ಸ್ವಂತ ಮನೆ ಕಟ್ಟಬೇಕು ಎನ್ನುವುದು ಪ್ರತಿಯೊಬ್ಬರ ಜೀವನದ ಕನಸು ಆಗಿರುತ್ತದೆ. ಅನೇಕ ಜನರು ಅನೇಕ ರೀತಿಯಲ್ಲಿ ಪ್ರಯತ್ನಗಳನ್ನು ಮಾಡಿದರೂ ಸಹ ಮನೆ ಕಟ್ಟಿಸುವ ಕನಸು ಮಾತ್ರ ಕನಸಾಗಿಯೇ ಇರುತ್ತದೆ. ಕೆಲವರ ಬಳಿ ಎಷ್ಟೇ ಹಣ ಇದ್ದರೂ ಕೂಡಾ ಅವರು ತಮಗೆ ಇಷ್ಟ ಬಂದ ಹಾಗೇ ಒಂದು ಸ್ವಂತ ಮನೆಯನ್ನು ಕಟ್ಟಿಕೊಳ್ಳಲು ಆಗದೇ ಒದ್ದಾಡುತ್ತಾ ಇರುತ್ತಾರೆ. ಈ ಸಮಸ್ಯೆಯ ಪರಿಹಾರಕ್ಕಾಗಿಯೇ ಇಲ್ಲಿ ಇಂದು ದೇವಾಲಯವಿದೇ. ಇಲ್ಲಿ ಮೇಲೆಸಿರುವ ದೇವರು ಸ್ವಂತ ಮನೆ ಕಟ್ಟಿಸುವ ಕನಸನ್ನು ನನಸು ಮಾಡುವರು ಎನ್ನುವುದು ಕೆಲವರ ಅಚಲ ನಂಬಿಕೆ. ಈ ವಿಶಿಷ್ಟ ದೇವಾಲಯ ಇರುವುದು ಮಂಡ್ಯ ಜಿಲ್ಲೆಯಲ್ಲಿ ಕೆಆರ್ ಪೇಟೆ ತಾಲೂಕಿನಿಂದ 18 ಕಿಲೋಮೀಟರ್ ದೂರದಲ್ಲಿರುವ ಕಲ್ಲಾ ಹಳ್ಳಿಯ ಹೇಮಾವತಿ ನದಿ ತೀರದಲ್ಲಿರುವ ಭೂ ವರಾಹಸ್ವಾಮಿ ದೇವಾಲಯ.
ಮಹಾ ವಿಷ್ಣುವಿನ ಅವತಾರಗಳಲ್ಲಿ ಒಂದಾದ ವರಾಹ ಅವತಾರದ ಸಾಕ್ಷಾತ್ ದರ್ಶನ ನಮಗೆ ಇಲ್ಲಿ ಲಭ್ಯವಿದೆ. ಇಲ್ಲಿನ ವಿಶೇಷ ಎಂದರೆ ವರಾಹ ಮೂರ್ತಿಯ ಕಾಲಿನಮೇಲೆ ಭೂ ದೇವಿಯು ಆಸೀನಳಾಗಿದ್ದಾಳೆ. ಈ ಕಾರಣದಿಂದಾಗಿ ಈ ಮೂರ್ತಿಗೆ ಭೂ ವರಾಹ ಮೂರ್ತಿ ಎಂದು ಕರೆಯಲಾಗುತ್ತದೆ. ಸುಮಾರು 14 ಅಡಿ ಎತ್ತರದ ಕಪ್ಪು ಸಾಲಿಗ್ರಾಮ ಶಿಲೆಯಲ್ಲಿ ಕಡಿದಿರುವ ಈ ವಿಗ್ರಹವು ನೋಡಲು ರುದ್ರರಾಮಣೀಯವಾಗಿ ತೋರುತ್ತದೆ. ಈ ಸ್ಥಳಕ್ಕೆ ವಿಶೇಷ ಪೌರಾಣಿಕ ಮಹತ್ವ ಇದೆ. ಹಿರಣ್ಯಾಕ್ಷನನ್ನು ಕೊಂದ ವರಾಹ ರೂಪದ ವಿಷ್ಣು ಇದೇ ಸ್ಥಳದಲ್ಲಿ ತನ್ನ ಕೋಪವನ್ನು ಶಮನ ಗೊಳಿಸಿಕೊಂಡರು ಎಂಬ ನಂಬಿಕೆ ಇದೆ. ನಂತರ ಗೌತಮ ಮುನಿಗಳು ಇಲ್ಲಿ ವರಾಹ ಮೂರ್ತಿಯನ್ನು ಸಾಲಿಗ್ರಾಮ ಶಿಲೆಯಲ್ಲಿ ಸ್ಥಾಪಿಸಿ ಪೂಜಿಸಿದರು ಎಂಬ ಪ್ರತೀತಿ ಕೂಡಾ ಇದೆ. ಋಷಿಮುನಿಗಳು ಪ್ರಾರ್ಥಿಸಿ ಪೂಜಿಸುತ್ತಿದ್ದ ಈ ಮೂರ್ತಿಯು ಕಾಲ ಕ್ರಮೇಣ ಭೂಗರ್ಭದಲ್ಲಿ ಹುದುಗಿ ಹೋಗುತ್ತದೆ. 13 ನೆ ಶತಮಾನದಲ್ಲಿ ಹೊಯ್ಸಳರ ದೊರೆ ಮೂರನೇ ವೀರ ಬಲ್ಲಾಳನು ಈ ಕಾಡಿನಲ್ಲಿ ಭೇಟೆ ಆಡಲು ಬಂದಾಗ ದಾರಿ ತಪ್ಪುತ್ತಾನೆ. ನಂತರ ಒಂದು ದೊಡ್ಡ ಮರದ ಕೆಳಗೆ ವಿಶ್ರಾಂತಿ ಪಡೆಯುತ್ತಾ ಇದ್ದಾಗ ಇಂದು ಭೆಟೆ ನಾಯಿ ಒಂದು ಮೊಲವನ್ನು ಬೆನ್ನಟ್ಟುವ ದೃಶ್ಯವನ್ನು ಕಾಣುತ್ತಾನೆ. ಈ ದೃಶ್ಯವನ್ನು ಕಂಡ ರಾಜನಿಗೆ ಈ ಸ್ಥಳದಲ್ಲಿ ಯಾವುದೋ ದಿವ್ಯ ಶಕ್ತಿ ಇರಬಹುದು ಎಂದು ಭಾಸವಾಗಿ ಇಡೀ ಪ್ರದೇಶವನ್ನು ಹುಡುಕುತ್ತಾನೆ. ಆಗ ಭೂಮಿಯೊಳಗೆ ಹುದುಗಿ ಹೋದ ಈ ವಿಗ್ರಹ ಆತನಿಗೆ ಕಂಡುಬರುತ್ತದೆ. ಆಗ ರಾಜನು ಈ ದೇವರಿಗೆ ಪೂಜೆಯನ್ನು ಸಲ್ಲಿಸಿ ದೇವಾಲಯವನ್ನು ಕೂಡಾ ನಿರ್ಮಿಸುತ್ತಾನೆ.
ಈ ಭೂ ವರಾಹ ಸ್ವಾಮಿಗೆ ಹರಕೆಯನ್ನು ಹೊತ್ತು ಭಕ್ತಿ ಶ್ರದ್ಧೆಯಿಂದ ಇಡೆರಿಸಿದರೆ ಭುವಿಗೆ ಸಂಬಂಧಿಸಿದ ಯಾವುದೇ ವಿವಾದ ಆದರೂ ಕೂಡಾ ಬಹುಬೇಗ ಇತ್ಯರ್ಥ ಆಗುತ್ತದೆ. ಇಲ್ಲಿ ಮರಳು ಮತ್ತು ಇಟ್ಟಿಗೆಯನ್ನು ಪೂಜೆ ಮಾಡಿಸಿ ಅದನ್ನೇ ಮನೇ ಕಟ್ಟಲು ಬಳಸಿದಲ್ಲಿ ಮನೇ ಕಟ್ಟುವ ಕಾರ್ಯ ಶುಭಕರವಾಗಿ ನೆರವೇರುವುದು ಎಂದು ಹಾಗೂ ಆ ಮನೆಗಳಲ್ಲಿ ವಾಸಿಸುವ ಜನರಿಗೂ ಕೂಡಾ ಸುಖ ಶಾಂತಿ ನೆಮ್ಮದಿ ದೊರೆಯುವುದು ಎಂದು ಭಕ್ತರಲ್ಲಿ ಅಚಲ ನಂಬಿಕೆ ಇದೆ. ಹಾಗಾಗಿ ಅನೇಕ ಭಕ್ತರು ಇಟ್ಟೀಗೆಯನ್ನು ಪೂಜೆ ಮಾಡಿಸಿಕೊಂಡು ಹೋಗುತ್ತಾರೆ. ಶಿಥಿಲಾವಸ್ಥೆಯಲ್ಲಿರುವ ಈ ದೇವಾಲಯವನ್ನು ಇತ್ತೀಚೆಗೆ ಅಷ್ಟೇ ಜೀರ್ಣೋದ್ಧಾರ ಮಾಡಲಾಗಿದೆ. ಇದಕ್ಕೆ ಕಾರಣ ಕೂಡಾ ಇಲ್ಲಿ ನೆಲೆಸಿರುವ ಭೂ ವರಾಹ ಸ್ವಾಮಿ ಕಾರಣ ಎನ್ನಬಹುದು. ಕೆಲವು ವರ್ಷಗಳ ಹಿಂದೆ ಮುಂಬೈ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಉದ್ಯಮಿ ಒಬ್ಬರ ಕನಸಲ್ಲಿ ಬಂದೂ ತಾನು ನೆಲೆಸಿರುವ ಕಲ್ಲಾ ಹಳ್ಳಿಗೆ ಬಂದು ದೇವಾಯಲವನ್ನು ಜೀರ್ಣೋದ್ಧಾರ ಮಾಡುವಂತೆ ಹೇಳುತ್ತಾರೆ. ಕುತೂಹಲದಿಂದ ಆ ಉದ್ಯಮಿ ಇಲ್ಲಿ ಬಂದು ನೋಡಿದಾಗ ಆಳೆತ್ತರದ ಭೂ ವರಾಹ ಸ್ವಾಮಿ ಮೂರ್ತಿಯನ್ನು ನೋಡಿ ಪರೀಕ್ಷಿಸಿ ತಾವೇ ಮುಂದೆ ನಿಂತು ಜೀರ್ಣೋದ್ಧಾರ ಮಾಡುತ್ತಾರೆ. ಕಾವೇರಿ ನದಿಯ ಹಿನ್ನೀರಿನ ಶೋಭೆ ತರುವಂತೆ ಈ ದೇವಾಲಯವನ್ನು ನಿರ್ಮಿಸಲಾಗಿದೆ.