ಮಹಾಭಾರತದ ಕಥೆ ಕೇಳಿದ ಮೇಲೆ ನಮಗೆ ಅರ್ಜುನ ಹಾಗೂ ಕರ್ಣ ಇಬ್ಬರು ಅವರವರ ಪಾತ್ರ ನಿರ್ವಹಿಸಿದ ಪಾತ್ರ ಇಷ್ಟವಾಗುತ್ತದೆ. ಆದರೆ ಒಂದು ಸಮಯದಲ್ಲಿ ಅರ್ಜುನ ಕೂಡ ಅಹಂಕಾರ ಪಟ್ಟಿದ್ದನಂತೆ ಆ ಕಥೆ ಏನೆಂಬುದನ್ನು ನಾವು ತಿಳಿಯೋಣ.
ಕರ್ಣ ಮಹಾರಥಿ ಎಂದು ಹಾಗೂ ದಾನ ಶೂರ ಎಂದು ಹೆಸರು ಪಡೆದಿದ್ದ. ಶ್ರೇಷ್ಠ ವೀರ ಕೂಡ. ಅರ್ಜುನ ಶ್ರೇಷ್ಠ ಯೋಧನಾದರೂ ಕರ್ಣನಿಗೆ ಹೋಲಿಸಿದಾಗ ಅರ್ಜುನ ಹಾಗೂ ಕರ್ಣ ಸರಿಸಾಟಿ ಆಗಿರಲಿಲ್ಲ. ಎಷ್ಟೋ ಬಾರಿ ಇವರಿಬ್ಬರ ಮದ್ಯದಲ್ಲಿ ಕಾಳಗ ಅಥವಾ ವೀರತ್ವದ ಪ್ರದರ್ಶನ ನಡೆದಾಗ ಕರ್ಣ ಅರ್ಜುನನನ್ನು ಸೋಲಿಸಿದ್ದ. ದುರ್ಯೋಧನ ತನ್ನ ಆತ್ಮೀಯ ಸ್ನೇಹಿತನಿಗೆ ಅಂಗ ರಾಜ್ಯವನ್ನು ಕೊಟ್ಟಿದ್ದ. ಅಲ್ಲಿ ಕೂಡ ಕರ್ಣನ ದಾನದ ಅರಿವಿದ್ದ ಪ್ರಜೆಗಳು ಅವನನ್ನು ರಾಜನಾಗಿ ಒಪ್ಪಿದ್ದರು. ದಿನಕ್ಕೆ ಒಂದು ಬಾರಿಯಾದರೂ ದಾನ ಮಾಡುವ ನಿಯಮ ಹಾಕಿಕೊಂಡಿದ್ದ ಕರ್ಣ. ಯಾರೇ ಕರ್ಣನ ಬಳಿಗೆ ಬೇಡಿಕೆ ಇಟ್ಟು ಹೋದರೆ ಬರಿಗೈನಲ್ಲಿ ತಿರುಗಿ ಬಂದಿದ್ದು ಉದಾಹರಣೆಯಲ್ಲಿ ಇರಲಿಲ್ಲ. ಇದೆಲ್ಲದರ ಅರಿವಿದ್ದ ಕೃಷ್ಣ ಒಂದು ಬಾರಿ ಕರ್ಣನನ್ನು ಹೊಗಳುತ್ತಾನೆ. ಇದರಿಂದ ಅಸೂಯೆಗೊಂಡ ಅರ್ಜುನ ಅಂಗ ಎಂಬ ಚಿಕ್ಕ ದೇಶಕ್ಕೆ ರಾಜ ಆ ಕರ್ಣ. ನಾನು ಇಷ್ಟು ದೊಡ್ಡ ಸಾಮ್ರಾಜ್ಯದ ರಾಜ. ನಾನು ಮಾಡಿದಷ್ಟು ದಾನ ಕರ್ಣ ಮಾಡಲು ಸಾಧ್ಯವಿಲ್ಲ ಎಂದ. ಅರ್ಜುನನ ಅಹಂಕಾರ ನೋಡಿ ಸಮಯ ಬಂದಾಗ ಉತ್ತರಿಸುವೆ ಎಂದು ನಕ್ಕನು ಕೃಷ್ಣ.
ಮಳೆಗಾಲದ ಸಮಯದಲ್ಲಿ ಜೋರಾದ ಮಳೆ, ಐದು ದಿನಗಳು ನಿರಂತರವಾಗಿ ಮಳೆಯಾಗುತ್ತಲೆ ಇರುತ್ತದೆ. ಅರ್ಜುನನ ಅರಮನೆಗೆ ಬಂದ ಒಬ್ಬ ಬ್ರಾಹ್ಮಣ ತಂದೆಯ ಅಂತ್ಯದ ಕಾರ್ಯಕ್ಕೆ ಗಂಧದ ಕಟ್ಟಿಗೆಗಳ ಅವಶ್ಯಕತೆ ಇದೆ. ಜೋರಾದ ಮಳೆಯಿಂದ ಒಣ ಕಟ್ಟಿಗೆ ಸಿಗುತ್ತಿಲ್ಲ. ಹೇಗಾದರೂ ಮಾಡಿ ವ್ಯವಸ್ಥೆ ಮಾಡಿಕೊಡಿ ಎಂಬ ಬೇಡಿಕೆ ಇಡುತ್ತಾನೆ. ಎಷ್ಟು ಯೋಚಿಸಿದರೂ ಅರ್ಜುನನಿಗೆ ಉಪಾಯ ದೊರಕುವುದಿಲ್ಲ. ಇದನ್ನು ಆ ಬ್ರಾಹ್ಮಣನ ಬಳಿಯು ಹೇಳಿ ಕ್ಷಮೆ ಕೋರುತ್ತಾನೆ. ಇದರಿಂದ ಬೇಸರದಲ್ಲಿ ಹೊರಟಿದ್ದ ಬ್ರಾಹ್ಮಣನನ್ನು ಕೃಷ್ಣ ಕರ್ಣನ ಬಳಿ ಕಳುಹಿಸುತ್ತಾನೆ. ಅಷ್ಟರಲ್ಲಿ ಅಲ್ಲಿಗೆ ಬಂದ ಅರ್ಜುನ ಇದು ಅಸಾಧ್ಯ ಎಂದನು. ಕರ್ಣನು ಬ್ರಾಹ್ಮಣನಿಗೆ ಒಣ ಕಟ್ಟಿಗೆ ನೀಡಲು ಸೋತರೆ ದಾನಶೂರ ಎಂಬ ಬಿರುದು ತೆಗೆದುಹಾಕುವೆ ಎಂದನು. ಅರ್ಜುನನ ಅಹಂಕಾರದ ಅರಿವಿತ್ತು ಕೃಷ್ಣನಿಗೆ. ಕರ್ಣನ ಆಸ್ಥಾನ ತಲುಪಿದ ಬ್ರಾಹ್ಮಣ ಕರ್ಣನ ಬಳಿ ತನ್ಮ ಮನವಿ ಸಲ್ಲಿಸುತ್ತಾನೆ. ಎಲ್ಲವನ್ನು ಸರಿಯಾಗಿ ಕೇಳಿಸಿಕೊಂಡ ಕರ್ಣ, ಅರಮನೆಯ ಗಂಧದ ಕಂಬಗಳನ್ನು ಕಿತ್ತು ಕೊಡುವಂತೆ ಆಜ್ಞಾಪಿಸುತ್ತಾನೆ. ಇದನ್ನು ತಿಳಿದ ಅರ್ಜುನನಿಗೆ ಅವಮಾನ ಆದಂತೆ ಭಾಸವಾಗುತ್ತದೆ. ಯಾಕೆಂದರೆ ಕರ್ಣನ ಅರಮನೆಯಲ್ಲಿರುವ ಗಂಧದ ಕಂಬಗಳಿಗಿಂತ ಹೆಚ್ಚು ಕಂಬ ಅರ್ಜುನನ ಅರಮನೆಯಲ್ಲಿ ಇರುತ್ತದೆ.
ಕರ್ಣನ ದಾನದ ರೀತಿಗೆ ಇದು ಒಂದು ಸಣ್ಣ ಉದಾಹರಣೆ. ಇದನ್ನು ಕೇಳಿದಾಗ ಕರ್ಣನ ಮಹತ್ತರ ಗುಣದ ಅರಿವಾಗುತ್ತದೆ. ಕರ್ಣನಂತಹ ದಾನಿ ಮತ್ತೆಂದೂ ಸಿಗುವುದಿಲ್ಲ. ಕರ್ಣ ಶ್ರೇಷ್ಠನೊ ಅಥವಾ ಅರ್ಜುನ ಶ್ರೇಷ್ಠನೊ ಓದುಗರಿಗೆ ಬಿಟ್ಟ ವಿಷಯ.