ಊಟದ ಜೊತೆಗೆ ಉಪ್ಪಿನಕಾಯಿ ಇದ್ದರೆ ಅದರ ರುಚಿಯೇ ಬೇರೆ. ಹಿಂದೆಲ್ಲ ನಮ್ಮ ನಮ್ಮ ಮನೆಗಳಲ್ಲಿಯೇ ವರ್ಷಕ್ಕೆ ಸಾಕಾಗುವಷ್ಟು ಬೇರೆ ಬೇರೆ ವಿಧದ ಉಪ್ಪಿನಕಾಯಿಗಳನ್ನು ನಮ್ಮ ನಮ್ಮ ಅಮ್ಮಂದಿರು, ಅಜ್ಜಿಯಂದಿರು ಮಾಡಿಡುತ್ತಾ ಇದ್ದರು. ಕಾಲ ಬದಲಾದಂತೆ ಮನೆಯಲ್ಲಿ ಮಾಡಿದ ಉಪ್ಪಿನಕಾಯಿ ಕಣ್ಮರೆ ಆಗಿ ಎಲ್ಲಾ ರೆಡಿಮೇಡ್ ಉಪ್ಪಿನಕಾಯಿಗಳನ್ನು ಬಳಸಲು ಆರಂಭಿಸಿದ್ದಾರೆ. ಹೊರಗಡೆಯಿಂದ ತಂದು ತಿನ್ನುವ ಉಪ್ಪಿನಕಾಯಿ ಅಥವಾ ಯಾವುದೇ ಪದಾರ್ಥ ಎಷ್ಟರ ಮಟ್ಟಿಗೆ ಆರೋಗ್ಯಕ್ಕೆ ಒಳ್ಳೆಯದು ಅಥವಾ ಕೆಟ್ಟದ್ದು ಎನ್ನುವುದು ತಿಳಿದಿರುವುದಿಲ್ಲ. ಹಾಗಾಗಿ ಆದಷ್ಟು ನಾವು ಎಲ್ಲಾ ಪದಾರ್ಥಗಳನ್ನು ಮನೆಯಲ್ಲಿಯೇ ಮಾಡಿಕೊಳ್ಳುವುದು ತುಂಬಾ ಒಳ್ಳೆಯದು. ಈ ಲೇಖನದಲ್ಲಿ ನಾವು ಮನೆಯಲ್ಲಿಯೇ ರುಚಿಯಾಗಿ ನಿಂಬು ಉಪ್ಪಿನಕಾಯಿ ಹೇಗೆ ಮಾಡೋದು ಅನ್ನೋದನ್ನ ತಿಳಿದುಕೊಳ್ಳೋಣ.
ಮೊದಲು ನಿಂಬೂ ಉಪ್ಪಿನಕಾಯಿ ಮಾಡಲು ಬೇಕಾಗಿರುವ ಸಾಮಗ್ರಿಗಳು ಎನು ಅಂತ ನೋಡೋಣ.
ಬೇಕಾಗಿರುವ ಸಾಮಗ್ರಿಗಳು : ನಿಂಬೆ ಹಣ್ಣು 8, ಸಾಸಿವೆ ಒಂದು ಟೀ ಸ್ಪೂನ್, ಮೆಂತೆ ಕಾಳು ಕಾಲು ಟೀ ಸ್ಪೂನ್, ಕೆಂಪು ಮೆಣಸಿನ ಪುಡಿ, ಎಣ್ಣೆ, ಅರಿಶಿಣ, ಇಂಗು, ಉಪ್ಪು
ಮಾಡುವ ವಿಧಾನ :- ಉಪ್ಪಿನಕಾಯಿ ಮಾಡುವ ಅರ್ಧ ಗಂಟೆ ಮೊದಲು ನಿಂಬೆ ಹಣ್ಣನ್ನು ಚೆನ್ನಾಗಿ ತೊಳೆದು ನೀರಿನ ಅಂಶ ಇಲ್ಲದಂತೆ ಚೆನ್ನಾಗಿ ಕಾಟನ್ ಬಟ್ಟೆಯಿಂದ ಒರೆಸಿ ಇಟ್ಟುಕೊಳ್ಳಬೇಕು. ನಂತರ ನಿಂಬೆ ಹಣ್ಣನ್ನು ಬೇಕಾದ ಗಾತ್ರಕ್ಕೆ ಕಟ್ ಮಾಡಿಕೊಳ್ಳಬೇಕು. ನಂತರ ನಿಮಗೆ ರುಚಿಗೆ ಬೇಕಾದಷ್ಟು , ನಿಂಬೆ ಹಣ್ಣನ್ನು ತೆಗೆದುಕೊಂಡ ಪ್ರಮಾಣಕ್ಕೆ ಅನುುಣವಾಗಿ ಉಪ್ಪನ್ನು ಹಾಕಿ ಚೆನ್ನಾಗಿ ಕಲಸಿ ಉಪ್ಪಿನಲ್ಲಿ ಸ್ವಲ್ಪ ಮೆತ್ತಗಾಗಬೇಕು. ನಂತರ ಇದನ್ನು ಒಂದು ಗಾಳಿ ಆಡದ ಡಬ್ಬದಲ್ಲಿ ಹಾಕಿ ಎಂಟರಿಂದ ಹತ್ತು ದಿನಗಳ ವರೆಗೂ ಮಾಗಲು ಬಿಡಬೇಕು. ಹತ್ತು ದಿನಗಳ ನಂತರ ನಿಂಬೆಕಾಯಿ / ಹಣ್ಣು ಚೆನ್ನಾಗಿ ಮಾಗಿರುವುದು. ಇದನ್ನು ಒಂದು ತೇವಾಂಶ ಇಲ್ಲದ ಒಣಗಿದ ಪಾತ್ರೆಗೆ ಹಾಕಿಕೊಳ್ಳಬೇಕು. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಫ್ರಿಡ್ಜ್ ನಿಂದ ತೆಗೆದ ನಿಂಬೆ ಹಣ್ಣನ್ನು ನೇರವಾಗಿ ತಕ್ಷಣವೇ ಬಳಸಬಾರದು.
ನಂತರ ಒಂದು ಪ್ಯಾನ್ ನಲ್ಲಿ ಸಾಸಿವೆ ಕಾಳು ಮತ್ತು ಮೆಂತೆ ಹಾಕಿ ಚೆನ್ನಾಗಿ ಹುರಿದುಕೊಂಡು ಪುಡಿ ಮಾಡಿಕೊಳ್ಳಬೇಕು. ನಂತರ ಅದೇ ಪ್ಯಾನ್ ಗೆ ಮುಕ್ಕಾಲು ಕಪ್ ಅಷ್ಟು ಎಣ್ಣೆ ಹಾಕಿ ಬಿಸಿ ಮಾಡಿ ಬಿಸಿ ಆದ ಮೇಲೆ ಕಾಲು ಟೀ ಸ್ಪೂನ್ ಸಾಸಿವೆ ಹಾಕಿ, ಸಾಸಿವೆ ಸಿಡಿದ ಮೇಲೆ ಸ್ಟೋವ್ ಆಫ್ ಮಾಡಿ ಅರ್ಧ ಟೀ ಸ್ಪೂನ್ ಅರಿಶಿನ ಹಾಗೂ ಅರ್ಧ ಟೀ ಸ್ಪೂನ್ ಇಂಗು ಹಾಕಿ ಎಣ್ಣೆಯನ್ನು ಪೂರ್ತಿಯಾಗಿ ತಣ್ಣಗಾಗಲು ಬಿಡಬೇಕು. ನಂತರ ಉಪ್ಪಿನಲ್ಲಿಯೆ ಮಾಗಿದ ನಿಂಬೆ ಹಣ್ಣಿಗೆ ಖಾರಕ್ಕೆ ಅನುಗುಣವಾಗಿ ಕೆಂಪು ಮೆಣಸಿನ ಪುಡಿ ಹಾಕಿ ಚೆನ್ನಾಗಿ ಕಲಸಿ ಮೊದಲೇ ಮಾಡಿಟ್ಟುಕೊಂಡ ಸಾಸಿವೆ ಹಾಗೂ ಮೆಂತೆ ಪುಡಿಯನ್ನು ಹಾಕಿ ಕಲಸಬೇಕು ಹಾಗೂ ಇದೆ ಸಮಯದಲ್ಲಿಯೇ ರುಚಿ ನೋಡಿಕೊಂಡು, ಮತ್ತಷ್ಟು ಉಪ್ಪು ಅಥವಾ ಖಾರ ಬೇಕಿದ್ದಲ್ಲಿ ಸರಿ ಮಾಡಿಕೊಳ್ಳಬಹುದು. ನಂತರ ಮೊದಲೇ ಬಿಸಿ ಮಾಡಿಟ್ಟ ಎಣ್ಣೆ ಪೂರ್ತಿಯಾಗಿ ತಣ್ಣಗಾದ ಮೇಲೆ ಎಣ್ಣೆಯನ್ನೂ ಸಹ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಗಾಳಿ ಆಡದ ಗಾಜಿನ ಡಬ್ಬದಲ್ಲಿ ಹಾಕಿ ಹತ್ತು ದಿನಗಳ ಕಾಲ ಉಪ್ಪು ಖಾರ ಸರಿಯಾಗಿ ಹೀರಿಕೊಳ್ಳಲು ಬಿಡಬೇಕು. ದಿನಕ್ಕೆ ಒಮ್ಮೆ ಒಣಗಿದ ಸ್ಪೂನ್ ನ ಸಹಾಯದಿಂದ ಕೈ ಆಡಿಸಿ ಇಡಬೇಕು. ಯಾವುದೇ ಕಾರಣಕ್ಕೂ ಉಪ್ಪಿನಕಾಯಿಗೆ ನಾವು ಬಳಸುವ ವಸ್ತು ಒದ್ದೆಯಾಗಿ ಇರಬಾರದು. ಈ ರೀತಿಯಾಗಿ ಸುಲಭವಾಗಿ ನಾವು ಮನೆಯಲ್ಲಿಯೇ ನಿಂಬೆಹಣ್ಣಿನ ಉಪ್ಪಿನಕಾಯಿ ಮಾಡಿಕೊಳ್ಳಬಹುದು.