ತಾಯಿಯನ್ನು ಹಳೆ ಸ್ಕೂಟರ್ ನಲ್ಲಿ ದೇಶ ಪರ್ಯಟನೆ ಮಾಡಿಸಿದ ಆಧುನಿಕ ಶ್ರವಣಕುಮಾರನಿಗೆ ಮಹೀಂದ್ರಾ ಕಂಪನಿ ಓನರ್ ಕಾರನ್ನು ಉಡುಗೊರೆಯಾಗಿ ನೀಡಿದ ಕಥೆಯನ್ನು ಈ ಲೇಖನದ ಮೂಲಕ ತಿಳಿಯೋಣ.
ಮೈಸೂರಿನ ಬೋಗಾದಿಯ ನಿವಾಸಿ ಕೃಷ್ಣಕುಮಾರ್ ಅವರು ತಾಯಿಯನ್ನು ತಮ್ಮ ಹಳೆಯ ಸ್ಕೂಟರಿನಲ್ಲಿ ದೇಶ ಪರ್ಯಟನೆ ಮಾಡಿಸಿದ್ದಾರೆ. ಬೇಲೂರು, ಹಳೆಬೀಡು ಸೇರಿದಂತೆ ಹಲವು ತೀರ್ಥ ಕ್ಷೇತ್ರಗಳಿಗೆ ಸಂಚರಿಸಿ ತಾಯಿಯ ಆಸೆಯನ್ನು ಪೂರೈಸಿದ್ದಾರೆ. ಈ ಕಾರ್ಯವನ್ನು ನೋಡಿದ ಮಹೀಂದ್ರಾ ಕಂಪನಿಯ ಓನರ್ ಆನಂದ ಮಹೀಂದ್ರಾ ಅವರು ಮೆಚ್ಚಿಕೊಂಡು ಅವರಿಗೆ ಒಂದು ಕಾರನ್ನು ಗಿಫ್ಟ್ ಕೊಡುತ್ತೇನೆ ಎಂದು ಟ್ವೀಟ್ ಮಾಡಿದ್ದರು. ಅದರಂತೆ ಮೈಸೂರಿನ ಮಹೀಂದ್ರಾ ಶೋರೂಂ ಗೆ ಕರೆಸಿ ಕಾರನ್ನು ನೀಡಲಾಗಿದೆ. ಮಹೀಂದ್ರಾ ಕೆಯುವಿ-100 ಕಾರನ್ನು ಕೃಷ್ಣಕುಮಾರ್ ಮತ್ತು ಅವರ ತಾಯಿಗೆ ಶೋರೂಂ ನಿಂದ ಗಿಫ್ಟ್ ನೀಡಲಾಗಿದೆ.
40 ವರ್ಷ ವಯಸ್ಸಿನ ಕೃೃಷ್ಣಕುಮಾರ್ ಕಾರ್ಪೋರೇಟ್ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದಾರೆ. 5 ವರ್ಷಗಳ ಹಿಂದೆ ತಂದೆಯನ್ನು ಕಳೆದುಕೊಂಡ ಕೃಷ್ಣಕುಮಾರ್ ತಾಯಿಯ ಜವಾಬ್ದಾರಿ ಹೊತ್ತಿದ್ದರು. 70 ವರ್ಷದ ತಾಯಿಗೆ ತೀರ್ಥ ಕ್ಷೇತ್ರಗಳನ್ನು ತೋರಿಸುವ ಸಲುವಾಗಿ ತಂದೆ ಕೊಡಿಸಿದ ಬಜಾಜ್ ಸ್ಕೂಟರ್ ನಲ್ಲಿ ತಾಯಿಯೊಂದಿಗೆ ಕೃಷ್ಣ ಕುಮಾರ್ 2018 ಜನವರಿ 16ರಂದು ಯಾತ್ರೆ ಪ್ರಾರಂಭಿಸುತ್ತಾರೆ. ಚಾಮುಂಡಿ ಬೆಟ್ಟದಿಂದ ಶುರುವಾಗಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪ್ರಯಾಣ ಮಾಡುತ್ತಾರೆ. 9 ತಿಂಗಳಿನಲ್ಲಿ ಒಟ್ಟು 56,522 ಕಿಲೋಮೀಟರ್ ಪ್ರಯಾಣ ಮಾಡುತ್ತಾರೆ. ತಾಯಿ ಚೂಡಾರತ್ನ ತಮ್ಮ 70ರ ಇಳಿವಯಸ್ಸಿನಲ್ಲಿ ಯಾತ್ರೆ ಕೈಗೊಳ್ಳುವುದು ಸುಲಭದ ಮಾತಲ್ಲ. ಮಗನ ಮೇಲೆ ನಂಬಿಕೆ ಇಟ್ಟು ದೇಶದ ಹಲವು ತೀರ್ಥ ಕ್ಷೇತ್ರಗಳನ್ನು ಕಣ್ಣತುಂಬಿಸಿಕೊಂಡಿದ್ದಾರೆ.