ಒಂದು ಶತಮಾನದ ಇತಿಹಾಸವಿರುವ ರಾಯಲ್ ಎನ್ ಫೀಲ್ಡ್ ಬೈಕ್ ಉದ್ಯಮದ ಇತಿಹಾಸ ಮತ್ತು ಅದರ ಬಗ್ಗೆ ಕೆಲವು ಸ್ವಾರಸ್ಯಕರ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಅತ್ಯಂತ ಸುದೀರ್ಘ ಅವಧಿಯಿಂದ ಚಾಲ್ತಿಯಲ್ಲಿರುವ ಮೋಟರ್ ಸೈಕಲ್ ಡಿಸೈನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ರಾಯಲ್ ಎನ್ ಫೀಲ್ಡ್ ಕಂಪನಿ ಮೂಲತಃ ಪಶ್ಚಿಮ ಇಂಗ್ಲೆಂಡಿನ ಬ್ರಾಂಡ್. ಇಂಗ್ಲೆಂಡಿನ ರೆಡಿಶ್ ಬಳಿ ಇದರ ಕೇಂದ್ರ ಕಚೇರಿ ಇದ್ದು. 1901 ರಿಂದಲೆ ಇದು ಮೋಟರ್ ಬೈಕ್ ಗಳ ತಯಾರಿಕಾ ಘಟಕವಾಗಿತ್ತು. ಇದರ ಮೂಲ ಪುರುಷ ಜಾರ್ಜ್ ಟೌನ್ ಸೆಂಡ್ ಎಂಬಾತ. 1851 ರಲ್ಲಿ ಈತ ಮೊದಲಬಾರಿಗೆ ರೆಡಿಶ್ ನಲ್ಲಿ ಸೂಜಿಗಳನ್ನು ತಯಾರಿಸುವ ಉದ್ಯಮವನ್ನು ಪ್ರಾರಂಭಿಸಿದ್ದ. 1882 ರಲ್ಲಿ ಈತನ ಮಗ ಬೈಸಿಕಲ್ ಗಳ ಬಿಡಿಭಾಗಗಳನ್ನು ತನ್ನ ಕಂಪನಿಯ ಮೂಲಕ ತಯಾರಿಸಲು ಪ್ರಾರಂಭಿಸಿದ ನಂತರ ಪೂರ್ಣ ಪ್ರಮಾಣದ ಸೈಕ ಲ್ ಗಳನ್ನು ತಯಾರಿಸಿದರು. ಟೌನ್ ಸೆಂಡ್ ಹಾಗೂ ಏಕೋಸೈಜ್ ಕಂಪನಿಯಿಂದ ಸೈಕಲ್ ಗಳ ಮಾರಾಟವಾಗುತಿತ್ತು. 1892 ರಲ್ಲಿ ಉದ್ಯಮ ಭಾರಿ ಆರ್ಥಿಕ ನಷ್ಟ ಎದುರಿಸಿದಾಗ ಟೌನ್ ಸೆಂಡ್ ಅಲ್ಲಿನ ಬರ್ನಿಂಗ್ ಹ್ಯಾಮ್ ನ ಪೆರ್ರಿ ಅಂಡ್ ಕೋ ಲಿಮಿಟೆಡ್ ನ ಸೇಲ್ಸ್ ಪರ್ಸನ್ ಆಗಿದ್ದ ಆಲ್ಬರ್ಟ್ ಎಡ್ಡಿ ಹಾಗೂ ಡಿ ರಡ್ಜ್ ಎಂಡ್ ಕೋ ಕಂಪನಿಯ ಇಂಜಿನಿಯರ್ ಆಗಿದ್ದ ರಾಬರ್ಟ್ ವಾಕರ್ ಸ್ಮಿತ್ ಎಂಬ ನುರಿತ ಆಟೋ ಮೊಬೈಲ್ ತಜ್ಞರಿಗೆ ಉತ್ತರಾಧಿಕಾರತ್ವವನ್ನು ವಹಿಸಿದ ಆಲ್ಬರ್ಟ್ ಎಡ್ಡಿ ತನ್ನ ಪಿನ್ ತಯಾರಿಕಾ ಘಟಕದಿಂದ ರಾಬರ್ಟ್ ನ ಕಂಪನಿಗೆ ಸೈಕಲ್ ನ ಬಿಡಿಭಾಗಗಳನ್ನು ತಯಾರಿಸಿಕೊಡುತ್ತಿದ್ದ. 1896 ರಿಂದ ಬೈಸಿಕಲ್ ತಯಾರಿಸಿಕೊಂಡು ಬರುತ್ತಿದ್ದ ರಾಯಲ್ ಎನ್ ಫೀಲ್ಡ್ ಎಡ್ಡಿ ಮೆನುಫ್ಯಾಕ್ಚರಿಂಗ್ ಎಂಬ ಹೆಸರಿನೊಂದಿಗೆ ಮುಂದುವರೆಯಿತು. 1901 ರಲ್ಲಿ ಪ್ಯೂಯೆಲ್ ಚಾಲಿತ ಮೋಟಾರ್ ಬೈಕ್ ಗಳನ್ನು ವಿಶಿಷ್ಟ ರಚನೆಯ ಮೂಲಕ ಅಭಿವೃದ್ಧಿಪಡಿಸಲಾಯಿತು. ನಂತರ ಎಡ್ಡಿ ಕಂಪನಿಯ ಸೇಲ್ಸ್ ಇಳಿಮುಖವಾದಾಗ ಅಲ್ಲಿನ ಪ್ರಖ್ಯಾತ ವೆಪನ್ ತಯಾರಿಕಾ ಘಟಕದೊಂದಿಗೆ ವಿಲೀನವಾಗಬೇಕಾಗಿಬಂತು. ಆಲ್ಬರ್ಟ್ ಎಡ್ಡಿ ಮತ್ತು ರಾಬರ್ಟ್ ಸ್ಮಿತ್ ರಾಯಲ್ ಎನ್ ಫೀಲ್ಡ್ ಬ್ರಾಂಡ್ ನ ಸ್ಥಾಪಕರೆನಿಸಿದರು. 1902 ರಿಂದ ಬೈಕ್ ಗಳ ತಯಾರಿ ಕೆಲಸ ಸಶಕ್ತವಾಗಿರುವ ರಾಯಲ್ ಎನ್ ಫೀಲ್ಡ್ ವಿಶ್ವದ ಮೊದಲ ಮತ್ತು ಅತ್ಯಂತ ಹಳೆಯ ಬೈಕ್ ಮಾಡೆಲ್. 1930ರ ಹೊತ್ತಿಗೆ ರಾಯಲ್ ಎನ್ ಫೀಲ್ಡ್ ಗ್ಲೋಬಲ್ ಮಾರುಕಟ್ಟೆಗೆ ಲಗ್ಗೆ ಇಟ್ಟು ಅಮೇರಿಕಾ, ಇಟಲಿ, ಇಂಗ್ಲೆಂಡ್ ಗಳಲ್ಲಿ ಯಶಸ್ವಿಯಾಗಿ ಮಾರಾಟವಾಯಿತು ಅಲ್ಲದೆ ಭಾರತಕ್ಕೆ ಪರಿಚಯವಾಯಿತು.
1899 ರಲ್ಲಿ ರಾಯಲ್ ಎನ್ ಫೀಲ್ಡ್ ನ ನಾಲ್ಕು ಚಕ್ರಗಳ ವಿಶಿಷ್ಟ ಚತುರ್ ಚಕ್ರದ ಸೈಕಲ್ ಆವಿಷ್ಕಾರವಾಗಿ ಕೆಲವು ಕಾಲ ಜನಪ್ರಿಯ ವಾಹನ ಎನಿಸಿಕೊಂಡಿತು. ನಂತರ 1901 ರಲ್ಲಿ 239 ಸಿಸಿ ಸಾಮರ್ಥ್ಯವುಳ್ಳ ಮೋಟರ್ ಬೈಕ್ ಆವಿಷ್ಕಾರವಾಯಿತು. 1906 ರಲ್ಲಿ ರೆಡಿಶ್ ನಲ್ಲಿ ರಾಯಲ್ ಎನ್ ಫೀಲ್ಡ್ ಆಟೋ ಕಾರ್ ಕಂಪನಿ ಸ್ಥಾಪನೆಯಾಗಿ 1907 ರಲ್ಲಿ ಸಿಂಗಲ್ ಸಿಲಿಂಡರ್ ಎಂಜಿನ್ ನ ಲೈಟ್ ಕಾರನ್ನು ಸಹ ಅಭಿವೃದ್ಧಿಪಡಿಸಲಾಯಿತು. ಇಂಗ್ಲೆಂಡಿನ ಬ್ರಿಟಿಷ್ ಅಥಾರಿಟಿಗಳು ಯುದ್ಧದ ಸಲುವಾಗಿ ಒಂದು ಶಕ್ತಿಶಾಲಿ ಮಿಲಿಟರಿ ದ್ವಿಚಕ್ರವಾಹನವನ್ನು ಅಭಿವೃದ್ಧಿಪಡಿಸುವಂತೆ ಕೇಳಿಕೊಂಡಿತ್ತು ಅದರ ಫಲವಾಗಿ 1939 ರ ಸಮಯದಲ್ಲಿ ಬೃಹತ್ ಆಕಾರದ 440 ಸಿಸಿ ಸಾಮರ್ಥ್ಯವುಳ್ಳ ಬೈಕ್ ಗಳನ್ನು ಅನ್ವೇಶಿಸಿತು. ಇಂಗ್ಲೆಂಡಿನ ಬ್ರಿಟಿಷ್ ಮಿಲಿಟರಿ ವಿಭಾಗದಲ್ಲಿ ಈ ನೂತನ ಬೈಕ್ ಪ್ರಮುಖ ಪಾತ್ರವನ್ನು ವಹಿಸಿತು. ಮದ್ರಾಸ್ ಮೋಟರ್ಸ್ ರಾಯಲ್ ಎನ್ ಫೀಲ್ಡ್ ನ ಹಕ್ಕುಗಳನ್ನು ಖರೀದಿಸಿ ಭಾರತದಲ್ಲೆ ರಾಯಲ್ ಎನ್ ಫೀಲ್ಡ್ ನ ಬೈಕ್ ಗಳನ್ನು ತಯಾರಿಸಲು ಪ್ರಾರಂಭಿಸಿತು. ಭಾರತದಲ್ಲಿ ದ್ವಿಚಕ್ರ ವಾಹನಗಳಿಗೆ ಮೊಟ್ಟಮೊದಲ ಡಿಸ್ಕ್ ಬ್ರೇಕ್ ವ್ಯವಸ್ಥೆ ಜಾರಿಗೊಳಿಸಿದ ಬ್ರಾಂಡ್ ರಾಯಲ್ ಎನ್ ಫೀಲ್ಡ್. 1950 ರ ದಶಕದಲ್ಲಿ ರಾಯಲ್ ಎನ್ ಫೀಲ್ಡ್ ಬೈಕ್ ಗಳಿಗೆ ಬುಲೆಟ್ ಎಂಬ ಹೊಸ ಟಾಗ್ ಲೈನ್ ರೂಢಿಯಾಗಿತ್ತು. ರೈಫಲ್ ನಂತೆ ಈ ಬೈಕ್ ಅನ್ನು ತಯಾರಿಸಲಾಗುತ್ತದೆ. 2001 ರಲ್ಲಿ ವರ್ಷಕ್ಕೆ 25,000 ದಂತೆ ಖರ್ಚಾಗುತ್ತಿದ್ದ ರಾಯಲ್ ಎನ್ ಫೀಲ್ಡ್ ಬೈಕ್ ಗಳು ಇವತ್ತು ತಿಂಗಳಿಗೆ 30,000 ಬೈಕ್ ಗಳು ಭಾರತವೊಂದರಲ್ಲೇ ಮಾರಾಟವಾಗುತ್ತಿದೆ. ಅದರ ಮಾರುಕಟ್ಟೆ ಜಪಾನ್, ಯು.ಕೆ, ಜರ್ಮನ್ ಸೇರಿದಂತೆ ವಿಶ್ವದ 45ಕ್ಕೂ ಹೆಚ್ಚು ದೇಶಗಳಲ್ಲಿ ಅದರ ಸರಬರಾಜು ಚಾಲ್ತಿಯಲ್ಲಿದೆ. 2015 ರ ಅಂಕಿಅಂಶಗಳ ಪ್ರಕಾರ ರಾಯಲ್ ಎನ್ ಫೀಲ್ಡ್ ಹಾರ್ಲೆ-ಡೇವಿಡ್ಸನ್ ಎಂಬ ಇನ್ನೊಂದು ವಿಖ್ಯಾತ ದ್ವಿಚಕ್ರವಾಹನ ಕಂಪನಿಯನ್ನು ಜಾಗತಿಕ ಸೇಲ್ಸ್ ನಲ್ಲಿ ಹಿಂದಿಕ್ಕಿದೆ. 350 ಸಿಸಿಯ ಮೊಡೆಲ್ ಗಳು ಸದ್ಯ ಭಾರತದಲ್ಲಿ ಟ್ರೆಂಡ್ ಆಗಿದೆ. ಈ ಉದ್ಯಮ ಇತರರಿಗೆ ಪ್ರೇರಕ ಶಕ್ತಿಯಾಗಿ ಮುನ್ನುಗ್ಗುತ್ತಿದೆ.