ಬೆಂಗಳೂರು ನಮ್ಮ ರಾಜ್ಯದ ರಾಜಧಾನಿ. ಬೆಂದಕಾಳೂರಿನಿಂದ ಬೆಂಗಳೂರು ಆಗಿ ಬದಲಾಗಿದೆ. ಬೆಂಗಳೂರು ಎಷ್ಟು ಹೈಪೈ ಸಿಟಿಯೋ ಅಷ್ಟೇ ದೇವಸ್ಥಾನಗಳನ್ನು ಹೊಂದಿದೆ. ಎಲ್ಲಾ ದೇವಸ್ಥಾನಗಳು ಅದರದ್ದೆಯಾದ ಹಿಂದಿನ ಕಥೆಗಳನ್ನು ಹೊಂದಿದೆ. ಅಲ್ಲಿನ ಕೋಟೆಗಳು, ದೇಗುಲಗಳು ಮತ್ತು ಇಲ್ಲಿನ ಪ್ರದೇಶಗಳು ಅದರದೆ ಆದ ನಿಗೂಢತೆ ಹಾಗೂ ವಿಶೇಷತೆಗಳನ್ನು ಹೊಂದಿದೆ. ಅಂತಹ ನಿಗೂಢ ಪ್ರದೇಶಗಳಲ್ಲಿ ಬೆಂಗಳೂರಿನ ಬಸವನಗುಡಿಯು ಒಂದು. ಬೆಂಗಳೂರಿನ ಮೊಟ್ಟಮೊದಲ ಬಡಾವಣೆ ಎಂದು ಬಸವನಗುಡಿ ಕರೆಸಿಕೊಂಡಿದೆ. ಬಸವನಗುಡಿಯ ದೊಡ್ಡ ಬಸವನ ವಿಗ್ರಹ ತನ್ನದೆ ಆದ ವಿಶೇಷತೆಯನ್ನು ಹೊಂದಿದೆ. ಈ ಬಸವನ ವಿಗ್ರಹದಿಂದಲೆ ಬಸವನಗುಡಿ ಎಂಬ ಹೆಸರು ಬಂದಿದೆ. ಬೆಂಗಳೂರಿನ ಹೃದಯ ಭಾಗದಲ್ಲಿ ಇದೆ ಈ ಬಸವನಗುಡಿ. ಬೆಂಗಳೂರಿನ ಅತ್ಯಂತ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದು. ಬೆಂಗಳೂರಿಗೆ ಬಂದಲ್ಲಿ ಒಮ್ಮೆ ಭೇಟಿ ಮಾಡಿ.
15 ಅಡಿ ಎತ್ತರದ 20 ಅಡಿ ಉದ್ದದ ಬಸವನ ವಿಗ್ರಹವನ್ನು ಎತ್ತರದ ಗುಡ್ಡದ ಮೇಲೆ ಪುರಾತನ ದೇವಾಲುದಲ್ಲಿ ಕಟ್ಟಲಾಗಿದೆ. ಅದಕ್ಕೆಂದೆ ಈ ದೇವಾಲಯವನ್ನು ದೊಡ್ಡ ಬಸವನಗುಡಿ ಎಂದು ಕರೆಯಲಾಗಿದೆ. 1537 ರಲ್ಲಿ ಕೆಂಪೇಗೌಡರು ಈ ದೇವಾಲಯವನ್ನು ಕಟ್ಟಿಸಿದರು. ಈ ದೇವಾಲಯದ ಮುಂದೆ ಎತ್ತರದ ದ್ವಜ ಸ್ಥಂಬವಿದೆ. ತಂತಿ ವಾದ್ಯ ನುಡಿಸುತ್ತಿರುವಂತೆ ಉಬ್ಬು ಶಿಲೆಗಳನ್ನು ಈ ಕಲ್ಲು ಕಂಬದ ಮೇಲೆ ಕೆತ್ತಲಾಗಿದೆ. ಎತ್ತರವಾದ ಗೋಪುರವನ್ನು ಹೊಂದಿರುವ ಈ ದೇವಾಲಯದ ಒಳಪ್ರಾಂಗಣದಲ್ಲಿ ವಿಶಾಲವಾದ ದೇವಸ್ಥಾನವಿದೆ, ದಕ್ಷಿಣಾಪಥವಿದೆ. ಬಾಗಿಲ ಬಳಿಯಲ್ಲಿ ದ್ವಾರಪಾಲಕರ ಸ್ತಂಭಗಳಿವೆ. ಬಸವನಗುಡಿಯ ಕಪ್ಪು ಶಿಲೆಯ ಬಸವನನ್ನು ಉದ್ಭವ ಮೂರ್ತಿ ಎಂದು ಹೇಳುತ್ತಾರೆ. ಮಹಾದೇವನ ವಾಹನವಾದ ನಂದಿ ಇಲ್ಲಿ ಬಂದು ನೆಲೆಸಿದರೆಂಬ ಪ್ರತೀತಿ ಇದೆ. ಅದಕ್ಕೆ ಅನುಗುಣವಾಗಿ ಒಂದು ಕಥೆಯೆ ಇದೆ.
ಈಗ ಇರುವ ಬಸವನ ವಿಗ್ರಹ ಇರುವ ಸ್ಥಳ ಮೊದಲು ಸುಂಕೇನಹಳ್ಳಿ ಎಂದು ಹೆಸರಿತ್ತು. ಸುಂಕೇನಹಳ್ಳಿಯಲ್ಲಿ ಅಪಾರವಾದ ಗದ್ದೆಗಳು ಇದ್ದವು. ಪ್ರದಾನವಾಗಿ ಕಡಲೆಕಾಯಿ ಬೆಳೆಯುವ ರೈತಾಪಿ ವರ್ಗ ಹೆಚ್ಚಾಗಿ ವಾಸಿಸುತ್ತಿದ್ದರು. ಸಮ ಬಾಳು ಸಮ ಪಾಲು ಎಂಬ ತತ್ವಕ್ಕೆ ತಲೆ ಬಾಗಿದ್ದ ಇವರು ಕಡಲೆಕಾಯಿ ಫಸಲು ಬರುವ ಕಾಲ ಅಂದರೆ ಕಾರ್ತಿಕ ಮಾಸದಲ್ಲಿ ತಾವೂ ಬೆಳೆದ ಕಡಲೆಕಾಯಿಯನ್ನು ರಾಶಿ ಮಾಡಿ, ಕಣದ ಪೂಜೆ ಮಾಡಿ ಮರುದಿನ ಸಮನಾಗಿ ಹಂಚಿಕೊಳ್ಳತ್ತಿದ್ದರಂತೆ. ಒಮ್ಮೆ ಹೀಗೆ ರಾಶಿ ಮಾಡಿದ ಕಣಕ್ಕೆ ಗೂಳಿಯೊಂದು ಬಂದು ಕಡಲೆಕಾಯಿಯನ್ನು ತಿಂದು ಹೋಗುತ್ತಿತ್ತಂತೆ. ಗೂಳಿಯ ಕಾಟಕ್ಕೆ ಸೋತ ರೈತರು ಒಂದು ರಾತ್ರಿ ಬಡಿಗೆ ಹಿಡಿದು ಆ ಬಸವನಿಗಾಗಿ ಕಾಯುತ್ತಿದ್ದರಂತೆ. ಆ ರೈತರ ನೀರಿಕ್ಷೆಯಂತೆಯೆ ಬಂದ ಬಸವ ಕಡಲೆಕಾಯಿ ತಿನ್ನುತ್ತಾನೆ. ಇದನ್ನು ನೋಡಿ ಕೋಪಗೊಂಡ ರೈತರು ತಮ್ಮ ಕೈಯ್ಯಲ್ಲಿರುವ ಬಡಿಗೆಯಿಂದ ಬಸವನನ್ನು ಅಟ್ಟಿಸಿಕೊಂಡು ಹೋಗುತ್ತಾರೆ. ರೈತರ ಬಡಿಗೆಯಿಂದ ತಪ್ಪಿಸಿಕೊಳ್ಳುತ್ತಾ ಓಡಿದ ಬಸವ ಸುಂಕೇನಹಳ್ಳಿಗಿಂತ ಸ್ವಲ್ಪ ಮುಂದೆ ಬೆಟ್ಟದ ಮೇಲೆ ಕಲ್ಲಾಗಿ ಬಿಡುತ್ತಾನಂತೆ. ಇದನ್ನು ಕಂಡ ರೈತರಿಗೆ ಬಂದವನು ಸಾಮಾನ್ಯವಾದ ಬಸವ ಆಗಿರದೆ ಮಹಾದೇವನ ವಾಹನ ಎಂಬುದು ಅರಿವಾಯಿತಂತೆ.
ನಂದಿಯನ್ನು ಬಡಿಗೆ ಇಂದ ಬಡಿಯಲು ಹೋದೆವಲ್ಲಾ ಎಂದು ಮರುಗಿದರಂತೆ. ತಪ್ಪನ್ನು ಕ್ಷಮಿಸುವಂತೆ ಬೇಡಿ ನಂತರದ ದಿನಗಳಲ್ಲಿ ರೈತರು ಬೇಳೆದ ಕಡಲೆಕಾಯಿಯ ಮೊದಲ ಬೆಳೆಯನ್ನು ಈ ಕಲ್ಲಿನ ವಿಗ್ರಹಕ್ಕೆ ನೈವೇದ್ಯ ಮಾಡಿ ನಂತರ ಮಾರಲು ಹೋಗುತ್ತಾರಂತೆ. ಇಂದಿಗೂ ಆ ನಂಬಿಕೆ ಹಾಗೆಯೆ ನಡೆದುಕೊಂಡು ಬಂದಿದೆ. ಪ್ರತಿ ಕಾರ್ತಿಕ ಮಾಸದಲ್ಲಿ ನಡೆಯುವ ಜಾತ್ರೆ ಕಡಲೆಕಾಯಿ ಪರ್ಶ ಎಂದೆ ಖ್ಯಾತಿ ಪಡೆದಿದೆ. ಈ ಜಾತ್ರೆಗೆ ಬಸವನ ಭಕ್ತರು ಬಂದು ಕಡಲೆ ತಿಂದರೆ ನಂದಿ ತೃಪ್ತನಾಗುತ್ತಾನೆ ಎಂದು ಹಿರಿಯರು ಹೇಳಿದ್ದಾರಂತೆ. ಭಕ್ತರು ಎಸೆದ ಕಡಲೆಕಾಯಿ ಸಿಪ್ಪೆಯನ್ನು ರಾತ್ರಿಯಲ್ಲಿ ಕಲ್ಲಿನ ಬಸವ ನಿಜರೂಪ ತಾಳಿ ತಿನ್ನುತ್ತಾನೆ ಎಂದು ಇಂದಿಗೂ ನಂಬುತ್ತಾರೆ. ಈ ದೇವಾಲಯ ಬೆಂಗಳೂರಿನ ಪ್ರಸಿದ್ದ ದೇವಾಲಯಗಳಲ್ಲಿ ಒಂದು. ದೇವಾಲಯದಲ್ಲಿ ದೇಶ-ವಿದೇಷಗಳಿಂದ ಜನ ಸಹಮೂಹ ಸೇರುತ್ತದೆ. ಈ ದೊಡ್ಡ ಬಸವನ ದೇವಾಲಯದ ಪಕ್ಕದಲ್ಲಿ ದೊಡ್ಡ ಗಣಪತಿಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಗಣಪತಿ ದೇವಸ್ಥಾನದ ಎದುರೆ ಶಿವನ ದೇವಾಲಯವೂ ಇದೆ.