು ಯಾರಿಗೂ ತಿಳಿದಿಲ್ಲ. ಕೆಲವರು ಬಂಡೆಯ ಮೇಲಿಂದ ಹರಿದು ಬರುತ್ತದೆ ಎನ್ನುತ್ತಾರೆ. ಕೆಲವರು ಸಾಕ್ಷಾತ್ ಬಸವನ ಬಾಯಿಂದಲೆ ಇಲ್ಲಿಗೆ ನೀರು ಬರುತ್ತದೆ ಎನ್ನುತ್ತಾರೆ. ಕೇದಾರ ಫಾಲ್ಸ್ ಗೆ ಒಂದು ದಿನದ ಪ್ರವಾಸಕ್ಕೆ ತುಂಬಾ ಒಳ್ಳೆಯದು ಯಾವುದೆ ಕರೋನಾ ಸಂಬಂಧಿತ ಹೆದರಿಕೆಗಳ ಅಗತ್ಯ ಇರುವುದಿಲ್ಲ. ಎಂಬುದು ಸ್ಥಳೀಯರ ಅಭಿಪ್ರಾಯ. ಬರದ ನಾಡು ದುರ್ಗದಲ್ಲಿ ಒಂದು ವಾರದಿಂದ ಆದ ಉತ್ತಮ ಮಳೆಯ ಪರಿಣಾಮ ಜೋಗಿಮಟ್ಟಿ ಪರಿಸರ ಹಸಿರು ಸೀರೆಯುಟ್ಟು ಕಂಗೊಳಿಸುತ್ತಿದೆ. ಫಾಲ್ಸ್ ಕೂಡ ನೀರು ತುಂಬಿಕೊಂಡು ನಿಂತಿದೆ. ಇದರಿಂದಾಗಿ ಪ್ರವಾಸಿಗಳ ಹಾಗೂ ಸ್ಥಳಿಯರ ದಂಡು ನೆರೆಯುತ್ತಿದೆ. ಚಿತ್ರದುರ್ಗದ ಕೇದಾರ ಫಾಲ್ಸ್ ಕೆಲವು ದಿನಗಳು ಮಾತ್ರ ನೀರು ಇರುತ್ತದೆ. ಉತ್ತಮ ಮಳೆ ಆದರೆ ಮಾತ್ರ ಈ ಫಾಲ್ಸ್ ನೋಡಲು ಸಿಗುತ್ತದೆ. ಮಲೆನಾಡಿನಲ್ಲಿ ಫಾಲ್ಸ್ ನ ಸುಂದರ ನೋಟ. ಯಾವ ಸಮಯದಲ್ಲಿ ಕೂಡಾ ದೊರಕುತ್ತದೆ. ಆದರೆ ಬರದ ನಾಡಿನ ಈ ಅಮೂಲ್ಯ ನೋಟ ಕೆಲವೆ ದಿನಗಳದ್ದು ಹಾಗಾಗಿ ಪ್ರತಿಯೊಬ್ಬರು ನೋಡಿ ಎಂದು ಸ್ಥಳೀಯರು ಹೇಳುತ್ತಾರೆ.
ಬರದ ನಾಡಿನಲ್ಲಿ ಆಗುತ್ತಿರುವ ಉತ್ತಮ ಮಳೆಯಿಂದ ಹಳ್ಳಗಳು ತುಂಬಿ ಹರಿಯುತ್ತಿದ್ದು, ಚಿತ್ರದುರ್ಗದ ಗಿರಿಧಾಮ ಹಾಗೂ ಬೆಟ್ಟಗಳು ಹಸಿರಿನಿಂದ ಕಂಗೊಳಿಸುತ್ತಿದೆ. ಅಪರೂಪಕ್ಕೆ ಸಿಗುವ ಹಿಮವತ್ ಕೇದಾರ ಫಾಲ್ಸ್ ನೋಡಲು ಸ್ಥಳೀಯರು ಆಗಮಿಸುತ್ತಿದ್ದು, ಅವರಲ್ಲಿ ಸಂತಸ ಮನೆ ಮಾಡಿದೆ.