ಗಣಪತಿಗೆ ತುಂಬಾ ಪ್ರಿಯವಾದದ್ದು ಮೋದಕ. ಗಣಪತಿಗೆ ಸಿಹಿ ಮೋದಕ ಬಹಳವೇ ಇಷ್ಟ. ಚೌತಿ ಹಬ್ಬದಲ್ಲಿ ಗಣಪತಿಗೆ ಮೋದಕವನ್ನಂತೂ ಮಾಡಲೇ ಬೇಕು. ನಾವು ಈ ಲೇಖನದ ಮೂಲಕ ಗಣಪತಿಗೆ ಪ್ರಿಯವಾದ ಮೋದಕವನ್ನು ಸ್ವಲ್ಪವೂ ಕೂಡಾ ಒಡೆಯದೆ ಸರಿಯಾಗಿ, ರುಚಿಯಾಗಿ ಹೇಗೆ ಮಾಡೋದು ಅನ್ನೋದನ್ನ ನೋಡೋಣ.
ಮೊದಲಿಗೆ ಮೋದಕ ಮಾಡಲು ಏನೆಲ್ಲಾ ಸಾಮಗ್ರಿಗಳು ಬೇಕು ಅನ್ನೋದನ್ನ ನೋಡೋಣ. ತೆಂಗಿನಕಾಯಿ ಒಂದು ಕಪ್, ಬೆಲ್ಲ ಒಂದು ಕಪ್, ಒಂದು ಟೀ ಸ್ಪೂನ್ ಹುರಿಗಡಲೆ, ಏಲಕ್ಕಿ 3
ಗಸಗಸೆ ಒಂದು ಟೀ ಸ್ಪೂನ್, ಅಕ್ಕಿ ಹಿಟ್ಟು ಒಂದು ಕಪ್, ಗೋಧಿ ಹಿಟ್ಟು ಒಂದು ಟೀ ಸ್ಪೂನ್ ಉಪ್ಪು ರುಚಿಗೆ ತಕ್ಕಷ್ಟು. ನಾವಿಲ್ಲಿ ಗಮನಿಸಬೇಕಾದ ಅಂಶವೆಂದರೆ ಅಕ್ಕಿಹಿಟ್ಟು, ತೆಂಗಿನಕಾಯಿ ತುರಿ ಮತ್ತು ಬೆಲ್ಲ ಎಲ್ಲಾ ಒಂದೇ ಅಳತೆಯಲ್ಲಿ ಇರಬೇಕು.
ಮಾಡುವ ವಿಧಾನ :- ಮೊದಲು ಒಂದು ಬಾಣಲೆ ಇಟ್ಟುಕೊಂಡು ಅದಕ್ಕೆ ಗಸಗಸೆ , ಏಲಕ್ಕಿ ಹಾಕಿ ಹುರಿದುಕೊಳ್ಳಬೇಕು. ಗಸಗಸೆ ಶಬ್ಧ ಬರಲು ಆರಂಭಿಸಿದ ನಂತರ ಹುರಿಗಡಲೆ ಹಾಕಿ ನಾಲ್ಕರಿಂದ ಐದು ಸೆಕೆಂಡ್ ಮಾತ್ರ ಹುರಿದುಕೊಳ್ಳಬೇಕು. ಇವನ್ನೆಲ್ಲ ತಣ್ಣಗಾಗಲು ಬಿಟ್ಟು, ತಣ್ಣಗಾದ ಮೇಲೆ ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಬೇಕು. ನಂತರ ಅದೇ ಬಾಣಲೆಗೆ ಒಂದು ಕಪ್ ಬೆಲ್ಲ ಹಾಕಿಕೊಂಡು ಒಂದು ಅಥವಾ ಎರಡು ಸ್ಪೂನ್ ನೀರು ಹಾಕಿ ಬೆಲ್ಲ ಕರಗಿಸಿಕೊಂಡು ಅದಕ್ಕೆ ಒಂದು ಕಪ್ ತೆಂಗಿನ ತುರಿ ಹಾಕಿ ಚೆನ್ನಾಗಿ ಕಲಸಿ ನಂತರ ಮೊದಲೇ ಮಾಡಿಟ್ಟುಕೊಂಡ ಪೌಡರ್ ಹಾಕಿ ಸರಿಯಾಗಿ ಮಿಕ್ಸ್ ಮಾಡಿ ಸ್ಟೋವ್ ಆಫ್ ಮಾಡಿ ಪಕ್ಕದಲ್ಲಿ ಇಟ್ಟುಕೊಳ್ಳಬೇಕು. ಒಂದುವೇಳೆ ಬೆಲ್ಲದ ಪಾಕ ತೆಳುವಾಗಿ ಇದ್ದರೆ ಅದಕ್ಕೆ ಸ್ವಲ್ಪ ಅಕ್ಕಿ ಹಿಟ್ಟು ಹುರಿದು ಹಾಕಿಕೊಂಡರೆ ಸರಿಯಾವುದು.
ನಂತರ ಒಂದು ಪಾತ್ರೆಗೆ ಅಕ್ಕಿ ಹಿಟ್ಟು ತೆಗೆದುಕೊಂಡ ಅಳತೆ ಪಾತ್ರೆಯಲ್ಲಿ ಸರಿಯಾಗಿ ಎರಡು ಕಪ್ ನೀರು ಹಾಕಿ ಅದಕ್ಕೆ ಅರ್ಧ ಟೀ ಸ್ಪೂನ್ ಉಪ್ಪು ಮತ್ತು ಒಂದು ಟೀ ಸ್ಪೂನ್ ಗೋಧಿ ಹಿಟ್ಟನ್ನು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ ಒಂದು ಟೀ ಸ್ಪೂನ್ ತುಪ್ಪ ಸೇರಿಸಿ ಬಿಸಿ ಆಗಲೂ ಬಿಡಬೇಕು. ಗೋಧಿ ಹಿಟ್ಟನ್ನು ಹಾಕುವುದರಿಂದ ಮೋದಕ ಒಡೆಯುವುದಿಲ್ಲ. ನಂತರ ಇದನ್ನು ಒಂದು ಮುಚ್ಚಳ ಮುಚ್ಚಿ ಕುದಿಯಲು ಇಡಬೇಕು. ನೀರು ಕುದಿಯಲು ಆರಂಭಿಸಿದಾಗ ಅದಕ್ಕೆ ಅಕ್ಕಿ ಹಿಟ್ಟು ಹಾಕಿ ಚೆನ್ನಾಗಿ ತಿರುಗಿಸಿ ಮಿಕ್ಸ್ ಮಾಡಿಕೊಳ್ಳಬೇಕು. ನಂತರ ಮತ್ತೆ ಮುಚ್ಚಳ ಮುಚ್ಚಿ ಐದು ನಿಮಿಷಗಳ ಕಾಲ ಬೇಯಿಸಿಕೊಳ್ಳಬೇಕು. ನಂತರ ಕೈ ಗೆ ಸ್ವಲ್ಪ ತುಪ್ಪ ಅಥವಾ ಎಣ್ಣೆ ಹಚ್ಚಿಕೊಂಡು ಹಿಟ್ಟನ್ನು ಚೆನ್ನಾಗಿ ನಾದಿಕೊಳ್ಳಬೇಕು. ನಂತರ ಚಪಾತಿ ಹಿಟ್ಟಿಗಿಂತ ಸ್ವಲ್ಪ ಸಣ್ಣ ಉಂಡೇ ಮಾಡಿಕೊಂಡು ಅದನ್ನು ಪ್ರೆಸ್ಸಿಂಗ್ ಮಶೀನ್ ಸಹಾಯದಿಂದ ಅಥವಾ ಕೈಯಲ್ಲೇ ತಟ್ಟಿ ಅಥವಾ ಲಟ್ಟಣಿಗೆ ಸಹಾಯದಿಂದ ಒರೆದುಕೊಂಡು ಕರ್ಜೀಕಾಯಿ ಮೌಲ್ಡ್ ನಲ್ಲಿ ಹಿಟ್ಟನ್ನು ಇಟ್ಟು ಇದರಲ್ಲಿ ಮೊದಲೇ ಮಾಡಿಟ್ಟುಕೊಂಡ ಹೂರಣವನ್ನು ತುಂಬಿ ಕ್ಲೋಸ್ ಮಾಡಿ , ಬೇಕಿದ್ದಲ್ಲಿ ಮಾತ್ರ ಇಡ್ಲಿ ಕುಕ್ಕರ್ ನಲ್ಲಿ ಇಟ್ಟು ಕೇವಲ ಮೂರು ನಿಮಿಷಗಳ ಕಾಲ ಬೇಯಿಸಿಕೊಳ್ಳಬೇಕು. ಏಕೆಂದರೆ ಮೊದಲೇ ಅಕ್ಕಿ ಹಿಟ್ಟು ಚೆನ್ನಾಗಿ ಬೆಂದಿರತ್ತೆ. ಹೀಗೆ ಮಾಡಿದ್ರೆ ಖರ್ಜೀಕಾಯಿ ಆಗಲೀ ಮೋದಕ ಆಗಲೀ ಒಡೆದು ಹೋಗದೇ ಚೆನ್ನಾಗಿ , ರುಚಿಯಾಗಿ ಮಾಡಬಹುದು.