ಜಗತ್ತನ್ನೇ ಭಯಭೀತ ಗೊಳಿಸಿರುವ ಮಹಾಮಾರಿ ಕರೊನ ಬಗ್ಗೆ ನಾವೆಲ್ಲ ತುಂಬಾನೇ ಹೆದರಿದ್ದೀವಿ. ಮುಖ್ಯವಾಗಿ ನಾವು ಗಮನಿಸಬೇಕಾದ ಅಂಶ ಎಂದರೆ ಕರೊನ ಯಾರ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೋ ಅವರಿಗೆ ಬೇಗ ಬರುತ್ತದೆ. ಹಾಗೂ ಚಿಕ್ಕ ಮಕ್ಕಳಲ್ಲಿ ವೃದ್ಧರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಬಹು ಬೇಗ ಬರುವ ಸಾಧ್ಯತೆಗಳು ಇರುತ್ತದೆ. ನಾವು ಕರೊನ ಬರದಂತೆ ತಡೆಗಟ್ಟಲು ಮುಖ್ಯವಾಗಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡಿಕೊಳ್ಳಬೇಕು. ಅದಕ್ಕಾಗಿ ಕೆಲವು ಮನೆಮದ್ಧುಗಳು ಇವೆ. ಆದರೆ ಎಷ್ಟೋ ಜನರಿಗೆ ಇಂತಹ ಸುಲಭವಾದ ಮನೆಮದ್ದುಗಳನ್ನು ಹೇಗೆ ಮಾಡಿಕೊಳ್ಳುವುದು? ಎಷ್ಟು ಪ್ರಮಾಣದಲ್ಲಿ ಮಾಡಿ ತೆಗೆದುಕೊಳ್ಳುವುದು ಎನ್ನುವುದರ ಬಗ್ಗೆ ತಿಳುವಳಿಕೆ ಇರುವುದಿಲ್ಲ. ಈ ಲೇಖನದ ಮೂಲಕ ಯಾವ ಕಷಾಯವನ್ನು ಯಾವ ರೀತಿ ಎಷ್ಟು ಪ್ರಮಾಣದಲ್ಲಿ ಮಾಡಿ ಹೇಗೆ ಯಾವಾಗ ತೆಗೆದುಕೊಳ್ಳಬೇಕು ಎನ್ನುವುದನ್ನು ತಿಳಿದುಕೊಳ್ಳೋಣ.
ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಈ ಕೆಲವು ಕಷಾಯಗಳನ್ನು ಮಾಡಿಕೊಂಡು ಕುಡಿಯಬೇಕು. ಮೊದಲಿಗೆ ತುಳಸಿ ಕಷಾಯ. ಮೊದಲು ಒಂದು ಪಾತ್ರೆಯಲ್ಲಿ ಒಂದು ಲೀಟರ್ ಅಷ್ಟು ನೀರನ್ನು ಬಿಸಿಗೆ ಇಟ್ಟು ಇದಕ್ಕೆ ನೀರು ಕುದಿಯಲು ಬಂದಾಗ ಚೆನ್ನಾಗಿ ತೊಳೆದ 8 ರಿಂದ 10 ತುಳಸಿ ಎಲೆಗಳನ್ನು ಹಾಕಿ ಚೆನ್ನಾಗಿ ಕುದಿಸಿ ಸೋಸಿಕೊಳ್ಳಬೇಕು. ಇದು ಒಂದು ಲೀಟರ್ ತುಳಸಿ ನೀರು ಒಬ್ಬ ವ್ಯಕ್ತಿಗೆ ಒಂದು ದಿನಕ್ಕೆ ಮಾತ್ರ ಕುಡಿಯಬೇಕು.
ನಂತರ ಎರಡನೆಯ ಮನೆ ಮದ್ದು ಅರಿಶಿನದ ಹಾಲು ಒಂದು ಲೋಟ ಕಾಯಿಸಿದ ಹಾಲನ್ನು ತೆಗೆದುಕೊಂಡು ಅರ್ಧ ಟೀ ಚಮಚ ಅರಿಶಿನದ ಪುಡಿ ಸೇರಿಸಿ ಮೂರರಿಂದ ನಾಲ್ಕು ನಿಮಿಷ ಕುದಿಸಬೇಕು. ಉಷ್ಣ ದೇಹ ಪ್ರಕೃತಿ ಇರುವವರು ಕಾಲು ಚಮಚ ಅರಿಶಿನ ಬಳಸಿದರೆ ಸಾಕು. ಚೆನ್ನಾಗಿ ಕುದಿಸಿ ಶೋಧಿಸಿ ರಾತ್ರಿ ಹೊತ್ತು ಅಥವಾ ಸಂಜೆ ಸಮಯದಲ್ಲಿ ಕುಡಿಯುವುದು ಒಳ್ಳೆಯದು. ಪ್ರತೀ ದಿನ ಒಬ್ಬ ವ್ಯಕ್ತಿ ಒಂದು ಲೋಟ ಅರಿಶಿನ ಹಾಲನ್ನು ಕುಡಿಯುವುದು ಒಳ್ಳೆಯದು. ಸಿಹಿಗೆ ಬೇಕಿದ್ದಲ್ಲಿ ಬೆಲ್ಲವನ್ನು ಬಳಸಬಹುದು.
ನೆಲನೆಲ್ಲಿ ಕಷಾಯ ನೆಲನೆಲ್ಲಿ ಸೊಪ್ಪು ಅಥವಾ ಸೊಪ್ಪು ಸಿಗದೆ ಹೋದಲ್ಲಿ ಆಯುರ್ವೇದ ಶಾಪ್ ಗಳಲ್ಲಿ ಸಿಗುವ ನೆಲನೆಲ್ಲಿ ಪೌಡರ್ ಗಳನ್ನು ಸಹ ಬಳಸಬಹುದು. ನೆಲನೆಲ್ಲಿಯ ಬೇರು , ಕಾಂಡ ಎಲೆ ಎಲ್ಲವನ್ನೂ ಕಷಾಯಕ್ಕೆ ಬಳಸಬಹುದು. ನೆಲನೆಲ್ಲಿ ಗಿಡವನ್ನು ಚೆನ್ನಾಗಿ ತೊಳೆದು ಇಟ್ಟುಕೊಳ್ಳಬೇಕು. ಒಂದು ಪಾತ್ರೆಯಲ್ಲಿ 4 ಲೋಟ ನೀರು ತೆಗೆದುಕೊಂಡು ಬಿಸಿ ಆಗಲು ಇಡಬೇಕು. ಸ್ವಲ್ಪ ನೀರು ಬಿಸಿ ಆದಮೇಲೆ ಒಂದು ನೆಲನೆಲ್ಲಿ ಗಿಡವನ್ನು ಬೇರು ಸಮೇತ ನೀರಿಗೆ ಹಾಕಿ ಕುದಿಸಬೇಕು. ಸೊಪ್ಪು ಸಿಗದೆ ಇದ್ದರೆ ಇದರ ಪೌಡರ್ ಅನ್ನು ತಂದುಕೊಂಡು 4 ಲೋಟ ನೀರಿಗೆ ಒಂದು ಚಮಚ ಪೌಡರ್ ಬಳಸಬೇಕು. ನಾಲ್ಕು ಲೋಟ ನೀರು ಕುಡಿಯುತ್ತಾ ಒಂದು ಲೋಟ ನೀರಿಗೆ ಕುದಿಸಬೇಕು. ಒಂದು ಲೋಟಕ್ಕೆ ಬಂದ ನಂತರ ಇದನ್ನು ಶೋಧಿಸಿಕೊಂಡು ಕುಡಿಯಬೇಕು. ಒಂದು ದಿನಕ್ಕೆ ಒಬ್ಬ ಮನುಷ್ಯ ಈ ಕಷಾಯವನ್ನು ಕಾಲು ಲೋಟದಷ್ಟು ಮಾತ್ರ ತೆಗೆದುಕೊಳ್ಳಬೇಕು. ಇದನ್ನು ಸಪ್ಪೆಯಾಗಿ ಕುಡಿಯಲು ಇಷ್ಟ ಪಡದೇ ಇರುವವರು ಬೆಲ್ಲವನ್ನು ಸೇರಿಸಿಕೊಂಡು ಕುಡಿಯಬಹುದು.
ಅಮೃತ ಬಳ್ಳಿ ಕಷಾಯ ಒಂದು ಪಾತ್ರೆಯಲ್ಲಿ 4 ಲೋಟ ನೀರು ತೆಗೆದುಕೊಂಡು ಬಿಸಿ ಆಗಲು ಇಟ್ಟು ಸ್ವಲ್ಪ ಬಿಸಿ ಆಗುತ್ತಾ ಇದ್ದ ಹಾಗೆ ಅಮೃತ ಬಳ್ಳಿಯೇ ಸಿಕ್ಕರೆ ಅರ್ಧ ಇಂಚಿನಷ್ಟು ಅಮೃತ ಬಳ್ಳಿಯನ್ನು ಹಾಕಿ ಕುದಿಸಬೇಕು. ಬಳ್ಳಿ ಸಿಗದೆ ಇದ್ದಲ್ಲಿ ಒಂದು ಚಮಚದಷ್ಟು ಅಮೃತ ಬಳ್ಳಿ ಚೂರ್ಣವನ್ನು ಹಾಕಿ ಕುದಿಸಿ ಇದನ್ನೂ ಸಹ ನಾಲ್ಕು ಲೋಟ ನೀರು ಕುದಿಸಿ ಒಂದು ಲೋಟಕ್ಕೆ ಬರುವವರೆಗೂ ಕುದಿಸಬೇಕು. ಇದನ್ನೂ ಸಹ ಶೋಧಿಸಿಕೊಂಡು ಒಬ್ಬ ವ್ಯಕ್ತಿ ಒಂದು ದಿನಕ್ಕೆ ಕಾಲು ಲೋಟದಷ್ಟು ಮಾತ್ರ ಸೇವಿಸಬೇಕು.
ನೆಲನೆಲ್ಲಿ ಗಿಡ ಅಥವಾ ಇದರ ಚೂರ್ಣ ಯಾವುದೂ ಸಿಗದೆ ಇದ್ದಲ್ಲಿ ಮಾತ್ರ ಅಮೃತ ಬಳ್ಳಿ ಕಷಾಯ ಸೇವಿಸಬೇಕು. ಒಟ್ಟಿನಲ್ಲಿ ನೆಲನೆಲ್ಲಿ ಅಥವಾ ಅಮೃತ ಬಳ್ಳಿ ಕಷಾಯ ಯಾವುದೇ ಒಂದನ್ನು ಮಾತ್ರ ಸೇವಿಸಬೇಕು. ನಾವು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಒಂದು ದಿನಕ್ಕೆ ಒಬ್ಬ ವ್ಯಕ್ತಿ ಒಂದು ಲೀಟರ್ ತುಳಸಿ ಕಷಾಯ , ಒಂದು ಲೋಟ ಅರಿಶಿನ ಹಾಲು , ಕಾಲು ಲೋಟ ಅಮೃತ ಬಳ್ಳಿ ಕಷಾಯ ಅಥವಾ ಕಾಲು ಲೋಟ ನೆಲ ನೆಲ್ಲಿ ಕಷಾಯ ಇವುಗಳನ್ನ ಕುಡಿಯಬೇಕು. ಯಾವುದೇ ಸೋಂಕುಗಳೂ ಇವುಗಳ ಮುಂದೆ ಪ್ರಭಲ ಎನಿಸುವುದಿಲ್ಲ.