ನಮ್ಮ ಮಲೆನಾಡು ಪ್ರಕೃತಿ ಸೌಂದರ್ಯಕ್ಕೆ ಹೆಸರಾಗಿದೆ. ಎಷ್ಟೋ ವಿಸ್ಮಯಕಾರಿ ಸಂಗತಿಗಳನ್ನು ಹೊಂದಿರುವ ಮಲೆನಾಡು ಸುಲಭವಾಗಿ ಒಂದು ತರ್ಕಕ್ಕೆ ಬರಲು ಬಿಡುವುದಿಲ್ಲ ಅಂತಹ ಪ್ರಕೃತಿ ರಹಸ್ಯಗಳ ತವರೂರು. ಇಲ್ಲಿ ನಂಬಿಕೆ ಇಟ್ಟು ಬಂದವರಿಗೆ ಎಲ್ಲಾ ಕಡೆಗಳಲ್ಲೂ ದೇವರ ದರ್ಶನ ಸಿಗುತ್ತದೆ. ನಂಬದೆ ವಿಜ್ಞಾನದ ಸಹಾಯ ಪಡೆದರೂ ಉತ್ತರ ಮಾತ್ರ ಸಿಗುವುದಿಲ್ಲ. ಇಂತಹ ವಿಸ್ಮಯ ಹುಟ್ಟು ಹಾಕಿದ ಪ್ರದೇಶಗಳಲ್ಲಿ ಒಂದು ಮಲೆನಾಡಿನ ತವರು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೊಡಚಾದ್ರಿ ತಪ್ಪಲಿನ ಅಡಿಕೆ ತೋಟದಲ್ಲಿದೆ. ಈ ವಿಸ್ಮಯ ತಾಣದ ಹೆಸರೆ ಗುಳಿ ಗುಳಿ ಶಂಕರ ಕೊಳ. ಇದಕ್ಕೆ ಚಪ್ಪಾಳೆ ಕೊಳ, ನಿರ್ಗುಳ್ಳೆ ಕೊಳ, ಗೌರಿ ತೀರ್ಥ ಎಂದು ಕರೆಯುತ್ತಾರೆ. ಶಿವಮೊಗ್ಗ ಜಿಲ್ಲೆಯ ಗುಬ್ಬಿಗಾ ಗ್ರಾಮದಲ್ಲಿ ಇದೆ ಈ ಗುಳಿ ಗುಳಿ ಕೊಳ. ಇತ್ತೀಚೆಗೆ ಈ ಸ್ಥಳದಲ್ಲಿ ಗುಳಿ ಗುಳಿ ಶಂಕರ ದೇವಾಲಯ ನಿರ್ಮಿಸಲಾಗಿದೆ.

ಈ ದೇವಾಲಯದ ತೋಟದ ಮಧ್ಯೆ ಇರುವ ಮಾಂತ್ರಿಕ ಕೊಳವೆ ಈ ಗುಳಿ ಗುಳಿ ಶಂಕರ. ಈ ಕೊಳದ ತಟದಲ್ಲಿ ನಿಂತು ಚಪ್ಪಾಳೆ ಹೊಡೆದರೆ ನೀರು ಗುಳ್ಳೆ ಗುಳ್ಳೆಯಾಗಿ ಮೇಲೆ ಬರುತ್ತದೆ ಇದು ಈ ಕೊಳದ ವೈಶಿಷ್ಟ್ಯ. ಆದ್ದರಿಂದಲೆ ಈ ಕೊಳದ ಹೆಸರು ಗುಳಿ ಗುಳಿ ಶಂಕರ ಎನ್ನಲಾಗಿದೆ. ಯಾವ ಕಡೆಯಿಂದಲೂ ನೀರು ಬರದೆ ಇದ್ದರೂ 3 ಇಂಚು ನೀರು ಹೊರಗೆ ಹೋಗುವಂತೆ ಸದಾ ತುಂಬಿರುವ ಕೊಳ ಮತ್ತೊಂದು ವಿಸ್ಮಯ. ಬಂಗಾರ ಬಣ್ಣದಲ್ಲಿ ಹೊಳೆಯುವ ಪಾಚಿಯು ಕೊಳದ ತುಂಬೆಲ್ಲ ತುಂಬಿಕೊಂಡಿದೆ. ಜನರು ಈ ಪಾಚಿಯನ್ನು ಶಿವನ ಜಟೆ ಎಂದು ನಂಬುತ್ತಾರೆ. ಸೂರ್ಯೊದಯ ಹಾಗೂ ಸೂರ್ಯಾಸ್ತದ ಸಮಯದಲ್ಲಿ ಈ ಪಾಚಿಗಳು ಬಂಗಾರ ಬಣ್ಣದಲ್ಲಿ ಹೊಳೆಯುತ್ತವೆ. ಅದಕ್ಕಾಗಿ ಈ ಕೊಳಕ್ಕೆ ಚಿನ್ನದ ಕೊಳ ಎಂದೂ ಕರೆಯಲಾಗುತ್ತದೆ.

ವೈಜ್ಞಾನಿಕವಾಗಿಯು ಪರೀಕ್ಷೆಗೆ ಒಳಗಾದ ಈ ಕೊಳದ ನೀರು ವಿಶೇಷ ಹಾಗೂ ಪವಾಡದಿಂದ ಕೂಡಿದೆ ಎಂದು ಹೇಳಲಾಗುತ್ತದೆ. ಸಾಮಾನ್ಯವಾಗಿ ಕುಡಿಯುವ ನೀರಿಗಿಂತ ಹೆಚ್ಚು ವಿಶೇಷ ಖನಿಜಗಳಿಂದ ಈ ನೀರು ಆವೃತ್ತವಾಗಿದೆ ಎಂದು ತಿಳಿದು ಬಂದಿದೆ. ಈ ನೀರು ಯಾವುದೇ ರೀತಿಯ ಚರ್ಮದ ಸೋಂಕನ್ನು ಗುಣಪಡಿಸುವ ಶಕ್ತಿ ಹೊಂದಿದೆ ಎಂದು ನಂಬಲಾಗಿದೆ. ಅಷ್ಟೇ ಅಲ್ಲದೆ ಮೂತ್ರ ಕೋಶದ ಕಲ್ಲುಗಳಿಗೆ ಹಾಗೂ ಯಾವುದೇ ರೀತಿಯ ಶೀತ ಸಮಸ್ಯೆಗಳಿಗೆ ಇದು ಪರಿಣಾಮಕಾರಿ ಪರಿಹಾರ ನೀಡುತ್ತದೆ ಎಂದು ಒಳಿತನ್ನು ಕಂಡವರು ಹೇಳುತ್ತಾರೆ. ಈ ಕೊಳದ ಮತ್ತೊಂದು ವಿಶೇಷವೆಂದರೆ ಯಾವುದೇ ಎಲೆ ಹಾಕಿದರೂ ತೇಲುವ ಈ ಕೊಳದಲ್ಲಿ ಪರಶಿವನ ಪ್ರಿಯವಾದ ಬಿಲ್ವಪತ್ರೆ ಎಲೆ ತೇಲುತ್ತದೆ. ಭಕ್ತಿಯಿಂದ ಬೇಡಿಕೊಂಡು ಹಾಕಿದ ಬಿಲ್ವಪತ್ರೆ ಮುಳುಗಿ ಮೇಲೆ ಬಂದರೆ ಬೇಡಿಕೆ ಈಡೇರುತ್ತದೆ ಎಂದು ಬಿಲ್ವಪತ್ರೆಯನ್ನು ಪ್ರಸಾದವೆಂದು ಸ್ವೀಕರಿಸಲಾಗುತ್ತದೆ. ಮೂಕವಿಸ್ಮಿತರನ್ನಾಗಿ ಮಾಡುವ ಈ ವಿಸ್ಮಯ ವಿಜ್ಞಾನ ಹಾಗೂ ತರ್ಕದ ಹೇಳಿಕೆಯನ್ನು ತಲೆಕೆಳಗು ಮಾಡುತ್ತದೆ.

ಈ ಕೊಳದ ವಿಸ್ಮಯಕ್ಕೆ ಈ ಕೊಳದ ಮೂಲೆಯಲ್ಲಿ ನೆಲೆಸಿರುವ ಮಹಾದೇವನ ಲಿಂಗವೇ ಕಾರಣ ಎನ್ನಲಾಗುತ್ತದೆ. ಪುರಾಣದ ಇತಿಹಾಸದ ಪ್ರಕಾರ ಒಮ್ಮೆ ಪರಶಿವನು ಪಾರ್ವತಿ ದೇವಿಯ ಜೊತೆ ಮಲೆನಾಡ ಸೌಂದರ್ಯವನ್ನು ಸವಿಯಲು ವಿಹರಿಸುತ್ತಿದ್ದನಂತೆ. ಆಗ ಬಾಯಾರಿಕೆ ಆದಾಗ ಶಿವನು ತನ್ನ ಜಟೆಯಲ್ಲಿದ್ದ ಗಂಗೆಯನ್ನು ಭೂಮಿಗೆ ಇಳಿಯುವಂತೆ ಆಹ್ವಾನವನ್ನು ನೀಡುತ್ತಾನೆ. ಭೂಮಿಗಿಳಿದ ಗಂಗಾಮಾತೆಯಿಂದ ಬಾಯಾರಿಕೆ ನೀಗಿಸಿಕೊಂಡ ಪರಶಿವನು ಗಂಗಾಮಾತೆಗೆ ಇದೇ ಜಾಗದಲ್ಲಿ ಶಾಶ್ವತವಾಗಿ ನೆಲೆಸಿ ನಿನ್ನ ಔಷಧೀಯ ಗುಣಗಳುಳ್ಳ ನೀರಿನಿಂದ ಭೂಮಿಯ ಜೀವಕೋಟಿಯನ್ನು ಉದ್ದರಿಸುವಂತೆ ಹರಸುತ್ತಾನೆ. ಆಗ ಗಂಗಾಮಾತೆ ಗಂಗೆಯ ಜೊತೆಗೆ ಶಿವನಿದ್ದರೆ ಮಾತ್ರ ಇಲ್ಲಿ ಶಾಶ್ವತವಾಗಿ ನೆಲೆಸುವುದಾಗಿ ಕೋರುತ್ತಾಳಂತೆ. ಇದಕ್ಕೆ ಸಮ್ಮತಿಸಿದ ಶಿವನು ಗಂಗೆಯೊಂದಿಗೆ ಈ ಕೊಳದಲ್ಲಿ ಐಕ್ಯಗೊಂಡನಂತೆ. ಕೊಳದಲ್ಲಿ ಮುಳುಗಿದ ಬಿಲ್ವಪತ್ರೆ ಶಿವಲಿಂಗವನ್ನು ಸ್ಪರ್ಶಿಸಿ ಮೇಲೆ ಬಂದರೆ ಜೀವನ ಸಮೃದ್ಧವಾಗಿರುತ್ತದೆ ಎಂಬ ನಂಬಿಕೆ ಇದೆ. ಮಳೆಗಾಲಕ್ಕಿಂತಲೂ ಬೇಸಿಗೆಯಲ್ಲಿ ಹೆಚ್ಚು ನೀರು ಉಕ್ಕುವುದು ಇಲ್ಲಿನ ಮತ್ತೊಂದು ವಿಸ್ಮಯ. ಶಿವಮೊಗ್ಗ ಜಿಲ್ಲಾ ಕೇಂದ್ರದಿಂದ ಹೊಸನಗರಕ್ಕೆ ತೆರಳುವ ಮಾರ್ಗದಲ್ಲಿಯೇ ಶಿವಮೊಗ್ಗದಿಂದ ಸುಮಾರು 40ಕಿ.ಮೀ. ಅಂತರದಲ್ಲಿ ಈ ಗುಬ್ಬಿಗಾ ಗ್ರಾಮವಿದ್ದು.. ಗುಬ್ಬಿಗಾ ಗ್ರಾಮ ತಲುಪುವ ಮೊದಲೆ ಈ ಕೊಳ ಸಿಗುತ್ತದೆ. ಸ್ಥಳೀಯರನ್ನು ವಿಚಾರಿಸುತ್ತಾ ಈ ಕೊಳ ಇರುವಲ್ಲಿ ತಲುಪಬಹುದಾಗಿದೆ.

Leave a Reply

Your email address will not be published. Required fields are marked *