ಮಳೆಗಾಲದಲ್ಲಿ ಪ್ರತೀ ದಿನ ಸಂಜೆ ಆಯ್ತು ಅಂದ್ರೆ ಏನಾದ್ರು ಸ್ನ್ಯಾಕ್ಸ್ ಬೇಕು ಅನ್ಸೋದು ಸಹಜ. ಆದ್ರೆ ಪ್ರತೀ ದಿನ ಎನ್ ಮಾಡೋದು? ಮಾಡಿರೋ ತಿಂಡಿನೆ ಮಾಡಿ ಮಾಡಿ ತಿಂದು ತಿಂದು ಬೇಜಾರೂ ಕೂಡ ಬಂದಿರತ್ತೆ. ಹಾಗಾಗಿ ರುಚಿಯಾದ , ಸಿಹಿಯಾದ ಕ್ರಿಸ್ಪಿ ಶಂಕರ ಪೋಳಿ ಹೇಗೆ ಮಾಡೋದು? ಇದನ್ನ ಮಾಡೋಕೆ ಏನೆಲ್ಲ ಸಾಮಗ್ರಿಗಳು ಬೇಕು ಅನ್ನೋದನ್ನ ನೋಡೋಣ.
ಬೇಕಾಗುವ ಸಾಮಗ್ರಿಗಳು : ಮೈದಾ ಹಿಟ್ಟು ಒಂದು ವರೆ ಕಪ್ ( ಮೈದ ಇಷ್ಟ ಪಡದವರು ಇದೆ ಅಳತೆಯಲ್ಲಿ ಗೋಧಿ ಹಿಟ್ಟನ್ನು ಬಳಸಬಹುದು) ಸಕ್ಕರೆ ಕಾಲು ಕಪ್, ಹಾಲು ಕಾಲು ಕಪ್, ತುಪ್ಪ ಕಾಲು ಕಪ್, ಏಲಕ್ಕಿ ಪುಡಿ, ಚಿಟಿಕೆ ಉಪ್ಪು
ಮಾಡುವ ವಿಧಾನ :ತುಪ್ಪವನ್ನ ಒಂದು ಪಾತ್ರೆಗೆ ಹಾಕಿ ಬಿಸಿ ಮಾಡಿಕೊಳ್ಳಬೇಕು. ನಂತರ ಒಂದು ಮಿಕ್ಸಿಂಗ್ ಬೌಲ್ ಗೆ ಮೈದಾ ಅಥವಾ ಗೋಧಿ ಹಿಟ್ಟನ್ನು ಹಾಕಿಕೊಂಡು ಅದಕ್ಕೆ ಸ್ವಲ್ಪ ಏಲಕ್ಕಿ ಪುಡಿಯನ್ನು ಸೇರಿಸಿ ಕರಗಿಸಿದ ತುಪ್ಪವನ್ನು ಸಹ ಸೇರಿಸಿ ಮಿಕ್ಸ್ ಮಾಡಿಕೊಂಡು ರುಚಿಗೆ ಕೇವಲ ಒಂದು ಚಿಟಕಿ ಅಷ್ಟು ಉಪ್ಪು ಸೇರಿಸಿ, ಇದಕ್ಕೆ ಮೊದಲೇ ಕರಗಿಸಿ ಇಟ್ಟುಕೊಂಡ ಸಕ್ಕರೆ ಹಾಲನ್ನು ಸ್ವಲ್ಪ ಸ್ವಲ್ಪವಾಗಿ ಸೇರಿಸಿ ಮಿಕ್ಸ್ ಮಾಡಿಕೊಂಡು ಮೃದುವಾಗಿ ಕಲಸಿಕೊಂಡು ಒಂದು ಬೌಲ್ ಅಥವಾ ಪ್ಲೇಟ್ ಮುಚ್ಚಿ ಒಂದು ಘಂಟೆಯ ಕಾಲ ನೆನೆಯಲು ಬಿಡಬೇಕು. ನಂತರ ಎರಡು ಮೂರು ನಿಮಿಷ ಚೆನ್ನಾಗಿ ನಾದಿಕೊಂಡು ಚಪಾತಿ ಹಿಟ್ಟಿನ ಹಾಗೆ ಉಂಡೆ ಮಾಡಿಜೊಂಡು ಲಟ್ಟಣಿಗೆ ಸಹಾಯದಿಂದ ಸ್ವಲ್ಪ ದಪ್ಪವಾಗಿಯೇ ಲಟ್ಟಿಸಿಕೊಂಡು ನಂತರ ಚಾಕುವಿನ ಸಹಾಯದಿನ ಬೇಕಾದ ಗಾತ್ರಕ್ಕೆ, ಬೇಕಾದ ಆಕಾರದಲ್ಲಿ ಕಟ್ ಮಾಡಿಕೊಳ್ಳಬಹುದು.
ಎಲ್ಲವನ್ನೂ ಮೊದಲೇ ಕಟ್ ಮಾಡಿಕೊಂಡು ಎಣ್ಣೆ ಕಾಯಲು ಇಟ್ಟುಕೊಂಡು ಎಣ್ಣೆ ಕಾದ ನಂತರ ಸಣ್ಣ ಉರಿಯಲ್ಲಿ ಇಟ್ಟುಕೊಂಡು ಕಟ್ ಮಾಡಿಕೊಂಡಿರುವ ಶಂಕರ್ಪಾಲಿಗಳನ್ನು ಹೊಂಬಣ್ಣ ಬರುವವರೆಗೂ ಕರಿದುಕೊಳ್ಳಬೇಕು. ಕ್ರಿಸ್ಪಿಯಾಗಿ ಟೇಸ್ಟಿಯಾದ ಶಂಕರ್ಪಾಲಿ ರೆಡಿ ಆಗತ್ತೆ.
(ಹಾಲು ಸಕ್ಕರೆಯ ಪ್ರಮಾಣದಷ್ಟೇ ಇರಬೇಕು. ಸಕ್ಕರೆ ಬದಲು ಸಕ್ಕರೆ ಪುಡಿ ತೆಗೆದುಕೊಂಡರೆ ಕಾಯಿಸಿ ಆರಿಸಿದ ಹಾಲನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಬೇಕು. ಸಕ್ಕರೆ ಆದರೆ ಹಾಲಿಗೆ ಸೇರಿಸಿ ಸಕ್ಕರೆ ಕರಗುವವರೆಗೆ ಬಿಸಿ ಮಾಡಿಕೊಳ್ಳಬೇಕು. ಸಕ್ಕರೆ ಕರಗಿದ ನಂತರ ಹಾಲು ತಣ್ಣಗಾಗಲು ಬಿಡಬೇಕು. ಹಾಗೆ ಹಾಕಿದರೆ ಶಂಕರ್ಪಾಲಿ ತುಂಬಾ ಗಟ್ಟಿ ಆಗಿ ಬರತ್ತೆ.)